ಅಭ್ಯಾಸ ಶಿಬಿರ ಮುಕ್ತಾಯ

7
ಅಂತಿಮ ದಿನ ಬ್ಯಾಟಿಂಗ್, ಬೌಲಿಂಗ್‌ಗೆ ಹೆಚ್ಚಿನ ಒತ್ತು

ಅಭ್ಯಾಸ ಶಿಬಿರ ಮುಕ್ತಾಯ

Published:
Updated:
ಅಭ್ಯಾಸ ಶಿಬಿರ ಮುಕ್ತಾಯ

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಗೆ ಸಜ್ಜಾಗುವ ನಿಟ್ಟಿನಲ್ಲಿ ಭಾರತ ತಂಡದ ಆಟಗಾರರಿಗೆ ಏರ್ಪಡಿಸಿದ್ದ ಮೂರು ದಿನಗಳ ಅಭ್ಯಾಸ ಶಿಬಿರ ಸೋಮವಾರ ಕೊನೆಗೊಂಡಿತು.ಮಹೇಂದ್ರ ಸಿಂಗ್ ದೋನಿ ಬಳಗ ಈ ಮೂರೂ ದಿನಗಳ ಕಾಲ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಕಠಿಣ ತಾಲೀಮು ನಡೆಸಿದೆ. ಅಂತಿಮ ದಿನ ತಂಡದ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಹೆಚ್ಚಿನ ಒತ್ತು ನೀಡಿದ್ದು ಕಂಡುಬಂತು.ಎರಡೂವರೆ ಗಂಟೆಗಳ ಕಾಲದ ನೆಟ್ ಪ್ರಾಕ್ಟೀಸ್‌ನೊಂದಿಗೆ ಶಿಬಿರಕ್ಕೆ ತೆರೆಬಿತ್ತು. ನಾಯಕ ದೋನಿ ಹೊರತುಪಡಿಸಿ ಇತರ ಎಲ್ಲ ಬ್ಯಾಟ್ಸ್‌ಮನ್‌ಗಳು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಮೊದಲ ಎರಡು ದಿನ ತಂಡದ ಆಟಗಾರರು ಕ್ಷೇತ್ರರಕ್ಷಣೆ ಹಾಗೂ ದೈಹಿಕ ಕಸರತ್ತಿಗೆ ಹೆಚ್ಚಿನ ಮಹತ್ವ ನೀಡಿದ್ದರು. ಆದರೆ ಸೋಮವಾರ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾತ್ರ ನಡೆಸಿದರು.ಮಧ್ಯಾಹ್ನದ ಬಳಿಕ ಎನ್‌ಸಿಎಗೆ ಆಗಮಿಸಿದ ಆಟಗಾರರು ನೇರವಾಗಿ ನೆಟ್ಸ್‌ನತ್ತ ತೆರಳಿದರು. ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ, ಪ್ರಗ್ಯಾನ್ ಓಜಾ ಮತ್ತು ಆರ್. ಅಶ್ವಿನ್ ಅವರು ಬೌಲಿಂಗ್ ಮಾಡಿದರು. ಸಚಿನ್ ಬೇರೆ ಬೇರೆ ನೆಟ್ಸ್‌ನಲ್ಲಿ ಈ ಎಲ್ಲ ಬೌಲರ್‌ಗಳನ್ನು ಎದುರಿಸಿದರು. ಅವರು ಸುಮಾರು 45 ನಿಮಿಷಗಳನ್ನು ನೆಟ್ಸ್‌ನಲ್ಲಿ ಕಳೆದರು. ದಿಂಡಾ, ಇಶಾಂತ್ ಒಳಗೊಂಡಂತೆ ಬೌಲರ್‌ಗಳೂ ಕೆಲಹೊತ್ತು ಬ್ಯಾಟಿಂಗ್ ಮಾಡಿದರು.ದೋನಿ ಬಳಗ ಮಂಗಳವಾರ ಚೆನ್ನೈಗೆ ಪ್ರಯಾಣಿಸಲಿದೆ. ನಾಲ್ಕು ಪಂದ್ಯಗಳ ಸರಣಿಯ ಮೊದಲ ಪಂದ್ಯ ಫೆಬ್ರುವರಿ 22 ರಿಂದ ಆರಂಭವಾಗಲಿದೆ. ಮೂರು ತಿಂಗಳ ಬಿಡುವಿನ ಬಳಿಕ ಭಾರತ ತಂಡ ಟೆಸ್ಟ್ ಪಂದ್ಯವನ್ನಾಡಲಿದೆ. ಕಳೆದ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಆಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry