ಭಾನುವಾರ, ಮೇ 16, 2021
22 °C

`ಅಭಿವೃದ್ಧಿ ಹೆಸರಲ್ಲಿ ಹೆಣಗಳ ಮೇಲೆ ಮಹಲು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ:  `ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರಗಳು, ಜನರ ಹೆಣಗಳ ಮೇಲೆ ಮಹಲುಗಳನ್ನು ಕಟ್ಟುವ ಕೆಲಸ ಮಾಡುತ್ತಿವೆ' ಎಂದು ಚಿಂತಕ ಡಾ.ಕೆ.ಎಸ್.ಶರ್ಮಾ ಕಿಡಿಕಾರಿದರು.ನಗರದಲ್ಲಿ ಭಾನುವಾರ ಧಾರವಾಡ-ಹುಬ್ಬಳ್ಳಿ ಮಹಾನಗರ ಸಮಗ್ರ ಅಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಯಾವ ಅಭಿವೃದ್ಧಿ ಯೋಜನೆ ಜನರಿಗೆ ಪೂರಕವಾಗಿರುವು ದಿಲ್ಲವೋ ಅಂಥದು ಅಭಿವೃದ್ಧಿಯೇ ಅಲ್ಲ. ಪ್ರತಿಯೊಂದು ರಂಗದಲ್ಲೂ ಇಂದು ರಾಜಕಾರಣ ಪ್ರವೇಶಿಸಿದೆ. ಕೊಳಚೆ ಪ್ರದೇಶದಲ್ಲಿ ಜನರು ಇರಬಾರದು ಎಂದಾದರೆ ಅವರಿಗೆ ಸುರಕ್ಷಿತ ಸ್ಥಳಗಳನ್ನು ಕೊಟ್ಟು ಗರೀಬಿ ಹಠಾವೋ ಯೋಜನೆ ಜಾರಿಗೆ ತರಬೇಕೆ ಹೊರತು ಗರೀಬೋಂಕೊ ಹಠಾವೋ ಎಂಬ ನೀತಿ ಅನುಸರಿಸಬಾರದು' ಎಂದರು.`ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 65 ವರ್ಷಗಳ ನಂತರ ಈ ದೇಶದ ಕೇವಲ 35 ಕುಟುಂಬಗಳು ಕೋಟ್ಯಂತರ ಆಸ್ತಿಯನ್ನು ಹೊಂದಿವೆ. ಅಲ್ಲದೇ, ದೇಶ ವಿದೇಶಗಳಲ್ಲಿ ಆಸ್ತಿಗಳನ್ನು ಮಾಡಿ ಇಟ್ಟಿವೆ. ಈ ದೇಶದ ಇಡೀ ಆರ್ಥಿಕತೆಯನ್ನು ಇಷ್ಟು ವರ್ಷಗಳಾದರೂ ಕೇವಲ ಈ 35 ಕುಟುಂಬಗಳು ಮಾತ್ರ ನಿಯಂತ್ರಣ ಮಾಡುತ್ತಿವೆ. ಇಡೀ ವಿಶ್ವದಲ್ಲೇ ಕೋಟ್ಯಂತರ ಆಸ್ತಿ ಹೊಂದಿದ ಕುಟುಂಬಗಳು ಭಾರತ ದೇಶದಲ್ಲಿವೆ' ಎಂದು ಹೇಳಿದರು.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಮಾತನಾಡಿ, `ಇಂದಿನ ಹಳ್ಳಿಗಳಲ್ಲಿ ಮೂಲ ಸೌಕರ್ಯಗಳಿಲ್ಲದೇ ಹಳ್ಳಿಗಳೆಲ್ಲವೂ ವೃದ್ಧಾಶ್ರಮಗಳಾಗಿ ಮಾರ್ಪಾಡು ಹೊಂದುತ್ತಿವೆ.ಮೂಲ ಸೌಕರ್ಯ ಹಾಗೂ ಉದ್ಯೋಗಗಳನ್ನು ಹುಡುಕಿಕೊಂಡು ಯುವಕರು ನಗರದತ್ತ ಬಂದರೆ ಹಳ್ಳಿಗಳಲ್ಲಿ ವೃದ್ಧರು ಮಾತ್ರ ಉಳಿದುಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಇರುವ ಶೇ 62ರಷ್ಟು ಕೃಷಿ ಭೂಮಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 1 ಹಾಗೂ 2ರಷ್ಟು ಕೃಷಿ ಭೂಮಿ ಕಡಿಮೆಯಾಗುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದರು.ಹೊಸತು ಪತ್ರಿಕೆ ಸಂಪಾದಕ ಸಿದ್ಧನಗೌಡ ಪಾಟೀಲ, ಬಿ.ಎಸ್.ಸೊಪ್ಪಿನ, ಶಿವಣ್ಣ ಬಡಿಗೇರ ಮತ್ತಿತರರು ಇದ್ದರು.ಡಾಕ್ಟರ್‌ಗೆ ಹೊಡೆದದ್ದು ತಪ್ಪಲ್ಲ...

`ನಗರದ ಜಿಲ್ಲಾ ಆಸ್ಪತ್ರೆ ಹಾಗೂ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆ ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಇಲ್ಲಿ ಕೆಲಸ ಮಾಡುವ ವೈದ್ಯರು ಹೊರಗಡೆ ಸುಮಾರು 20 ಕೋಟಿ ರೂಪಾಯಿ ಬೆಲೆ ಬಾಳುವ ಖಾಸಗಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿಕೊಂಡು ಸುಖದಾಯಕ ಜೀವನ ಸಾಗಿಸುತ್ತಿದ್ದಾರೆ.ಇಂಥವರಿಗೆ ಬಡ ಜನರ ನೋವು ಗೊತ್ತಾಗುವುದಿಲ್ಲ. ಮೊನ್ನೆ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ತಪ್ಪು ಮಾತನಾಡಿದ್ದರ ಸಲುವಾಗಿ ಅವರ ಮೇಲೆ ಕೈ ಮಾಡಬೇಕಾಯಿತು. ಆದರೆ ಅವರ ಮೇಲೆ ಏಕೆ ಕೈ ಮಾಡಿದೆ ಎಂಬುದನ್ನು ಮಾಧ್ಯಮಗಳು ಪ್ರಕಟಿಸಲಿಲ್ಲ.ಕೇವಲ ನಾನು ಕೈ ಮಾಡಿದ್ದನ್ನೇ ಎಲೆಕ್ಟ್ರಾನಿಕ್ ಮಾಧ್ಯಮಗಳು ಪುನಃ ತೋರಿಸುತ್ತಿದ್ದವು. ಬಡ ಜನರ ನೋವಿಗೆ ನಾನು ಸ್ಪಂದಿಸಿದ್ದೇನೆ. ಅಲ್ಲಿ ನಾನು ಮಾಡಿದ ಕೆಲಸ ತಪ್ಪಲ್ಲ' ಎಂದು ಶಾಸಕ ವಿನಯ ಕುಲಕರ್ಣಿ ಸಮರ್ಥಿಸಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.