ಸೋಮವಾರ, ಅಕ್ಟೋಬರ್ 21, 2019
22 °C

ಅಮಾನವೀಯ ಘಟನೆಗಳಿಗೆ ಕಡಿವಾಣ ಬೀಳಲಿ

Published:
Updated:

ಹೊನ್ನಾಳಿ: ಕಾಲೇಜು ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಸಮಗ್ರ ಅರಿವು ಹೊಂದಿರಬೇಕು ಎಂದು ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ಹೇಳಿದರು.ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇಶ ಸ್ವಾತಂತ್ರ್ಯಗಳಿಸಿ 6 ದಶಕಗಳೇ ಕಳೆದಿದ್ದರೂ ನಾವಿನ್ನೂ ಪ್ರಬುದ್ಧರಾಗಿಲ್ಲ. ವರದಕ್ಷಿಣೆ ಹಿಂಸೆ, ಮಹಿಳೆ ಮೇಲಿನ ದೌರ್ಜನ್ಯ, ಹೆಣ್ಣು ಭ್ರೂಣಹತ್ಯೆ, ಮಹಿಳೆಯರ ಅಸಹಜ ಸಾವು ಇತರ ಅಮಾನವೀಯ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಭಾರತೀಯರಲ್ಲಿ ಕಾನೂನಿನ ಪ್ರಜ್ಞೆ ಕಡಿಮೆ ಇದೆ. ಸಾಕ್ಷರತೆ  ಹೆಚ್ಚಾಗುತ್ತಿದ್ದರೂ ನಮ್ಮಲ್ಲಿ ಜನ ಕಾನೂನುಬಾಹಿರ ಚಟುವಟಿಕೆಗಳು ಕಡಿಮೆಯಾಗುತ್ತಿಲ್ಲ ಎಂದು ವಿಷಾದಿಸಿದರು.ಸಿವಿಲ್ ನ್ಯಾಯಾಧೀಶ ರವೀಂದ್ರ ಎಲ್. ಹೊನೊಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ಲೈಂಗಿಕ ಕಿರುಕುಳ, ದೌರ್ಜನ್ಯ ಎಸಗಿದರೆ ಮಹಿಳೆಯರ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯಡಿ ಅವರಿಗೆ ರಕ್ಷಣೆ ನೀಡಲಾಗುತ್ತದೆ. ಮಹಿಳೆಯರ ಆದಾಯ ದುರುಪಯೋಗಪಡಿಸಿಕೊಂಡರೆ ಅಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಸಮಾಜದಲ್ಲಿ ಒಬ್ಬ ಮಹಿಳೆ ತನಗೆ ಇಷ್ಟವಾದವರನ್ನು ಮದುವೆಯಾಗಲು ಸಂಪೂರ್ಣ ಸ್ವಾತಂತ್ರ್ಯ ಇದೆ. ಇದಕ್ಕೆ ತಡೆಯುಂಟು ಮಾಡಲು ಕುಟುಂಬದವರು ಪ್ರಯತ್ನಿಸಿದರೆ ನ್ಯಾಯಾಲಯ ಮಹಿಳೆಗೆ ನ್ಯಾಯ ದೊರಕಿಸುತ್ತದೆ. ಈ ಬಗ್ಗೆ ತಕ್ಷಣ ಮಹಿಳೆ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದರು.ಸಿಪಿಐ ಎಂ.ಎನ್. ರುದ್ರಪ್ಪ ಮಾತನಾಡಿ, ಯಾರೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದು. ವಿಶೇಷವಾಗಿ ಕಾಲೇಜು ವಿದ್ಯಾರ್ಥಿ -ವಿದ್ಯಾರ್ಥಿನಿಯರು ಕಾನೂನಿನ ಬಗ್ಗೆ ಅರಿವು ಹೊಂದಿ ಜನತೆಗೆ ತಿಳಿವಳಿಕೆ ನೀಡಬೇಕು ಎಂದರು.ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಯತಿರಾಜ್ ಅವರು `ಆಸ್ತಿ ಹಕ್ಕು~ ಬಗ್ಗೆ, ವಕೀಲ ಎಚ್. ಕರುಣಾಕರ ಅವರು `ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ~ ಬಗ್ಗೆ ಮತ್ತು ವಕೀಲ ಶಿವಯೋಗಾರಾಧ್ಯ ಅವರು `ಮೋಟಾರು ವಾಹನ ಕಾಯ್ದೆ~ ಬಗ್ಗೆ ಉಪನ್ಯಾಸ ನೀಡಿದರು.ವಕೀಲರಾದ ಕುಮಾರಸ್ವಾಮಿ, ಜಗದೀಶ್, ಸೈಯ್ಯದ್ ಗೌಸ್, ಶಾಂತವೀರಪ್ಪ, ಗುಡ್ಡಪ್ಪ, ಉಮೇಶ್, ಮಂಜುಳಾ ಮಂಜಪ್ಪ, ಪಿಎಸ್‌ಐ ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.ಲತಾ ಪ್ರಾರ್ಥಿಸಿದರು. ಎಂ.ಎನ್. ರಮೇಶ್ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಸಿ. ಶಿವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಡಾ.ರಾಜ್‌ಕುಮಾರ್ ವಂದಿಸಿದರು.

 

Post Comments (+)