ಅಭಿವೃದ್ಧಿ ಹೆಸರಲ್ಲಿ ಹಗಲು ದರೋಡೆ, ಅಧಿಕಾರ ದಾಹ, ಲಂಪಟತನ

7

ಅಭಿವೃದ್ಧಿ ಹೆಸರಲ್ಲಿ ಹಗಲು ದರೋಡೆ, ಅಧಿಕಾರ ದಾಹ, ಲಂಪಟತನ

Published:
Updated:

ಒಬ್ಬ ಶಾಸಕ (ಆತನೀಗ ಸಚಿವ) ನರ್ಸ್ ಒಬ್ಬಳಿಗೆ ಮುತ್ತು ಕೊಡುವ ಫೊಟೋ ತೆಗೆದು ಬ್ಲ್ಯಾಕ್‌ಮೇಲ್ ಮಾಡಿ ಸಿಕ್ಕೇಬಿದ್ದ. ಇನ್ನೊಬ್ಬ ಸಚಿವ ಗೆಳೆಯನ ಮನೆಗೆ ಹೋಗಿ ಆತನ ಹೆಂಡತಿಯನ್ನೇ ಅತ್ಯಾಚಾರ ಮಾಡಿ ಸಿಕ್ಕುಬಿದ್ದ.

 

ಈಗ ಮೂವರು ಸಚಿವರು ವಿಧಾನಸಭೆ ಕಲಾಪದಲ್ಲೇ ಬ್ಲೂಫಿಲ್ಮ್ ನೋಡಿ ಸಿಕ್ಕಿಬಿದ್ದಿದ್ದಾರೆ. ಮಾತೆತ್ತಿದರೆ ಸಂಸ್ಕೃತಿ ರಕ್ಷಕರು, ಧರ್ಮರಕ್ಷಕರು ತಾವೆಂದು ಹೇಳಿಕೊಳ್ಳುವ ಭಾರತೀಯ ಜನತಾ ಪಕ್ಷದ ಮುಖಂಡರಿಗೆ ಕನಿಷ್ಠ ಲಜ್ಜೆಯಾದರೂ ಇದೆಯೇ? ಇವರ ಸಂಸ್ಕೃತಿ ರಕ್ಷಣೆಯ ಕಾರ್ಯ ಮುಂಡಾಮೋಚಿಕೊಂಡು ಹೋಗಲಿ, ಕೆಂಗಲ್ ಹನುಮಂತಯ್ಯನವರು ಕಟ್ಟಿದ, ಗೋಪಾಲಗೌಡರಂಥವರು ಓಡಾಡಿದ ವಿಧಾನಸೌಧದಲ್ಲಿ ಎಂಥ ಹುಳುಗಳು  ಸೇರಿಕೊಂಡಿವೆ ನೋಡಿ. ಇಂಥ ಅಸಹ್ಯಗಳೆಲ್ಲ ನಮ್ಮನ್ನು ಆಳುವ ಸಚಿವರು!

- ಬಸವರಾಜ ಕುಳಲಿ, ಅಥಣಿ

ವಿಧಾನಸಭಾ ಕಲಾಪದಲ್ಲಿ ಬ್ಲೂಫಿಲಂ ನೋಡುತ್ತಿದ್ದ ಸಚಿವರನ್ನು ನೋಡಿ ಹೇಸಿಗೆಯಾಯಿತು. ರಾಜ್ಯದ ಅನೇಕ ಸಮಸ್ಯೆಗಳನ್ನು ಕುರಿತು ಮಾತನಾಡಿ ಜನರ ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಅಧಿವೇಶನದಲ್ಲಿ ಇದು ನಾಚಿಕೆಗೇಡಿನ ಕೆಲಸ. ಇಂತಹ ವಿಲಕ್ಷಣ ಮನಃಸ್ಥಿತಿಯ ಶಾಸಕರನ್ನು ಆರಿಸಿದ ಜನರು ನಿಜಕ್ಕೂ ತಲೆತಗ್ಗಿಸಬೇಕಾಗಿದೆ.

 

ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಬಿಜೆಪಿ ಶಾಸಕರು ಏಕೆ ಕಚ್ಚೆಹರುಕರಂತೆ ವರ್ತಿಸುತ್ತಾರೋ ಗೊತ್ತಿಲ್ಲ. ಇದಕ್ಕೆ ಕೇವಲ ರಾಜೀನಾಮೆ ಪರಿಹಾರವಾಗಬಾರದು. ಅವರನ್ನು ಸಾರ್ವಜನಿಕವಾಗಿ ಛೀಮಾರಿ ಹಾಕಿ ಜೈಲಿಗೆ ಅಟ್ಟಬೇಕು.

- ರಾಣಿ ಚಂದ್ರಶೇಖರ್, ತುಮಕೂರು

ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ನಾಯಕರು ನಾವು ಭಿನ್ನ ಆಡಳಿತ ನೀಡುತ್ತೇವೆ ಎಂದು ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದರು. ಅಭಿವೃದ್ಧಿಯ ಹೆಸರಿನಲ್ಲಿ ನಡೆದಿರುವುದು ಹಗಲು ದರೋಡೆ, ಪಕ್ಷದ ನಾಯಕರ ಅಧಿಕಾರದಾಹ ಮತ್ತು ಲಂಪಟತನ.

ಇಂದು ಉತ್ತರ ಕರ್ನಾಟಕದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಜನ ಗುಳೇ ಹೋಗುತ್ತಿದ್ದಾರೆ. ಗೋವುಗಳು ನೀರಿಲ್ಲದೆ ಪ್ರಾಣಬಿಡುತ್ತಿವೆ. ಇಂತಹ ಸನ್ನಿವೇಶದಲ್ಲಿ ಆ ಪ್ರದೇಶದ ಈ ಸಚಿವರು ಇಂತಹ ನೀಚತನವನ್ನು ವಿಧಾನಸಭೆಯ ಕಲಾಪದಲ್ಲಿಯೇ ಪ್ರದರ್ಶಿಸುತ್ತಾರೆ ಎಂದರೆ ಬಿಜೆಪಿ ನಾಯಕರ ನೈತಿಕತೆಯ ಮಟ್ಟವೇನು? ಬಿಜೆಪಿ ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕದ ರಾಜಕಾರಣವನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಹಾಳು ಮಾಡಿದೆ. ಕರ್ನಾಟಕದ ರಾಜಕಾರಣವನ್ನು ಸರಿಪಡಿಸಲು ದಶಕಗಳೇ ಬೇಕಾಗಬಹುದು.

- ವಸಂತ ರಾಜು ಎನ್. ಮೈಸೂರು

ಸದನದಲ್ಲಿ ಸೆಕ್ಸ್ ಫಿಲಂ ನೋಡಿದ ಸಚಿವನ ಮನೋಭಾವ ಇಡೀ ಕರ್ನಾಟಕದ ಜನಸ್ತೋಮವನ್ನು ಬೆಚ್ಚಿ ಬೀಳಿಸಿದೆ. ನೈತಿಕ ಮೌಲ್ಯಗಳ ಮತ್ತು ವಿಚಾರದ ನೆಲೆಗಟ್ಟಿಲ್ಲದ ಜನ ರಾಜಕೀಯ ಪ್ರವೇಶಿಸುತ್ತಿರುವುದರಿಂದಲೇ 2011ರ ಜಾಗತಿಕ ಭ್ರಷ್ಟಾಚಾರ ಗ್ರಾಹ್ಯಸೂಚಿಯಲ್ಲಿ ಭಾರತ 95ನೇ ಸ್ಥಾನಕ್ಕೇರಿದೆ. ಸಾಮಾಜಿಕ ಕಳಕಳಿಯಿರುವ ವಿಚಾರವಾದಿಗಳು ರಾಜಕಾರಣವನ್ನು ಪ್ರವೇಶಿಸಿ ಸಮಾಜಸೇವೆಗೆ ಮುಂದಾಗದಿದ್ದಲ್ಲಿ ಮುಂದೊಂದು ದಿನ ವಿಧಾನಸೌಧವು ಸ್ವಾರ್ಥ ಸಾಧಕರಿಂದ ತುಂಬಿಹೋಗುವುದು.ಸರ್ಕಾರದ ಬಲ ಜನತೆಯ ಅಜ್ಞಾನದಲ್ಲಿದೆ ಎಂದು ಟಾಲ್ ಸ್ಟಾಯ್ ಹೇಳಿದ್ದರು. ಇಂದು ಮಧ್ಯಮ ವರ್ಗಕ್ಕೆ ಪ್ರಜಾಪ್ರಭುತ್ವದ ಪ್ರಾಬಲ್ಯ, ಆಡಳಿತ ಯಂತ್ರದ ಕಾರ‌್ಯವೈಖರಿ ಮತ್ತು ಸರ್ಕಾರ ರೂಪಿಸುವ ಪ್ರತಿಯೊಂದು ನೀತಿಗಳ ಸಾಧಕ-ಬಾಧಕಗಳನ್ನು ಸ್ಥಳೀಯವಾಗಿ ಸಾಮಾನ್ಯವೇದಿಕೆಗಳಲ್ಲಿ ಚರ್ಚಿಸಿ ಜನಾಭಿಪ್ರಾಯ ರೂಪಿಸುವ ಜವಾಬ್ದಾರಿಯಿದೆ.ಮೌಲ್ಯರಹಿತ ಜನಪ್ರತಿನಿಧಿಗಳನ್ನು ಪೋಷಿಸುತ್ತಾ `ತಮ್ಮ ಪಾಡಿಗೆ ತಾವಿರುವ ಧೋರಣೆ~ಯನ್ನು ಜನ ಮತ್ತೂ ಮುಂದುವರೆಸಿದರೆ ಮುಂದಿನ ಪೀಳಿಗೆಗೆ ಆಡಳಿತ ವರ್ಗಗಳು ನೀಡುವ ಉಡುಗೊರೆಯೆಂದರೆ ಸಾಲದ ಹೊರೆ, ನಿರುದ್ಯೋಗ ಮತ್ತು ಸ್ಪರ್ಧೆ.

-ಉಷಾ.ಜೆ ಶ್ರೀರಂಗ, ಭದ್ರಾವತಿ

ಬಿಜೆಪಿ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಅಂತ ಬಹಳ ಹಿಂದೆಯೇ ಗೊತ್ತಾಗಿತ್ತು. ಜಾತಿ ಬಲ ಮತ್ತು ಹಣ ಬಲದಿಂದ ಬಂದ ಸರ್ಕಾರ ಇದು. ಯಾವುದೇ ಗುರಿ ಇಲ್ಲದ ಸರ್ಕಾರ ಮೇಲ್ನೋಟಕ್ಕೆ ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ ಅಭಿನಯಿಸುತ್ತದೆ. ಇಂಥ ಸರ್ಕಾರದ ವಿರುದ್ಧ ಕರ್ನಾಟಕದ ಜನ ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ.

- ಜಿ.ಸಿ. ರಾಜು, ಬೆಂಗಳೂರು

ದೇಶದ ಸಂಸ್ಕೃತಿಯನ್ನು ಉಳಿಸುವ ಗುತ್ತಿಗೆ ಪಡೆದಂತೆ ಮಾತನಾಡುತ್ತಿರುವ ಬಿಜೆಪಿ ಪಕ್ಷದ ಮುಖವಾಡ ಕಳಚಿ ಬೀಳುತ್ತಲೇ ಇರುವುದು ನಿಜವಾದ ದೇಶಪ್ರೇಮಿಗಳ ಸುದೈವ. ಬಿಜೆಪಿಯ ಅಂಗ ಸಂಘಟನೆಗಳ ಕಾರ್ಯಕರ್ತರು ಪಬ್‌ನಲ್ಲಿ ನೃತ್ಯ ಮಾಡಿದ ಮಹಿಳೆಯರ ಮೇಲೆ ಕ್ರೂರವಾಗಿ ದಾಳಿ ನಡೆಸುತ್ತಾರೆ. ಯಾವ ಹುಡುಗಿ ಯಾರೊಂದಿಗೆ ಮಾತನಾಡಬೇಕೆಂದು ನಿರ್ಧರಿಸುತ್ತಾರೆ.

 

ಮಹಿಳೆ ಯಾವ ರೀತಿಯ ಉಡುಪು ಧರಿಸಬೇಕೆಂದು ಅಪ್ಪಣೆ ಕೊಡಿಸುತ್ತಾರೆ. ಅರೆಬೆತ್ತಲೆ ಬಟ್ಟೆ ಧರಿಸುವುದೇ ಅತ್ಯಾಚಾರಕ್ಕೆ ಕಾರಣ ಎಂದು ಬೊಬ್ಬೆ ಇಡುತ್ತಾರೆ. ಬಿಜೆಪಿಯ ಹಲವಾರು ಶಾಸಕರ, ಮಂತ್ರಿಗಳ ಅನೈತಿಕ, ಅಶ್ಲೀಲ ಸಂಬಂಧಗಳು ಹೊರಬಂದಿರುವುದರ ಜೊತೆಗೆ ಈಗ ಸದನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಅದರ ಬಗ್ಗೆ ನಿರ್ಲಕ್ಯ ತೋರಿ ಬ್ಲೂಫಿಲಂ ನೋಡಿರುವ ಮಂತ್ರಿಗಳ ವರ್ತನೆ ನೋಡಿದರೆ ಬಿಜೆಪಿ ಶಿಸ್ತಿನ ಪಕ್ಷ ಎನ್ನುವುದು, ಸಂಸ್ಕೃತಿ ಬಗೆಗಿನ ಅವರ ಕಾಳಜಿ ಎನ್ನುವುದು ರಾಜಕೀಯ ಆಟದ ದಾಳಗಳು ಮಾತ್ರ. ಬಿಜೆಪಿಯಲ್ಲಿರುವುದುಸಂಸ್ಕೃತಿಯಲ್ಲ, ವಿಕೃತಿ.

- ಮಂಜುಳ, ಶಿವಮೊಗ್ಗ

ಬಿಜೆಪಿ ಅಧಿಕಾರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಡಿನೋಟಿಫಿಕೇಷನ್ ಮುಂತಾದ ಹಗರಣಗಳಿಂದ ಆರಂಭವಾಗಿ ಉಡುಪಿ ಸೇಂಟ್ ಮೇರೀಸ್ ದ್ವೀಪದಲ್ಲಿ ರೇವು ಪಾರ್ಟಿ ಹಾಗೂ ಈಗನ ಸಚಿವರ ಅಶ್ಲೀಲ ದೃಶ್ಯಾವಳಿ ವೀಕ್ಷಣೆಯ ಹಂತಕ್ಕೆ ತಂದು ನಿಲ್ಲಿಸಿದೆ. ಮಾಜಿ ಮುಖ್ಯಮಂತ್ರಿಗಳು ತಮಗೆ ಸಂಬಂಧಪಡದ ಶಾಸಕಿ ಮತ್ತು ಮಂತ್ರಿಗಳನ್ನು ಅಕ್ಕಪಕ್ಕ ಕೂರಿಸಿಕೊಂಡು ಯಾಗ ನಡೆಸಿದ್ದು ಜನರ ನೆನಪಿನಲ್ಲಿ ಮರೆಯಾಗುವ ಮೊದಲೆ ಈ ಕೃತ್ಯ ನಡೆದಿದ್ದು ಕರ್ನಾಟಕದ ಸಭ್ಯ ಸಂಸ್ಕೃತಿಗೆ ಮಸಿ ಬಳಿದಿದೆ.

 

ಹಿಂದೂ ಸಂಸ್ಕೃತಿಯ ವಕ್ತಾರರಂತೆ ಶ್ರೀರಾಮನ ಪಾದುಕೆಗಳನ್ನು ಹೊತ್ತುಕೊಂಡು ರಾಮನಾಮ ಜಪಿಸುವ ಈ ಜನರ ಕಪಟ ದಿನದಿನಕ್ಕೆ ಬಯಲಾಗುತ್ತಾ ಬೆತ್ತಲಾಗುತ್ತಿದ್ದಾರೆ. ಇವರು ಸಾರ್ವಜನಿಕ ಜವಾಬ್ದಾರಿಯನ್ನು ಹೊಂದಿಲ್ಲ. ಮೋಜುಮಸ್ತಿ ಮಾಡಲು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.  ಶಾಸಕರು, ಮಂತ್ರಿಗಳು ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸದಿದ್ದಲ್ಲಿ ಮತದಾರರು ತಕ್ಕಪಾಠ ಕಲಿಸುತ್ತಾರೆ.

- ಎಂ.ಶಿವಕುಮಾರ್, ಭದ್ರಾವತಿರಾಜ್ಯದ ಶಾಸಕಾಂಗದ ಪವಿತ್ರ ಸ್ಥಳದಲ್ಲಿ ಸಚಿವರ ಅಸಾಂವಿಧಾನಿಕ ನಡಾವಳಿ ಇಡೀ ದೇಶವೇ ಕರ್ನಾಟಕವನ್ನು ಸಂಶಯದಿಂದ ನೋಡುವ ವಾತಾವರಣ ಸೃಷ್ಟಿಸಿದೆ. ಆ ಸಚಿವರ ವರ್ತನೆ ಕೇವಲ ರಾಜ್ಯಕ್ಕೆ ಸೀಮಿತವಾದದ್ದಲ್ಲ. ಇದು ಭಾರತದ ಪರಮಾಧಿಕಾರಕ್ಕೆ ಧಕ್ಕೆ ತಗುಲುವ ನಡೆ. ಕೇಂದ್ರ ತನ್ನ 365ನೇ ವಿಧಿಯನ್ವಯದ ನಿರ್ದೇಶನದ ಅಧಿಕಾರದ ಮುಖೇನ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಕೇವಲ ತಲೆದಂಡವಷ್ಟೇ ಅಲ್ಲದೆ, ಜಾಮೀನುರಹಿತ ಬಂಧನಕ್ಕೆ ಆದೇಶಿಸಬೇಕು. ಈ ಸಚಿವರು ಮುಂದೆಂದೂ ರಾಜಕೀಯ ಪ್ರವೇಶಿಸದಂತೆ ನಿರ್ಬಂಧ ಹೇರಬೇಕು. ಇಂತಹ ಸಂದರ್ಭದಲ್ಲಿ ಸದನದ ಸದಸ್ಯರಿಗಿರುವ (107(5)ನೇ ವಿಧಿಯ ವಿಶೇಷ ಸವಲತ್ತನ್ನು ಸ್ಪೀಕರ್ ಪರಿಗಣಿಸಬಾರದು. ನಾಡಿನ ಸಮಸ್ತ ಪ್ರಜ್ಞಾವಲಯ ಇದರ ವಿರುದ್ಧ ಜಾಗೃತವಾಗಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry