ಶುಕ್ರವಾರ, ನವೆಂಬರ್ 22, 2019
22 °C

ಅಭ್ಯರ್ಥಿಗೆ ಮಹಿಳೆ ಕಪಾಳಮೋಕ್ಷ

Published:
Updated:

ಕೆಜಿಎಫ್: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ನಾಗರಾಜ್ ಅವರಿಗೆ ಅಪರಿಚಿತ ಮಹಿಳೆಯೊಬ್ಬರು ಬಹಿರಂಗವಾಗಿ ಕಪಾಳ ಮೋಕ್ಷ ಮಾಡಿದ ಘಟನೆ ಬುಧವಾರ ನಡೆದಿದೆ.ನಗರಸಭೆಯಲ್ಲಿದ್ದ ಚುನಾವಣಾಧಿಕಾರಿ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದ ನಾಗರಾಜ್ ನಗರಸಭೆ ಮುಂಭಾಗದಲ್ಲಿ ನಿಂತಿದ್ದಾಗ ಈ ಘಟನೆ ನಡೆಯಿತು. ಅಭ್ಯರ್ಥಿ ಮುಂದೆ ಬಂದ ಮಧ್ಯ ವಯಸ್ಸಿನ ಮಹಿಳೆಯೊಬ್ಬರು, `ಬಿಜೆಪಿ ಟಿಕೆಟ್ ಸಿಗದೆ ಇದ್ದರೂ ಯಾಕೆ ಸ್ಪರ್ಧಿಸುತ್ತಿದ್ದೀಯಾ?' ಎಂದು ಪ್ರಶ್ನಿಸಿದರು.ಆಕೆಯ ಮಾತನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲೆಂದು ನಾಗರಾಜ್ ತಲೆಯನ್ನು ಕೊಂಚ ಮುಂದೆ ಬಾಗಿಸಿದ ಕೂಡಲೆ ಆ ಮಹಿಳೆ ಛಟೀರನೇ ಕಪಾಳಕ್ಕೆ ಹೊಡೆದರು.ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಘಟನೆಯಿಂದ ನಾಗರಾಜ್ ಒಂದು ಕ್ಷಣ ವಿಚಲಿತರಾದರು.

ಅವರ ಬೆಂಬಲಿಗರು ಸಹ ಅಘಾತಕ್ಕೆ ಒಳಗಾದರು. ಪೊಲೀಸರು ಕಪಾಳ ಮೋಕ್ಷ ಮಾಡಿದ ಮಹಿಳೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನಾಗರಾಜ್ ಮನವಿ ಮಾಡಿದ್ದರಿಂದ ಆಕೆಯನ್ನು ಬಿಡುಗಡೆ ಮಾಡಲಾಯಿತು.

ಪ್ರತಿಕ್ರಿಯಿಸಿ (+)