ಶನಿವಾರ, ಮೇ 8, 2021
18 °C

ಅಮರ್ ವೈದ್ಯಕೀಯ ವರದಿಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ವೋಟಿಗಾಗಿ ನೋಟು~ ಹಗರಣದಲ್ಲಿ ಆರೋಪಿಯಾಗಿರುವ ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಅವರನ್ನು ತಿಹಾರ್ ಕಾರಾಗೃಹ ಆಡಳಿತ ಸೋಮವಾರ ಸಂಜೆ ಇಲ್ಲಿನ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ (ಏಮ್ಸ) ದಾಖಲಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಪ್ರಕಟಿಸಬೇಕಿದ್ದ ಅವರ ಮಧ್ಯಂತರ ಜಾಮೀನು ಅರ್ಜಿಯ ತೀರ್ಪನ್ನು ತಡೆಹಿಡಿದಿರುವ ದೆಹಲಿಯ ವಿಚಾರಣಾ ನ್ಯಾಯಾಲಯವು, ಬುಧವಾರದೊಳಗಾಗಿ ಅವರ ಆರೋಗ್ಯ ಪರಿಸ್ಥಿತಿಯ ವೈದ್ಯಕೀಯ ವರದಿಯನ್ನು ತನಗೆ ಸಲ್ಲಿಸುವಂತೆ ಆದೇಶಿಸಿದೆ.ವಿಶೇಷ ನ್ಯಾಯಾಧೀಶರಾದ ಸಂಗೀತಾ ಧಿಂಗ್ರಾ ಸೆಹಗಲ್ ಅವರು ಸಿಂಗ್ ಜಾಮೀನು ಅರ್ಜಿಯ ವಿಚಾರಣೆಯನ್ನು ಗುರುವಾರಕ್ಕೆ (ಸೆ.15ಕ್ಕೆ) ಮುಂದೂಡಿ, ಅವರ ವೈದ್ಯಕೀಯ ವರದಿಯನ್ನು ಬುಧವಾರ (ಸೆ. 14) ಮಧ್ಯಾಹ್ನದೊಳಗೆ ನ್ಯಾಯಪೀಠಕ್ಕೆ ಸಲ್ಲಿಸುವಂತೆ ಏಮ್ಸ ಮತ್ತು ಕಾರಾಗೃಹ ಆಡಳಿತಕ್ಕೆ ನಿರ್ದೇಶನ ನೀಡಿದರು. ಏಮ್ಸ ನಿರ್ದೇಶಕರು ಸಿಂಗ್ ಆಸ್ಪತ್ರೆಗೆ ದಾಖಲಾದಾಗಿನ ಮತ್ತು ಅವರ ಈಗಿನ ಆರೋಗ್ಯ ಪರಿಸ್ಥಿತಿ ಎರಡರ ಬಗ್ಗೆಯೂ ವೈದ್ಯಕೀಯ ವರದಿ ಸಲ್ಲಿಸುವಂತೆ ಮತ್ತು ತಿಹಾರ್ ಕಾರಾಗೃಹ ಆಡಳಿತ ಕೂಡ ಸಿಂಗ್ ಆರೋಗ್ಯದ ಕುರಿತು ಪೂರ್ಣ ವೈದ್ಯಕೀಯ ವರದಿ ಸಲ್ಲಿಸಬೇಕೆಂದು ನ್ಯಾಯಾಧೀಶರು ಸೂಚಿಸಿದರು.ಸಿಂಗ್ ಪರ ಹಾಜರಿದ್ದ ವಕೀಲ ಹರಿಹರನ್ ಅವರು ಸಂಸದರು ದಿಢೀರ್ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದ ಬಗ್ಗೆ ತಿಳಿಸಿ, ಅವರಿಗೆ ಮಧ್ಯಂತರ ಜಾಮೀನು ನೀಡುವಂತೆ ಕೋರಿದರು. ತಿಹಾರ್ ಕಾರಾಗೃಹದಲ್ಲಿದ್ದಾಗ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು ಎಂದೂ ಹೇಳಿದರು. ಹೀಗಾಗಿ ಸಿಂಗ್ ಆರೋಗ್ಯದ ವೈದ್ಯಕೀಯ ವರದಿ ಸಲ್ಲಿಸಲು ನ್ಯಾಯಾಧೀಶರು ಆದೇಶಿಸಿದರು.ಈ ಮಧ್ಯಂತರ ಜಾಮೀನು ಅರ್ಜಿಯ ತೀರ್ಪು ಮಾತ್ರವಲ್ಲದೆ, ಇದೇ 19ರಂದು ನಡೆಸಬೇಕಿರುವ ಅವರ ಅಂತಿಮ ಜಾಮೀನು ಅರ್ಜಿಯ ವಿಚಾರಣೆಯನ್ನು ಸಹ ನ್ಯಾಯಾಲಯ ತಡೆಹಿಡಿಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.