ಭಾನುವಾರ, ನವೆಂಬರ್ 17, 2019
24 °C

ಅಭ್ಯರ್ಥಿಗಳ ಪತ್ನಿಯರೇ `ತಾರಾ ಪ್ರಚಾರಕಿಯರು'

Published:
Updated:

ಚಿಕ್ಕಮಗಳೂರು: `ಪ್ರತಿಯೊಬ್ಬ ಪುರುಷರನ ಯಶಸ್ಸಿನ ಹಿಂದೆ ಒಂದು ಹೆಣ್ಣು ಇದ್ದೆ ಇರುತ್ತಾಳೆ' ಎನ್ನುವುದು ಅನುಭವಿಗಳು ಹೇಳುವ ಮಾತು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪತ್ನಿಯರು ಈಗ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತುತ್ತಿರುವುದನ್ನು ನೋಡಿದ ಯಾರೇ ಆದರೂ ಈ ಮಾತನ್ನು ಒಪ್ಪಿಯೇ ಒಪ್ಪುತ್ತಾರೆ.ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಪತ್ನಿ ಪಲ್ಲವಿ, ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಶಾಂತೇಗೌಡ ಪತ್ನಿ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಧರ್ಮೇಗೌಡ ಪತ್ನಿ ಮಮತಾ ಈಗ ತಮ್ಮ ಪತಿಯರ ಗೆಲುವಿಗಾಗಿ, ಗಂಡನಿಗೆ ಸರಿಸಮಾನವಾಗಿ ಹಗಲುರಾತ್ರಿ ಹಳ್ಳಿ, ವಾರ್ಡು, ಗಲ್ಲಿ ಸುತ್ತುತ್ತಿದ್ದಾರೆ.ಜೆಡಿಎಸ್, ಕಾಂಗ್ರೆಸ್ ಹಾಗೂ ಜೆಡಿಎಸ್ ಪರ ಸದ್ಯಕ್ಕೆ ಹೊರಗಿನಿಂದ ತಾರಾ ಪ್ರಚಾರಕರ ಪಟ್ಟಿಯಲ್ಲಿರುವ ಆಯಾಯ ಪಕ್ಷಗಳ ನಾಯಕ-ನಾಯಕಿಯರು ಯಾರೂ ಇನ್ನೂ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಅಭ್ಯರ್ಥಿಗಳ ಪಾಲಿಗೆ ಅವರವರ ಪತ್ನಿಯರೇ ಈಗ ಒಂದು ರೀತಿ `ತಾರಾ ಪ್ರಚಾರಕಿ'ಯರು!ಗೃಹಕೃತ್ಯ ನೋಡಿಕೊಳ್ಳುವ ಪಲ್ಲವಿ ಅವರಿಗೆ ರಾಜ್ಯದ ಉನ್ನತ ಶಿಕ್ಷಣ ಸಚಿವರ ಪತ್ನಿ ಎನ್ನುವ ಶ್ರೇಯವಿದ್ದರೆ, ಗಾಯತ್ರಿ ಅವರು ಸ್ವತಃ ವೃತ್ತಿಪರ ರಾಜಕಾರಣಿ ಮತ್ತು ಹಾಲಿ ವಿಧಾನಪರಿಷತ್ ಸದಸ್ಯೆ. ಇನ್ನೂ ಗೃಹಿಣಿ ಮಮತಾ ಅವರಿಗೆ ಮಾಜಿ ಶಾಸಕರ ಪತ್ನಿ ಎನ್ನುವ ರಾಜಕೀಯ ಹಿನ್ನೆಲೆ ಇದೆ.`ಪತಿ ದೇವರ' ಯಶಸ್ಸಿನ ಹಿಂದೆ ನಾವಿದ್ದೇವೆ, ಅವರ ಅರ್ಧಾಂಗಿಯರಾಗಿ `ರಾಜಕೀಯ ಯುದ್ಧಕಾಲ'ದಲ್ಲಿ ಅವರೊಂದಿಗೆ ಇರಬೇಕಾದುದು ಸತಿ ಧರ್ಮ! ಎನ್ನುವುದರಲ್ಲಿ ಈ ಮೂವರು `ತಾರಾ ಪ್ರಚಾರಕಿ'ಯರು ನಂಬಿಕೆ ಇಟ್ಟಿದ್ದಾರೆ. 

ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಪತ್ನಿ ಸಮೇತರಾಗಿ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಕ್ಷೇತ್ರದಲ್ಲಿರುವ ಸುಮಾರು 94 ಸಾವಿರ ಮಹಿಳಾ ಮತದಾರರನ್ನು ಒಲಿಸಿಕೊಳ್ಳಬೇಕಾದರೆ ಪತ್ನಿಯರು ಪ್ರಚಾರ ನಡೆಸುವುದು ಸರಿ ಎನ್ನುವ ಲೆಕ್ಕಾಚಾರ ಅಭ್ಯರ್ಥಿಗಳದೂ ಆಗಿರುವಂತಿದೆ.ನಗರದ ಎಐಟಿ ಕಾಲೇಜಿನ ಕ್ಯಾಂಪಸಿನಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪಲ್ಲವಿ ಸಿ.ಟಿ.ರವಿ `ಪ್ರಜಾವಾಣಿ'ಗೆ ಮಾತಿಗೆ ಸಿಕ್ಕಾಗ ಹೇಳಿದ್ದಿಷ್ಟು `ಮನೆಯ ಪಾರುಪತ್ಯೆ ನೋಡಿಕೊಳ್ಳುವುದಕ್ಕಿಂತ ರಾಜಕಾರಣ ಒಂದು ರೀತಿ ಶಿಕ್ಷೆ ಇದ್ದಂತೆ. ಆದರೂ ಇದು ಹೋರಾಟದ ಕಾಲ. ಪತಿಗೆ ನೆರವಾಗುವುದು ಸತಿ ಧರ್ಮ. ನಮ್ಮ ಮನೆಯವರು ಮಾಡಿರುವ ಅಭಿವೃದ್ಧಿ ಕೆಲಸಗಳಿಂದ ಪ್ರತಿ ಹಳ್ಳಿಗೆ ಹೋಗಿ ಜನರ ಬಳಿ ಮತ ಕೇಳಲು ಉತ್ಸಾಹ ತುಂಬಿಬರುತ್ತದೆ'.

`ನಮ್ಮ ಯಜಮಾನರು ನೂರಕ್ಕೆ ನೂರರಷ್ಟು ಕೆಲಸ ಮಾಡಿದ್ದಾರೆ ಎನ್ನಲಾರೆ.

ಕನಿಷ್ಠ ಶೇ.60ರಿಂದ 70ರಷ್ಟು ಕೆಲಸ ಮಾಡಿಸಿದ್ದಾರೆ. ಹಳ್ಳಿಗಳಲ್ಲಿ ಕಾರಿನಿಂದ ಇಳಿದು ಕಾಂಕ್ರಿಟ್ ರಸ್ತೆಯಲ್ಲಿ ನಡೆದು ಹೋಗಲು ಖುಷಿಯಾಗುತ್ತದೆ. ಪ್ರತಿ ದಿನ ಬೆಳಿಗ್ಗೆ 7ಕ್ಕೆ ಮನೆ ಬಿಟ್ಟರೆ ಏಳೆಂಟು ಹಳ್ಳಿ ಸುತ್ತಿ ರಾತ್ರಿ ಮನೆ ಸೇರುವಷ್ಟರಲ್ಲೂ 10 ಗಂಟೆಯಾಗಿರುತ್ತದೆ. ಹೋದ ಕಡೆಯಲ್ಲೆಲ್ಲ ಜನರು ಪ್ರೀತಿ-ಆದರದಿಂದ ಸ್ವಾಗತಿಸುತ್ತಾರೆ. ಸಣ್ಣಸಣ್ಣ ಮಕ್ಕಳು ರವಿ ಮಾಮ ಬರಲಿಲ್ಲವಾ? ಅಂಥ ಕೇಳುತ್ತಾರೆ. ಜನರು ಪ್ರೀತಿ ತೋರುವುದನ್ನು ಕಂಡಾಗ ದಣಿವು ಆದದ್ದೇ ಗೊತ್ತಾಗುವುದಿಲ್ಲ' ಎಂದು ಪಲ್ಲವಿ ಮನದಾಳದ ಮಾತು ಹೊರಗೆಡವಿದರು.ಇನ್ನು ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಶಾಂತೇಗೌಡರ ಪತ್ನಿ ಗಾಯತ್ರಿ ಅವರು ಪತಿಗಿಂತಲೂ ಒಂದು ಗ್ರಾಮ ಹೆಚ್ಚಿಗೆ ಸುತ್ತಿ, ಮತಯಾಚನೆ ನಡೆಸುತ್ತಿದ್ದಾರೆ. ಕೈಯಲ್ಲಿ ಅಧಿಕಾರ ಇರುವುದರಿಂದ ಮತದಾರರ ಬಳಿಗೆ ಪ್ರತಿಸ್ಪರ್ಧಿ ಅಭ್ಯರ್ಥಿಗಳ ಪತ್ನಿಯರಿಗಿಂತ ಹೆಚ್ಚು ಆತ್ಮವಿಶ್ವಾಸದಲ್ಲಿ ಜನರ ಬಳಿ ಹೋಗುತ್ತಿದ್ದಾರೆ. ಪತಿ ಶಾಂತೇಗೌಡ ಒಂದು ಹೋಬಳಿಯಲ್ಲಿ ಪ್ರಚಾರ ನಡೆಸಿದರೆ, ಗಾಯತ್ರಿ ಮತ್ತೊಂದು ಹೋಬಳಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.ಬುಧವಾರ ಕಳಾಸಪುರದಲ್ಲಿ ತಮ್ಮ ಪತಿ ಪರ ಮತಯಾಚನೆ ನಡೆಸುತ್ತಿದ್ದ ಗಾಯತ್ರಿ ಅವರು `ಪ್ರಜಾವಾಣಿ'ಗೆ ಅನಿಸಿಕೆ ಹಂಚಿಕೊಂಡಿದ್ದು ಹೀಗೆ `ಮಹಿಳಾ ಮತದಾರರು ಜಾಗೃತರಾಗಿದ್ದಾರೆ. ಹಣ, ಸೀರೆ, ಮೂಗುತಿ ಹಂಚಿ ಅವರ ಮತ ಖರೀದಿಸಲು ಹೊರಟಿರುವವರಿಗೆ ಪಾಠ ಕಲಿಸುತ್ತಾರೆ. ನಮ್ಮ ಮನೆಯವರ ಶಾಂತ ಸ್ವಭಾವ, ಒಳ್ಳೆಯತನವನ್ನು ಜನರು ಗುರುತಿಸಿದ್ದಾರೆ. ನಾವು ಹೋದೆಯೆಡೆ ಅದರಲ್ಲೂ ಮಹಿಳಾ ಮತದಾರರು ನಮ್ಮ ಪರ ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೆ. ಗೆದ್ದೆ ಗೆಲ್ಲುವ ವಿಶ್ವಾಸ ಇದೆ. ಇದೇ ವಿಶ್ವಾಸದಲ್ಲಿ ದಿನಕ್ಕೆ ಎಂಟತ್ತು ಹಳ್ಳಿ ಸುತ್ತುತ್ತಿದ್ದೇನೆ. ಈಗಾಗಲೇ ಒಂದು ಸುತ್ತು ಇಡೀ ತಾಲ್ಲೂಕು ಪ್ರವಾಸ ಮಾಡಿದ್ದೇನೆ' ಎಂದರು.ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡರ ಪತ್ನಿ ಮಮತಾ ಕಳೆದ ಒಂದು ವಾರದಿಂದ ಲಕ್ಯಾ, ಸಖರಾಯಪಟ್ಟಣ ಹೋಬಳಿಯಲ್ಲಿ ಬೀಡು ಬಿಟ್ಟಿದ್ದಾರೆ. ಪ್ರತಿ ದಿನ ಐದಾರು ಹಳ್ಳಿಗಳಲ್ಲಿ ತಮ್ಮ ಪುತ್ರ ಸೋನಾಲ್ ಜತೆಗೆ ಪ್ರಚಾರ ನಡೆಸುತ್ತಿದ್ದಾರೆ. ಇವರೂ ಕೂಡ ಮಹಿಳಾ ಮತದಾರರನ್ನು ಒಲಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದ್ದು, ತಮ್ಮ ಪತಿಗೆ ಅವಕಾಶ ಕೊಡುವಂತೆ ಮನವಿ ಮಾಡುತ್ತಿದ್ದಾರೆ.ಕುನ್ನಾಳಿನಲ್ಲಿ ಬುಧವಾರ ಸಂಜೆ ಪ್ರಚಾರ ನಡೆಸುತ್ತಿದ್ದ ಮಮತಾ ಅವರು ಪತ್ರಿಕೆ ಜತೆಗೆ ಮಾತನಾಡಿ `ನಮ್ಮ ಮಾವ, ನನ್ನ ಪತಿ ಶಾಸಕರಾಗಿದ್ದಾಗ ಜನರಿಗೆ ಸ್ಪಂದಿಸಿರುವುದು ಮತ್ತು ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ಜನರು ಇಂದಿಗೂ ನೆನಪಿಟ್ಟುಕೊಂಡಿದ್ದಾರೆ. ನಾವು ಭೇಟಿ ನೀಡುತ್ತಿರುವ ಪ್ರತಿ ಹಳ್ಳಿಗಳಲ್ಲೂ ಜನರು ಅಕ್ಕರೆ ತೋರಿಸುತ್ತಿದ್ದಾರೆ. ತಾವು ಅನುಭವಿಸುತ್ತಿರುವ ನೀರು, ವಿದ್ಯುತ್ ಸಮಸ್ಯೆ ಬಗ್ಗೆಯೂ ಅಳಲು ತೋಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಜನರಿಗೆ ದಕ್ಷತೆಯಿಂದ ಕೆಲಸ ಮಾಡುವಂತಹ ಜನಪ್ರತಿ ಬೇಕಾಗಿದ್ದಾರೆ. ಅವರಿಗೆ ತಮ್ಮ ಸಮಸ್ಯೆಗಳ ಪರಿಹಾರ ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎನಿಸಿದೆ. ಇದು ನಮ್ಮ ಮನೆಯವರ ಗೆಲುವಿಗೆ ಸಹಕಾರಿಯಾಗುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)