ಬುಧವಾರ, ನವೆಂಬರ್ 13, 2019
21 °C
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿಶೇಷ ಇದು

ಅಭ್ಯರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲೇ ಮತ ಇಲ್ಲ!

Published:
Updated:

ಶಿವಮೊಗ್ಗ: 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಆದ ನಂತರ ರೂಪಗೊಂಡಿದ್ದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಇಲ್ಲಿ ಕ್ಷೇತ್ರದ ಅಭ್ಯರ್ಥಿಗಳಾಗಿರುವವರಿಗೆ ತಮ್ಮ ಕ್ಷೇತ್ರದಲ್ಲೇ ಮತ ಇಲ್ಲದಿರುವುರು ಆಶ್ಚರ್ಯ.2008ಕ್ಕೂ ಮೊದಲು ಇದ್ದ ಹೊಳೆಹನ್ನೂರು ಮೀಸಲು ಕ್ಷೇತ್ರಕ್ಕೆ, ಹೊಸನಗರ ಕ್ಷೇತ್ರದ ಹೊಳಲೂರು ಮತ್ತು ಹಾರ‌್ನಹಳ್ಳಿ ಹೋಬಳಿಗಳನ್ನು ಸೇರಿಸಿಕೊಂಡು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಎಂದು ಪುನರ್ ನಾಮಕರಣವಾಯಿತು. ಹೊಳೆಹನ್ನೂರು ಕ್ಷೇತ್ರ ರೂಪುಗೊಂಡಿದ್ದು, ಸಹ 1978 ರಲ್ಲಿ ನಡೆದ ಕ್ಷೇತ್ರ ಪುನರ್‌ವಿಂಗಡನೆ ಪ್ರಕ್ರಿಯೆಯಲ್ಲಿ. ಅಂದಿನಿಂದ 35 ವರ್ಷಗಳಲ್ಲಿ 8 ಚುನಾವಣೆಗಳು ಕ್ಷೇತ್ರದಲ್ಲಿ ನಡೆದಿದ್ದು, ಎಂಟು ಬಾರಿ ಆಯ್ಕೆ ಆದವರು ಕ್ಷೇತ್ರದ ಹೊರಗೆ ವಾಸಿಸಿದ್ದು ಹೆಚ್ಚು.ಈ ಕ್ಷೇತ್ರದಿಂದ 5 ಬಾರಿ ಆಯ್ಕೆ ಆಗಿರುವ ಮಾಜಿ ಸಚಿವ ಜಿ. ಬಸವಣ್ಯಪ್ಪ, ಎರಡು ಬಾರಿ ವಿಧಾನಸಭೆ ಮೆಟ್ಟಿಲೇರಿದ ಕರಿಯಣ್ಣ, ಮೊದಲ ಪ್ರಯತ್ನದಲ್ಲೇ ವಿಜಯಿಯಾದ ಶಾಸಕ ಕೆ.ಜಿ. ಕುಮಾರಸ್ವಾಮಿ ಎಲ್ಲರೂ ಶಿವಮೊಗ್ಗ ನಗರದ ನಿವಾಸಿಗಳಾಗಿದ್ದಾರೆ.ಗೆಲುವು ಕಂಡ ಅಭ್ಯರ್ಥಿಗಳ ಹಾಗೆಯೇ ಈ ಕ್ಷೇತ್ರದಲ್ಲಿ ಇದುವರೆಗೂ ಸ್ಪರ್ಧಿಸಿರುವ ಬಹುತೇಕ ಅಭ್ಯಥಿಗಳೂ ಈ ಕ್ಷೇತ್ರದ ನಿವಾಸಿಗಳಲ್ಲ ಎಂಬುದು ಮತ್ತೊಂದು ಗಮನಾರ್ಹ ಅಂಶ.ಇದು 8 ಚುನಾವಣೆಯ ಇತಿಹಾಸವಾದರೆ, ಇನ್ನು ಈ ಬಾರಿ ಕಣಕ್ಕಿಳಿದಿರುವ ಅಭ್ಯರ್ಥಿಗಳಲ್ಲಿ ಬಿಎಸ್‌ಪಿ ಅಭ್ಯರ್ಥಿ ಕೆ.ಎನ್. ವೀರೇಶಪ್ಪ ಸೂಗೂರು ಗ್ರಾಮ ಸಮೀಪದ ಕ್ಯಾತಿನಕೊಪ್ಪ ನಿವಾಸಿ. ಇವರೊಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮತದಾರರಲ್ಲ.ಬಿಜೆಪಿ ಅಭ್ಯರ್ಥಿ ಶಾಸಕ ಕೆ.ಜಿ. ಕುಮಾರ ಸ್ವಾಮಿ ಮನೆ ಇರುವುದು ವಿನೋಬನಗರದ ಕಲ್ಲಹಳ್ಳಿಯಲ್ಲಿ. ಕೆಜೆಪಿ ಅಭ್ಯರ್ಥಿ ಮಾಜಿ ಶಾಸಕ ಜಿ. ಬಸವಣ್ಯಪ್ಪ ವಿನೋಬನಗರದ ಕಲ್ಲಹಳ್ಳಿ ಬಳಿಯ ಹುಡ್ಕೊ ಕಾಲೋನಿ ನಿವಾಸಿ. ಇನ್ನು ಜೆಡಿಎಸ್‌ನಿಂದ ಎರಡನೇ ಬಾರಿ ಸ್ಪರ್ಧಿಸುತ್ತಿರುವ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶಾರದಾ ಪೂರ‌್ಯನಾಯ್ಕ ವಾಸವಾಗಿರುವುದು ಸವಳಂಗ ರಸ್ತೆಯ ಬಸವೇಶ್ವರ ನಗರದಲ್ಲಿ.ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಕರಿಯಣ್ಣ, ಪಕ್ಷೇತರ ಅಭ್ಯರ್ಥಿ ಡಿಎಸ್‌ಎಸ್‌ನ ಎಂ. ಗುರುಮೂರ್ತಿ ಸಹ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವರಲ್ಲ, ಇವರು ವಿನೋಬನಗರದ ಹುಡ್ಕೊಕಾಲೊನಿ ನಿವಾಸಿಗಳು.     ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಟಿ. ಶಿವಕುಮಾರ್ ಶಿವಮೊಗ್ಗ ನಗರದ ನವುಲೆ ನಿವಾಸಿ. ಜೆಡಿ(ಯು) ಅಭ್ಯರ್ಥಿ ಎಲ್. ಚಂದ್ರಾನಾಯ್ಕ ಅವರ ಊರು ಮಲವಗೊಪ್ಪ.ಸ್ವತಂತ್ರ ಅಭ್ಯರ್ಥಿ ವಿ. ಭಗವಾನ್ ಸಹ ವಿನೋಬನಗರದವರು. ಹಾಗೆಯೇ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಶಿವರುದ್ರಯ್ಯಸ್ವಾಮಿ ಗಾಡಿಕೊಪ್ಪ ವಾಸಿ.

ಪಕ್ಕದ ದಾವಣಗೆರೆ ಜಿಲ್ಲೆಯ ಚನ್ನರಿ ತಾಲ್ಲೂಕಿನ ಇಬ್ಬರು ಅಭ್ಯರ್ಥಿಗಳು ಸಹ ಶಿವವೊಗ್ಗ ಗ್ರಾಮಾಂತರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಚನ್ನಗಿರಿ ತಾಲ್ಲೂಕು ನಲ್ಕುದರೆ ಗ್ರಾಮದ ಎನ್.ಟಿ. ಶಿವಕುಮಾರ್, ಚನ್ನಗಿರಿಯ ಎ.ಡಿ. ಕಾಲೋನಿ ನಿವಾಸಿ ರುದ್ರಸ್ವಾಮಿ ಸ್ಪರ್ಧೆಗಿಳಿದ್ದಾರೆ. ಇರುವ 12 ಅಭ್ಯರ್ಥಿಗಳಲ್ಲಿ ಕ್ಷೇತ್ರ ಮೂಲದ ಒಬ್ಬರೇ ಅಭ್ಯರ್ಥಿ ಕಣದಲ್ಲಿದ್ದಾರೆ.

-ಎನ್. ನಾಗರಾಜ್.

ಪ್ರತಿಕ್ರಿಯಿಸಿ (+)