ಸೋಮವಾರ, ಮೇ 10, 2021
28 °C

ಅಭಿವೃದ್ಧಿ ಹೆಸರಿನಲ್ಲಿ ಜನಪದ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಅಭಿವೃದ್ಧಿ ಹೆಸರಿನಲ್ಲಿ ನಮ್ಮ ಜನಪದ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಕೊಂಕಣ ರೈಲ್ವೆ, ನೌಕಾನೆಲೆ, ಆಲಮಟ್ಟಿ ಅಣೆಕಟ್ಟಿನಂಥ ಪ್ರಗತಿಯೆಂದು ಹೇಳುವ ಇಂಥ ಯೋಜನೆಗಳು ನಮ್ಮ ಜನಪದರನ್ನು ಕಳೆದುಕೊಳ್ಳುವಂತೆ ಮಾಡಿದವು ಎಂದು ಕಲಾವಿದ ಅನೀಲ ದೇಸಾಯಿ ಹೇಳಿದರು.ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ನಡೆದ ಜಾನಪದ ಕೋಗಿಲೆ ಫಕ್ಕಿರವ್ವ ಗುಡಿಸಾಗರ ದತ್ತಿ ಕಾರ್ಯಕ್ರಮ ಅಂಗವಾಗಿ ಜನಪದರ ಬದುಕು ಮತ್ತು ಹಾಡು ಎಂಬ ವಿಷಯ ಕುರಿತು ಅವರು ಮಾತನಾಡಿದರು.ಮನುಷ್ಯನ ಬದುಕಿನ ಪ್ರತಿಹಂತದಲ್ಲೂ ಜನಪದದ ಹಾಡುಗಳು ಹಾಸುಹೊಕ್ಕಾಗಿದ್ದವು. ಅದಕ್ಕಾಗಿಯೇ ಗ್ರಾಮೀಣ ಜನರ ಬದುಕು ನೆಮ್ಮದಿಯಾಗಿತ್ತು. ಜನಪದ ಕಲೆ ಮತ್ತು ಸಂಪ್ರದಾಯ ಮರೆಯಾದಂತೆ ಮನುಷ್ಯ ನೆಮ್ಮದಿ ಕಳೆದುಕೊಳ್ಳಹತ್ತಿದ. ಎಲ್ಲದಕ್ಕೂ ಮೂಲ ಜನಪದ ಸಂಗೀತ, ಆದರೆ ಇತ್ತಿತ್ತಲಾಗಿ ಹುಟ್ಟಿಕೊಂಡ ಕಲೆಗೆ ನೀಡುವ ಪ್ರಾಧಾನ್ಯತೆ ಜನಪದ ಕಲೆಗೆ ಮತ್ತು ಕಲಾವಿದರಿಗೆ ನೀಡದಿರುವುದು ಖೇದಕರ ಸಂಗತಿ ಎಂದರು. ಜನಪದ ಕಲಾವಿದರನ್ನು ನಾಡಿಗೆ ಪರಿಚಯಿಸುವಲ್ಲಿ ಧಾರವಾಡ ಆಕಾಶವಾಣಿ ಮಾಡಿದ ಪ್ರಯತ್ನ ದಾಖಲಾರ್ಹ. ಸರ್ಕಾರದ ಉದಾಸೀನತೆಯಿಂದ ಇಂದು ಜನಪದ ಕಲಾವಿದರ ಬದುಕು ಸಂಕಷ್ಟದಲ್ಲಿದೆ ಎಂದ ಅವರು, ಫಕ್ಕೀರವ್ವ ಗುಡಿಸಾಗರ ಕೇವಲ ಕಲಾವಿದೆಯಾಗಿರಲಿಲ್ಲ, ದೇವದಾಸಿ ಪದ್ಧತಿ ವಿರುದ್ಧ ನಿಂತವಳು.ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದವಳು. ಲಿಂಗಾಯತ ದೀಕ್ಷೆ ಪಡೆದು ಕಲಾವಿದೆಯರನ್ನು ನೋಡುವ ದೃಷ್ಟಿ ಬದಲಿಸಿಕೊಳ್ಳಿ ಎಂದು ಗುಡುಗಿದವಳು. ಇಂಥ ಕಲಾವಿದೆಯನ್ನು ಸರ್ಕಾರ ಅವಳ ಕೊನೆಯ ಕಾಲದಲ್ಲಿ ನಿರ್ಲಕ್ಷಿಸಿತು ಎಂದು ಹೇಳಿದರು.ಡಾ. ರಾಮು ಮೂಲಗಿ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ ನಿರೂಪಿಸಿದರು. ಬಸವಪ್ರಭು ಹೊಸಕೇರಿ, ಶಂಕರ ಕುಂಬಿ, ಶಿವಣ್ಣ ಬೆಲ್ಲದ, ಸಿದ್ಧಲಿಂಗ ದೇಸಾಯಿ, ಜಿ.ಬಿ.ಹೊಂಬಳ, ಪ್ರಕಾಶ ಮಲ್ಲಿಗವಾಡ, ಮಹದೇವ ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.