ಅಮರ್ ಸಿಂಗ್ ದೂರವಾಣಿ ಕದ್ದಾಲಿಕೆ: ಕೇಂದ್ರ, ರಿಲಯನ್ಸ್‌ಗೆ ಸುಪ್ರೀಂ ತರಾಟೆ

7

ಅಮರ್ ಸಿಂಗ್ ದೂರವಾಣಿ ಕದ್ದಾಲಿಕೆ: ಕೇಂದ್ರ, ರಿಲಯನ್ಸ್‌ಗೆ ಸುಪ್ರೀಂ ತರಾಟೆ

Published:
Updated:

ನವದೆಹಲಿ (ಪಿಟಿಐ):  ನಕಲಿ ಸಹಿ ಮಾಡಿದ ಆದೇಶಗಳ ಆಧಾರದಲ್ಲಿ ಅಕ್ರಮವಾಗಿ ರಾಜಕಾರಣಿ ಅಮರ್ ಸಿಂಗ್ ಅವರ ದೂರವಾಣಿ ಕದ್ದಾಲಿಕೆ ಮಾಡಿದ ರಿಲಯನ್ಸ್ ಇನ್ಫೊಕಾಮ್‌ನ ಪರವಾನಗಿಯನ್ನು ರದ್ದುಗೊಳಿಸದೇ ಇದ್ದುದಕ್ಕೆ ಶುಕ್ರವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

‘ಯಾಕೆ ನೀವು  ಸೇವಾ ಸಂಸ್ಥೆಯ ಪರವಾನಗಿಯನ್ನು ರದ್ದುಗೊಳಿಸಲಿಲ್ಲ. ಇದು  ಅಸಡ್ಡೆಯ ಪರಮಾವಧಿ. ಸೇವಾ ಸಂಸ್ಥೆಯು ಉದ್ದೇಶ ಪೂರ್ವಕವಾಗಿಯೇ ದೂರವಾಣಿ ಕದ್ದಾಲಿಕೆ ಮಾಡಿತೋ ಅಥವಾ ತಪ್ಪುಗಳಿಂದಲೇ ಕೂಡಿದ ಪತ್ರದ ಆಧಾರದಲ್ಲಿ ಮಾಡಿತೋ?’ ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರನ್ನೊಳಗೊಂಡ ನ್ಯಾಯ ಪೀಠ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.

‘ದೂರವಾಣಿ ಕದ್ದಾಲಿಕೆ ಮಾಡಲು ಆದೇಶಿಸಿದ ಪತ್ರದಲ್ಲಿ ಸಾಕಷ್ಟು ತಪ್ಪುಗಳಿದ್ದವು. ವಾಸ್ತವವಾಗಿ ಸರ್ಕಾರ ಸೇವಾ ಸಂಸ್ಥೆಯ ಪರವಾನಿಗೆಯನ್ನು ರದ್ದುಗೊಳಿಸಬೇಕಿತ್ತು’ ಎಂದು ಪೀಠ ಅಭಿಪ್ರಾಯ ಪಟ್ಟಿತು.

ಅಂಬಾನಿ ಸಹೋದರರ ನಡುವೆ 2005ರಲ್ಲಿ ಆಸ್ತಿ ವಿಭಜನೆಯಾದಾಗ ರಿಲಯನ್ಸ್ ಇನ್ಫೋಕಾಮ್ ಸಂಸ್ಥೆ ಅನಿಲ್ ಅಂಬಾನಿ ಸಮೂಹಕ್ಕೆ ಸೇರಿತ್ತು. ‘ಪ್ರಕರಣ ನಡೆದದ್ದು 2005ರಲ್ಲಿ. ಈಗ 2011. ಸೇವಾ ಸಂಸ್ಥೆಗೆ ತನ್ನ ವ್ಯವಹಾರವನ್ನು ಮುಂದುವರಿಸಲು ಇಲ್ಲಿವರೆಗೂ ಅವಕಾಶ ನೀಡಲಾಗಿದೆ. ಇದುವರೆಗೂ ಸಂಸ್ಥೆಯ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಗಂಭೀರ ವಿಷಯ. ಸರ್ಕಾರ ಸಂಸ್ಥೆ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ’  ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿತು.

2005ರ ಅಕ್ಟೋಬರ್ 22 ಹಾಗೂ ಡಿಸೆಂಬರ್ 21ರ ಅವಧಿಯಲ್ಲಿ ರಿಲಯನ್ಸ್ ಇನ್ಫೊಕಾಮ್ ಅಮರ್ ಸಿಂಗ್ ಅವರ ದೂರವಾಣಿ ಕರೆಗಳನ್ನು ಕದ್ದಾಲಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry