ಅಮರ ಮಧುರ ಪ್ರೇಮ...

7

ಅಮರ ಮಧುರ ಪ್ರೇಮ...

Published:
Updated:

ಸಾಹಿತ್ಯ-ಪ್ರೇಮದ ಸಾಂಗತ್ಯ

ಇದು ನಮ್ಮದೇ ಮಣ್ಣಿನ ಪ್ರೀತಿ. ಜಾತಿ ಎಂಬ ಅಡ್ಡಗೋಡೆಯನ್ನು ಲೆಕ್ಕಿಸದೆ ಪ್ರೀತಿಸಿದ ಇಬ್ಬರೂ ಕನ್ನಡಿಗರಿಗೆ ನೀಡಿದ್ದು ಸಾಹಿತ್ಯದ ಪುಷ್ಕಳ ಭೋಜನವನ್ನು. ಒಬ್ಬರು ಸ್ವಾಂತಂತ್ರ್ಯ ಹೋರಾಟದ ಕಿಚ್ಚನ್ನು ಒಡಲಲ್ಲಿಟ್ಟುಕೊಂಡು ಬದುಕಿದವರಾದರೆ ಇನ್ನೊಬ್ಬರು ವೈದ್ಯರಾಗಿಯೂ ಖ್ಯಾತಿ ಗಳಿಸಿದವರು.ಅನುಪಮಾ ನಿರಂಜನ ಎಂಬ ಹೆಸರೇ ಕನ್ನಡಿಗರಿಗೆ ಅಪ್ಯಾಯಮಾನ. ತೀರ್ಥಹಳ್ಳಿಯಲ್ಲಿ ಜನಿಸಿದ ವೆಂಕಟಲಕ್ಷ್ಮೀ ಅನುಪಮಾ ಆಗಿದ್ದು ಮೈಸೂರಿನಲ್ಲಿ ವೈದ್ಯಕೀಯ ಅಧ್ಯಯನ ನಡೆಸುವಾಗ. ಕ್ರಾಂತಿಕಾರಿ ಮನೋಭಾವದ ನಿರಂಜನರ ಪರಿಚಯವಾಗಿದ್ದು ಇಲ್ಲಿಯೇ.ಜಾತಿ, ಸಾಮಾಜಿಕ ಕಟ್ಟುಪಾಡುಗಳು ಇನ್ನಷ್ಟು ಬಿಗಿಯಾಗಿದ್ದ ಕಾಲವದು. ಸ್ವಾತಂತ್ರ್ಯ ಹೋರಾಟದ ಚಳವಳಿಗಳಲ್ಲಿ ತೊಡಗಿಕೊಂಡಿದ್ದ ನಿರಂಜನರ ಮೂಲ ಹೆಸರು ಕುಳಕುಂದ ಶಿವರಾಯ. ವೆಂಕಟಲಕ್ಷ್ಮೀ ಎಂಬ ಹೆಸರನ್ನು ಅನುಪಮಾ ಆಗಿ ಬದಲಿಸುವಂತೆ ಸೂಚಿಸಿದ್ದು ನಿರಂಜನರು.ಇಬ್ಬರದೂ ತೆರೆದ ಮನಸಿನ ವ್ಯಕ್ತಿತ್ವ. ಹೀಗಾಗಿ ಇಬ್ಬರ ನಡುವಿನ ಪ್ರೇಮಕ್ಕೆ ಜಾತಿ ಸವಾಲಾಗಲಿಲ್ಲ. ಮನೆಯವರ ವಿರೋಧದ ನಡುವೆಯೂ ಆರು ವರ್ಷದ ಪ್ರೇಮಕ್ಕೆ ಮದುವೆಯ ಯೋಗ ಸಿಕ್ಕಿದ್ದು 1956ರಲ್ಲಿ.

 

ಬೆಂಗಳೂರಿನ ಸಜ್ಜನರಾವ್ ಕಲ್ಯಾಣಮಂಟಪದಲ್ಲಿ ಫೆಬ್ರುವರಿ ಐದರಂದು ಅವರ ವಿವಾಹ ನಡೆದದ್ದು. ಸಾಹಿತ್ಯ ಕೃಷಿಯಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಸ್ಫೂರ್ತಿ. ಮಕ್ಕಳಿಗಾಗಿ ದಿನಕ್ಕೊಂದು ಕಥೆ ಬರೆಯಲು ಪ್ರೇರಣೆ ನೀಡಿದ್ದು ನಿರಂಜನ ಅವರು.

 

ನಿರಂಜನ ಸಾಹಿತ್ಯದ ಸಿರಿವಂತಿಕೆಯಲ್ಲೂ ಅನುಪಮಾ ಅವರ ಪಾಲಿದೆ. ಸಾಹಿತ್ಯಲೋಕಕ್ಕೆ ಅಕ್ಷರ ಪ್ರೀತಿಯ ಧಾರೆ ಎರೆದ ಇಬ್ಬರ ಪ್ರೇಮ ಸಾಂಗತ್ಯದ ಬದುಕೇ ಒಂದು ಕಾದಂಬರಿ.ವೈಜ್ಞಾನಿಕ ಪ್ರೀತಿ!
ಇದು ಪ್ರೀತಿ ಮತ್ತು ವಿಜ್ಞಾನ ಎರಡರಲ್ಲೂ ಜೊತೆಯಾದವರ ಪ್ರೇಮಕಥೆ. ಪೋಲೆಂಡ್‌ನಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾನಿಯಲಯದಲ್ಲಿ ಓದಲು ಅವಕಾಶ ಇರಲಿಲ್ಲ. ಹೀಗಾಗಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ತುಡಿತ ಹೊಂದಿದ್ದ ಮರಿಯಾ ಸ್ಲೋಡೊವ್‌ಸ್ಕಾ ಕ್ಯೂರಿ 1891ರಲ್ಲಿ ಪ್ರಯಾಣ ಬೆಳೆಸಿದ್ದು ಪ್ಯಾರಿಸ್‌ಗೆ.ಕಾಲೇಜಿನ ಲ್ಯಾಬೋರೇಟರಿ ಮತ್ತು ಲೈಬ್ರರಿಯಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದ ಕ್ಯೂರಿ ಅಲ್ಲಿನ ಪ್ರಯೋಗಾಲಯ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪೀರೀ ಕ್ಯೂರಿ ಕಣ್ಣಿಗೆ ಬಿದ್ದರು. ಅಲ್ಲಿ ಮೊಳಕೆಯೊಡೆದ ಪ್ರೇಮಕ್ಕೆ ವಿವಾಹದ ಬಂಧನವಾಗಿದ್ದು 1895ರಲ್ಲಿ.ಬಳಿಕ ಇಬ್ಬರೂ ಜೊತೆಗೂಡಿ ಸಂಶೋಧನೆ ಆರಂಭಿಸಿದರು. 1898ರಲ್ಲಿ ಪೊಲೋನಿಯಮ್ ಮತ್ತು ರೇಡಿಯಂಅನ್ನು ಅನ್ವೇಷಿಸಿದರು. 1903ರಲ್ಲಿ ರೇಡಿಯೋಆಕ್ಟಿವಿಟಿಯಲ್ಲಿ ಸಾಧನೆಗಾಗಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಇಬ್ಬರಿಗೂ ಒಲಿಯಿತು.

 

1904ರಲ್ಲಿ ಕ್ಯೂರಿ ಮೃತಪಟ್ಟ ನಂತರವೂ ಮೇಡಂ ಕ್ಯೂರಿ ತನ್ನ ಚಟುವಟಿಕೆಯಿಂದ ವಿಮುಖರಾಗಲಿಲ್ಲ. 1911ರಲ್ಲಿ ರಸಾಯನಶಾಸ್ತ್ರದಲ್ಲಿ ಮತ್ತೊಂದು ನೊಬೆಲ್ ಅವರನ್ನು ಅರಸಿ ಬಂತು. ಇತಿಹಾಸದಲ್ಲೇ ಎರಡು ಬಾರಿ ನೊಬೆಲ್ ಪಡೆದ ಮೊದಲಿಗರಾದರು.1934ರಲ್ಲಿ ಲುಕೆಮಿಯಾದಲ್ಲಿ ಕೊನೆ ಉಸಿರು ಎಳೆಯುವವರೆಗೂ ಮೇಡಂ ಕ್ಯೂರಿ ತಮ್ಮ ವೈಜ್ಞಾನಿಕ ಪ್ರಯೋಗಗಳನ್ನು ಮತ್ತು ಅಧ್ಯಾಪನ ವೃತ್ತಿಯನ್ನು ಮುಂದುವರೆಸಿದ್ದರು. ಪತಿ ಅಗಲಿಕೆ ಬಳಿಕವೂ ದೀರ್ಘಕಾಲ ವಿಜ್ಞಾನಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಪೀರೀ ಕ್ಯೂರಿ ಬದುಕಿನ ಪ್ರೀತಿಯ ಜೊತೆಗೆ ಮೂಡಿಸಿದ್ದ ವಿಜ್ಞಾನದ ಪ್ರೀತಿಯೂ ಕಾರಣ.ಮರ್ಯಾದೆ ನೆಪದಲ್ಲಿ ಪ್ರೀತಿಯ ಕೊಲೆ
ಮನೋಜ್ ಮತ್ತು ಬಬ್ಲಿ ಹರಿಯಾಣದ ಕೈಥಾಲ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ನೆರೆಹೊರೆಯರು. ಜಾಟ್ ಸಮುದಾಯದ ಇಬ್ಬರದೂ ಬನ್ವಲಾ ಗೋತ್ರ. ಇಬ್ಬರೂ ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡವರು. ಎಲೆಕ್ಟ್ರಾನಿಕ್ ಅಂಗಡಿ ನಡೆಸಿಕೊಂಡು ಮನೆ ಮತ್ತು ಓದು ಎರಡರ ಜವಾಬ್ದಾರಿ ಹೊತ್ತವನು ಮನೋಜ್.ಬಬ್ಲಿ ಮನೆಯಲ್ಲೂ ಆಕೆಯ ಅಣ್ಣನಿಗೆ ಸಂಸಾರದ ಜವಾಬ್ದಾರಿ. ಅಕ್ಕಪಕ್ಕದಲ್ಲೇ ವಾಸಿಸುತ್ತಿದ್ದ ಮನೋಜ್ ಮತ್ತು ಬಬ್ಲಿ ನಡುವೆ ಸಹಜವಾಗಿಯೇ ಪ್ರೀತಿ ಹುಟ್ಟಿತು. ಇಬ್ಬರ ಮನೆಯಲ್ಲೂ ವಿರೋಧ ವ್ಯಕ್ತವಾದಾಗ ಇಬ್ಬರೂ ಚಂಡೀಗಡಕ್ಕೆ ಓಡಿಹೋಗಿ ಮದುವೆಯಾದರು. ಖಾಪ್ (ಜಾತಿ) ಪಂಚಾಯತ್ ಮನೋಜ್ ಕುಟುಂಬಕ್ಕೆ ಸಮುದಾಯದಿಂದ ಬಹಿಷ್ಕಾರ ಹಾಕಿತು.ಮನೋಜ್ ವಿರುದ್ಧ ಅಪಹರಣ ಪ್ರಕರಣ ದಾಖಲಾಯಿತು. ಆದರೆ ಕಾನೂನು ಪ್ರಕಾರ ಮದುವೆಯಾದ ಇಬ್ಬರಿಗೂ ರಕ್ಷಣೆ ನೀಡುವಂತೆ ಕೋರ್ಟ್ ಆದೇಶಿಸಿತು. ರಕ್ಷಣೆಯೊಂದಿಗೆ ಅವರನ್ನು ಚಂಡೀಗಡಕ್ಕೆ ಕರೆದೊಯ್ಯುತ್ತಿದ್ದ ಪೊಲೀಸರು ಅರ್ಧದಲ್ಲಿಯೇ ಜಾರಿಕೊಂಡರು.ಅಲ್ಲಿಂದ ದೆಹಲಿಗೆ ಹೊರಟ ಪ್ರೇಮಿಗಳು ಬಬ್ಲಿ ಕುಟುಂಬದವರ ಕೈಗೆ ಸಿಕ್ಕಿಬಿದ್ದರು. ನಂತರ ಸಿಕ್ಕಿದ್ದು 9 ದಿನಗಳ ಬಳಿಕ ಮೃತದೇಹಗಳಾಗಿ. ಆರ್ಥಿಕ ಸಂಕಷ್ಟದಲ್ಲಿದ್ದಾಗ ಕುಟುಂಬಕ್ಕೆ ನೆರವಾಗದ ಸಂಬಂಧಿಕರು ಜಾತಿ ಹೆಸರಿನಲ್ಲಿ ಮಾನ ಹೋಯಿತೆಂದು ತಮ್ಮದೇ ಕುಟುಂಬದ ಪ್ರೇಮಿಗಳನ್ನು ಹತ್ಯೆ ಮಾಡುವ ಕ್ರೂರ ಪ್ರವೃತ್ತಿಯಿದು. ಕಪ್ಪು ಬಿಳುಪಿನ ಕಾಲದ ಬಣ್ಣದ ಪ್ರೇಮಕಥೆ
ಹಿಂದಿ ಚಿತ್ರರಂಗದ ಕಪ್ಪು ಬಿಳಿಪಿನ ಕಾಲದ ಅತಿರಂಜಿತ ಮತ್ತು ಕುತೂಹಲ ಮೂಡಿಸಿದ ಪ್ರೇಮ್ ಕಹಾನಿ ದೇವಾನಂದ್ ಮತ್ತು ಸುರೈಯಾ ಅವರ ಜೋಡಿಯದು. ದೇವಾನಂದ್ ಸಿನಿಮಾಕ್ಕೆ ಬಣ್ಣಹಚ್ಚುವಾಗ ಸುರೈಯಾ ಆಗಲೇ ಖ್ಯಾತ ನಟಿ. 1948ರಿಂದ 1951 ಅವಧಿಯಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಸಾಲಾಗಿ ಬಂದವು.ಒಟ್ಟು ಏಳು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ಇಬ್ಬರ ನಡುವಿನ ಪ್ರೇಮದ ಕಥೆಯೇ ಒಂದು ಸಿನಿಮಾದಂತೆ `ವಿದ್ಯಾ~ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಸುರೈಯಾ ಅವರನ್ನು ಉಳಿಸಿದರು. ಅಲ್ಲಿಂದ ಅವರ ಪ್ರೇಮಸಲ್ಲಾಪ ಶುರುವಾಗಿದ್ದು. ಬಳಿಕ `ಜೀತ್~ ಚಿತ್ರೀಕರಣದ ನಡುವಿನ ವಿರಾಮದಲ್ಲಿಯೇ ಸುರೈಯಾ ಬೆರಳಿಗೆ ಉಂಗುರ ಬಂದಿತ್ತು.

 

ಆದರೆ ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದ್ದರಿಂದ ಸುರೈಯಾ ಅಜ್ಜಿ ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದರು. `ದೋ ಸಿತಾರೆ~ ಇವರಿಬ್ಬರು ಒಟ್ಟಾಗಿ ನಟಿಸಿದ ಕೊನೆಯ ಚಿತ್ರವಾಯಿತು. ಸುರೈಯಾ ಕೊನೆವರೆಗೂ ಅವಿವಾಹಿತರಾಗಿ ಉಳಿದರು.ಆದರೆ ದೇವಾನಂದ್ ಬದುಕಿನಲ್ಲಿ ಮತ್ತಷ್ಟು ನಟಿಯರು ಬಂದು ಹೋದರು. ಬಾಳಸಂಗಾತಿಯಾಗಿ ಕೊನೆವರೆಗೆ ಅವರ ಜೊತೆಗಿದ್ದದ್ದು ಕಲ್ಪನಾ ಕಾರ್ತಿಕ್. ಈಗ ದೇವಾನಂದ್ ಮತ್ತು ಸುರೈಯಾ ಇಬ್ಬರೂ ಬದುಕಿಲ್ಲ. ಆದರೆ ಅವರು ನಟಿಸಿದ ಚಿತ್ರಗಳು ಮತ್ತು ಅವರ ಪ್ರೇಮದ ಕಥೆಗೆ ಸಾವಿಲ್ಲ. ಸರಣಿ ಪ್ರೇಮ!
ಫ್ರಾನ್ಸ್ ಅಧ್ಯಕ್ಷ  ನಿಕೊಲಸ್ ಸರ್ಕೋಜಿ ಪ್ರೇಮ ಪುರಾಣ ಎಲ್ಲರಿಗೂ ತಿಳಿದಿದ್ದೇ. ವರ್ಷದ ಹಿಂದೆ ವಿಶ್ವದೆಲ್ಲೆಡೆ ಹೆಚ್ಚು ಸುದ್ದಿ ಮಾಡಿದ್ದ ಸಂಗತಿಯದು. ಮೇರಿ ಡೊಮೆನಿಕ್ ಕುಲ್ಯೊಲಿ ಸರ್ಕೋಜಿ ಅವರ ಮೊದಲ ಮಡದಿ. 1982ರಲ್ಲಿ ನಡೆದ ಇವರ ವಿವಾಹ 1996ರಲ್ಲಿ ಮುರಿದುಬಿತ್ತು. ಬಳಿಕ ಸರ್ಕೋಜಿ ಪ್ರೇಮ ಪ್ರಸಂಗ ಶುರುವಾಗಿದ್ದು ಫ್ಯಾಶನ್ ಮಾಡೆಲ್ ಆಗಿದ್ದ ಸೆಸಿಲಿಯಾ ಸಿಗನೆರ್ ಜೊತೆ.2007ರಲ್ಲಿ ಫ್ರಾನ್ಸಿನ ಅಧ್ಯಕ್ಷಗಿರಿಯ ಚುನಾವಣೆ ನಡೆದ ಬೆನ್ನಲ್ಲೇ ಇವರಿಬ್ಬರ ವಿವಾಹ ಬಂಧನವೂ ಅಂತ್ಯ ಕಂಡಿತ್ತು. ಈ ವಿಚ್ಛೇದನಕ್ಕೆ ಕಾರಣವಾಗಿದ್ದು ಇಟಲಿ ಮೂಲದ ಗಾಯಕಿ ಕಾರ್ಲಾ ಬ್ರೂನಿ ಜೊತೆಗಿನ ಸರ್ಕೋಜಿ ಪ್ರೇಮ ಸಲ್ಲಾಪ. ಸೆಸಿಲಿಯಾರಿಂದ ಡೈವೋರ್ಸ್ ಸಿಕ್ಕ ಕೂಡಲೇ ಸರ್ಕೋಜಿ ಮತ್ತು ಬ್ರೂನಿ ವಿವಾಹ 2008ರ ಫೆಬ್ರುವರಿಯಲ್ಲಿ ನಡೆಯಿತು.

 

ನಿಜ. ಪ್ರೀತಿಗೆ ವಯಸ್ಸಿನ ಹಂಗಿಲ್ಲ. 57ರ ಹರೆಯದ ಸರ್ಕೋಜಿ ಈಗ ರಾಷ್ಟ್ರದ ಆಡಳಿತದಲ್ಲಿ ಸ್ವಲ್ಪ ಬಿಜಿ. ಆದರೆ ಅವರ ಪ್ರೇಮಪ್ರಕರಣಗಳು ಭವಿಷ್ಯದ ಬಗ್ಗೆ ಕುತೂಹಲ ಕೆರಳಿಸಿರುವುದಂತೂ ಸತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry