`ಅಮಾಯಕರ ವಿರುದ್ಧ ಪ್ರಕರಣ ಪರಿಶೀಲನೆಗೆ ಸಮಿತಿ'

ಭಾನುವಾರ, ಜೂಲೈ 21, 2019
25 °C
ನಿರಪರಾಧಿಗಳಿಗೆ ಶಿಕ್ಷೆ ಆಗದಂತೆ ಕ್ರಮ- ಸಿ.ಎಂ ಭರವಸೆ

`ಅಮಾಯಕರ ವಿರುದ್ಧ ಪ್ರಕರಣ ಪರಿಶೀಲನೆಗೆ ಸಮಿತಿ'

Published:
Updated:

ಬೆಂಗಳೂರು: `ಜೈಲಿನಲ್ಲಿರುವ ಅಮಾಯಕ ಮುಸ್ಲಿಮರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಪರಿಶೀಲಿಸಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ಅಲ್-ಅಮೀನ್ ಎಜುಕೇಷನ್ ಸೊಸೈಟಿಯು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಶಾಸಕ ರೋಷನ್ ಬೇಗ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, `ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದ ಅಮಾಯಕರನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ನಿರಪರಾಧಿಗೆ ಶಿಕ್ಷೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಮುಸ್ಲಿಂ ಯುವಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಮರು ಪರಿಶೀಲನೆ ನಡೆಸಲಾಗುವುದು' ಎಂದರು.`ಈಗಾಗಲೇ 98 ಲಕ್ಷ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಈಗ ಇನ್ನೂ 14 ಲಕ್ಷ ಅರ್ಜಿಗಳು ಬಂದಿವೆ. ಅದರಲ್ಲಿ ಮುಸ್ಲಿಂ ಅಥವಾ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಯಾರೇ ಇರಲಿ ಒಟ್ಟಿನಲ್ಲಿ ಅರ್ಹ ಫಲಾನುಭವಿಗಳಿಗೆ ಕೂಡಲೇ ಬಿಪಿಎಲ್ ಕಾರ್ಡ್ ವಿತರಿಸುವಂತೆ ನಿರ್ದೇಶನ ನೀಡಲಾಗಿದೆ' ಎಂದು ಹೇಳಿದರು.`ನಾನು ಕೂಡ ಹಿಂದುಳಿದ ವರ್ಗವಾದ ಕುರಿ ಕಾಯುವ ಜಾತಿಯಿಂದ ಬಂದವನು. ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಲ್ಲ ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಸ್ಥಾನ ದೊರೆಯಲು ಸಾಧ್ಯವಾಗುತ್ತದೆ. ಬಿಜೆಪಿ ಪಕ್ಷದಲ್ಲಿ ಹಿಂದುಳಿದವರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳಲಾಗುತ್ತದೆ. ಜೆಡಿಎಸ್ ಪಕ್ಷದಲ್ಲಿ ದೇವೇಗೌಡರು ಮತ್ತು ಅವರ ಮಕ್ಕಳಿಗೆ ಬಿಟ್ಟು ಬೇರೆಯವರಿಗೆ ಸ್ಥಾನವೇ ಸಿಗುವುದಿಲ್ಲ' ಎಂದು ಲೇವಡಿ ಮಾಡಿದರು.`ಸ್ವಾಭಿಮಾನದಿಂದ ಬದುಕಲು ಶಿಕ್ಷಣ ಅಗತ್ಯವಿದೆ. ಯಾವುದೇ ಧರ್ಮ ಅಥವಾ ಜಾತಿಯ ಕಟ್ಟಕಡೆಯ ವ್ಯಕ್ತಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಇದಕ್ಕಾಗಿಯೇ ಸರ್ಕಾರವು ಕಡ್ಡಾಯ ಶಿಕ್ಷಣ       ನೀತಿಯನ್ನು    ಜಾರಿಗೊಳಿಸಿದೆ' ಎಂದರು.ಶಾಸಕ ರೋಷನ್ ಬೇಗ್ ಮಾತನಾಡಿ, `ಬಡ ಮುಸ್ಲಿಮರಿಗೂ ಬಿಪಿಎಲ್ ಕಾರ್ಡ್ ವಿತರಿಸಿ ಅವರಿಗೂ ರೂ 1 ಕ್ಕೆ ಕೆಜಿ ಅಕ್ಕಿ ವಿತರಿಸಬೇಕು. ಸರ್ಕಾರಿ ನೌಕರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬೇಕು. ಕೆಪಿಎಸ್‌ಸಿ ಸಮಿತಿಯಲ್ಲಿ ಒಬ್ಬರನ್ನಾದರೂ ಮುಸ್ಲಿಂ ಸದಸ್ಯರನ್ನು ನೇಮಿಸಬೇಕು. ಮುಸ್ಲಿಂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ನಗರದಲ್ಲಿ ಮತ್ತು ಜಿಲ್ಲೆಗಳಲ್ಲಿ ವಸತಿ ನಿಲಯಗಳನ್ನು ಸ್ಥಾಪಿಸಬೇಕು. ಮುಸ್ಲಿಮರಲ್ಲಿರುವ ಪ್ರತಿಭಾವಂತರಿಗೆ ಮುಂದೆ ಓದಲು ಅನುಕೂಲವಾಗುವಂತೆ ವಿದ್ಯಾರ್ಥಿವೇತನವನ್ನು ನೀಡಬೇಕು' ಎಂದು ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.ಮೋದಿ ಪ್ರಧಾನಿಯಾದರೆ ದೇಶದ ಐಕ್ಯತೆ ನಾಶ

ನರೇಂದ್ರ ಮೋದಿ ಮಾತ್ರ ಹಿಂದೂವಲ್ಲ, ನಾನು ಕೂಡ ಹಿಂದೂವೇ. ಆದರೆ, ನಾವು ಹಿಂದೂ ಎಂದು ಬೇರೆ ಧರ್ಮವನ್ನು ದ್ವೇಷಿಸಬೇಕೆಂದು ಎಲ್ಲೂ ಹೇಳಿಲ್ಲ. ಪರಧರ್ಮ ಸಹಿಷ್ಣತೆಯೇ ನಮ್ಮ ಧರ್ಮದ ಮೂಲ ತತ್ವವಾಗಿದೆ. ಮೋದಿ ಅವರು ದೇಶದ ಪ್ರಧಾನಮಂತ್ರಿಯಾದರೆ, ದೇಶದ ಐಕ್ಯತೆ ನಾಶವಾಗುತ್ತದೆ ಮತ್ತು ದೇಶದ ಸಾರ್ವಭೌಮತೆಗೆ ಧಕ್ಕೆಯುಂಟಾಗುತ್ತದೆ.

-ಮುಖ್ಯಮಂತ್ರಿ ಸಿದ್ದರಾಮಯ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry