ಸೋಮವಾರ, ಅಕ್ಟೋಬರ್ 21, 2019
21 °C

ಅಭ್ಯಾಸದಿಂದಲೇ ದೂರ ಉಳಿದರು!

Published:
Updated:

ಪರ್ತ್ (ಪಿಟಿಐ/ ಐಎಎನ್‌ಎಸ್): ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದವರು ಅಭ್ಯಾಸದಿಂದ ದೂರವುಳಿದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮಾಜಿ ಆಟಗಾರರು ಇದೇ ಕಾರಣಕ್ಕೆ ಮಹೇಂದ್ರ ಸಿಂಗ್ ದೋನಿ ಬಳಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲ ಕಡೆಗಳಿಂದಲೂ ಟೀಕೆ ವ್ಯಕ್ತವಾಗಿದೆ. ಆದರೆ ತಂಡದ ಆಟಗಾರರು ಮಾತ್ರ ಇದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ.ಭಾರತದ ಆಟಗಾರರು ಸೋಮವಾರವೂ ಅಂಗಳದ ಕಡೆ ತಲೆ ಹಾಕಲಿಲ್ಲ. ಅದಕ್ಕೆ ಬದಲು ಗೋ- ಕಾರ್ಟಿಂಗ್‌ಗೆ ತೆರಳಿ ಮಜಾ ಅನುಭವಿಸಿದರು. ರೇಸ್ ಕಾರ್‌ನಲ್ಲಿ ಕುಳಿತು ತಮ್ಮ ಚಾಲನಾ ಕೌಶಲ ಮೆರೆದರು. ಸತತ ಮೂರನೇ ದಿನ ಮಹಿ ಬಳಗದ ಆಟಗಾರರು ನೆಟ್ ಪ್ರಾಕ್ಟೀಸ್‌ನಿಂದ ದೂರವುಳಿದಿದ್ದಾರೆ.ಮೊದಲ ಎರಡು ಟೆಸ್ಟ್‌ಗಳಲ್ಲಿ ಸೋಲು ಅನುಭವಿಸಿರುವ ಭಾರತ ಅತಿಯಾದ ಒತ್ತಡದಲ್ಲಿದೆ. ಸರಣಿ ಸೋಲು ತಪ್ಪಿಸಲು ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ. ಆದರೆ ದೋನಿ ಬಳಗ ಇನ್ನುಳಿದ ಪಂದ್ಯಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಟೀಕೆ ಕೇಳಿಬರುತ್ತಿದೆ.ಆಟಗಾರರು ಅಭ್ಯಾಸವನ್ನು ಕಡೆಗಣಿಸಿದ್ದಕ್ಕೆ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅತೃಪ್ತಿ ವ್ಯಕ್ತಪಡಿಸಿದ್ದರು. `ಭಾರತ ತಂಡದವರು ಆಸ್ಟ್ರೇಲಿಯಾಕ್ಕೆ ತೆರಳ್ದ್ದಿದು ಕ್ರಿಕೆಟ್ ಆಡಲೋ ಅಥವಾ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲೋ~ ಎಂದು ಅವರು ಕೆಲದಿನಗಳ ಹಿಂದೆ ಪ್ರಶ್ನಿಸಿದ್ದರು.`ಮೊದಲ ಟೆಸ್ಟ್ ನಾಲ್ಕೇ ದಿನಗಳಲ್ಲಿ ಕೊನೆಗೊಂಡಿತ್ತು. ಈ ಕಾರಣ ಐದನೇ ದಿನ ಬಿಡುವು ಲಭಿಸಿತ್ತು. ಆದ್ದರಿಂದ ಅಂದು ಅಭ್ಯಾಸ ನಡೆಸಬೇಕಿತ್ತು. ಆದರೆ ಆಟಗಾರರು ಅಭ್ಯಾಸ ನಡೆಸಿದ್ದರೇ? ಅಂತಹ ಸಾಧ್ಯತೆ ಕಡಿಮೆ. ಆಟಗಾರರು ಅಭ್ಯಾಸದಿಂದ ದೂರವುಳಿದದ್ದು ಏಕೆ?~ ಎಂದಿದ್ದರು.`ಅಟಗಾರರಲ್ಲಿ ಬದ್ಧತೆ ಇರಬೇಕು. ಆದರೆ ಅದು ಕಾಣುತ್ತಿಲ್ಲ. ಎರಡನೇ ಟೆಸ್ಟ್ ಬಳಿಕ ಸಾಕಷ್ಟು ಬಿಡುವು ಲಭಿಸಿದೆ. ಈ ಅವಧಿಯಲ್ಲಿ ಯಾವುದಾದರೂ ತಂಡದ ವಿರುದ್ಧ ಎರಡು ದಿನಗಳ ಪಂದ್ಯವನ್ನು ಆಯೋಜಿಸಬೇಕಿತ್ತು. ಹಾಗಿದ್ದಕ್ಕೆ ಪರ್ತ್‌ನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸುಲಭವಾಗುತ್ತಿತ್ತು~ ಎಂದು ಗಾವಸ್ಕರ್ ತಿಳಿಸಿದ್ದಾರೆ. ಮೂರನೇ ಟೆಸ್ಟ್ ಶುಕ್ರವಾರದಿಂದ ಆರಂಭವಾಗಲಿದೆ.ಓಜಾಗೆ ಅವಕಾಶ ನೀಡಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆರ್. ಅಶ್ವಿನ್ ಬದಲು ಪ್ರಗ್ಯಾನ್ ಓಜಾಗೆ ಅವಕಾಶ ನೀಡಬೇಕು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ನುಡಿದಿದ್ದಾರೆ. ಮೊದಲ ಎರಡು ಟೆಸ್ಟ್‌ಗಳಲ್ಲಿ ಅಶ್ವಿನ್ ಪ್ರಭಾವಿ ಎನಿಸಿಲ್ಲ ಎಂಬುದು ಗಂಗೂಲಿ ಹೇಳಿಕೆ. ಈ ಸರಣಿಯಲ್ಲಿ ಇದುವರೆಗೆ ಆಸೀಸ್ ತಂಡದ 24 ವಿಕೆಟ್‌ಗಳು ಉರುಳಿದ್ದು, ಇದರಲ್ಲಿ ಅಶ್ವಿನ್ ಕೇವಲ ನಾಲ್ಕು ವಿಕೆಟ್ ಪಡೆಯಲಷ್ಟೇ ಯಶಸ್ವಿಯಾಗಿದ್ದಾರೆ.`ಎಡಗೈ ಸ್ಪಿನ್ನರ್ ಓಜಾ ಅವಕಾಶ ಪಡೆದರೆ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ. ಅವರೊಬ್ಬ ಉತ್ತಮ ಬೌಲರ್. ಮಾತ್ರವಲ್ಲ ಸವಾಲು ಎದುರಿಸಲು ಸಜ್ಜಾಗಿದ್ದಾರೆ. ಅಶ್ವಿನ್ ನಿಜವಾಗಿಯೂ             ಚೆನ್ನಾಗಿ ಬೌಲಿಂಗ್ ಮಾಡಿಲ್ಲ~ ಎಂದು ಗಂಗೂಲಿ ತಿಳಿಸಿದ್ದಾರೆ.`ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಉಮೇಶ್ ಯಾದವ್ ಸೊಗಸಾಗಿ ಬೌಲಿಂಗ್ ಮಾಡಿದ್ದರು. ಸಿಡ್ನಿಯಲ್ಲಿ ಅವರು ವಿಫಲರಾಗಿದ್ದರು. ಆದರೆ ಒಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ ಎಂಬ ಕಾರಣದಿಂದ ಅವರನ್ನು ಕೈಬಿಡುವುದು ಸರಿಯಲ್ಲ~ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.ಭಾರತದ ಆಟಗಾರರು ಅಭ್ಯಾಸದಿಂದ ದೂರವುಳಿದಿರುವುದಕ್ಕೆ ಗಂಗೂಲಿ ಅವರಿಂದ ಬೆಂಬಲ ಲಭಿಸಿದೆ. ಮೂರನೇ ಟೆಸ್ಟ್‌ನತ್ತ ಗಮನ ಕೇಂದ್ರೀಕರಿಸುವ ಮುನ್ನ ಅಭ್ಯಾಸದಿಂದ ಕೆಲ ದಿನಗಳ ಕಾಲ ದೂರವುಳಿಯುವುದು ಒಳ್ಳೆಯದು ಎಂಬ ಸಲಹೆ ನೀಡಿದ್ದಾರೆ. `ಪ್ರತಿ ದಿನ ತಾಲೀಮು ಕೈಗೊಳ್ಳಲು ಸಾಧ್ಯವಿಲ್ಲ. ಕೆಲವು ದಿನಗಳ ವಿಶ್ರಾಂತಿ ಅಗತ್ಯವಿದೆ~ ಎಂದು ಮಾಜಿ ನಾಯಕ ತಿಳಿಸಿದ್ದಾರೆ.

Post Comments (+)