ಅಮಿತ್-ಜಯಂತ್ ಆಸರೆ

7
ರಣಜಿ ಕ್ರಿಕೆಟ್: ಹರಿಯಾಣ ತಂಡ ಗೌರವಾರ್ಹ ಮೊತ್ತ

ಅಮಿತ್-ಜಯಂತ್ ಆಸರೆ

Published:
Updated:

ಹುಬ್ಬಳ್ಳಿ:  ಎಲ್ಲರ ಕಣ್ಮನ ಸೆಳೆಯುವಂತೆ ಸಿಂಗಾರಗೊಂಡಿರುವ ರಾಜನಗರದ ಮೈದಾನದಲ್ಲಿ ಶನಿವಾರ ಮಧ್ಯಾಹ್ನದವರೆಗೆ ಸ್ಟುವರ್ಟ್ ಬಿನ್ನಿ ಬಳಗವು ಕಟ್ಟಿದ ಆಶಾಸೌಧವನ್ನು, ಹರಿಯಾಣದ ಬಾಲಂಗೋಚಿಗಳು ಧ್ವಂಸಗೊಳಿಸಿದರು.ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಏಳನೇ ಪಂದ್ಯದಲ್ಲಿ  ಎಚ್.ಎಸ್. ಶರತ್ (18-2-49-2)  ಮತ್ತು ಎಸ್. ಎಲ್. ಅಕ್ಷಯ್ (16-2-59-3) ಅವರ ದಾಳಿಗೆ  (168ಕ್ಕೆ 7) ಸಂಕಷ್ಟದಲ್ಲಿದ್ದ ಹರಿಯಾಣ ತಂಡಕ್ಕೆ ನಾಯಕ ಅಮಿತ್ ಮಿಶ್ರಾ ಮತ್ತು ಜಯಂತ್ ಯಾದವ್  ಜೋಡಿಯು ಆಸರೆಯಾಯಿತು.8ನೇ ವಿಕೆಟ್‌ನ ಮುರಿಯದ ಜೊತೆಯಾಟದಲ್ಲಿ 135 ರನ್ ಗಳಿಸಿರುವ ಈ ಜೋಡಿಯು, ತಮ್ಮ ತಂಡವು 200 ರನ್ ಮೊತ್ತದ ಒಳಗೆ ಆಲೌಟ್ ಆಗುವುದನ್ನು ತಪ್ಪಿಸಿತು. ಅಮಿತ್  (ಬ್ಯಾಟಿಂಗ್ 86; 306ನಿಮಿಷ, 137ಎಸೆತ, 10ಬೌಂಡರಿ) ಮತ್ತು ಜಯಂತ್ ಯಾದವ್ (ಬ್ಯಾಟಿಂಗ್ 64; 130ನಿ, 110ಎ, 10ಬೌಂಡರಿ) ಭರ್ಜರಿ ಪ್ರದರ್ಶನದಿಂದ ದಿನದಾಟದ ಕೊನೆಗೆ ಹರಿಯಾಣ ತಂಡವು 90 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿದೆ. ಪ್ರಸಕ್ತ ಋತುವಿನಲ್ಲಿ ಎರಡನೇ ಅರ್ಧಶತಕ ಗಳಿಸಿದ ಅಮಿತ್ ಮಿಶ್ರಾ, ವೇಗಿಗಳ ಬೌನ್ಸರ್‌ಗಳಿಗೆ ಹುಕ್ ಮತ್ತು ಪುಲ್‌ಗಳ ಉತ್ತರ ಕೊಟ್ಟರು. ಸ್ಪಿನ್ನರ್‌ಗಳ ಎಸೆತಗಳನ್ನು ಉತ್ತಮ ಪಾದಚಲನೆಯ ಮೂಲಕ ಬೌಂಡರಿಗೆರೆ ದಾಟಿಸಿದರು. ಅವರಿಗೆ ತಕ್ಕ ಸಾಥ್ ಕೊಟ್ಟ 9ನೇ ಕ್ರಮಾಂಕದ ಆಟಗಾರ ಜಯಂತ್ ಯಾದವ್ ಕೂಡ ಬೌಲರ್‌ಗಳ ಯಾವುದೇ ಅಸ್ತ್ರಕ್ಕೂ ಬೆದರಿಲಿಲ್ಲ. ಪರಿಪೂರ್ಣ ಬ್ಯಾಟ್ಸ್‌ಮನ್ ರೀತಿಯಲ್ಲಿಯೇ ಆಡಿ ಅಚ್ಚರಿ ಮೂಡಿಸಿದರು.ಬೌಲರ್‌ಗಳದ್ದೇ ಆಟ: ಈ ಮೈದಾನದಲ್ಲಿ ನಡೆಯುತ್ತಿರುವ ಚೊಚ್ಚಲ ರಣಜಿ ಪಂದ್ಯದಲ್ಲಿ ಇಡೀ ದಿನ ಬೌಲರ್‌ಗಳದ್ದೇ ಆಟ. ಮೊದಲ ಎರಡು ಅವಧಿಯಲ್ಲಿ ಕರ್ನಾಟಕದ ಬೌಲರ್‌ಗಳು ವಿಕೆಟ್ ಕಿತ್ತು ಸಂಭ್ರಮಿಸಿದರು. ಆದರೆ ಚಹಾ ವಿರಾಮದ ನಂತರ ಹರಿಯಾಣದ ಬೌಲರ್‌ಗಳಾದ ಅಮಿತ್ ಮಿಶ್ರಾ ಮತ್ತು ಜಯಂತ್ ಯಾದವ್ ಬ್ಯಾಟಿಂಗ್‌ನಲ್ಲಿ ವಿಜೃಂಭಿಸಿದರು!ಟಾಸ್ ಗೆದ್ದ ಕರ್ನಾಟಕ, ಎದುರಾಳಿ ತಂಡವನ್ನು ಬ್ಯಾಟಿಂಗಿಗೆ ಆಹ್ವಾನಿಸಿತು. ಉತ್ತಮ ಬೌನ್ಸ್ ಸಿಗುವ ನಿರೀಕ್ಷೆ ಮೂಡಿಸಿದ್ದ ಪಿಚ್‌ನಲ್ಲಿ ಹರಿಯಾಣದ ಬ್ಯಾಟ್ಸ್ ಮನ್‌ಗಳನ್ನು ಬೇಗನೆ ಪೆವಿಲಿಯನ್‌ಗೆ ಮರಳಿಸುವ ಲೆಕ್ಕಾಚಾರ ಫಲ ಕೊಟ್ಟಿತು.ಆರ್. ವಿನಯಕುಮಾರ್ ಮತ್ತು ಅಭಿಮನ್ಯು ಮಿಥುನ್ ಅನುಪಸ್ಥಿತಿಯಲ್ಲಿ ಬೌಲಿಂಗ್ ಆರಂಭಿಸಿದ ಮಂಡ್ಯದ ಹುಡುಗ ಎಚ್.ಎಸ್. ಶರತ್, ಇನಿಂಗ್ಸ್‌ನ ಏಳನೇ ಓವರ್‌ನಲ್ಲಿಯೇ ಮೊದಲ ಯಶಸ್ಸು ಪಡೆದರು. ಹೊರಗೆ ತಿರುವು ಪಡೆದಿದ್ದ ಎಸೆತವನ್ನು ಹೊಡೆಯುವ ಯತ್ನದಲ್ಲಿ ಸಂದೀಪ್ ಸಿಂಗ್ ಬ್ಯಾಟಿನ ಅಂಚು ಸವರಿದ ಚೆಂಡು ಎರಡನೇ ಸ್ಲಿಪ್‌ನತ್ತ ಚಿಮ್ಮಿತು. ಮನೀಶ್ ಪಾಂಡೆ ಚುರುಕಿನಿಂದ ಡೈವ್ ಮಾಡಿ ಪಡೆದ ಕ್ಯಾಚ್ ಅನ್ನು ಪಂದ್ಯ ನೋಡಲು ಸೇರಿದ್ದ 2000ಕ್ಕೂ ಹೆಚ್ಚು ಜನ ಬಹಳ ದಿನ ಮರೆಯುವಂತಿಲ್ಲ.ಇನ್ನೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ರಾಹುಲ್ ದಿವಾನ್ (39; 65ನಿ, 49ಎಸೆತ, 7ಬೌಂಡರಿ)  ಸನ್ನಿ ಸಿಂಗ್ ಅವರೊಂದಿಗೆ ಇನಿಂಗ್ಸ್ ಕಟ್ಟುವ ಹಾದಿಯಲ್ಲಿದ್ದರು. ಆದರೆ  ಎಸ್.ಎಲ್ ಅಕ್ಷಯ್ ಅವರ ಹಾದಿಗೆ ಅಡ್ಡ ನಿಂತರು. ಸಿಟಿ ಎಂಡ್ ಬದಿಯಿಂದ ಎರಡನೇ ಸ್ಪೆಲ್ ಆರಂಭಿಸಿದ  ಶಿವಮೊಗ್ಗ ಎಕ್ಸ್‌ಪ್ರೆಸ್ ಅಕ್ಷಯ್, ಹಾಕಿದ ಕೆಳಹಂತದ ನೇರ ಎಸೆತ, ರಾಹುಲ್ ಅವರನ್ನು ವಂಚಿಸಿ ಸ್ಟಂಪ್ ಹಾರಿಸಿತು. ಮುರಿದು ಹೋದ ಸ್ಟಿಕ್ ಬದಲಿಸಿ ಹೊಸದನ್ನು ಹಾಕಲಾಯಿತು!ನಂತರ ಬಂದ ಅಭಿಮನ್ಯು ಖೋಡ್ ಬಹಳ ಹೊತ್ತು ನಿಲ್ಲಲಿಲ್ಲ. 17ನೇ ಓವರ್ ಬೌಲಿಂಗ್ ಮಾಡಿದ ಅಕ್ಷಯ್ ಅವರ ಸ್ಪಂಪ್ ಅನ್ನೂ ಎಗರಿಸಿದರು. ತಮ್ಮ ಎರಡನೇ ಸ್ಪೆಲ್‌ನಲ್ಲಿ (5-1-15-2) ಹರಿಯಾಣದ ಇಬ್ಬರು ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಮರಳಿಸಿದರು. ಇದರಿಂದ ಊಟದ ವೇಳೆಗೆ ಮೂರು ವಿಕೆಟ್ ಗಳಿಸಿದ ಕರ್ನಾಟಕ ಸಮಾಧಾನ ಪಟ್ಟಿತು. ಆದರೆ ಸನ್ನಿ ಸಿಂಗ್ ಮತ್ತು ನಿತಿನ್ ಸೈನಿ ಬೀಸಾಟದಿಂದ ತಂಡದ ಖಾತೆಗೆ 102 ರನ್‌ಗಳು ಸೇರಿದ್ದವು.ವಿರಾಮದ ನಂತರದ 5ನೇ ಓವರ್ ಬೌಲಿಂಗ್ ಮಾಡಿದ  ಶರತ್ ಎಸೆತವನ್ನು ಆನ್‌ಸೈಡ್‌ಗೆ ಆಡಲು ಯತ್ನಿಸಿದ ಸೈನಿ ವಿಕೆಟ್ ಕೀಪರ್ ಸಿ.ಎಂ. ಗೌತಮ್‌ಗೆ ಕ್ಯಾಚ್ ಇತ್ತು ನಿರ್ಗಮಿಸಿದರು. ನಂತರ 42ನೇ ಓವರ್‌ನಲ್ಲಿ  ಎಡಗೈ ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ಅವರ ನಿಧಾನಗತಿಯ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ರಾಹುಲ್ ದಿವಾನ್   ವಿಕೆಟ್ ಕೀಪರ್ ಗೌತಮ್ ಅವರಿಗೆ ಕ್ಯಾಚ್ ಆದರು.  ಊಟಕ್ಕೂ ಮುನ್ನ ಗಲ್ಲಿ ಫೀಲ್ಡರ್ ಕರುಣ್ ನಾಯರ್ ಅವರಿಂದ ಜೀವದಾನ ಪಡೆದಿದ್ದ ಸನ್ನಿಸಿಂಗ್ ನಿಧಾನವಾಗಿ ಆಡುತ್ತ ತಮ್ಮ ಅರ್ಧಶತಕ ಪೂರೈಸಿಕೊಂಡರು. ಅವರು ವೈಯಕ್ತಿಕ 56 ರನ್ ಗಳಿಸಿದ್ದಾಗ ಬೆಳಗಾವಿ ಹುಡುಗ ರೋನಿತ್ ಮೊರೆ ಎಸೆತವನ್ನು ಪುಲ್ ಮಾಡಿದರು. ಶಾರ್ಟ್ ಸ್ಕ್ವೇರ್ ಲೆಗ್‌ನಲ್ಲಿದ್ದ ರಾಬಿನ್ ಉತ್ತಪ್ಪ ಸುಲಭ ಕ್ಯಾಚ್ ಪಡೆದರು. ಇನ್ನೊಂದು ಕಡೆ ಅಮಿತ್ ಮಿಶ್ರಾ ರನ್ ಗಳಿಕೆಯತ್ತ ಚಿತ್ತ ನೆಟ್ಟರು. ಅವರೊಂದಿಗೆ ಸೇರಿಕೊಂಡ ಜೋಗಿಂದರ್ ಶರ್ಮಾ ಹೆಚ್ಚು ಹೊತ್ತು ನಿಲ್ಲಲಿಲ್ಲ. 3 ರನ್ ಗಳಿಸಿದ ಅವರು ವಿಕೆಟ್‌ಕೀಪರ್ ಗೌತಮ್‌ಗೆ ಮೂರನೇ ಕ್ಯಾಚ್ ಮತ್ತು ಅಕ್ಷಯ್‌ಗೆ ಮೂರನೇ ವಿಕೆಟ್ ಆಗಿ ಔಟಾದರು.ಆದರೆ ನಂತರ ಬಂದ ಜಯಂತ್ ಯಾದವ್ ತಮ್ಮ ನಾಯಕನೊಂದಿಗೆ ನಿರ್ಭಯದಿಂದ ಇನಿಂಗ್ಸ್ ಕಟ್ಟುವಲ್ಲಿ ನಿರತರಾದರು. ಊಟದಿಂದ ಚಹಾ ವಿರಾಮದ ನಡುವೆ 4 ವಿಕೆಟ್ ಕಳೆದುಕೊಂಡು ಕೇವಲ 81 ರನ್ ಗಳಿಸಿದ್ದ  ರನ್ ಗಳಿಸಿದ್ದ ತಂಡಕ್ಕೆ, ಇವರಿಬ್ಬರ ಭರ್ಜರಿ ಬ್ಯಾಟಿಂಗ್‌ನ ಫಲವಾಗಿ 110 ರನ್‌ಗಳು ಹರಿದು ಬಂದವು.81 ರನ್ ಗಳಿಸಿದ್ದ ಅಮಿತ್ ಮಿಶ್ರಾ, ಅಕ್ಷಯ್ ಎಸೆತವನ್ನು ಆಫ್‌ಸೈಡ್‌ನತ್ತ ಹೊಡೆಯಲು ಪ್ರಯತ್ನಿಸಿದರು. ಬ್ಯಾಟಿಗೆ ಅಪ್ಪಳಿಸಿದ ಚೆಂಡು ಎಗರಿ ಎರಡನೇ ಸ್ಲಿಪ್‌ನತ್ತ ಚಿಮ್ಮಿತು. ಆದರೆ ಉತ್ತಪ್ಪ ಕ್ಯಾಚ್ ಅನ್ನು ನೆಲಕ್ಕೆ ಚೆಲ್ಲಿದರು. ನಂತರ ಕರ್ನಾಟಕಕ್ಕೆ ಯಾವುದೇ ಅವಕಾಶ ಸಿಗಲಿಲ್ಲ.

ಹರಿಯಾಣದ ಡ್ರೆಸ್ಸಿಂಗ್ ರೂಮಿನಲ್ಲಿ ಸಂಭ್ರಮ ಮನೆ ಮಾಡಿದರೆ, ಈ ಪಂದ್ಯವನ್ನು ಗೆಲ್ಲುವ ಅನಿವಾರ‌್ಯತೆಯಲ್ಲಿರುವ ಬಿನ್ನಿ ಬಳಗದಲ್ಲಿ ನಿರಾಸೆ ನೆಲೆಸಿತು.ಸ್ಕೋರ್ ವಿವರ:

ಹರಿಯಾಣ: 90 ಓವರ್‌ಗಳಲ್ಲಿ 7 ವಿಕೆಟ್‌ಗೆ 293

ರಾಹುಲ್ ದಿವಾನ್ ಬಿ ಅಕ್ಷಯ್  39

ಸಂದೀಪ್ ಗೋದಾರಾ ಸಿ ಪಾಂಡೆ ಬಿ ಬಿ ಶರತ್  06

ಸನ್ನಿ ಸಿಂಗ್ ಸಿ ಉತ್ತಪ್ಪ ಬಿ ರೋನಿತ್ ಮೋರೆ  56

ಅಭಿಮನ್ಯು ಖೋಡ್ ಬಿ ಅಕ್ಷಯ್  00

ನಿತಿನ್ ಸೈನಿ ಸಿ ಗೌತಮ್ ಬಿ ಶರತ್  24

ರಾಹುಲ್ ದಲಾಲ್ ಸಿ ಗೌತಮ್ ಬಿ ಅಪ್ಪಣ್ಣ  01

ಅಮಿತ್ ಮಿಶ್ರಾ ಬ್ಯಾಟಿಂಗ್  86

ಜೋಗಿಂದರ್ ಶರ್ಮಾ ಸಿ ಗೌತಮ್ ಬಿ ಅಕ್ಷಯ್  03

ಜಯಂತ್ ಯಾದವ್ ಬ್ಯಾಟಿಂಗ್  64

ಇತರೆ: 14 (ಲೆಗ್‌ಬೈ 6, ವೈಡ್ 4, ನೋಬಾಲ್ 4)

ವಿಕೆಟ್ ಪತನ: 1-19 (6.3, ಸಂದೀಪ್‌ಸಿಂಗ್), 2-56 (14.3, ರಾಹುಲ್ ದಿವಾನ್), 3-56 (16.4 ಅಭಿಮನ್ಯು ಖೋಡ್), 4-110 (38.1 ನಿತಿನ್ ಸೈನಿ), 5-112 (41.1 ದಲಾಲ್), 6-153 (54.4 ಸನ್ನಿಸಿಂಗ್), 7-168 (57.3 ಜೋಗಿಂದರ್ ಶರ್ಮಾ),

ಬೌಲಿಂಗ್: ಎಚ್.ಎಸ್. ಶರತ್ 18-2-49-2 (ವೈಡ್2), ಎಸ್.ಎಲ್. ಅಕ್ಷಯ್ 16-2-59-3 (ನೋಬಾಲ್ 1),  ಸ್ಟುವರ್ಟ್ ಬಿನ್ನಿ  12-3-33-0 (ವೈಡ್ 1), ರೋನಿತ್ ಮೋರೆ 18-1-72-1 (ವೈಡ್1), ಕೆ.ಪಿ. ಅಪ್ಪಣ್ಣ 18-1-49-1, ಅಮಿತ್ ವರ್ಮಾ 7-2-23-0 (ನೋಬಾಲ್ 3),  ಮನೀಶ್ ಪಾಂಡೆ 1-0-2-0.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry