ಶುಕ್ರವಾರ, ನವೆಂಬರ್ 15, 2019
22 °C

ಅಮಿತಾಭ್‌ಗೆ ಎನ್‌ಟಿಆರ್ ಪ್ರಶಸ್ತಿ

Published:
Updated:

ಹೈದರಾಬಾದ್ (ಐಎಎನ್‌ಎಸ್): ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್‌ಗೆ ಗುರುವಾರ ಪ್ರತಿಷ್ಠಿತ ಎನ್.ಟಿ. ರಾಮರಾವ್ ಪ್ರಶಸ್ತಿ ಪ್ರದಾನ ಮಾಡಲಾಯಿತು.`ಎನ್.ಟಿ.ಆರ್ ಮತ್ತು ನನ್ನ ಮಧ್ಯೆ ಉತ್ತಮ ಬಾಂಧವ್ಯವಿತ್ತು. ಎನ್‌ಟಿಆರ್ ಈ ನೆಲದ ಶ್ರೇಷ್ಠ ಪುತ್ರ' ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಬಿಗ್ ಬಿ ಮಾತನಾಡಿದರು.`ಈ ಪ್ರಶಸ್ತಿ ನೀಡಿ ಗೌರವಿಸಿರುವ ಆಂಧ್ರ ಪ್ರದೇಶ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಎನ್.ಟಿ.ಆರ್ ಜತೆ ಉತ್ತಮ ಸಂಬಂಧ ಹೊಂದಿದ್ದ ನಾನು, ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಅವರೊಂದಿಗೆ ಚರ್ಚಿಸುತ್ತಿದ್ದೆ. ನಾನು ನಟಿಸಿದ ಚಿತ್ರಗಳನ್ನು ತೆಲುಗು ಭಾಷೆಯಲ್ಲಿ ಮತ್ತು ಎನ್.ಟಿ.ಆರ್. ನಟಿಸಿದ ಚಿತ್ರಗಳನ್ನು ಹಿಂದಿಯಲ್ಲಿ ಮಾಡುತ್ತಿದ್ದೆವು' ಎಂದು ಗುರುವಾರ ಇಲ್ಲಿ ನಡೆದ 2011ನೇ ಸಾಲಿನ ನಂದಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮಿತಾಬ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.`ಜಾತಿ, ಮತ ಮತ್ತು ವರ್ಣಗಳು ಬೇರೆಯಾಗಿದ್ದರೂ ಸಿನಿಮಾ ನಮ್ಮೆಲ್ಲರನ್ನೂ ಒಂದುಗೂಡಿಸಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವಾಗ ನಮ್ಮ ಪಕ್ಕದ ಕುರ್ಚಿಯಲ್ಲಿ ಯಾರು ಕುಳಿತಿದ್ದಾರೆ ಎನ್ನುವುದು ನಮಗೆ ಬೇಕಾಗಿಲ್ಲ. ಆದರೆ, ಸಿನಿಮಾದಲ್ಲಿ ಬರುವ ಕೆಲ ಹಾಸ್ಯದ ಸನ್ನಿವೇಶಗಳಿಗೆ ನಾವೆಲ್ಲರೂ ನಗುತ್ತೇವೆ. ಅಳು ತರುವ ಸನ್ನಿವೇಶಗಳಿಗೆ  ದುಃಖಿಸುತ್ತೇವೆ. ನಮ್ಮನ್ನೆಲ್ಲ ಒಂದುಗೂಡಿಸಿದ ಭಾರತೀಯ ಚಿತ್ರರಂಗದ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು' ಎಂದು ಹೇಳಿದರು.ಭಾರತೀಯ ಚಲನಚಿತ್ರ ರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಬಚ್ಚನ್‌ಗೆ ಈ ಪ್ರಶಸ್ತಿ ನೀಡಲಾಯಿತು.

ಪ್ರತಿಕ್ರಿಯಿಸಿ (+)