ಗುರುವಾರ , ಮೇ 19, 2022
21 °C

ಅಮಾನತು ಆದೇಶಕ್ಕೆ ಬೇಸತ್ತ ಶಿಕ್ಷಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಸಿದ್ದ ಶಿಕ್ಷಕನನ್ನು ಅಮಾನತುಗೊಳಿಸಿ ಐದು ತಿಂಗಳು ಕಳೆದರೂ ಸೇವೆಗೆ ಮರು ಸೇರ್ಪಡೆ ಮಾಡಿಕೊಳ್ಳಲು ಗುಲ್ಬರ್ಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಅಲಕ್ಷ್ಯ ವಹಿಸಿದ ಘಟನೆ ನಡೆದಿದೆ. ನಗರದ ಸ್ಟೇಷನ್ ಬಜಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಉರ್ದು)ಯಲ್ಲಿ ಸಹ ಶಿಕ್ಷಕರಾಗಿದ್ದ  ಶಕೀಲ್ ಅಹ್ಮದ ಅವರನ್ನು ಸೆಪ್ಟೆಂಬರ್ 28, 2010ರಲ್ಲೇ ಡಿಡಿಪಿಐ ಬಿ.ಎಸ್. ಪರಮೇಶ ಅಮಾನತುಗೊಳಿಸಿದ್ದರು.ಇಲಾಖಾ ತನಿಖೆ ಪೂರ್ಣಗೊಂಡ ಬಳಿಕ ಸೇವೆಗೆ ಮರು ಸೇರ್ಪಡೆ ಆದೇಶ ಬರಬಹುದು ಎಂದು ಕಾದು ಕುಳಿತ ಶಕೀಲ ಅವರಿಗೆ ನಿರಾಸೆಯೇ ಗತಿಯಾಯಿತು. ಈ ಮಧ್ಯೆ, ಏಳು ಮಕ್ಕಳ ತಂದೆಯಾದ ಶಕೀಲ ಅವರು ಕುಟುಂಬ ನಿರ್ವಹಣೆಗೆ ಪರದಾಡುವ ಪ್ರಸಂಗವೂ ಎದುರಾಗಿದೆ. ಇಲಾಖೆಯ ನಿರ್ಲಕ್ಷ್ಯಕ್ಕೆ ಬೇಸತ್ತು ‘ನನಗೆ ನ್ಯಾಯ ಕೊಡಿ’ ಎಂದು ಪಾಠ ಮಾಡಿದ ಶಾಲೆಯ ಎದುರೇ ಏಕಾಂಗಿ ಹೋರಾಟವನ್ನು ಆರಂಭಿಸಿದ್ದಾರೆ.‘ಕ್ರಿಮಿನಲ್ ಮೊಕದ್ದಮೆಗಾಗಿ ಅಮಾನತುಗೊಂಡಿದ್ದ ಶಿಕ್ಷಕರು ಎರಡು-ಮೂರು ತಿಂಗಳಲ್ಲಿ ವಾಪಸ್ ಸೇವೆಗೆ ಸೇರ್ಪಡೆಗೊಂಡಿರುವ ಉದಾಹರಣೆಗಳು ಬೇಕಾದಷ್ಟಿವೆ. ನಾನು ಏನು ತಪ್ಪು ಮಾಡದಿದ್ದರೂ ನನ್ನ ಮೇಲಿನ ಆರೋಪಗಳ ವಿಚಾರಣೆಗಾಗಿ ಶಾಲೆಯಲ್ಲಿನ ಇನ್ನುಳಿದ ಶಿಕ್ಷಕರನ್ನಾಗಲಿ, ಶಾಲಾ ಮಕ್ಕಳನ್ನಾಗಲಿ ಯಾರೂ ಪ್ರಶ್ನಿಸಿಲ್ಲ. ಕುಟುಂಬದ ನಿರ್ವಹಣೆ ಸಾಧ್ಯವಾಗದೇ ಬೀದಿಗೆ ಬಿದ್ದಿದ್ದೇನೆ’ ಎನ್ನುವುದು ಶಕೀಲ್ ಅಹ್ಮದ್ ಅವರ ನೋವಿನ ನುಡಿ.ಅಮಾನತಿಗೆ ಕಾರಣ:

ಸಹೋದ್ಯೋಗಿ ಶಿಕ್ಷಕಿಯೊಬ್ಬರನ್ನು ಸಿಬ್ಬಂದಿಯ ಕೋಣೆಯಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದ ಆರೋಪದ ಹಿನ್ನೆಲೆಯಲ್ಲಿ ಶಕೀಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಇದನ್ನು ಪರಿಗಣಿಸಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಸರ್ಕಾರಿ ನೌಕರನಾಗಿದ್ದು ಕಾನೂನು ವಿರುದ್ಧ ನಡೆದುಕೊಂಡಿರುವುದು ಕರ್ತವ್ಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಆರೋಪದ ಮೇಲೆ ಅಮಾನತುಗೊಳಿಸಿದ್ದರು.‘ನನ್ನ ಬಲಗೈ ಎರಡು ಬೆರಳು ಕತ್ತರಿಸಿ ಹೋಗಿದ್ದು, ನಾನು ಅಂಗವಿಕಲ ಕೋಟಾದಲ್ಲಿ ವೃತ್ತಿಗೆ ಸೇರ್ಪಡೆಯಾಗಿದ್ದೇನೆ. ಪರಸ್ಪರ (ಮ್ಯುಚ್ಯುವಲ್) ಆಧಾರದ ಮೇಲೆ ಬೇರೆ ಕಡೆಗೆ ವರ್ಗಾವಣೆ ಪಡೆದುಕೊ ಎಂದು ನನ್ನ ಮೇಲೆ ಆರೋಪ ಮಾಡಿರುವ ಶಿಕ್ಷಕಿಯ ಸಹೋದರರು ಪೀಡಿಸುತ್ತಿದ್ದರು. ಇದನ್ನು ತಿರಸ್ಕರಿಸಿದ್ದಕ್ಕಾಗಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಪೊಲೀಸ್ ಠಾಣೆಗೆ ನೂಕಿದರು. ನನ್ನ ತಂದೆಯನ್ನು ಅಪಹರಿಸಿಕೊಂಡು ಹೋಗಿದ್ದರು. ಈ ಕುರಿತು ಠಾಣೆಗೆ ದೂರು ನೀಡಿದ್ದೇನೆ.ದೂರು ವಾಪಸ್ ಪಡೆದುಕೊ ನಿನ್ನ ಜತೆ ಜಗಳ ಮಾಡುವುದಿಲ್ಲ ಎಂದು ಈಗ ಶಿಕ್ಷಕಿಯ ಸಹೋದರರು ಮನವಿ ಮಾಡುತ್ತಿದ್ದಾರೆ’ ಎಂದು ಶಕೀಲ್ ಗೋಳಿಟ್ಟರು. ಅಮಾನತು ಆದೇಶವನ್ನು ಇಷ್ಟೊಂದು ತಿಂಗಳು ಮುಂದುವರಿಸಿರುವ ಕುರಿತು ಡಿಡಿಪಿಐ ಬಿ.ಎಸ್. ಪರಮೇಶ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಆ ಶಿಕ್ಷಕನ ವಿರುದ್ಧ ಕ್ರಿಮಿನಲ್ ಕೇಸ್ ಇದೆ. ಪೊಲೀಸ್ ಠಾಣೆಯಲ್ಲಿ ತನಿಖೆ ಇನ್ನು ಮುಂದುವರಿದಿದೆ ಎಂದು ತಿಳಿಸಲಾಗಿದೆ. ಆದ್ದರಿಂದ ಅಮಾನತು ಅವಧಿ ಆರು ತಿಂಗಳು ಮುಗಿಯಲಿ. ಆನಂತರ ಈ ಬಗ್ಗೆ ನಾನು ಪರಿಶೀಲಿಸುತ್ತೇನೆ’ ಎಂದರು.‘ಶಾಲಾ ಸಿಬ್ಬಂದಿಯ ಕೋಣೆಯಲ್ಲಿ ಮಹಿಳಾ ಶಿಕ್ಷಕಿಯೊಂದಿಗೆ ನಾನು ಅಸಭ್ಯವಾಗಿ ವರ್ತಿಸಿದ್ದರೇ, ಇನ್ನುಳಿದ ಶಿಕ್ಷಕರನ್ನು ಈ ಬಗ್ಗೆ ವಿಚಾರಿಸಲಿ. ಶಾಲಾ ಮಕ್ಕಳಿಂದ ಅಭಿಪ್ರಾಯ ಪಡೆದುಕೊಳ್ಳಲಿ. ಆರೋಪ ಮಾಡಿದ ಶಿಕ್ಷಕಿಯ ಸಹೋದರರೇ ಶಾಲಾ ಶಿಕ್ಷಕರ ಎದುರು ನನಗೆ ಅನೇಕ ಬಾರಿ ಧಮಕಿ ಹಾಕಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ಅವರ ಸಹೋದರಿಯರಿಗೆ ಪರಸ್ಪರ ವರ್ಗಾವಣೆಗೆ ಒಪ್ಪಿಕೊಂಡಿಲ್ಲ ಎಂದುಕೊಂಡು ಇದೆಲ್ಲ ಕಥೆ ಕಟ್ಟಿದ್ದಾರೆ. ವಾಸ್ತವ ಸ್ಥಿತಿಯ ಬಗ್ಗೆ ವಿಚಾರಣೆ ನಡೆಸಲು ಇಲಾಖೆಯ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಬರುತ್ತಿಲ್ಲ. ನೌಕರಿ ಇಲ್ಲದೇ ನಾನು ಬಳಲುತ್ತಿದ್ದೇನೆ’ ಎನ್ನುವುದು ಶಕೀಲ್ ಮಾತುಗಳು.ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಮಹಿಳಾ ಶಿಕ್ಷಕಿ ಮೇಲೆ ಕೈ ಮಾಡಿದ್ದಾರೆ ಎಂದು ಆರೋಪಿಸಲಾದ ದಿನ (ಸೆಪ್ಟೆಂಬರ್ 18, 2010)ದಂದು ರಾಜ್ಯ ಸರ್ಕಾರ ಪುಟ್ಟರಾಜ ಗವಾಯಿಗಳ ಲಿಂಗೈಕ್ಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿತ್ತು. ಅಲ್ಲದೆ, 18ರ ಸೆಪ್ಟೆಂಬರ್, 2010ರಂದು ಇಂಗ್ಲಿಷ್ ಭಾಷಾ ತರಬೇತಿಗೆ ತೆರಳುವಂತೆ ಶಾಲಾ ಮುಖ್ಯಸ್ಥರು ಪತ್ರವೊಂದನ್ನು ನೀಡಿದ್ದಾರೆ.ಶಿಕ್ಷಕನ ಮೇಲಿನ ಆರೋಪಗಳ ವಿಚಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೀನಾಮೇಷ ಎಣಿಸುತ್ತಿರುವುದು ಮಾತ್ರ ಸೋಜಿಗ. ಮೂರು ತಿಂಗಳಲ್ಲಿ ಅಮಾನತು ಅದೇಶಗಳು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಇಲಾಖೆಗಳು ಕ್ರಮ ಕೈಗೊಳ್ಳುವುದು ಸಾಮಾನ್ಯವಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಂಡು ಬರುತ್ತದೆ. ಶಿಕ್ಷಕ ಬೀದಿಗೆ ಬಿದ್ದು ಮಾಧ್ಯಮಗಳಲ್ಲಿ ರಂಪವಾದ ಬಳಿಕ, ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರ ಕಚೇರಿ ಅಧಿಕಾರಿಗಳು, ಶಿಕ್ಷಕ ಶಕೀಲ್ ವಿರುದ್ಧದ ಆರೋಪಗಳ ಕಡತ ಕೈಗೆತ್ತಿಕೊಳ್ಳಲು ಮುಂದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.