ಅಮರ ಪ್ರೇಮದ ಮಧುರ ಸ್ಮಾರಕ

7

ಅಮರ ಪ್ರೇಮದ ಮಧುರ ಸ್ಮಾರಕ

Published:
Updated:

ಹೊಸಪೇಟೆ: ಬೀದಿಯಲ್ಲಿ ಮುತ್ತು- ರತ್ನಗಳನ್ನು ಅಳೆದು ಮಾರಿ, ಇತಿಹಾಸದ ಪುಟದಲ್ಲಿ ಮರೆಯಲಾಗದ ಸಾಮ್ರಾಜ್ಯವೆಂದೇ ಕರೆಯಲ್ಪಡುವ ಹಾಗೂ ತೆರೆದ ವಸ್ತುಸಂಗ್ರಹಾಲಯ ಎಂದೇ ಬಿಂಬಿತವಾದ ಹಂಪಿಯಲ್ಲಿ ಪ್ರಾಯಶಃ ಮರೆತು ಹೋದ ಪ್ರೀತಿಯ ಸ್ಮಾರಕವೊಂದಿದೆ. ಅದುವೇ ಪಳನಿಯಪ್ಪ ಹಾಗೂ ವಳ್ಳಿಯಮ್ಮ ದಂಪತಿಗಳ ಸ್ಮಾರಕ. ಪ್ರೀತಿಗಾಗಿ ತನ್ನ ಬಂಧು, ಬಳಗ, ರಾಜ್ಯ ಬಿಟ್ಟು ಬಂದಳೆಂಬ ಕಾರಣಕ್ಕಾಗಿ ಹಾಗೂ ತನ್ನ ಮತ್ತು ಕುಟುಂಬದ ಏಳಿಗೆಗಾಗಿ ದುಡಿದು ತನಗಿಂತಲೂ ಮುಂಚೆಯೇ ಪರಲೋಕ ಸೇರಿದಳು ಎಂಬ ಕಾರಣಕ್ಕಾಗಿ ಪಳನಿಯಪ್ಪ ಅವರು ಹೆಂಡತಿ ಸ್ಮರಣಾರ್ಥ ಸ್ಮಾರಕ ಕಟ್ಟಿಸಿದರು.

 

ಮುಂದೆ ತನ್ನ ದೇಹತ್ಯಾಗವೂ ಅಲ್ಲಿಯೇ ಆಗಬೇಕೆಂದು ಬಯಸುವ ಮೂಲಕ ಪ್ರೀತಿಗೆ ಮತ್ತೊಂದು ಸಾಕ್ಷಿಯಾದ ಸ್ಮಾರಕ ನಮ್ಮ ನಡುವೆ  ಹಂಪಿ ರಸ್ತೆಯ ಕಡ್ಡಿರಾಂಪುರದಲ್ಲಿರುವುದು ಬಹಳಷ್ಟು ಜನರಿಗೆ ತಿಳಿದೇ ಇಲ್ಲ,

ವ್ಯವಸಾಯಕ್ಕೆಂದು ತಮಿಳುನಾಡಿನಿಂದ ಬಂದು ಹಂಪಿಯ ವಿಜಯನಗರ ಕಾಲದ ಕಾಲುವೆಗಳ ಪಕ್ಕದಲ್ಲಿ ಹೊಲಗದ್ದೆಗಳನ್ನು ಖರೀದಿಸಿದ ಮುರುಗಮುತ್ತು ಪಿಳೈ ದಂಪತಿಗಳ ಏಕೈಕ ಪುತ್ರ ಪಳನಿಯಪ್ಪ.ಬಾಲ್ಯದಿಂದಲೇ ಹೊಸಪೇಟೆಯಲ್ಲಿ ವಿದ್ಯಾಭ್ಯಾಸ ಹಾಗೂ ನಂತರ ಪರಂಪರೆಯಂತೆ ವ್ಯವಸಾಯ ಮಾಡುವ ಮೂಲಕ ಮೊದಲ ಬಾರಿ ತಮಿಳುನಾಡಿನಿಂದ ಬಾಳೆಯನ್ನು ತಂದು ಈ ಭಾಗದ ಪ್ರಮುಖ ಬೆಳೆಗಳಲ್ಲೊಂದಾಗುವಂತೆ ಮಾಡಿ `ಬಾಳೆಕಾಯಿ ರೆಡ್ಡಿ~ ಎಂಬ ಅನ್ವರ್ಥಕ ನಾಮಕ್ಕೂ ಕಾರಣವಾದ ಪಳನಿಯಪ್ಪ ತನ್ನ ಹೆಂಡತಿಯ ಸ್ಮರಣಾರ್ಥ ಹಂಪಿಯಲ್ಲಿ  13 ಎಕರೆ ಜಮೀನಿನಲ್ಲಿ 2 ಎಕರೆ ಸುಂದರ ಹಾಗೂ ಆಕರ್ಷಕ ಸ್ಮಾರಕ ನಿರ್ಮಿಸಿದರು.

