ಅಭ್ಯರ್ಥಿಯಾಗಲು ಸಹಮತವಿದ್ದರೆ... ಮಿಸ್ ಕಾಲ್ ಕೊಡಿ...!

7

ಅಭ್ಯರ್ಥಿಯಾಗಲು ಸಹಮತವಿದ್ದರೆ... ಮಿಸ್ ಕಾಲ್ ಕೊಡಿ...!

Published:
Updated:

ಮಂಡ್ಯ: `ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ನಿಮ್ಮ ಅಭ್ಯರ್ಥಿಯಾಗಲು ಸಹಮತವಿದೆಯೇ? ಹಾಗಿದ್ದರೆ ಈ ಮೊಬೈಲ್ ನಂಬರ್‌ಗೆ ಮಿಸ್ ಕಾಲ್ ಕೊಡಿ..'ಚುನಾವಣೆಯ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಖಾಸಗಿಯಾಗಿ ಸಮೀಕ್ಷೆ ಮಾಡಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬರು, ತಾವು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮತದಾರರ ಅಭಿಪ್ರಾಯ ತಿಳಿಯಲು ಮಿಸ್ ಕಾಲ್ ಮೂಲಕ ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ. ಹೀಗೆ ಸಮೀಕ್ಷೆಗೆ ಮುಂದಾಗಿರುವುದು ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಡಿ. ಜಯರಾಮ್ ಅವರ ಪುತ್ರ ಅಶೋಕ್ ಜಯರಾಮ್.ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೊಬೈಲ್ ಚಂದಾದಾರರಿಗೆ ಎಸ್‌ಎಂಎಸ್ ಕಳುಹಿಸುವ ಹಾಗೂ ಕರಪತ್ರಗಳನ್ನು ಹಂಚುವ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಚಾಲನೆ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ ಕೇಳಲು ಮೊಬೈಲ್ ಬಳಸಿಕೊಂಡಿದ್ದರು. ಎಸ್‌ಎಂಎಸ್ ಕಳುಹಿಸುವ ಮೂಲಕ, ಮುದ್ರಿತ ಧ್ವನಿಯನ್ನು ಕೇಳಿಸುವ ಮೂಲಕ ಮತ ಕೇಳಿದ ಉದಾಹರಣೆಗಳಿವೆ. ಆದರೆ, ಸ್ಪರ್ಧಿಸಲು ಕೇಳಿದ ಉದಾಹರಣೆ ಇದೇ ಮೊದಲಿರಬೇಕು.ಕಾಂಗ್ರೆಸ್ ಪಕ್ಷದ ವೀಕ್ಷಕರು ಈಗಾಗಲೇ ಆಯಾ ವಿಧಾನಸಭೆಗಳಿಗೆ ತೆರಳಿ ಆಕಾಂಕ್ಷಿ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿದ್ದಾರೆ. ಜತೆಗೆ ವಿವಿಧ ಘಟಕಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜೆಡಿಎಸ್ ವರಿಷ್ಠರೂ, ವಿವಿಧ ಮೂಲಗಳಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜತೆಗೆ ಗೆಲ್ಲುವ ಅಭ್ಯರ್ಥಿಯನ್ನು ಪತ್ತೆ ಹಚ್ಚಲು ಖಾಸಗಿಯಾಗಿಯೂ ಸರ್ವೆ ಮಾಡಿಸಿದ್ದಾರೆ ಎನ್ನುತ್ತಾರೆ ಆ ಪಕ್ಷದ ಮುಖಂಡರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಅಶೋಕ್ ಮಿಸ್ ಕಾಲ್ ಮೊರೆ ಹೋಗಿದ್ದಾರೆ.ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಳೆದ ಎರಡು ವಿಧಾನಸಭಾ ಅವಧಿಗೆ ಅವರದ್ದೇ ಪಕ್ಷದವರಾದ ಎಂ.ಶ್ರೀನಿವಾಸ್ ಶಾಸಕರಾಗಿದ್ದಾರೆ. ಹಾಗಿದ್ದಾಗ್ಯೂ ಅಶೋಕ್ ಅವರು, ಜೆಡಿಎಸ್‌ನಿಂದ ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದಾರೆ. ಅದಕ್ಕಾಗಿ ಪಕ್ಷದ ವಲಯದೊಳಗೆ ತೀವ್ರ ಪ್ರಯತ್ನ ಮುಂದುವರಿಸಿದ್ದಾರೆ.ಕ್ಷೇತ್ರದಲ್ಲಿ ತಮ್ಮ ಬಗೆಗೆ ಜನರ ಅಭಿಪ್ರಾಯ ಹೇಗಿದೆ. ತಮ್ಮ ಎದುರಾಳಿಯಾಗಿ ಯಾರು ಕಣಕ್ಕೆ ಇಳಿಯಬಹುದು. ಯಾರು ಅಭ್ಯರ್ಥಿಯಾದರೆ; ಮತಗಳಲ್ಲಿ ಯಾವ ರೀತಿ ಬದಲಾವಣೆಗಳಾಗಬಹುದು ಎಂಬ ಬಗೆಗೆ ಖಾಸಗಿಯಾಗಿ ಯುವಕರನ್ನು ಬಿಟ್ಟು ಜಿಲ್ಲೆಯ ಚುನಾವಣಾ ಅಭ್ಯರ್ಥಿಗಳು ಸಮೀಕ್ಷೆ ಮಾಡಿಸುತ್ತಿದ್ದಾರೆ. ಆದರೆ, ಮಂಡ್ಯದಲ್ಲಿ ಮೊದಲ ಬಾರಿಗೆ ಮೊಬೈಲ್ ಮೂಲಕ ಇಂತಹದ್ದೊಂದು ಸಮೀಕ್ಷೆಗೆ ಅಶೋಕ್ ಜಯರಾಮ್ ಮುಂದಾಗಿದ್ದಾರೆ. ಇನ್ನು ಕೆಲವರು ಸಮಾವೇಶ, ರಾಜ್ಯೋತ್ಸವ, ಆರೋಗ್ಯ ತಪಾಸಣೆ ಶಿಬಿರ, ರಸಮಂಜರಿ ಸೇರಿದಂತೆ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry