ಶನಿವಾರ, ಜುಲೈ 24, 2021
22 °C

ಅಭಿವ್ಯಕ್ತಿ ಸ್ವಾತಂತ್ರ್ಯಮೊಟಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೈಬರ್ ದಾಳಿ, ರಾಜಕೀಯ ಪ್ರೇರಿತ ಮಾಹಿತಿ ನಿಯಂತ್ರಣ (ಸೆನ್ಸಾರ್‌ಶಿಪ್) ಮತ್ತು ಇಂಟರ್‌ನೆಟ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಯಂತ್ರಣಗಳು ಇಂಟರ್‌ನೆಟ್‌ನಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿವೆ. ವಿಶ್ವದಾದ್ಯಂತ ಇಂತಹ ಬೆಳವಣಿಗೆಗಳು ನಡೆದಿದ್ದರೂ ಸದ್ಯಕ್ಕೆ ದೇಶದಲ್ಲಿ ಇಂತಹ ಬೆದರಿಕೆಯ ಸಾಧ್ಯತೆ ಇಲ್ಲ.ಹೀಗೆಂದು ಅಮೆರಿಕದ ಇಂಟರ್‌ನೆಟ್ ಕಾವಲು ಸಂಸ್ಥೆ ‘ಫ್ರೀಡಂ ಹೌಸ್’ನ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ‘ಫ್ರೀಡಂ ಆನ್ ದ ನೆಟ್ 2011: ಅ ಗ್ಲೋಬಲ್ ಅಸೆಸ್‌ಮೆಂಟ್ ಆಫ್ ಇಂಟರ್‌ನೆಟ್ ಆಂಡ್ ಡಿಜಿಟಲ್ ಮೀಡಿಯಾ’ ವರದಿಯಲ್ಲಿ ಇಂಟರ್‌ನೆಟ್ ಸ್ವಾತಂತ್ರ್ಯದ ಬಗ್ಗೆ ವಿವರಗಳಿವೆ.ಇದೇ ಹೊತ್ತಿನಲ್ಲಿ, ದೇಶದ ‘2008- ಐಟಿ ಕಾಯ್ದೆ’ಗೆ ಕೇಂದ್ರ ಸರ್ಕಾರವು ಕೆಲ ತಿದ್ದುಪಡಿಗಳನ್ನು ತರಲು ಹೊರಟಿದೆ ಎನ್ನುವ ವರದಿಗಳಿವೆ. ಈ ಹಿನ್ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಇಂಟರ್‌ನೆಟ್ ಬಳಕೆ ಕುರಿತು ಸಜನ್ ಪೂವಯ್ಯ ಅವರು ಇಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.ಸಜನ್ ಪೂವಯ್ಯ ಅವರು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವಾರು ಮೊಕದ್ದಮೆಗಳ ವಿಚಾರಣೆಯನ್ನೂ ನಿರ್ವಹಿಸುವ ‘ತಂತ್ರಜ್ಞಾನ ಪರಿಣತ ನ್ಯಾಯವಾದಿ’ಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.ಗೂಗಲ್ ಮತ್ತಿತರ ಇಂಟರ್‌ನೆಟ್ ಸಂಸ್ಥೆಗಳ ಪರ ವಕಾಲತ್ತು ನಿರ್ವಹಿಸುತ್ತಿರುವ ಸಜನ್ ಅವರು,  ‘2008- ಐಟಿ ಕಾಯ್ದೆ’ ಮತ್ತು ಅದಕ್ಕೆ ತರಲು ಉದ್ದೇಶಿಸಲಾಗಿರುವ ತಿದ್ದುಪಡಿಯ ಸಾಧಕ - ಬಾಧಕಗಳು, ಅಭಿವ್ಯಕ್ತಿ  ಸ್ವಾತಂತ್ರ್ಯ, ಇಂಟರ್‌ನೆಟ್ ನಿಯಂತ್ರಣ, ಬ್ಲಾಗ್‌ಗಳಲ್ಲಿನ ವಿಚಾರಗಳು ಮಾನನಷ್ಟಕ್ಕೆ ಎಡೆ ಮಾಡಿಕೊಡುವ ಪ್ರಕರಣಗಳಲ್ಲಿ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು  ಮುಂತಾದ ವಿಷಯಗಳನ್ನು ಚರ್ಚಿಸಿದ್ದಾರೆ.ದೇಶದಲ್ಲಿ ಈಗ ಗ್ರಾಮೀಣ ಪ್ರದೇಶಗಳಿಗೂ ಇಂಟರ್‌ನೆಟ್ ಸಂಪರ್ಕ ತಲುಪಿದೆ. ನಗರ ಪ್ರದೇಶಗಳಲ್ಲಿ  ಈ ಹೊಸ ಸಂವಹನ ಮಾಧ್ಯಮವು ವಿಚಾರಗಳ ವಿನಿಮಯಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೊಸ ವೇದಿಕೆ ಕಲ್ಪಿಸಿದೆ.ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬ್ಲಾಗ್‌ಗಳನ್ನು ದುರುಪಯೋಗ ಮಾಡಿಕೊಳ್ಳುವ ಸಾಕಷ್ಟು ಪ್ರಯತ್ನಗಳೂ ನಡೆದಿವೆ. ದೂರಸಂಪರ್ಕ ಜಾಲ, ಇಂಟರ್‌ನೆಟ್ ಸರ್ವಿಸ್ ಒದಗಿಸುವವರು, ಮಾಹಿತಿ ಶೋಧ ತಾಣಗಳು, ಸೈಬರ್ ಕೆಫೆ ಮತ್ತು ಅದರಲ್ಲೂ ವಿಶೇಷವಾಗಿ ಬ್ಲಾಗ್‌ಗಳನ್ನು ನಿಯಂತ್ರಿಸಲು ಹೊರಟಿರುವ ಬಗ್ಗೆ ಅನುಮಾನ ಪಡಲಾಗುತ್ತಿದೆ. ಇದು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ ಎಂದೂ ವ್ಯಕ್ತಿಗತ   ಬ್ಲಾಗರ್ಸ್‌ಗಳು ಬಲವಾಗಿ  ನಂಬಿದ್ದಾರೆ.ಆರಂಭದಿಂದಲೂ ಇಂಟರ್‌ನೆಟ್ ಅನ್ನು ನಿಯಂತ್ರಿಸಲು ಅಮೆರಿಕ ಉದ್ದೇಶಿಸಿತ್ತು. ಆದರೆ, ಒಂದು ದೇಶಕ್ಕೆ ಹಿತಕರ ಅನಿಸಿದ್ದು ಇನ್ನೊಂದು ದೇಶಕ್ಕೆ ಅಹಿತಕರ ಆಗಿರುತ್ತದೆ. ಹೀಗಾಗಿ ಇಂತಹ ನಿಯಂತ್ರಣ ಉದ್ದೇಶವು ಪೂರ್ಣವಾಗಿ ಜಾರಿಗೆ ಬರಲಿಲ್ಲ. ಆದರೆ, ಅಮೆರಿಕವು ಜಾಗತಿಕ ಮತ್ತು ಆಂತರಿಕವಾಗಿ ತನ್ನ ಹಿತಾಸಕ್ತಿಗೆ  ಧಕ್ಕೆ ಒದಗುವ ಸಂದರ್ಭದಲ್ಲಿ ಇಂಟರ್‌ನೆಟ್ ಸಂಪರ್ಕ ನಿರ್ಬಂಧಿಸಲು ವಿಶೇಷ ವ್ಯವಸ್ಥೆಯನ್ನೇ ಮಾಡಿಕೊಂಡಿದೆ.  ‘ಕಂಪ್ಯೂಟರ್ ಎಮರ್‌ಜೆನ್ಸಿ ರೆಸ್ಪಾನ್ಸ್ ಟೀಮ್’ ನೆರವಿನಿಂದ ಹಾನಿಕಾರಕ ಮಾಹಿತಿಯನ್ನು  ಮೊಳಕೆಯಲ್ಲಿಯೇ ಚಿವುಟಿ ಹಾಕುತ್ತದೆ.

ಇಂಟರ್‌ನೆಟ್ ನಿಯಂತ್ರಣಕ್ಕೆ ಸಕಾರಾತ್ಮಕ ಮತ್ತು ನಕಾರಾತ್ಮಕ ಎನ್ನುವ ಎರಡು ಮುಖಗಳಿವೆ.ಇಂಟರ್‌ನೆಟ್‌ನಲ್ಲಿ ಕಾನೂನಿಗೆ ವಿರುದ್ಧವಾಗಿಲ್ಲದ ಯಾವುದೇ ಅನಿಸಿಕೆ, ಅಶ್ಲೀಲ ಮಾಹಿತಿ ಪ್ರಕಟಿಸಬಾರದು. ಮಾನನಷ್ಟಕ್ಕೆ ಕಾರಣವಾಗುವಂತಹ ಯಾವುದೇ ಲೇಖನಗಳನ್ನೂ ಪ್ರಕಟಿಸಬಾರದು ಎನ್ನುವ ನಿಬಂಧನೆಗಳೂ ಇವೆ.ಆದರೆ, ಯಾವುದೇ ಒಬ್ಬ ವ್ಯಕ್ತಿಗೆ, ಸಂಸ್ಥೆಗೆ ಮಾನಹಾನಿ ಆಗುವಂತಹ ವರದಿ, ಲೇಖನಗಳನ್ನು ಪ್ರಕಟಗೊಂಡ ಸಂದರ್ಭದಲ್ಲಿ ಲೇಖಕನ ವಿರುದ್ಧ ಅಥವಾ ಇಂಟರ್‌ನೆಟ್ ಸೇವೆ ಒದಗಿಸಿದ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಬೇಕೆ ಎನ್ನುವ ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ ಎಂದು ಸಜನ್ ಪೂವಯ್ಯ ಹೇಳುತ್ತಾರೆ.ಬ್ಲಾಗ್‌ಗಳಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟಿರುವ ಇಂಟರ್‌ನೆಟ್ ಸಂಸ್ಥೆಗೆ ಅಲ್ಲಿ ಏನನ್ನೂ ಬರೆಯಲಾಗಿದೆ. ‘ಯೂಟ್ಯೂಬ್’ನಂತಹ ವಿಡಿಯೊ ತಾಣಗಳಲ್ಲಿ ಯಾವ ಚಿತ್ರ ಪ್ರಕಟಿಸಲಾಗಿದೆ ಎನ್ನುವುದರ ಮೇಲೆ ನಿಯಂತ್ರಣ ಇರುವುದಿಲ್ಲ. ಬ್ಲಾಗ್ ಸ್ಪಾಟ್‌ಗಳಲ್ಲಿ ಯಾವುದೇ ವಿಷಯ ವಿಶ್ಲೇಷಿಸಬಹುದು. ಬರೆಯಬಹುದಾಗಿದೆ, ವಿಡಿಯೊ ದಾಖಲಿಸಬಹುದು.ಕೆಲವರು ಅನಾಮಧೇಯ ಹೆಸರಿನಲ್ಲಿ ಬ್ಲಾಗ್ ಆರಂಭಿಸಿದ ಪ್ರಕರಣಗಳಲ್ಲಿಯೂ ಅಂತವರ ವಿರುದ್ಧ ತಕ್ಷಣಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ.ಇಂಟರ್‌ನೆಟ್‌ನ   ಯಾವ ಬ್ಲಾಗ್ ಪ್ಲಾಟ್‌ಫಾರ್ಮ್ ಮೇಲೆ ಈ ತಾಣ ಕಾರ್ಯನಿರ್ವಹಿಸುತ್ತಿದೆ ಎನ್ನುವ ಸಂಗತಿ ಆಧರಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಲ್ಲಿ ಇಂಟರ್‌ನೆಟ್‌ನ ‘ಐಪಿ ಅಡ್ರೆಸ್’ ವಿಘ್ನ ಸಂತೋಷಿ ಬ್ಲಾಗಿಗರನ್ನು ಪತ್ತೆ ಹಚ್ಚಲು ನೆರವಾಗುತ್ತದೆ.ಪ್ರತಿ ಸೆಕೆಂಡ್‌ಗೆ, ನಿಮಿಷಕ್ಕೆ ಅಗಾಧ ಪ್ರಮಾಣದ ಮಾಹಿತಿಯು ಇಂಟರ್‌ನೆಟ್‌ಗೆ ಸೇರ್ಪಡೆಗೊಳ್ಳುತ್ತದೆ. ಅದರಲ್ಲಿ ಪ್ರತಿಯೊಂದನ್ನೂ ಪರಿಶೀಲಿಸಲು ಇಂಟರ್‌ನೆಟ್ ಸೇವೆ ಒದಗಿಸುವ ಸಂಸ್ಥೆಗೆ ಸಾಧ್ಯವಾಗಲಾರದು.ಎಲ್ಲರಿಗೂ ಗೊತ್ತಾಗುವ ರೀತಿಯಲ್ಲಿ ಮನಸ್ಸಿಗೆ ತೋಚಿದ ರೀತಿಯಲ್ಲಿ ಬರೆದು ಮಾನನಷ್ಟ ಆಗುವಂತೆ ಬರೆದಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಇಂಟರ್‌ನೆಟ್ ತಾಣವನ್ನೇ ವೀಕ್ಷಣೆಗೆ ನಿರ್ಬಂಧಗೊಳಿಸಲು ಅವಕಾಶ ಇದೆ.ಯಾವುದೇ ವ್ಯಕ್ತಿಯ ವಿರುದ್ಧ ಸೂಕ್ತ ಸಾಕ್ಷಾಧಾರಗಳೊಂದಿಗೆ ಬರೆದ ಸಂದರ್ಭದಲ್ಲಿ ಅದು ಇನ್ನೊಬ್ಬರಿಗೆ ಮಾನನಷ್ಟ ಆಗಿದೆ ಎಂದು ಭಾಸವಾದರೂ, ದಾಖಲೆಗಳ ಆಧಾರದ ಮೇಲೆ ಕೋರ್ಟ್‌ಗಳು ಅಂತಹ ಸಂದರ್ಭಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನಿಲ್ಲುತ್ತವೆ. ಕಾನೂನು ‘ಅಭಿವ್ಯಕ್ತ ಸ್ವಾತಂತ್ರ್ಯ’ದ  ರಕ್ಷಣೆಗೆ ಬರುತ್ತದೆ ಎಂದು ಸಜನ್ ಪೂವಯ್ಯ ಹೇಳುತ್ತಾರೆ.ಅಮೆರಿಕವು ಮಾಡಿಕೊಂಡಿರುವ ವ್ಯವಸ್ಥೆಯ ಮಾದರಿಯಲ್ಲಿಯೇ  ಭಾರತ ಸರ್ಕಾರವೂ ‘ಕಂಪ್ಯೂಟರ್ ಎಮರ್‌ಜೆನ್ಸಿ ರೆಸ್ಪಾನ್ಸ್ ಟೀಮ್ ಡಾಟ್ ಇನ್’ ಎನ್ನುವ ವ್ಯವಸ್ಥೆ ರೂಪಿಸಿದೆ. ಅಧಿಕಾರದಲ್ಲಿ ಇರುವ ಸರ್ಕಾರದ ಮರ್ಜಿ ಆಧರಿಸಿ ಇದು ಕಾರ್ಯನಿರ್ವಹಿಸುವ ಅಪಾಯ ಇದೆ ಎನ್ನುತ್ತಾರೆ.ಯಾವುದೇ ಒಂದು ಸಂಗತಿ, ಬೆಳವಣಿಗೆ ಮತ್ತು ಬರವಣಿಗೆಯು ಸಮಾಜದ ಶಾಂತಿ ಸೌಹಾರ್ದಕ್ಕೆ, ದೇಶದ ಭದ್ರತೆಗೆ ಧಕ್ಕೆ ತರುವ ಸಂದರ್ಭದಲ್ಲಿ ಈ ವ್ಯವಸ್ಥೆಯು ನಿರ್ದಿಷ್ಟ ಇಂಟರ್‌ನೆಟ್ ತಾಣವನ್ನೇ ಪ್ರತಿಬಂಧಿಸಲು ಮುಂದಾಗುತ್ತದೆ.ಕೆಲವರು ಉದ್ದೇಶಪೂರ್ವಕವಾಗಿ ಇಂಟರ್‌ನೆಟ್‌ನಲ್ಲಿ ಮಾಹಿತಿ ತಿರುಚಿರುತ್ತಾರೆ. ಇಂತಹ ಪ್ರಕರಣಗಳಲ್ಲಿಯೂ ಸೈಬರ್ ಮೇಲ್ಮನವಿ  ನ್ಯಾಯಮಂಡಳಿಯೂ  ನೆರವಿಗೆ ಬರುತ್ತದೆ ಎಂದು ಅವರು ಹೇಳುತ್ತಾರೆ. ದೂರುಗಳ ಹಿನ್ನೆಲೆಯಲ್ಲಿ ಪ್ರಕರಣಗಳ ಗಂಭೀರತೆ ಆಧರಿಸಿ ನಿರ್ದಿಷ್ಟ ಇಂಟರ್‌ನೆಟ್ ತಾಣವು ವೀಕ್ಷಣೆಗೆ ಸಿಗದಂತೆ ಮಾಡಲು (ಪುಲ್ ಡೌನ್) ಆದೇಶಿಸಲಾಗುತ್ತದೆ.ನಿಗದಿತ ಸಮಯದಲ್ಲಿ ಇಂಟರ್‌ನೆಟ್ ಸಂಸ್ಥೆಯು ಬ್ಲಾಗ್‌ಗಳನ್ನು ರದ್ದುಪಡಿಸುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಇಂಟರ್‌ನೆಟ್ ತಾಣಗಳ ದುರ್ಬಳಕೆ ಮತ್ತಿತರ ವಿಷಯಗಳಲ್ಲಿ  ಕಾನೂನು ಸಂಬಂಧಿತ ಸೂಕ್ಷ್ಮ ವಿಷಯಗಳ ಬಗ್ಗೆ ಜನರಲ್ಲಿ ಇನ್ನೂ ಸಾಕಷ್ಟು ಅರಿವು ಮೂಡಿಸುವ ಅಗತ್ಯ ಇದೆ ಎಂದೂ ಸಜನ್ ಪೂವಯ್ಯ ಅಭಿಪ್ರಾಯಪಡುತ್ತಾರೆ.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.