ಅಭ್ಯರ್ಥಿಗಳ ಲಾಬಿ ಆರಂಭ

7

ಅಭ್ಯರ್ಥಿಗಳ ಲಾಬಿ ಆರಂಭ

Published:
Updated:

ಹೊಸಪೇಟೆ:  ಹೊಸಪೇಟೆ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದ್ದು ಬಹುಮತ ಹೊಂದಿರುವ ಕಾಂಗ್ರೆಸ್ ಸೇರಿದಂತೆ ಆಕಾಂಕ್ಷಿಗಳ ಲಾಬಿ ಆರಂಭವಾಗಿದೆ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡು ಸಾಮಾನ್ಯ ಮಹಿಳೆಗೆ ಮೀಸಲಾಗಿವೆ. 35 ಸದಸ್ಯ ಬಲದ ಹೊಸಪೇಟೆ ನಗರಸಭೆಯಲ್ಲಿ 20 ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ. ಕಾಂಗ್ರೆಸ್‌ನಲ್ಲಿಯೇ 7 ಜನ ಮಹಿಳಾ ಪ್ರತಿನಿಧಿಗಳು ಇದ್ದಾರೆ.ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಯ ಆಕಾಂಕ್ಷಿಗಳು ತಮ್ಮ ತಮ್ಮಲ್ಲಿಯೇ ಚರ್ಚೆ, ಗುಂಪುಗಾರಿಕೆ ಆರಂಭಿಸಿದ್ದಾರೆ. 31ನೇ ವಾರ್ಡ್‌ನ ಪ್ರತಿನಿಧಿ ರೋಹಿಣಿ, 34ನೇ ವಾರ್ಡ್ ಸದಸ್ಯೆ ಕಣ್ಣಿ ಉಮಾದೇವಿ, 24ನೇ ವಾರ್ಡ್ ಇದ್ಲಿ ಚೆನ್ನಮ್ಮ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದು ಯಾರು ಹೆಚ್ಚು ಸದಸ್ಯರ ಬೆಂಬಲ ಪ್ರದರ್ಶಿಸುವರೋ ಅವರತ್ತ ಹೈಕಮಾಂಡ್ ಒಲವು ತೋರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.ನಾಯಕರ ನಡೆ ನಿಗೂಢ: ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಮುಖಂಡರಾದ ದೀಪಕ್‌ಕುಮಾರಸಿಂಗ್ ಹಾಗೂ ಎಚ್.ಅಬ್ದುಲ್ ವಹಾಬ್ ರಾಜಕೀಯ ಚಟುವಟಿಕೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ನಗರಸಭಾ ಸದಸ್ಯರು ಯಾರ ಜೊತೆ ಗುರುತಿಸಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ.ಯಾರ ಜೊತೆ ಗುರುತಿಸಿಕೊಂಡರೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಸೇರಿದಂತೆ ಎಲ್ಲ ನಾಯಕರು ಒಮ್ಮತದ ಆಯ್ಕೆ ಸಹಕಾರ ನೀಡಬಹುದು ಎಂಬ ಗೊಂದಲವು ಇವರನ್ನು ಕಾಡುತ್ತಿದೆ.ಶಾಸಕ ಆನಂದಸಿಂಗ್ ನೇತೃತ್ವದಲ್ಲಿ 7 ಜನ ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ ಸೇರಿದ್ದು, ಇದರಿಂದ ಬಿಜೆಪಿಯ ಬಲಾಬಲ 9ಕ್ಕೆ ಏರಿದೆ. ಕೊನೆ ಗಳಿಗೆಯಲ್ಲಿ ಬಿಜೆಪಿ ಕೂಡ ಅಧ್ಯಕ್ಷ- ಉಪಾಧ್ಯಕ್ಷರ ಹುದ್ದೆ ಚುನಾವಣೆಯಲ್ಲಿ ಕಣಕ್ಕಿಳಿದರೆ ಅಚ್ಚರಿಯೇನಲ್ಲ.

ಅನಂತ ಜೋಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry