ಗುರುವಾರ , ಮೇ 19, 2022
24 °C

ಅಮಾನತ್ ಸಹಕಾರ ಬ್ಯಾಂಕ್‌ ಹಣ ದುರುಪಯೋಗ: ರೆಹಮಾನ್ ಖಾನ್ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮಾನತ್ ಸಹಕಾರ ಬ್ಯಾಂಕ್‌ನಲ್ಲಿ ರೂ 102 ಕೋಟಿ ದುರುಪಯೋಗ ಆಗಿದ್ದು, ಈ ಸಂಬಂಧ ರಾಜ್ಯಸಭೆ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಸೇರಿದಂತೆ 11 ಮಂದಿ ವಿರುದ್ಧ ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

1998ರಿಂದ 2002ರವರೆಗೆ ಬ್ಯಾಂಕಿನಲ್ಲಿ ಅಕ್ರಮ ನಡೆದಿದ್ದು, ಆ ಸಂದರ್ಭದಲ್ಲಿ ರೆಹಮಾನ್ ಖಾನ್ ಅವರೇ ಅಧ್ಯಕ್ಷರಾಗಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಅಂದಿನ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿ ಮೇಲೆ ಸಹಕಾರಿ ಕಾಯ್ದೆ ಪ್ರಕಾರ ಬುಧವಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಅಕ್ರಮಗಳ ಬಗ್ಗೆ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ರೆಹಮಾನ್ ಖಾನ್ ವಿರುದ್ಧದ ಪ್ರಕರಣ ಕುರಿತು ಕೇಂದ್ರ ಸರ್ಕಾರ ಮತ್ತು ರಾಜ್ಯಸಭೆಯ ಸಚಿವಾಲಯಕ್ಕೂ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಬ್ಯಾಂಕಿನ ಎನ್.ಆರ್. ಶಾಖೆಯಲ್ಲಿ 48 ಬೇನಾಮಿ ಸಾಲಗಳ ಮೊತ್ತ ರೂ 57.66  ಕೋಟಿ. ಇದನ್ನು ವಾಪಸ್ ಮಾಡಲು ಹೊಸ ಖಾತೆಗಳನ್ನು ತೆರೆದು ಹಣ ದುರುಪಯೋಗ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಭದ್ರತೆ ಇಲ್ಲದೆ 62.72 ಕೋಟಿ ರೂಪಾಯಿ ದೀರ್ಘಾವಧಿ ಸಾಲ ನೀಡಿರುವುದು ಸೇರಿದಂತೆ ಇತರ ಅಕ್ರಮಗಳನ್ನು ಎಸಗಲಾಗಿದೆ ಎಂದರು.

ರೆಹಮಾನ್ ಖಾನ್ ಅಲ್ಲದೆ, ಬ್ಯಾಂಕಿನ ಮತ್ತೊಬ್ಬ ಮಾಜಿ ಅಧ್ಯಕ್ಷ ಜಿಯಾ ಉಲ್ಲಾ ಷರೀಫ್, ಮಾಜಿ ನಿರ್ದೇಶಕ ಎ.ಎ.ಖತೀಬ್ ಸೇರಿದಂತೆ ಆ ಸಂದರ್ಭದಲ್ಲಿ ನಿರ್ದೇೀಶಕರಾಗಿದ್ದ ಎಲ್ಲರ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದು ವಿವರಿಸಿದರು.

2002-05ರ ಅವಧಿಯಲ್ಲಿ ಜಿಯಾ ಉಲ್ಲಾ ಷರೀಫ್ ಅಧ್ಯಕ್ಷರಾಗಿದ್ದರು. ಆಗಲೂ ರೂ 54.77 ಕೋಟಿ ದುರುಪಯೋಗ ಆಗಿದೆ. ಈ ಅಕ್ರಮಗಳಿಗೆ ಸಂಬಂಧಿಸಿದಂತೆ ರೆಹಮಾನ್ ಖಾನ್ ಅವರ ಸಂಬಂಧಿಗಳಿಂದ ರೂ 10.79 ಕೋಟಿ ವಸೂಲಾಗಬೇಕಿದೆ. ಖಾನ್ ಅವರ ಪುತ್ರನ ಖಾತೆಗೆ ನಿಯಮಬಾಹಿರವಾಗಿ ರೂ 1.54 ಕೋಟಿ ವರ್ಗಾಯಿಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದರು.

ಏಕಕಾಲಿಕ ಸಾಲ ತೀರುವಳಿ ಯೋಜನೆಯಡಿಯಲ್ಲಿ ಆರ್‌ಬಿಐ ನಿಯಮಗಳಿಗೆ ವಿರುದ್ಧವಾಗಿ 28.25 ಕೋಟಿ ರೂಪಾಯಿ ಬಡ್ಡಿ ಮನ್ನಾ ಮಾಡಿರುವುದು ಸೇರಿದಂತೆ ಇತರ ಅಕ್ರಮಗಳನ್ನು ಎಸಗಲಾಗಿದೆ ಎಂದು ವಿವರಿಸಿದರು.

ನಂತರ ಬಹಿರಂಗ: ಇದೇ ರೀತಿ ಅಕ್ರಮ ನಡೆದಿರುವ ಸಹಕಾರಿ ಕ್ಷೇತ್ರದ ಇನ್ನೂ ಅನೇಕ ಬ್ಯಾಂಕುಗಳ ವಿರುದ್ಧವೂ ತನಿಖೆ ನಡೆದಿದ್ದು, ವರದಿ ಬಂದ ನಂತರ ಎಲ್ಲವನ್ನೂ ಬಹಿರಂಗಪಡಿಸಲಾಗುವುದು ಎಂದು ಅವರು   ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.