ಬುಧವಾರ, ನವೆಂಬರ್ 13, 2019
22 °C
ವಿನೂತನ ದಾರಿಕಂಡ ರಾಜಕೀಯ ಮುಖಂಡರು

ಅಭ್ಯರ್ಥಿಗಳಿಂದ ವಾಮ ಮಾರ್ಗ?

Published:
Updated:

ಶಹಾಪುರ: ರಾಜ್ಯ ಚುನಾವಣೆ ಆಯೋಗವು ಮುಕ್ತ ಹಾಗೂ ನ್ಯಾಯಸಮ್ಮತವಾದ ಚುನಾವಣೆ ನಡೆಸಲು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಲಿದೆ.  ಇಂತಹ ನೀತಿ ಸಂಹಿತೆಯ ಕಾನೂನು ಚೌಕಟ್ಟಿನೊಳಗೆ ರಾಜಕೀಯ ಮುಖಂಡರು ಹಲವಾರು ವಾಮ ಮಾರ್ಗಗಳನ್ನು ಹಿಡಿದು ಗ್ರಾಮೀಣ ಪ್ರದೇಶದ ಮಹಿಳಾ ಕಾರ್ಯಕರ್ತರ ಮೂಲಕ ಚುನಾವಣೆಯ ಅಕ್ರಮವನ್ನು ಎಸಗಲು ನೀಲಿ ನಕ್ಷೆಯನ್ನು ಸಿದ್ದಪಡಿಸಿದ ಬಗ್ಗೆ ಹೈದರಾಬಾದ ಕರ್ನಾಟಕ ವಾಲ್ಮೀಕಿ ವಿಕಾಸ ಪರಿಷತ್ ಬಹಿರಂಗಪಡಿಸಿದೆ.ರಾಜಕೀಯ ಪಕ್ಷಗಳಿಗೆ ಗ್ರಾಮೀಣ ಪ್ರದೇಶದ ಹಳ್ಳಿಗಳ ತಳಮಟ್ಟದಲ್ಲಿ ನೇರವಾಗಿ ಸಂಪರ್ಕ ಹೊಂದುವ ಕ್ಷೇತ್ರಗಳಾದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರನ್ನು ವ್ಯಾಪಕವಾಗಿ ರಾಜಕೀಯ ಪ್ರಚಾರಕ್ಕಾಗಿ  ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಲಿವೆ.ಅಂಗನವಾಡಿ, ಆಶಾ ಕಾರ್ಯಕರ್ತರು, ಮಧ್ಯಾಹ್ನದ ಬಿಸಿಯೂಟದ ಕಾರ್ಯಕರ್ತರನ್ನು ಸ್ಥಳೀಯ ರಾಜಕೀಯ ಮುಖಂಡರ ಪ್ರಭಾವ, ಗ್ರಾಮ ಪಂಚಾಯಿತಿ ಮತ್ತು ಅಂದಿನ ಅಧಿಕಾರವಧಿಯ ಶಾಸಕರ ಶಿಫಾರಸ್ಸಿನಿಂದಲೇ ನೇಮಕಗೊಳ್ಳುವುದರಿಂದ ಅನಿವಾರ್ಯವಾಗಿ ಆಯಾ ರಾಜಕೀಯ ಪಕ್ಷಗಳ ಮಹಿಳಾ ಕಾರ್ಯಕರ್ತರಂತೆ  ಚಲಾವಣೆಯಾಗುತ್ತಿರುವುದು ಆತಂಕಕಾರಿ ಅಂಶವಾಗಿದೆ ಎನ್ನುತ್ತಾರೆ ಮಹಿಳಾ ಕಾರ್ಯಕರ್ತರೊಬ್ಬರು.ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಸ್ಥಳೀಯವಾಗಿ ಸರ್ಕಾರ ರೂಪಿಸಿದ ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ, ಮಡಿಲು ಕಿಟ್ಟು, ಪಡಿತರ ಮತ್ತು ಆಹಾರ ಇಲಾಖೆಯಿಂದ ವಿತರಿಸಲಾಗುವ ಗರ್ಭಿಣಿಯರಿಗೆ ಹಂಚುವ ಆಹಾರಧಾನ್ಯ ಹೀಗೆ ಯೋಜನೆ ಫಲಾನುಭವಿಗಳ ಆಯ್ಕೆ ಹಾಗೂ ರಚನೆ ಮತ್ತು ಸಬ್ಸಿಡಿ ಹಣವನ್ನು ಇವರ ಶಿಫಾರಸುಗಳಿಂದಲೇ ಆಗುತ್ತವೆ. ಆಯಾ ಗ್ರಾಮದ

ಸ್ಥಳೀಯರು ಮಹಿಳಾ ವರ್ಗದೊಂದಿಗೆ ನೇರ ಸಂಪರ್ಕ ಹಾಗೂ ಪ್ರಭಾವವನ್ನು ಹೊಂದಿರುವುದರಿಂದ ಸದ್ದಿಲ್ಲದೆ ರಾಜಕೀಯ ಕಾರ್ಯಕರ್ತರಂತೆ ಕೆಲಸ ನಿರ್ವಹಿಸುತ್ತಿರುವುದು ಗುಟ್ಟಾಗಿ ಉಳದಿಲ್ಲ ಎನ್ನುತ್ತಾರೆ ರಸ್ತಾಪೂರ ಗ್ರಾಮದ ಧರ್ಮಣ್ಣ.ಇಂತಹ ಕೆಲ  ಕಾರ್ಯಕರ್ತರನ್ನು ಬಳಸಿಕೊಂಡು ಹಣ ಹಂಚಿಕೆ ಮತ್ತು ಇನ್ನಿತರ ಆಮಿಷಗಳನ್ನು ಹಂಚಿಕೆ ಹಾಗೂ ತಲುಪಿಸುವುದಕ್ಕೆ ರಾಜಕೀಯ ಮುಖಂಡರಿಗೆ  ಬೆಸುಗೆಯ ಕೊಂಡಿಯಾಗಿದ್ದಾರೆ. ಮಾದರಿ ನೀತಿ ಸಂಹಿತೆ ತಂಡದ ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮ ಭ್ರಷ್ಟಾಚಾರ ವಾಸನೆಯೂ ಇದಾಗಿದೆ ಎನ್ನುತ್ತಾರೆ ಲಕ್ಷ್ಮೀದೇವಿ.ಇದರಂತೆ ಇನ್ನೊಂದು ತಂಡವು ಗ್ರಾಮೀಣ ಪ್ರದೇಶದಲ್ಲಿ ಸಕ್ರೀಯವಾಗಿ ಕೆಲಸವನ್ನು ನಿರ್ವಹಿಸುವ  ರಾಜಕೀಯ ಚಟುವಟಿಕೆಯ ರಹಸ್ಯ ತಾಣವೆಂದರೆ ಸರ್ಕಾರದಿಂದ ಸಹಾಯಧನ ಪಡೆದ ಸ್ತ್ರೀಶಕ್ತಿ ಗುಂಪು, ಸ್ವಸಹಾಯ ಗುಂಪು ರಚನೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಯಿಂದ ಆಯಾ ರಾಜಕೀಯ ಮುಖಂಡರಿಂದ  ಚುನಾವಣೆಯ ಅಕ್ರಮಕ್ಕೆ ಸಾಥ್ ನೀಡುವಂತೆ ಒತ್ತಡ ಹಾಕುತ್ತಿರುವುದು ಸಾಮಾನ್ಯವಾಗಿದೆ. ಹಲವಾರು ವರ್ಷಗಳಿಂದ ನಿರಂತರವಾಗಿ ಸ್ವ ಸಹಾಯ ಸಂಘಗಳ ರಚನೆ ಹಾಗೂ ಸರ್ಕಾರದ ಸಹಾಯಧನ ವಿತರಣೆಯ ನೆಪದಲ್ಲಿ ರಾಜಕೀಯ ಮುಖಂಡರು ಇಂತಹ ಅಧಿಕಾರಿಯ ಮೂಲಕ ಮಹಿಳಾ ಮತ ಬ್ಯಾಂಕಿಗೆ ಕನ್ನ ಹಾಕುವ ಯತ್ನವು  ಭರದ ಸಿದ್ದತೆ ನಡೆದಿದೆ ಎನ್ನುತ್ತಾರೆ ರಮೇಶ ಕೊಂಕಲ್.ಮಹಿಳಾ  ಸಂಘಗಳ ನೆರವಿನಿಂದ ಹಳ್ಳಿಗಳಲ್ಲಿ ಕೆಲ ರಾಜಕೀಯ ಮುಖಂಡರು ಸಭೆ ನಡೆಸಿ ಅಮಿಷಗಳನ್ನು ಒಡ್ಡುತ್ತಿದ್ದಾರೆ. ಸೀರೆ, ಹಾಗೂ ಇಂತಿಷ್ಟು ಹಣವನ್ನು ಸಂಘಕ್ಕೆ ದೇಣಿಗೆಯ ಗೊಂಚಲು ನೀಡಲು ಮುಂದಾಗಿದ್ದು ಅಂತಹ ಸಂಘಗಳ ಅಧ್ಯಕ್ಷರಿಂದ ವಾಗ್ದಾನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಶರಣಪ್ಪ ಆರೋಪಿಸಿದ್ದಾರೆ.ಚುನಾವಣೆ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿಗಾಗಿ ಅಧಿಕಾರಿಗಳು ಶ್ರಮವಹಿಸುತ್ತಿದ್ದರೆ ರಾಜಕೀಯ ಮುಖಂಡರು ಮಹಿಳಾ ಕಾರ್ಯಕರ್ತರ ಮೇಲೆ ಹೆಚ್ಚು ಅವಲಂಬಿತವಾಗಿದ್ದು ಮುಂಚಿತವಾಗಿ ಹಣ ಹಾಗೂ ಇನ್ನಿತರ ವಸ್ತುಗಳನ್ನು ಪೂರೈಕೆಗೆ ಕೆಲ ಅಂಗಡಿಗಳಿಗೆ ಸೂಚನೆ ನೀಡಿದ್ದಾರೆ. ನೇರವಾಗಿ ಅಂಗಡಿಗೆ ಆಗಮಿಸಿ ಸೀರೆ ಇಲ್ಲವೆ ಇನ್ನಿತರ ಉಡುಗೊರೆಯನ್ನು ತೆಗೆದುಕೊಳ್ಳಲು ಸಿದ್ಧಪಡಿಸಿದ್ದಾರೆ ಎನ್ನಲಾಗುತ್ತಿದೆ.ಚುನಾವಣೆಯ ಆಯೋಗವು ಬದಲಾದ ಕಾಲಕ್ಕೆ ತಕ್ಕಂತೆ ತನ್ನ ದೃಷ್ಟಿಯನ್ನು ಬದಲಾಯಿಸುವುದು ಜರೂರು ಕೆಲಸವಾಗಿದೆ. ಚುನಾವಣೆಯ ಮುಗಿಯುವತನಕ ಇಂತಹ ಸಂಘಟನೆಗಳ ಮೇಲೆ ತೀವ್ರ ನಿಗಾ ಇಡಬೇಕು. ಸ್ತ್ರೀಶಕ್ತಿ, ಸ್ವಸಹಾಯ ಗುಂಪು, ಅಂಗನವಾಡಿ, ಆಶಾ ಕಾರ್ಯಕರ್ತರು ಚುನಾವಣೆಯಲ್ಲಿ ಸಕ್ರೀಯವಾಗಿದ್ದರೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗುವ ಬಗ್ಗೆ ಎಚ್ಚರಿಕೆಯ ಜಾಗೃತಿ ಮೂಡಿಸಬೇಕೆಂದು ಪ್ರಜ್ಞಾವಂತ ಜನತೆ ರಾಜ್ಯ ಚುನಾವಣೆ ಆಯೋಗಕ್ಕೆ ಮನವಿ ಮಾಡಿದೆ.

ಪ್ರತಿಕ್ರಿಯಿಸಿ (+)