ಸೋಮವಾರ, ಮಾರ್ಚ್ 1, 2021
24 °C

ಅಮಲು ಇಳಿಸಿದ ಮಾನಿನಿಯರು!

ದಿನೇಶ ಪಟವರ್ಧನ್ Updated:

ಅಕ್ಷರ ಗಾತ್ರ : | |

ಅಮಲು ಇಳಿಸಿದ ಮಾನಿನಿಯರು!

ಸರಿ ಸುಮಾರು 12 ವರ್ಷದ ಹಿಂದಿನ ಮಾತು. ರಾತ್ರಿ 7.30ರ ಸಮಯ. ನೂರಾರು ಜನ ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಸಮೀಪದ ಮನೆಯೊಂದರಿಂದ ಕಿಟಾರನೆ ಕಿರುಚಿದ ಶಬ್ದ. ಕ್ಷಣಮಾತ್ರದಲ್ಲಿ ಮಹಿಳೆಯೊಬ್ಬಳು ಬೀದಿಗೆ ಓಡಿ ಬಂದಾಗ ಎಲ್ಲರಿಗೂ ದಿಗ್ಭ್ರಾಂತಿ. ಮೈಗೆ ತಗುಲಿದ್ದ ಬೆಂಕಿಯಿಂದ ಬಹುತೇಕ ಬೆಂದು ಹೋಗಿದ್ದ ಅವಳ ಮೈಯಲ್ಲಿ ತುಂಡು ಬಟ್ಟೆಯೂ ಇರಲಿಲ್ಲ. ಆ ಮಹಿಳೆ ಹೆಚ್ಚು ಹೊತ್ತು ಬದುಕಲಿಲ್ಲ.ನಿತ್ಯ ಕುಡಿದು ಬರುತ್ತಿದ್ದ ಗಂಡ ಆ ದಿನವೂ ಕಂಠಪೂರ್ತಿ ಕುಡಿದು ಬಂದಿದ್ದ. ಮನೆಯಲ್ಲಿ ಮಾಂಸದ ಊಟ ಸಿದ್ಧಪಡಿಸಿಕೊಡುವಂತೆ ಒತ್ತಾಯಿಸಿದ್ದ. ನಿರಾಕರಿಸಿದಾಗ ಮೈಮೇಲೆ ಸೀಮೆಎಣ್ಣೆ ಸುರಿದು ಸಾಯಿಸುವ ಬೆದರಿಕೆಯನ್ನೂ ಹಾಕಿದ್ದ. ದಿನನಿತ್ಯ ಇಂತಹ ಮಾತುಗಳನ್ನು ಕೇಳಿ ಕೇಳಿ ಬೇಸತ್ತಿದ್ದ ಆಕೆ, ಅಂದೂ ಗಂಡನ ಮಾತನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ರೊಚ್ಚಿಗೆದ್ದ ಆತ ನಿಜವಾಗಲೂ ಅವಳ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಯೇ ಬಿಟ್ಟಿದ್ದ. ಜನ ನೋಡ ನೋಡುತ್ತಿದ್ದಂತೆಯೇ ಆ ಮಹಿಳೆ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದಳು. ಆದರೆ ಪೊಲೀಸರ ವರದಿಯಲ್ಲಿ ಮಾತ್ರ ಅದೊಂದು `ಆಕಸ್ಮಿಕ ಘಟನೆ' ಎಂದು ನಮೂದಾಗಿತ್ತು!ಇದನ್ನೆಲ್ಲ ನೋಡಿದ ಮತ್ತೊಬ್ಬ ದಿಟ್ಟ ಮಹಿಳೆ ಅಂದೇ ಸಂಕಲ್ಪ ಮಾಡಿದ್ದಳು. ಸಾರಾಯಿ ಎನ್ನುವ ವಿಷವನ್ನು ಗ್ರಾಮದಿಂದ ದೂರ ಅಟ್ಟಲೇಬೇಕೆಂದು ದೃಢವಾಗಿ ನಿರ್ಧರಿಸಿದ್ದಳು.

* * *

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ದುಗ್ಲಾಪುರ ಗೇಟ್ ದಿನನಿತ್ಯ ಸಾವಿರಾರು ಜನ ಬಂದು ಹೋಗುವ ಸ್ಥಳ. ಅದರಲ್ಲೂ ಮಹಿಳೆಯರು, ವಿದ್ಯಾರ್ಥಿಗಳ ಸಂಖ್ಯೆಯಂತೂ ಅಧಿಕ. ಸುತ್ತಲ ಹಳ್ಳಿಯ ಜನ ಬಸ್ಸಿಗಾಗಿ ಕಾಯುವ ಜಾಗ. ಸಾರಾಯಿ ಮಾರಾಟಕ್ಕೆ ಹೇಳಿ ಮಾಡಿಸಿದ ಸ್ಥಳ. ಇಂತಹ ಕಡೆ ಇದ್ದ ಸಾರಾಯಿ ಅಂಗಡಿಯಿಂದ ಜನರಿಗೆ ಆಗುತ್ತಿದ್ದ ಕಿರಿಕಿರಿ ಅಷ್ಟಿಷ್ಟಲ್ಲ. ಮಹಿಳೆಯರಂತೂ ಕುಡುಕರ ಅವಾಚ್ಯ ಶಬ್ದಗಳನ್ನು ಕೇಳಲಾರದೆ, ವಾಸನೆ ಸಹಿಸಲಾರದೆ ಕಿವಿ, ಮೂಗು ಮುಚ್ಚಿಕೊಂಡು ತಿರುಗಾಡಬೇಕಿತ್ತು. ವಿದ್ಯಾರ್ಥಿಗಳ ಗೋಳೂ ಹೇಳ ತೀರದಾಗಿತ್ತು.ಅಂತಹ ಪ್ರದೇಶದಲ್ಲಿ ನಡೆದ ಬೆಂಕಿ ದುರಂತದಿಂದ ಮನನೊಂದ ಸ್ಥಳೀಯ ಮಹಿಳೆಯರು ಸಂಘಟಿತರಾದರು. ಅಂಗಡಿ ಮಾಲೀಕನಿಗೆ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸ್ಥಳೀಯ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು. ಆದರೂ ಸಿಕ್ಕ ಬೆಲೆ ಸೊನ್ನೆ. ಸಾರಾಯಿ ಮಾಲೀಕನ ಮರ್ಜಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮನ್ನು ಮಾರಿಕೊಂಡಿದ್ದರು.ಹೇಗಾದರೂ ಮಾಡಿ ಇದಕ್ಕೆಲ್ಲ ಇತಿಶ್ರೀ ಹಾಡಲೇಬೇಕೆಂದು ನಿರ್ಧರಿಸಿದ ಮಹಿಳೆಯರು, ಸ್ವಸಹಾಯ ಸಂಘದ ಮೂಲಕ ಅದನ್ನು ಕಾರ್ಯರೂಪಕ್ಕೆ ತರುವ ತೀರ್ಮಾನಕ್ಕೆ ಬಂದರು. ಇಂತಹ ಸಮಸ್ಯೆಗಳ ಮೂಲ ಬೇರನ್ನೇ ಕತ್ತರಿಸುವ ಛಲ ತೊಟ್ಟರು. ಸಾರಾಯಿ ಚಟಕ್ಕೆ ಬಲಿಯಾಗಿದ್ದ ಗಂಡನಿಂದ ಮಹಿಳೆಗೆ ಒದಗಿದ ದುರ್ಗತಿ ಅವರೆಲ್ಲರಲ್ಲಿ ಇನ್ನಷ್ಟು ರೋಷವನ್ನು ಉಕ್ಕಿಸಿತ್ತು. ಕೊನೆಗೂ ಮಹಿಳೆಯರು ಬೀದಿಗೆ ಇಳಿದರು. ಒಂದೆಡೆ ಹೀಗೆ ಸಾರಾಯಿ ವಿರುದ್ಧದ ಹೋರಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಪುರುಷರು ಬೀಡಿ ಸೇದುತ್ತಾ ಮಹಿಳೆಯರನ್ನು ಹಾಸ್ಯ, ಕೀಟಲೆ, ಕುಚೋದ್ಯ ಮಾಡತೊಡಗಿದ್ದರು. ಬಾಯಿಗೆ ಬಂದಂತೆ ಜನ ಆಡುತ್ತಿದ್ದ ಮಾತುಗಳಿಂದ ಚಳವಳಿಗೆ ನಿಂತವರು ಅನುಭವಿಸಿದ ನೋವು, ಯಾತನೆ, ಅವಮಾನ ಸಾಕಷ್ಟು. ಅಷ್ಟಾದರೂ ಅವರ್ಯಾರೂ ಎದೆಗುಂದಲಿಲ್ಲ.ಅಂದು 2001ರ ಏಪ್ರಿಲ್ ತಿಂಗಳು. ಗ್ರಾಮ ದೇವತೆ ಆದಿ ಪರಾಶಕ್ತಿ ಜಾತ್ರೆ. ಜನರೆಲ್ಲ ಸಂಭ್ರಮದಲ್ಲಿ ಮುಳುಗಿದ್ದರು. ಇತ್ತ ಮಳೆಯೂ ಸುರಿಯುತ್ತಿತ್ತು. ಬಿರುಸಿನ ವ್ಯಾಪಾರದ ಆಸೆಗೆ ಬಿದ್ದ ಸಾರಾಯಿ ಮಾಲೀಕ ಜೀಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲೇ ಸಾರಾಯಿಯನ್ನು ತಂದಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ರೊಚ್ಚಿಗೆದ್ದ ಮಹಿಳೆಯರು ದೊಣ್ಣೆ, ಬಡಿಗೆಗಳಿಂದ ಜೀಪನ್ನು ಜಖಂಗೊಳಿಸಿದ್ದೇ ಅಲ್ಲದೆ, ಅದಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಹಟಾತ್ ಸಿಡಿದ ಮಹಿಳೆಯರ ಸಿಟ್ಟು- ಉಗ್ರ ರೂಪ ಪೊಲೀಸರನ್ನು ಕಕ್ಕಾಬಿಕ್ಕಿಯಾಗಿಸಿತು. ಮುಂದೆ ಕೇಸ್, ಬಂಧನ, ಕೋರ್ಟ್‌ಗೆ ಅಲೆತ...ಇದೆಲ್ಲ ದೊಡ್ಡ ಸುದ್ದಿ ಆಯಿತು. 40ಕ್ಕೂ ಹೆಚ್ಚು ಮಹಿಳೆಯರ ವಿರುದ್ಧ ಪೊಲೀಸರು ಎಫ್.ಐ.ಆರ್. ಹಾಕಿದ್ದರು. ಕೆಲವರು ಜೈಲಿಗೆ ಹೋಗಿ ಬಂದರು. ಆದರೂ ಛಲ ಬಿಡಲಿಲ್ಲ. ಹೋರಾಟ ನಿರಂತರ ಮುಂದುವರಿಯಿತು. ಕೊನೆಗೂ ಎಚ್ಚೆತ್ತ ಆಡಳಿತ ಸಾರಾಯಿ ಅಂಗಡಿಯನ್ನು ಎತ್ತಂಗಡಿ ಮಾಡಿಸಿತು. ಮಾನಿನಿಯರ ಹೋರಾಟಕ್ಕೆ ಒಂದು ಹಂತದ ಗೆಲುವು ಸಿಕ್ಕಿತು.ಈ ಮಧ್ಯೆ, ವ್ಯಾಪಾರ ಕೇಂದ್ರವಾದ ಗೇಟ್‌ನಲ್ಲಿ ಸಾರಾಯಿ ಮಾರಾಟಕ್ಕೆ ಅನುಮತಿ ನೀಡುವಂತೆ ಹತ್ತು ಹಲವು ಬಗೆಯ ಪ್ರಭಾವವನ್ನು ಜನಪ್ರತಿನಿಧಿಗಳು ಬಳಸಿದರು. ಸ್ವಸಹಾಯ ಸಂಘಕ್ಕೆ ಅಪಾರ ಮೊತ್ತದ ಹಣ ನೀಡುವ ಆಮಿಷವನ್ನೂ ಒಡ್ಡಿದರು. ಆದರೆ ಇದ್ಯಾವುದಕ್ಕೂ ಬಗ್ಗದ ಸ್ತ್ರೀ ಶಕ್ತಿ ತನ್ನ ಸಂಘಟನಾತ್ಮಕ ಚಟುವಟಿಕೆಗೆ ಕನ್ನಡಿ ಹಿಡಿಯಿತು.ಪೊಲೀಸ್ ಕೇಸ್ ಹಾಕಿಸಿಕೊಂಡಿದ್ದ ಅನೇಕ ಮಹಿಳೆಯರು ಕ್ರಮೇಣ ಮದುವೆ ಆಗಿ ದೂರದ ಊರುಗಳಿಗೆ ತೆರಳಿದರು. ಕೆಲವರಿಗೆ ಮಕ್ಕಳೂ ಆದವು. ಹೀಗಿದ್ದರೂ ಪ್ರತಿ ಬಾರಿ ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರು. ನಾಲ್ಕು ವರ್ಷ ಅವರೆಲ್ಲರ ಅಲೆದಾಟ, ಅವರು ಪಟ್ಟಪಾಡು ಹೇಳಲಸಾಧ್ಯ. ಪ್ರತಿ ಬಾರಿ ನ್ಯಾಯಾಲಯಕ್ಕೆ ಹೋಗುವಾಗಲೂ ಪುರುಷರ ಲಘು ಮಾತು, ಅಪಹಾಸ್ಯ ಇದ್ದೇ ಇರುತ್ತಿತ್ತು.ಇದಕ್ಕೆಲ್ಲ ಸೊಪ್ಪು ಹಾಕದೆ, ಮನೆಯಿಂದ ಚಿಕ್ಕಾಸು ನೆರವನ್ನೂ ಕೇಳದೆ, ಸ್ವಸಹಾಯ ಸಂಘದಲ್ಲಿ ಕೂಡಿ ಹಾಕಿದ್ದ ಹಣವನ್ನು ಸಾಲದ ರೂಪದಲ್ಲಿ ಪಡೆದು ಅವರೆಲ್ಲ ಕೋರ್ಟಿನ ಖರ್ಚನ್ನು ಭರಿಸಿದ್ದು ಮತ್ತೊಂದು ಸಾಧನೆ. ಈ ಕಾರ್ಯಕ್ಕೆ ಅವರಿಗೆ ಅಂದು ಆದ ಖರ್ಚು 40 ಸಾವಿರಕ್ಕೂ ಅಧಿಕ. ದುರಂತ ಎಂದರೆ, ನಮ್ಮ ಜನಪ್ರತಿನಿಧಿಗಳಿಗೆ ಇದೊಂದು ಸಾಮಾಜಿಕ ಆಂದೋಲನ ಎನಿಸಲೇ ಇಲ್ಲ.ಮಹಿಳೆಯರ ಮೇಲೆ ಹಾಕಿದ್ದ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯುವ ಕನಿಷ್ಠ ಯತ್ನವನ್ನೂ ಸರ್ಕಾರ ಮಾಡಲಿಲ್ಲ. `ಸಾರಾಯಿ ಜೀಪ್‌ಗೆ ಬೆಂಕಿ ಹಚ್ಚಿದ್ದರಿಂದ ಆದ ನಷ್ಟವನ್ನು ಭರಿಸಿದರೆ ನೋಡಬಹುದು' ಎನ್ನುವ ಉತ್ತರ ಅಧಿಕಾರಿಗಳಿಂದ ಸಿಕ್ಕಿತು. ಆದರೆ ಇದಕ್ಕೆ ಬಗ್ಗದೆ ನ್ಯಾಯಾಲಯದಲ್ಲೇ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವ ದಿಟ್ಟತನವನ್ನು ಮಹಿಳೆಯರು ಪ್ರದರ್ಶಿಸಿದ್ದರು!ನಾಲ್ಕು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಎಲ್ಲರೂ ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿತು. ಪೊಲೀಸ್ ಠಾಣೆ, ಕೇಸ್ ಯಾವುದನ್ನೂ ಲೆಕ್ಕಿಸದೆ ನಡೆಸಿದ ಅವಿರತ ಹೋರಾಟದ ಫಲವಾಗಿ ದುಗ್ಲಾಪುರ ಗೇಟ್ ಬಳಿ ಸಾರಾಯಿ ಮಾರಾಟಕ್ಕೆ ಶಾಶ್ವತ ತೆರೆ ಬಿತ್ತು. ಮಹಿಳೆಯರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿತ್ತು. ಇಡೀ ಹೋರಾಟದ ಹಿಂದೆ ಅನೇಕ ಮಹಿಳೆಯರ ಶ್ರಮ, ದಿಟ್ಟ ಹೋರಾಟ ಅಡಗಿದೆ. ಅದರಲ್ಲಿ ಪ್ರಮುಖವಾಗಿ ಗುರುತಿಸಬೇಕಾಗಿರುವುದು ದುಗ್ಲಾಪುರ ವಾಸಿ ರುಕ್ಮಿಣಮ್ಮ ಅವರನ್ನು. ಓದಿದ್ದು ಎರಡನೇ ತರಗತಿ. ಪರಿಶಿಷ್ಟ ಜಾತಿಯ ಮಹಿಳೆ. ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸುವ ತುಡಿತ.ಇವರ ಆಶಯಕ್ಕೆ ನೆರವಾದುದು ವಿಕಸನ ಸ್ವಯಂ ಸೇವಾ ಸಂಸ್ಥೆ. 20 ಮಂದಿಯಂತೆ ಎರಡು ತಂಡಗಳಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿದರು. ತಮ್ಮ ಹಕ್ಕು, ಸಮಾಜದಲ್ಲಿ ಮಹಿಳೆ ನಿರ್ವಹಿಸಬೇಕಾದ ಪಾತ್ರ, ಆರ್ಥಿಕ ಸಬಲೀಕರಣ ಹೀಗೆ ಹತ್ತು ಹಲವು ವಿಷಯಗಳ ವಿಚಾರ- ವಿಮರ್ಶೆ ಅಲ್ಲಿ ನಡೆಯಿತು. ಸಂಘಟನೆಗೆ ಒಂದು ಸ್ವರೂಪ ಬರುತ್ತಿದ್ದಂತೆಯೇ ಜನಪರ ಹೋರಾಟಗಳನ್ನು ಕೈಗೊಳ್ಳುವ ಚಿಂತನೆಯೂ ಚಿಗುರಿತು.ಸಿಕ್ಕಿತು ಜನಮನ್ನಣೆ

ಹೀಗೆ ಅಂದು ಬೀದಿಗೆ ಇಳಿದು ಹೋರಾಟದ ಮುಂಚೂಣಿ ವಹಿಸಿದ್ದ ರುಕ್ಮಿಣಮ್ಮ ಈಗ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ, ಪರಿಶಿಷ್ಟ ಜಾತಿ ಮೀಸಲಾತಿ ಅಡಿ ಅವರೀಗ ಸಿದ್ಧರಹಳ್ಳಿ ಪಂಚಾಯಿತಿ ಅಧ್ಯಕ್ಷೆ ಕೂಡ. ಹಿಂದಿನಿಂದಲೂ ತಾವು ಮಾಡಿಕೊಂಡು ಬಂದ ಸಂಘಟನೆ ಹಾಗೂ ಜನಜಾಗೃತಿಗೆ ಸಿಕ್ಕ ಮನ್ನಣೆ ಎಂದೇ ಅವರು ಇದನ್ನು ಪರಿಗಣಿಸಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿದು ಇನ್ನೂ ಐದಾರು ತಿಂಗಳಾಗಿದೆ. ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ಸಾಹ ಇಮ್ಮಡಿಗೊಂಡಿದೆ.ಮಹಿಳೆಯರನ್ನು ಸಂಘಟಿಸಿ ಅವರಲ್ಲಿ ಜಾಗೃತಿ ಮೂಡಿಸುವ ಅವರ ಕಾಯಕ ಮುಂದುವರಿದಿದೆ. ಸ್ವಸಹಾಯ ಸಂಘದಲ್ಲಿ ಪ್ರಸ್ತುತ 1.30 ಲಕ್ಷ ರೂಪಾಯಿ ಉಳಿತಾಯವಾಗಿದೆ.  ಸಿದ್ಧರಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಹಳೆ ದುಗ್ಲಾಪುರ, ಸ್ಟೇಷನ್ ದುಗ್ಲಾಪುರ, ಸೀತಾಪುರ ಕಾವಲು, ಯಲಗೆರೆ, ಸಿಡುಕನಹಳ್ಳಿ, ರಾಂಪುರ, ಗೋವಿಂದಪುರ ಹೀಗೆ 8 ಹಳ್ಳಿಗಳು ಒಳಪಡುತ್ತವೆ. ಪ್ರತಿ ಊರಿನಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಶಾಲಾ ಮಕ್ಕಳೂ ಮದ್ಯದ ಅಮಲಿಗೆ ಮಾರು ಹೋಗಿದ್ದರು. ಇದರ ವಿರುದ್ಧ ಜನರಲ್ಲಿ ಜಾಗೃತಿ, ತಿಳಿವಳಿಕೆ ಮೂಡಿಸಿ ಎಚ್ಚರಿಕೆ ನೀಡಲು ರುಕ್ಮಿಣಮ್ಮ ಪ್ರಯತ್ನಿಸಿದರು.ಬಾಯಿ ಮಾತಿಗೆ ಮನ್ನಣೆ ಸಿಗದಿದ್ದಾಗ, ಪೊಲೀಸರ ನೆರವಿನೊಂದಿಗೆ ಕೊನೆಗೂ ಅವರ ಮನವೊಲಿಸಿ ಎಂಟೂ ಗ್ರಾಮಗಳಲ್ಲಿ ಈಗ ಮದ್ಯ ಮಾರಾಟಕ್ಕೆ ಬ್ರೇಕ್ ಬೀಳುವಂತೆ ಮಾಡಿದ್ದಾರೆ. ಈ ಸಾಧನೆಯ ಹಿಂದೆ ಅನೇಕ ಪಂಚಾಯಿತಿ ಸದಸ್ಯರು, ಸ್ವಸಹಾಯ ಸಂಘದ ಕಾರ್ಯಕರ್ತರು ಸಹ ಬೆನ್ನೆಲುಬಾಗಿ ನಿಂತಿದ್ದಾರೆ.`ಜನ ಪ್ರೀತಿ, ವಿಶ್ವಾಸ ಇಟ್ಟು ನನ್ನನ್ನು ಪಂಚಾಯಿತಿಗೆ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡಬೇಕು' ಎನ್ನುವ ರುಕ್ಮಿಣಮ್ಮ, `ಶಾಸಕರಿಗೆ ಮಾತ್ರ ಅನುದಾನ ನೀಡಿದರೆ ಸಾಲದು; ಪಂಚಾಯಿತಿಗಳಿಗೂ ಹೆಚ್ಚಿನ ಅನುದಾನ ಸಿಗಬೇಕು' ಎಂದು ಸರ್ಕಾರವನ್ನು ಒತ್ತಾಯಿಸುತ್ತಾರೆ.

ಸಕ್ರಿಯ ಬೆಂಬಲ: ರುಕ್ಮಿಣಮ್ಮ ಅವರ ಇಂತಹ ಎಲ್ಲ ಕನಸುಗಳೂ ಸಾಕಾರಗೊಳ್ಳುವಲ್ಲಿ ಹಲವರ ಪ್ರತ್ಯಕ್ಷ- ಪರೋಕ್ಷ ಪಾತ್ರವಿದೆ. ಅವರಲ್ಲಿ ಕಳೆದ 15 ವರ್ಷಗಳಿಂದ ಸತತವಾಗಿ ಪಂಚಾಯಿತಿಯನ್ನು ಪ್ರತಿನಿಧಿಸುತ್ತಿರುವ ನೇತ್ರಮ್ಮ ಅವರನ್ನು ಉಲ್ಲೇಖಿಸಲೇಬೇಕು. ಎಲ್ಲ ಹೋರಾಟಗಳಿಗೆ ಅವರು ಬೆಂಬಲವಾಗಿ ನಿಂತು ಸಕ್ರಿಯ ಪಾತ್ರ ವಹಿಸಿದವರು.ಪುರುಷ ಪ್ರಧಾನ ಸಮಾಜದ ತಂತ್ರಗಾರಿಕೆಗಳ ವಿರುದ್ಧ ನೇತ್ರಮ್ಮ ಸಹ ಈಸಿ ಜಯಿಸಿದವರು. ವ್ಯವಸ್ಥೆಯ ಲೋಪಗಳನ್ನು ತಿದ್ದಲು ಹೊರಟಾಗ ಬಂದ ಮಾತುಗಳು ನಿದ್ದೆಗೆಡಿಸಿದ್ದೂ ಇದೆ. ಬೇಸರವಾಗಿ ಊಟ ಮಾಡದೇ ಇದ್ದ ದಿನಗಳೂ ಇವೆ. ಮದ್ಯ ಮಾರಾಟ ನಿಲ್ಲಿಸುವ ಹೋರಾಟಕ್ಕೆ ಕೈ ಹಾಕಿದಾಗ ಪಟ್ಟ ಯಾತನೆ, ಅನುಭವಿಸಿದ ವೇದನೆ ವಿವರಿಸುವಾಗ ಅವರ ಕಣ್ಣುಗಳು ತೇವಗೊಳ್ಳುತ್ತವೆ.ಮೂರನೇ ತರಗತಿ ಓದಿರುವ ಪರಿಶಿಷ್ಟ ಪಂಗಡದ ಇವರಿಗೂ ಬೆಂಗಾವಲಾಗಿ ನಿಂತ ಸಂಸ್ಥೆ ವಿಕಸನ. ಚುನಾವಣೆ ಜಾಗೃತಿ, ರೇಡಿಯೊ ಕಾರ್ಯಕ್ರಮ, ಪಂಚಾಯತ್‌ರಾಜ್ ವ್ಯವಸ್ಥೆಯ ತರಬೇತಿ, ಶಿಬಿರಗಳಲ್ಲಿ ಪಾಲ್ಗೊಳ್ಳುವುದು, ಸಾರಾಯಿ, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿಗಾಗಿ ಹೋರಾಟ, ಧರ್ಮಸ್ಥಳ ಗ್ರಾಮೀಣಾಬಿವೃದ್ಧಿ ಚಟುವಟಿಕೆಗಳಲ್ಲಿ ಸೇರ್ಪಡೆ... ಹೀಗೆ ಇವರ ಸಾಧನೆಗಳ ಪಟ್ಟಿ ಬೆಳೆಯುತ್ತದೆ.ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದ ದಿನಗಳಲ್ಲಿ ನೇತ್ರಮ್ಮ ಜಿಲ್ಲಾ ಪ್ರತಿನಿಧಿಯಾಗಿ ದೆಹಲಿಗೆ ತೆರಳಿದ್ದರು. ಪ್ರತಿ ಪ್ರತಿನಿಧಿಗೂ ತಮ್ಮ ಜಿಲ್ಲೆಯ ಸ್ಥಿತಿಗತಿ ಹೇಳಿಕೊಳ್ಳಲು ಅವಕಾಶ ಇರುತ್ತದೆ. ಅದೇ ರೀತಿ ಇವರಿಗೂ ಅಂತಹ ಅವಕಾಶ ಬಂತು. ಇಂಗ್ಲಿಷ್, ಹಿಂದಿ ಎರಡೂ ಬಾರದು. ಆದರೂ ಧೈರ್ಯಗೆಡದೆ ಕನ್ನಡದಲ್ಲೇ ಮಾತು ಆರಂಭಿಸಿದಾಗ ಕೈಕಾಲು ನಡುಗಿ ಬಾಯಿ ಒಣಗತೊಡಗಿತ್ತು. ರಾಷ್ಟ್ರಪತಿ ಅವರ ಜೊತೆಗಿದ್ದ ಕನ್ನಡ ಬಲ್ಲ ಅಧಿಕಾರಿಯೊಬ್ಬರು ಮಾತನಾಡುವಂತೆ ಹುರಿದುಂಬಿಸಿದರು. ಆಗ ಆದ ಸಂತೋಷಕ್ಕೆ ಪಾರವೇ ಇಲ್ಲ ಎನ್ನುವಾಗ ನೇತ್ರಮ್ಮನವರ ಮುಖ ಅರಳುತ್ತದೆ.ಮಹಿಳೆ ಕೇವಲ ಮನೆಯನ್ನಷ್ಟೇ ನಿರ್ವಹಿಸುವುದಿಲ್ಲ; ಸಮಾಜವನ್ನು ತಿದ್ದುವಲ್ಲಿಯೂ ಅಹರ್ನಿಶಿ ದುಡಿಯಬಲ್ಲಳು ಎನ್ನುವುದಕ್ಕೆ ಈ ಇಬ್ಬರೂ ಮಹಿಳೆಯರು ಜೀವಂತ ಸಾಕ್ಷಿಯಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.