ಗುರುವಾರ , ನವೆಂಬರ್ 21, 2019
21 °C

ಅಭ್ಯರ್ಥಿ - ಮತದಾರರ ಹಕ್ಕುಬಾಧ್ಯತೆ

Published:
Updated:
ಅಭ್ಯರ್ಥಿ - ಮತದಾರರ ಹಕ್ಕುಬಾಧ್ಯತೆ

ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಸಾರ್ವತ್ರಿಕ ಚುನಾವಣೆಗಳು ಸ್ವತಂತ್ರವಾಗಿಯೂ, ಪಕ್ಷಪಾತವಿಲ್ಲದೆಯೂ ನಡೆಯುವುದು ಅವಶ್ಯಕ. 1951-52 ರಲ್ಲಿ ನಡೆದ ನಮ್ಮ ಪ್ರಥಮ ಸಾರ್ವತ್ರಿಕ ಚುನಾವಣೆಗಳು ಪಕ್ಷಕ್ಕೆ ಶಿಸ್ತು ಹಾಗೂ ಸುವ್ಯವಸ್ಥೆ ಅವುಗಳ ವಿಷಯದಲ್ಲಿ ಲೋಕಖ್ಯಾತಿ ಗಳಿಸಿದವು.ಸ್ವತಂತ್ರವಾದ, ಪಕ್ಷಪಾತವಿಲ್ಲದ ಹಾಗೂ ಉಚಿತ ರೀತಿಯ ಚುನಾವಣೆಗಳು ನಡೆಯುವ ಬಗ್ಗೆ ನಿಯಮ ಪರಿಪಾಲನೆ ಅತ್ಯವಶ್ಯಕ, ಚುನಾವಣೆಗಳ ಕಾಲದಲ್ಲಿ ಅನುಚಿತ ಉಪಾಯಗಳನ್ನು ಅವಲಂಬಿಸುವುದರಿಂದ ಪ್ರಜಾಪ್ರಭುತ್ವವನ್ನೇ ದೂಷಿಸಿದಂತಾಗುವುದು.ಉಮೇದುವಾರ

ಚುನಾವಣೆಗಳಲ್ಲಿ ಉಮೇದುವಾರರ ಜವಾಬ್ದಾರಿ ಅಧಿಕವಾಗಿರುವುದು. ಅವರು ಚುನಾವಣೆಗಳಲ್ಲಿ ಜಯಶಾಲಿಗಳಾಗುವ ಬಗ್ಗೆ ಚುನಾವಣಾ ಪ್ರಚಾರ ಕೈಗೊಳ್ಳಬಹುದು. ಯಾವುದಾದರೊಂದು ಚುನಾವಣಾ ಕ್ಷೇತ್ರದಲ್ಲಿ ಉಮೇದುವಾರರು ಕಾನೂನುಗಳನ್ನು ಉಲ್ಲಂಘಿಸಿರುವ ಹಾಗೂ ಅನುಚಿತ ಉಪಾಯಗಳನ್ನು ಕೈಗೊಂಡಿರುವ ವಿಷಯಗಳೇನಾದರೂ ಚುನಾವಣಾ ನ್ಯಾಯಮಂಡಲಿಯ ಮುಂದೆ ರುಜುವಾತಾದರೆ, ಆ ಕ್ಷೇತ್ರದಲ್ಲಿ ಮತ್ತೊಮ್ಮೆ ಚುನಾವಣೆ ನಡೆಯಬೇಕಾಗುವುದು. ಹೀಗೆ ಮತ್ತೊಂದು ಚುನಾವಣೆ ನಡೆಯುವುದರಿಂದ ಸರ್ಕಾರಕ್ಕೆ ಮತ್ತು ಉಮೇದುವಾರರಿಗೆ ಸಹ ಅನಾವಶ್ಯಕವಾಗಿ ವೆಚ್ಚವಾಗುವುದು. ಅನುಚಿತ ಉಪಾಯಗಳನ್ನು ಕೈಗೊಳ್ಳುವವರು ಆರು ವರ್ಷಗಳ ಕಾಲ ಲೋಕಸಭೆಯ ಹಾಗೂ ರಾಜ್ಯ ವಿಧಾನ ಸಭೆಯ ಸದಸ್ಯರಾಗುವ ಅರ್ಹತೆಯನ್ನು ಕಳೆದುಕೊಳ್ಳುವರು. ಅದರಿಂದ ಉಮೇದುವಾರರು ತಮ್ಮ ಪರ ಕೆಲಸ ಮಾಡುವ ಕಾರ್ಯಕರ್ತರಿಗೆ ಚುನಾವಣಾ ಕಾನೂನು, ನಿಯಮಗಳ ಪರಿಚಯ ಮಾಡಿಕೊಡುವುದು ಅವಶ್ಯಕ.ಮಾಡಬಾರದ್ದು ಏನು?

ಉಮೇದುವಾರರು ಮತದಾರರಿಗೆ ಲಂಚ ನೀಡಬಾರದು. ಸಾಮಾಜಿಕ ಬಹಿಷ್ಕಾರಗಳಿಂದ ಮತದಾರರನ್ನು ಹೆದರಿಸಿ ಅನುಚಿತ ರೀತಿಯ ಪ್ರಭಾವವನ್ನು ಬೀರಬಾರದು. ಧಾರ್ಮಿಕ ಅಥವಾ ರಾಷ್ಟ್ರೀಯ ಪ್ರತೀಕಗಳನ್ನು ದುರುಪಯೋಗ ಪಡಿಸಬಾರದು. ಇವು ಸ್ವತಂತ್ರ ರೀತಿಯ ಚುನಾವಣೆಗಳಿಗೆ ಸರ್ವಥಾ ವಿರುದ್ಧವಾದವು. ಇವು ಮತದಾರರ ತಮ್ಮ ಇಚ್ಛಾನುಸಾರ ಮತದಾನವೀಯುವ ಅಧಿಕಾರಕ್ಕೆ ಭಂಗವನ್ನು ತರುವುವು.ತಮ್ಮ ಪ್ರತಿಸ್ಪರ್ಧಿಗಳು ಉಮೇದುವಾರಿಕೆಯನ್ನು ವಾಪಸ್ಸು ಪಡೆಯುವಂತೆ ಅಥವಾ ಚುನಾವಣೆಗಳಿಂದ `ನಿವೃತ್ತಿ' ಯಾಗುವಂತೆ ಪ್ರೇರೇಪಿಸಬಾರದು. ತನ್ನ ಹಿತ ಸಾಧನೆಗಾಗಿ ಸರ್ಕಾರಿ ಉದ್ಯೋಗಿಗಳಿಂದ ನೆರವನ್ನು ಕೋರಬಾರದು.ಚುನಾವಣಾ ವೆಚ್ಚಗಳು

ಚುನಾವಣೆಯೊಂದರಲ್ಲಿ ಉಮೇದುವಾರರು ಮಾಡಬಹುದಾದ ಪರಮಾವಧಿ ವೆಚ್ಚವನ್ನು ಕಾನೂನು ನಿಗದಿ ಮಾಡಿದೆ. ನಿಗದಿ ಮಾಡಿರುವ ಪರಮಾವಧಿ ವೆಚ್ಚವನ್ನು ಮೀರುವುದರಿಂದ ಅಥವಾ ದೋಷಯುಕ್ತವಾದ ವ್ಯಯ ವಿವರಣ ಪಟ್ಟಿಯನ್ನು ಸಲ್ಲಿಸುವುದರಿಂದ ಅಥವಾ ಚುನಾವಣಾ ಫಲಿತಾಂಶವನ್ನು ಘೋಷಿಸುವ 30 ದಿನಗಳೊಳಗಾಗಿ ವ್ಯಯ ವಿವರಣ ಪಟ್ಟಿಯನ್ನು ಸಲ್ಲಿಸದೇ ಇರುವುದರಿಂದ ಉಮೇದುವಾರರ ಉಮೇದುವಾರಿಕೆಗೆ ಅನರ್ಹತೆ ಬರುವುದು ಅಥವಾ ಉಮೇದುವಾರರು ಆಗಲೇ ಚುನಾಯಿತರಾಗಿದ್ದರೆ ಅವರ ಸದಸ್ಯತ್ವ ಅನರ್ಹತೆಗೆ ಒಳಪಡುವುದು.ಉಮೇದುವಾರರು ಚುನಾವಣೆಗೆ ಸಂಬಂಧಿಸಿದ ಎಲ್ಲ ವೆಚ್ಚಕ್ಕೂ ಲೆಕ್ಕವನ್ನು ಇಟ್ಟುಕೊಂಡಿರಬೇಕು.ಮತದಾರನ ಜವಾಬ್ದಾರಿ

ಚುನಾವಣಾ ಸಮಯದಲ್ಲಿ ಮತದಾರರಲ್ಲಿ ಕೆಲವು ಕೃತ್ಯಗಳು ಕಾನೂನು ಬಾಹಿರವಾಗುವವು. ಮತದಾರರು ಈ ನಿಯಮಗಳನ್ನು ಪಾಲಿಸದ ಹೊರತು ಚುನಾವಣೆಯು ಸ್ವತಂತ್ರವಾಗಿಯೂ, ನಿಷ್ಪಕ್ಷಪಾತದಿಂದಲೂ ನಡೆಯಲಾರದು.ಮೊದಲನೆಯದು, ಮತದಾರರು ಒಂದಕ್ಕಿಂತ ಹೆಚ್ಚಿನ ಕಡೆಗಳಲ್ಲಿ ಹೆಸರನ್ನು ಸೇರಿಸಬಾರದು. ತಮ್ಮ ಅಮೂಲ್ಯ ಮತವನ್ನು ಮತ್ತಾವುದಕ್ಕಾದರೂ ಮಾರಿಬಿಡಬಾರದು. ಅದರಂತೆ ಮತ್ತೊಬ್ಬ ಮತದಾರನನ್ನು ಇಂಥವರಿಗೆ ಅಥವಾ ಇಂಥ ಪಕ್ಷಕ್ಕೆ ಮತ ಕೊಡಿರೆಂದು ಹೇಳುವುದು ಅಪರಾಧವಾಗುವುದು. ಮತದಾನ ಕೇಂದ್ರದಲ್ಲಿ ಇನ್ನೊಬ್ಬರ ಹೆಸರಲ್ಲಿ ಮತ ಕೊಡುವುದು, ತಾನೇ ಎರಡು ಸಾರಿ ಮತ ಕೊಡುವುದು ಅಪರಾಧ. ಅವುಗಳಿಗೆ ತೀವ್ರವಾದ ಶಿಕ್ಷೆ ವಿಧಿಸಲಾಗುವುದು. ಮತದಾರರು ತಾವು ಯಾರಿಗೆ ಮತವಿತ್ತರೆಂಬುದನ್ನು ಹೇಳಬಾರದು.

ಪ್ರತಿಕ್ರಿಯಿಸಿ (+)