ಅಮಲಿಗಾಗಿ ಅವ್ಯಾಹತ ಕೋರೆಕ್ಸ್ ಬಳಕೆ

7

ಅಮಲಿಗಾಗಿ ಅವ್ಯಾಹತ ಕೋರೆಕ್ಸ್ ಬಳಕೆ

Published:
Updated:
ಅಮಲಿಗಾಗಿ ಅವ್ಯಾಹತ ಕೋರೆಕ್ಸ್ ಬಳಕೆ

ಭಾಲ್ಕಿ: ಕಫ, ಕೆಮ್ಮು, ದಮ್ಮಿಗೆ ಬಳಕೆಯಾಗಬೇಕಾದ ಕೋರೆಕ್ಸ್ ಬಾಟಲ್‌ಗಳು ಯುವಕರ ಅಮಲಿಗಾಗಿ (ನಶೆ) ಬಳಕೆಯಾಗುತ್ತಿರುವದರಿಂದ ಕಂಡ ಕಂಡಲ್ಲಿ ನೂರಾರು ಖಾಲಿ ಸೀಸೆಗಳು ಭಾಲ್ಕಿಯಲ್ಲಿ ಕಾಣುತ್ತಿವೆ. ಕೇವಲ ವೈದ್ಯರ ಚೀಟಿ ಇದ್ದರೆ ಮಾತ್ರ ಮೆಡಿಕಲ್ ಸ್ಟೋರ್‌ಗಳಲ್ಲಿ ದೊರೆಯಬೇಕಾದ ಕೋರೆಕ್ಸ್ ಬಾಟಲ್‌ನ ಒಂದು ಸೀಸೆಯ ಬದಲಾಗಿ ಮೂಟೆಗಟ್ಟಲೆ ಸರಬರಾಜಾಗುತ್ತಿವೆ.ದಿನ ಬೆಳಗಾದರೆ ಸಾಕು ಕ್ಯಾರಿ ಬ್ಯಾಗ್‌ಗಳಲ್ಲಿ ನೂರಾರು ಖಾಲಿ ಸೀಸೆಗಳನ್ನು ತುಂಬಿಸಿ ಹೊರ ವಲಯದಲ್ಲಿ, ಚರಂಡಿಯಲ್ಲಿ, ತಿಪ್ಪೆ ಗುಂಡಿಗಳಲ್ಲಿ ಎಸೆದಿರುವುದು ಸಿಗುತ್ತಿವೆ. ಕಸದಲ್ಲಿ ಕಾಟನ್ ಬಾಕ್ಸ್, ಪ್ಲಾಸ್ಟಿಕ್, ಲೋಹದ ಚೂರುಗಳನ್ನು ಆರಿಸುವ ಹುಡುಗರು ಇವುಗಳನ್ನು ಬೀದಿಯಲ್ಲಿ ತಂದು ಅವುಗಳ ಅಲ್ಯುಮಿನಿಯಂ ಮುಚ್ಚಳ  ತೆಗೆಯುತ್ತಾರೆ. ನಡು ರಸ್ತೆಯಲ್ಲೇ ಹರವಿ ಹೋಗುತ್ತಿದ್ದಾರೆ.ಯುವ ಶಕ್ತಿಗೆ ಅಪಾಯಕಾರಿ: ಕೇವಲ ಕೆಮ್ಮಿಗೆ ಔಷಧಿಯಾಗಿ ಬಳಸಬೇಕಾದ ಕೋರೆಕ್ಸ್ ಮದ್ದು ಸಾರಾಯಿ, ಗಾಂಜಾ, ಅಫೀಮಿನಂತೆ ಯುವಕರು ನಶೆಗಾಗಿ ಬಳಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಮಾನಸಿಕ ವೈದ್ಯಾಧಿಕಾರಿ ಡಾ. ವಿವೇಕ್ ಸ್ವಾಮಿ ಅಭಿಪ್ರಾಯಪಡುತ್ತಾರೆ.ಕೋರೆಕ್ಸ್ ಜೊತೆಗೆ ಸ್ಪಾಸ್ಮೋಪ್ರಾವನ್ ಗುಳಿಗೆಯನ್ನು ಸೇವಿಸಿ ನಶೆ ಮಾಡಿಕೊಳ್ಳುತ್ತಿದ್ದಾರೆ. ಈ ಗುಳಿಗೆಯನ್ನು ಎಲ್ಲೆಡೆ ಬ್ಯಾನ್ ಮಾಡಲಾಗಿದೆ. ಆದರೆ ಭಾಲ್ಕಿಯಲ್ಲಿ ಮಾತ್ರ ಸ್ಯಾಚೆಟ್ ಮೇಲಿರುವ ಎಂಆರ್‌ಪಿಗಿಂತಲೂ 3-4 ಪಟ್ಟು ಬೆಲೆಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.ಜೊತೆಗೆ 40 ರೂಪಾಯಿಯ ಕೋರೆಕ್ಸ್ ಬಾಟಲ್‌ಗಳು 100ರೂಪಾಯಿ ವರೆಗೂ ಬಿಕರಿಯಾಗುತ್ತಿವೆ. ವ್ಯಕ್ತಿಯ ದೇಹದ ಮೇಲೆ ಈ ಎರಡೂ ಔಷಧಿಗಳು ಅಪಾಯಕಾರಿ ಎಂದು ಧೃಢಪಟ್ಟಿವೆ.ಮೆದುಳು, ಕಿಡ್ನಿ, ಜಠರ ಮತ್ತು ಹೃದಯದ ಮೇಲೆ ಅತ್ಯಂತ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ. ವ್ಯಕ್ತಿ ತನ್ನ ಮೇಲಿನ ನಿಯಂತ್ರಣ ಕಳೆದುಕೊಂಡು ಬರಬರುತ್ತಾ ನಿಶ್ಯಕ್ತನಾಗುತ್ತಾನೆ ಎಂದು ವೈದ್ಯರು ಹೇಳುತ್ತಾರೆ. ಈ ರೀತಿ ಯುವಶಕ್ತಿಯನ್ನು ಹಾಳು ಮಾಡುತ್ತಿರುವ ಕೋರೆಕ್ಸ್‌ನ ನಿಯಂತ್ರಣಕ್ಕೆ ಜಿಲ್ಲೆಯ ಡ್ರಗ್ಸ್ ಡೈರೆಕ್ಟರ್ ಜನರಲ್ ಮತ್ತು ಡ್ರಗ್ ಇನ್ಸ್ ಪೆಕ್ಟರ್‌ಗಳು ಸೂಕ್ತ ಕ್ರಮ ಜರುಗಿಸಬೇಕಿದೆ. ಪೊಲೀಸ್ ವ್ಯವಸ್ಥೆಯ ಜೊತೆಗೆ ಪಾಲಕರು, ನಾಗರಿಕರೂ ಸಹ ತಮ್ಮ ಜವಾಬ್ದಾರಿ ಪ್ರದರ್ಶಿಸಬೇಕಿದೆ ಎಂಬುದು ಜನರ ಕಳಕಳಿಯಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry