ಅಭಿವೃದ್ಧಿ ಹೆಸರಲ್ಲಿ ಧರೆಗುರುಳಿದ ಮರಗಳು...

7

ಅಭಿವೃದ್ಧಿ ಹೆಸರಲ್ಲಿ ಧರೆಗುರುಳಿದ ಮರಗಳು...

Published:
Updated:

ಜಗಳೂರು ತಾಲ್ಲೂಕು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು, ಕಳೆದ ನೂರು ವರ್ಷದಲ್ಲಿ ಅರ್ಧಕ್ಕೂ ಹೆಚ್ಚು ಅವಧಿಯಲ್ಲಿ `ಬರ~ದ ಹೊಡೆತಕ್ಕೆ ಸಿಲುಕಿ ಇಲ್ಲಿನ ಜನರು ಹೈರಾಣಾಗಿದ್ದಾರೆ. ಇಂತಹ  ಬಯಲುಸೀಮೆಯಲ್ಲಿ ಒಂದಿಷ್ಟು ಹಸಿರಿಗೆ ಕಾರಣವಾಗಿರುವ ದಶಕಗಳಷ್ಟು ಹಳೆಯದಾದ ರಸ್ತೆ ಬದಿಯ ನೂರಾರು ಸಾಲು ಮರಗಳು `ಅಭಿವೃದ್ಧಿ~ ನೆಪದಲ್ಲಿ ನೆಲಕ್ಕೆ ಉರುಳುತ್ತಿವೆ.ಅಭಿವೃದ್ಧಿ ಮತ್ತು ಪರಿಸರ, ಏಕಕಾಲಕ್ಕೆ ಎರಡನ್ನೂ  ಉಳಿಸಿಕೊಳ್ಳುವುದು ಅಸಾಧ್ಯ ಎನ್ನುವುದಕ್ಕೆ ಪ್ರಸ್ತುತ ತಾಲ್ಲೂಕಿನಲ್ಲಿ ಕೋಟಿಗಟ್ಟಲೆ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸಾಕ್ಷಿಯಾಗಿವೆ.

ಪಟ್ಟಣದಲ್ಲಿ ಹಾದುಹೋಗುವ ಮಲ್ಪೆ-ಮೊಳಕಾಲ್ಮುರು ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ.ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿ ಸುಮಾರು ರೂ.20 ಕೋಟಿ ವೆಚ್ಚದಲ್ಲಿ ಪಟ್ಟಣದಿಂದ ದೊಣೆಹಳ್ಳಿಯ ರಾಷ್ಟ್ರೀಯ ಹೆದ್ದಾರಿ 13ರವರೆಗೆ ಹೆದ್ದಾರಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಪ್ರತಿ ಒಂದು ಕಿ.ಮೀ.ಗೆ ರೂ.2ಕೋಟಿ ವೆಚ್ಚದಲ್ಲಿ 10 ಕಿ.ಮೀ ಉದ್ದದ ಆಧುನಿಕ ಮಾದರಿಯ ರಸ್ತೆಯನ್ನು ನಿರ್ಮಿಸಲಾಗುತ್ತಿದೆ.ರಸ್ತೆಯ ಎರಡೂ ಬದಿಯಲ್ಲಿರುವ ದಶಕಗಳಷ್ಟು ಹಳೆಯದಾದ, ವಿವಿಧ ಜಾತಿಯ 573 ಮರಗಳನ್ನು ಕತ್ತರಿಸಲಾಗುತ್ತಿದೆ. ಅರಣ್ಯ ಇಲಾಖೆ ವತಿಯಿಂದ ಸಾಲುಮರಗಳನ್ನು ಈಗಾಗಲೇ ರೂ.3ಲಕ್ಷಕ್ಕೆ ಹರಾಜು ಹಾಕಲಾಗಿದೆ.`ಹೆದ್ದಾರಿ ಪಕ್ಕದಲ್ಲಿರುವ  ಶಾಲೆಗಳು ಹಾಗೂ ದೇವಸ್ಥಾನಗಳಿಗೆ ಶಬ್ಧ ಹಾಗೂ ವಾಯುಮಾಲಿನ್ಯ ತಡೆಗೋಡೆಗಳನ್ನು ವಿಶೇಷವಾಗಿ ನಿರ್ಮಿಸಿಕೊಡಲಾಗಿದೆ. ರಸ್ತೆಗೆ ಹೊಂದಿಕೊಂಡಂತಿರುವ ಕೊಳವೆಬಾವಿಗಳನ್ನು ಶಾಶ್ವತವಾಗಿ ತೆಗೆದುಹಾಕಿ ಹೊಸ ಕೊಳವೆಬಾವಿ ಕೊರೆಸಲಾಗಿದೆ. ಜಿನಿಗಿ ಹಳ್ಳಕ್ಕೆ 65 ವರ್ಷದ ಹಿಂದಿನ ಸೇತುವೆ ಬದಲು ಸುಸಜ್ಜಿತ ಸೇತುವೆ ನಿರ್ಮಿಸಲಾಗುವುದು~ ಎಂದು ಹೆದ್ದಾರಿ ಅಭಿವೃದ್ಧಿ ಯೋಜನೆಯ ಸಹಾಯಕ ಎಂಜಿನಿಯರ್ ರವೀಶ್ `ಪ್ರಜಾವಾಣಿ~ಗೆ ತಿಳಿಸಿದರು.ಪ್ರಸ್ತುತ ರಸ್ತೆಯಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ಸಮಸ್ಯೆಯಾಗುತ್ತಿದೆ.   ಒಟ್ಟು 12 ಮೀ. ವಿಸ್ತೀರ್ಣದ ನೂತನ ತಂತ್ರಜ್ಞಾನದ ದ್ವಿಮುಖ ರಸ್ತೆ ನಿರ್ಮಿಸಲಾಗುತ್ತಿದೆ. 7 ಮೀ. ಡಾಂಬರೀಕರಣ ಹಾಗೂ ಎರಡೂ ಬದಿಯಲ್ಲಿ 5 ಮೀ. ಫುಟ್‌ಪಾತ್ ಮಾದರಿಯಲ್ಲಿ ರಸ್ತೆಯನ್ನು ವಿಸ್ತರಿಸಲಾಗುವುದು. ಇದರಿಂದ ಅಪಘಾತ ರಹಿತ ಸಂಚಾರ ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.ಲೋಕೋಪಯೋಗಿ ಇಲಾಖೆ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧ ರಸ್ತೆಯಲ್ಲಿ ರೂ.50 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದಕ್ಕಾಗಿ ಪಶುಪಕ್ಷಿಗಳು ಹಾಗೂ ಸಾರ್ವಜನಿಕರಿಗೆ ಆಶ್ರಯ ನೀಡಿದ್ದ 35ಕ್ಕೂ ಹೆಚ್ಚು ಮರಗಳನ್ನು ಈಚೆಗೆ ಕಡಿದುಹಾಕಿದ್ದು, ಇಡೀ ಪ್ರದೇಶ ಬಟಾಬಯಲಾಗಿದೆ. ಇಲ್ಲಿನ  ತಾ.ಪಂ. ಕಚೇರಿ ಮತ್ತು ತಹಶೀಲ್ದಾರ್ ಕಚೇರಿ ಮುಂದಿನ ಮರಗಳ ಕೆಳಗೆ ಆಶ್ರಯ ಪಡೆಯುತ್ತಿದ್ದ ಗ್ರಾಮೀಣ ಪ್ರದೇಶದ ಜನತೆ ಈಗ ಸುಡುಬಿಸಿಲಿನಲ್ಲಿ ದಿನವಿಡೀ ನಿಲ್ಲಬೇಕಾದ ಸ್ಥಿತಿ ಇದೆ. ಅಭಿವೃದ್ಧಿ ಕಾಮಗಾರಿಗಳ ಅವಶ್ಯಕತೆ ಇದೆ. ಆದರೆ, ಮರಗಳು ಕಡಿದು ನೂತನ ರಸ್ತೆಗಳನ್ನು ನಿರ್ಮಿಸಿದ ನಂತರ ಅಲ್ಲಿ ಹೊಸದಾಗಿ ಗಿಡಗಳನ್ನು ಬೆಳೆಸುವ ಬಗ್ಗೆ ಸಂಬಂಧಪಟ್ಟವರು ಚಿಂತನೆ ನಡೆಸದೇ ಇದ್ದಲ್ಲಿ ಭವಿಷ್ಯದ ದಿನಗಳಲ್ಲಿ ಪಶು ಪಕ್ಷಿಗಳು ಸೇರಿದಂತೆ ಎಲ್ಲವೂ ನಾಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry