ಅಮಾಯಕರ ಮೇಲೆ ಮೊಕದ್ದಮೆ: ಆರೋಪ

7

ಅಮಾಯಕರ ಮೇಲೆ ಮೊಕದ್ದಮೆ: ಆರೋಪ

Published:
Updated:

ಗೋಣಿಕೊಪ್ಪಲು: ಬಿರುನಾಣಿಯಲ್ಲಿ ಸೋಮವಾರ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಕೊಡವ ಸಾಂಸ್ಕೃತಿಕ ಮೇಳದಲ್ಲಿ ನಡೆದ ಕ್ಷುಲ್ಲಕ ಘಟನೆಯನ್ನು ದೊಡ್ಡದು ಮಾಡಿ ಒಂದು ಗುಂಪಿನವರು ಅಮಾಯಕರ ಮೇಲೆ ಮೊಕದ್ದಮೆ ದಾಖಲಿಸಿ ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಟಿ.ಪ್ರದೀಪ್ ಹೇಳಿದರು.ಮೇಳದಲ್ಲಿ ಗಲಭೆಗೆ ಕಾರಣರಾದವರನ್ನು ಬಿಟ್ಟು ಅದನ್ನು ತಡೆಯಲು ಯತ್ನಿಸಿದವರ ಮೇಲೆ ಕೊಲೆ ಯತ್ನದಂತಹ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ. ಇದರಲ್ಲಿ ಬಿಜೆಪಿ ಮುಖಂಡರು ಅಧಿಕಾರ ದುರುಯೋಗಪಡಿಸಿಕೊಂಡು ಸಾಮರಸ್ಯದಿಂದ ಬದುಕುತ್ತಿದ್ದ ಗ್ರಾಮೀಣ ಪ್ರದೇಶದ ಜನತೆಯಲ್ಲಿ ಶಾಶ್ವತ ಶತ್ರುತ್ವ ಸೃಷ್ಟಿಸುತಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ಎರಡು ಗುಂಪಿನ ನಡುವೆ ಒಂದೇ ರೀತಿಯ ಆರೋಪಗಳಿದ್ದರೂ ಆಡಳಿತ ಪಕ್ಷದ ಒತ್ತಡ ತಂದು  ಕೇವಲ ಒಂದೇ ಗುಂಪಿನವರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಮಾಯಕರಿಗೆ ಕಿರುಕುಳ ನೀಡುತ್ತಿರುವುದು ಅತಿಯಾಗಿದೆ. ಇವರ ದಬ್ಬಾಳಿಕೆ ಮತ್ತು ದೌರ್ಜನ್ಯದ ವಿರುದ್ಧ ಪಕ್ಷದ ವತಿಯಿಂದ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಹೇಳಿದರು.ಮಾಜಿ ಶಾಸಕ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ, ಬಿಜೆಪಿಯವರು ಅಧಿಕಾರದ ಮದದಿಂದ ಸಾಮಾನ್ಯ ಜನರಿಗೆ ಕಿರುಕುಳ ನೀಡುತ್ತಿದ್ದು ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಕೆಲವರು ವೈಯಕ್ತಿಕ  ದ್ವೇಷದಿಂದ ಆಡಳಿತ ಪಕ್ಷದ ಬೆಂಬಲವಿದೆ ಎಂದು ಸಾಹಿತ್ಯದ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಖಂಡನೀಯ. ಇದು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ದೂರಿದರು.ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಮಾದಪ್ಪ ಮಾತನಾಡಿ, ಮೊಕದ್ದಮೆಯನ್ನು ಹಿಂದಕ್ಕೆ  ಪಡೆಯದಿದ್ದರೆ ಶ್ರೀಮಂಗಲ ಪೊಲೀಸ್ ಠಾಣೆ ಎದುರು ಧರಣಿ ಮುಷ್ಕರ ನಡೆಸಲಾಗುವುದು. ಮುಂದೆ  ಡಿವೈಸ್‌ಪಿ ಹಾಗೂ ಎಸ್‌ಪಿ ಕಚೇರಿ ಮುಂದೆಯೂ ಧರಣಿ ನಡೆಸಲಾಗುವುದು ಎಂದರು. ಗೋಷ್ಠಿಯಲ್ಲಿ ಅಬ್ದುಲ್ ರೆಹಮಾನ್, ಜಿ.ಪಂ.ಸದಸ್ಯರಾದ ವೆಂಕಟೇಶ್, ಬಿ.ಎನ್. ಪೃಥ್ಯೂ, ಬಿರುನಾಣಿ ಕಾಂಗ್ರೆಸ್ ಮುಖಂಡ ಚಿಣ್ಣಪ್ಪ, ತಾ.ಪಂ.ಸದಸ್ಯ ಟಾಟು ಮೊಣ್ಣಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಸರಾ ಚಂಗಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry