ಅಭಿವ್ಯಕ್ತಿ ಹೆಸರಲ್ಲಿ ಅವಹೇಳನ ಖಂಡನೀಯ

7
ಢುಂಢಿ ಪರ ಮಾತನಾಡುವವರನ್ನೂ ವಿರೋಧಿಸಬೇಕಿದೆ: ಚಿಮೂ

ಅಭಿವ್ಯಕ್ತಿ ಹೆಸರಲ್ಲಿ ಅವಹೇಳನ ಖಂಡನೀಯ

Published:
Updated:

ಬೆಂಗಳೂರು: `ಹಿಂದೂ ಧಾರ್ಮಿಕ  ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಢುಂಢಿ ಕೃತಿಯನ್ನು ಮಾತ್ರವಲ್ಲ ಅದರ ಪರವಾಗಿ ಮಾತನಾಡುವವರನ್ನು ಕೂಡ ವಿರೋಧಿಸಬೇಕಿದೆ' ಎಂದು ಹಿರಿಯ ಸಂಶೋಧಕ ಡಾ.ಚಿದಾನಂದ ಮೂರ್ತಿ ಕರೆ ನೀಡಿದರು.ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಭೌತಿಕ ಭಕ್ತಿಯಂತೆ, ಭಾವನಾತ್ಮಕ ಭಕ್ತಿಯೂ ಮುಖ್ಯ. ಇದನ್ನು ಅವಮಾನಿಸುವವರು ಮೂರ್ಖರಾಗುತ್ತಾರೆ ವಿನಃ ವಿರೋಧಿಸುವವರಲ್ಲ' ಎಂದು ತಿರುಗೇಟು ನೀಡಿದರು.`ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಧಾರ್ಮಿಕ ಮಹಾಪುರುಷರ ಬಗ್ಗೆ ಅವಹೇಳನ ಮಾಡಿ ಬರೆಯುವ ಪ್ರವೃತ್ತಿಗೆ ಕಡಿವಾಣ ಹಾಕುವ ಅಗತ್ಯವಿದೆ. ಅನ್ಯಧರ್ಮದ ಧಾರ್ಮಿಕ ನಂಬಿಕೆಗಳನ್ನು ಲೇವಡಿ ಮಾಡಿದ್ದರೆ, ಇಡೀ ದೇಶವೇ ಹೊತ್ತಿ ಉರಿಯುತ್ತಿತ್ತು. ಸಹಿಷ್ಣುತೆ ಹಿಂದೂ ಧರ್ಮದ ಜೀವಾಳ.  ಹಾಗೆಂದು ಹಿಂದೂಗಳು ಹೇಡಿಗಳಲ್ಲ' ಎಂದರು.`ಢುಂಢಿ ಕೃತಿಯನ್ನು ಪ್ರಜ್ಞಾವಂತರು ವಿರೋಧಿಸಬೇಕು. ಪ್ರಗತಿಪರರು, ಜಾತ್ಯತೀತ ಸೋಗಿನಲ್ಲಿರುವವರ ನಿಜ ಬಣ್ಣವನ್ನು ಜನತೆ ಅರ್ಥಮಾಡಿಕೊಳ್ಳಬೇಕು. ಕೃತಿಗೆ ಹೇರಿರುವ ನಿಷೇಧ ಹೀಗೆ ಮುಂದುವರಿಯಲಿ, ಪ್ರಗತಿಪರರ ಒತ್ತಾಯಕ್ಕೆ ಮಣಿದು ಕೃತಿಯ ಮಾರಾಟಕ್ಕೆ ಅವಕಾಶ ದೊರೆತರೆ ಉಗ್ರ ಪ್ರತಿಭಟನೆ ಮಾಡಲಾಗುವುದು' ಎಂದು ಎಚ್ಚರಿಕೆ ನೀಡಿದರು.`ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿರುವ ಯೋಗೇಶ್ ಮಾಸ್ಟರ್ ಅವರು ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಯಾರಿಂದಲೂ ವ್ಯಕ್ತಿ ಸ್ವಾತಂತ್ರ್ಯದ ಕುರಿತು ಪಾಠ ಕಲಿಯುವ ಅಗತ್ಯವಿಲ್ಲ. ಸಾರ್ವಜನಿಕರು ಸಿಡಿದೆದ್ದಾಗ ಮಾತ್ರ ಇಂತಹ ಕೃತಿಗಳು ಪ್ರಕಟವಾಗುವುದಿಲ್ಲ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry