ಅಭ್ಯರ್ಥಿ ಅಪಹರಣ ಆರೋಪ; ತ್ರಿಪಕ್ಷಗಳ ಪ್ರತಿಭಟನೆ

6
ಗಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನದ ಚುನಾವಣೆ

ಅಭ್ಯರ್ಥಿ ಅಪಹರಣ ಆರೋಪ; ತ್ರಿಪಕ್ಷಗಳ ಪ್ರತಿಭಟನೆ

Published:
Updated:
ಅಭ್ಯರ್ಥಿ ಅಪಹರಣ ಆರೋಪ; ತ್ರಿಪಕ್ಷಗಳ ಪ್ರತಿಭಟನೆ

ಯಲಹಂಕ: `ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭ ನಾಮಪತ್ರ ಹಿಂಪಡೆಯಲು ತೆರಳುತ್ತಿದ್ದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯನನ್ನು ಬಿಜೆಪಿ ಕಾರ್ಯಕರ್ತರು ಅಪಹರಿಸಿದ್ದಾರೆ' ಎಂದು ಆರೋಪಿಸಿ ಶಾಸಕ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಾಗಲೂರು ಗ್ರಾಮ ಪಂಚಾಯ್ತಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಕೃಷ್ಣಬೈರೇಗೌಡ ಮಾತನಾಡಿ, `ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಸೊಮವಾರ ಚುನಾವಣೆ ನಿಗದಿಯಾಗಿತ್ತು. ಕೆಲವರು ನಾಮಪತ್ರ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್ ಬೆಂಬಲಿತ 10 ಸದಸ್ಯರು ಮತದಾನ ಮಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸದಸ್ಯ ನರಸಿಂಹ ಎಂಬವರನ್ನು ಪಂಚಾಯ್ತಿ ಕಚೇರಿ ಸಮೀಪವೇ ಪೊಲೀಸರ ಎದುರಿನಲ್ಲೇ ಅಪಹರಿಸಿದ್ದಾರೆ. ಪೊಲೀಸರು ಇದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ' ಎಂದು ದೂರಿದರು.`ಸದಸ್ಯರಲ್ಲದವರು ಗ್ರಾಮ ಪಂಚಾಯ್ತಿ ಕಚೇರಿಯೊಳಗೆ ಪ್ರವೇಶಿಸಿ ನಾಮಪತ್ರ ಹಾಗೂ ಬ್ಯಾಲೆಟ್ ಪೆಟ್ಟಿಗೆಯನ್ನು ಬಿಸಾಡಿ ದಾಂದಲೆ ಮಾಡಿದರೂ ಪೊಲೀಸರು ತಡೆಯಲು ಪ್ರಯತ್ನಿಸಿಲ್ಲ. ಇದನ್ನು ಪ್ರಶ್ನಿಸಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತನಿಗೆ ಇನ್ಸ್‌ಪೆಕ್ಟರ್ ಲಾಠಿಯಿಂದ ಥಳಿಸಿದ್ದಾರೆ. ಚುನಾವಣಾಧಿಕಾರಿಗೆ ಸೂಕ್ತ ರಕ್ಷಣೆ ದೊರಕದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಯಿತು. ಪೊಲೀಸ್ ವೈಫಲ್ಯದಿಂದಲೇ ಈ ಘಟನೆ ನಡೆದಿದೆ' ಎಂದು ಆರೋಪಿಸಿದರು.ಬಿಜೆಪಿ-ಜೆಡಿಎಸ್ ಪ್ರತಿಭಟನೆ:

ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ಕಡೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ಬಿಜೆಪಿ ಮುಖಂಡ ಎ.ರವಿ ಮಾತನಾಡಿ, `ನಾವು ಯಾವುದೇ ಸದಸ್ಯರನ್ನು ಅಪಹರಿಸಿಲ್ಲ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಪಕ್ಷದವರೇ ಇಂತಹ ಗಿಮಿಕ್ ಮಾಡಿದ್ದಾರೆ' ಎಂದು ದೂರಿದರು.ಎರಡೂ ಪಕ್ಷದವರು ಪರಸ್ಪರ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ಡಿಸಿಪಿ ಡಾ.ಜಿ. ರಮೇಶ್, ಎಸಿಪಿ ಎಂ.ಜಿ.ರಾಮಕೃಷ್ಣ ಪ್ರತಿಭಟನೆ ಕೈಬಿಡುವಂತೆ ವಿನಂತಿಸಿದರು. ಬಳಿಕ ಬಿಜೆಪಿ ಕಾರ್ಯಕರ್ತರು ನಿರ್ಗಮಿಸಿದರು.ಪೊಲೀಸ್ ಅಧಿಕಾರಿಗಳು ಶಾಸಕರೊಂದಿಗೆ ಮಾತುಕತೆ ನಡೆಸಿ `ಪೊಲೀಸ್ ದೌರ್ಜನ್ಯದ ಬಗ್ಗೆ ತನಿಖೆ ನಡೆಸಲಾಗುವುದು. ಚುನಾವಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿ ಅಡ್ಡಿಪಡಿಸಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೊನೆಗೊಂಡಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry