ಮಂಗಳವಾರ, ನವೆಂಬರ್ 19, 2019
23 °C

ಅಭ್ಯರ್ಥಿ ಗೆಲುವು ಮುಖ್ಯ'

Published:
Updated:

ಕೊಪ್ಪಳ: ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರಿಗೇ ಟಿಕೆಟ್ ಸಿಕ್ಕರೂ ಪ್ರಚಾರ ಕಾರ್ಯ ಕೈಗೊಳ್ಳುತ್ತೇವೆ. ಪಕ್ಷದ ಅಭ್ಯರ್ಥಿಯ ಗೆಲುವು ಮುಖ್ಯ. ಆ ನಿಟ್ಟಿನಲ್ಲಿ ಶ್ರಮಿಸುವುದಾಗಿ ಜೆಡಿಎಸ್ ಮುಖಂಡ ಪ್ರದೀಪಗೌಡ ಮಾಲಿಪಾಟೀಲ ಹೇಳಿದರು. ಅವರು ಸೋಮವಾರ ಇಲ್ಲಿನ ಗವಿಮಠದಲ್ಲಿ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ, ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುವ ಮುನ್ನ ಶ್ರೀಮಠದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದರು.`ನಾನು ಟಿಕೆಟ್ ಆಕಾಂಕ್ಷಿ. ನನ್ನ ಮಾವನವರಾದ ಸುರೇಶ ಭೂಮರೆಡ್ಡಿ ಸಹ ಟಿಕೆಟ್ ಆಕಾಂಕ್ಷಿ. ಆದರೆ, ಯಾರಿಗೇ ಸ್ಪರ್ಧಿಸಲು ಅವಕಾಶ ಸಿಕ್ಕರೂ ಅವರ ಗೆಲುವಿಗಾಗಿ ದುಡಿಯುವುದಾಗಿ' ಸ್ಪಷ್ಟಪಡಿಸಿದರು. ಗವಿಮಠದಲ್ಲಿ ಪೂಜೆ ಸಲ್ಲಿಸಿ, ಪ್ರಚಾರ ಕಾರ್ಯ ಆರಂಭಿಸುವ ಕಾರ್ಯಕ್ರಮದಲ್ಲಿ ಸುರೇಶ ಭೂಮರೆಡ್ಡಿ ಪಾಲ್ಗೊಳ್ಳಬೇಕಿತ್ತು. ಆದರೆ, ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಇರಲು ಏನು ಕಾರಣ ಎಂಬುದು ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸೋಮವಾರ ಒಳ್ಳೆಯ ದಿನ. ಹೀಗಾಗಿ  ಇಂದು ಗವಿಮಠದಲ್ಲಿ ಪೂಜೆ ಸಲ್ಲಿಸುವ ಜೊತೆಗೆ ನಗರದಲ್ಲಿರುವ ಇತರ ಧಾರ್ಮಿಕ ಕೇಂದ್ರಗಳಿಗೂ ಭೇಟಿ ನೀಡಿದ ನಂತರ ಪ್ರಚಾರ ಕಾರ್ಯವನ್ನು ಕೈಗೊಳ್ಳುತ್ತೇವೆ. ಜನರಿಂದಲೂ ಪಕ್ಷದ ಬಗ್ಗೆ ಒಲವು ವ್ಯಕ್ತವಾಗಿದ್ದು, ಜನರು ಈ ಬಾರಿ ಪಕ್ಷದ ಅಭ್ಯರ್ಥಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದೂ ಹೇಳಿದರು.ಶೀಘ್ರದಲ್ಲಿಯೇ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಸ್.ಬಿ.ಖಾದ್ರಿ ಹೇಳಿದರು. ನಂತರ ಅವರು ಪಲ್ಟನ್‌ಗಲ್ಲಿರುವ ಮರ್ದಾನ್‌ಗ್ರೈಬ ದರ್ಗಾಕ್ಕೆ ಭೇಟಿ, ನಂತರ ವಿವಿಧ ಓಣಿಗಳಲ್ಲಿ ಸಂಚರಿಸಿ ಮತ ಯಾಚನೆ ಮಾಡಿದರು.ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅಂದಪ್ಪ ಮರೇಬಾಳ, ಯುವ ಘಟಕದ ನಗರ ಅಧ್ಯಕ್ಷ ಮಹ್ಮದ್ ಹುಸೇನಿ, ಮಂಜು ಗಡ್ಡದ, ವೀರೇಶ ಮಹಾಂತಯ್ಯನಮಠ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)