 

ಅದರ ಪಕ್ಕದಲ್ಲಿಯೇ ಮುಂದೆ ತನ್ನ ಶವ ಸಂಸ್ಕಾರವನ್ನು ಮಾಡುವಂತೆ ತಿಳಿಸಿ ತನ್ನ ನಿಜವಾದ ಪ್ರೀತಿಯನ್ನು 1988ರಲ್ಲಿಯೇ ವ್ಯಕ್ತಪಡಿಸ್ದ್ದಿದರು. ಮುಂದೆ ಅವರ ನಿಧನ ನಂತರ ಅವರ ಮಕ್ಕಳು 2007 ರಲ್ಲಿ ಪಳನಿಯಪ್ಪ ಅಂತ್ಯಕ್ರಿಯೆಯನ್ನು ಅಲ್ಲಿಯೇ ಮಾಡಿದ್ದಾರೆ.ಇಂತಹ ಅನ್ಯೋನ್ಯತೆ ಇಷ್ಟಕ್ಕೇ ಸೀಮಿತವಾಗದಿರಲೆಂದು ಹೆಂಡತಿ, ಐವರು ಪುತ್ರಿಯರು ಹಾಗೂ ಇಬ್ಬರು ಪುತ್ರರ ಜ್ಞಾಪಕಾರ್ಥವಾಗಿ 5 ಹೆಣ್ಣುನವಿಲು ಎರಡು ಗಂಡುನವಿಲುಗಳ ಆಕೃತಿಳನ್ನೂ ನಿರ್ಮಿಸಲಾಗಿದೆ. ಈ ಮೂಲಕ ಇಡೀ ಕುಟುಂಬದ ಪ್ರೀತಿಗೆ ಮಾದರಿಯಾಗಿದ್ದಾರೆ.“ಪ್ರೀತಿ ಎಂಬ ಹೆಸರಿನಲ್ಲಿ ನೋವು ನೀಡುವ, ಆತ್ಮಹತ್ಯೆಗಳಂತಹ ಅನಾಹುತಗಳಿಗೆ ಕಾರಣವಾಗದೆ, ಇರುವಷ್ಟು ದಿನ ಪ್ರೀತಿಯಿಂದ ಇದ್ದು, ಹೋದನಂತರ ಮತ್ತೊಬ್ಬರಿಗೆ ಆದರ್ಶವಾಗಿ ಬಾಳುವುದು ಜೀವನದ ಗುರಿಯಾಗಬೇಕು ಎಂಬುದು ಪಳನಿಯಪ್ಪ ಬಯಕೆಯಾಗಿತ್ತು.ಶಾಹ್‌ಜಹಾನ್ `ತಾಜ್‌ಮಹಲ್~ ನಿರ್ಮಿಸಿದಂತೆ,  ಹಂಪಿಯಲ್ಲಿರುವ `ಪಳನಿಯಪ್ಪ ವಳ್ಳಿಯಮ್ಮ ಮಹಲ್~ ಯುವ ಜನಾಂಗಕ್ಕೆ ಮಾದರಿಯಾಗುವಂತಿದೆ. ಇಂತಹ ಅಮರ ಪ್ರೇಮ ಚಿರಾಯುವಾಗಲಿ ಎಂಬುದು ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಪ್ರೇಮಿಗಳ ಆಶಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry