ಬುಧವಾರ, ಜೂನ್ 16, 2021
21 °C

ಅಮಿತ್ ಷಾಗೆ ಸಿಬಿಐ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್ (ಪಿಟಿಐ): ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಗುಜರಾತ್ ಅಂದಿನ ಗೃಹ ಸಚಿವ  ಹಾಗೂ ನರೇಂದ್ರ ಮೋದಿ ಆಪ್ತ ಅಮಿತ್ ಷಾ ಮತ್ತು  ಡಿಜಿಪಿ ಕೆ.ಆರ್‌. ಕೌಶಿಕ್ ಅವರಿಗೆ ನೋಟಿಸ್‌ ನೀಡಿದೆ.ಗುಜರಾತ್‌ ಪೊಲೀಸರು ನಡೆಸಿದ ನಕಲಿ ಎನ್‌ಕೌಂಟರ್‌ನಲ್ಲಿ ಇಶ್ರತ್‌ ಜಹಾನ್‌ ಜತೆ  ಹತನಾದ ಪ್ರಾಣೇಶ್ ಪಿಳ್ಳೈ ಅಲಿಯಾಸ್ ಜಾವೇದ್‌ ಶೇಖ್‌ ತಂದೆ ಗೋಪಿನಾಥ್ ಪಿಳ್ಳೈ ಅವರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಈ ಕುರಿತು ಅರ್ಜಿ ಸಲ್ಲಿಸಿದ್ದರು. ನಕಲಿ ಎನ್‌ಕೌಂಟರ್‌ ಪ್ರಕರಣದ ಸಂಚು ರೂಪಿಸಿದ ಅಮಿತ್ ಷಾ ಹಾಗೂ ಕೌಶಿಕ್‌ ಅವರನ್ನು ಆರೋಪಿಗಳೆಂದು ಪರಿಗಣಿಸುವಂತೆ ಪಿಳ್ಳೈ ತಮ್ಮ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶೆ ಗೀತಾ ಗೋಪಿ ಅವರು ಷಾ ಹಾಗೂ ಕೌಶಿಕ್ ಅವರಿಗೆ ಶುಕ್ರವಾರ ನೊಟಿಸ್‌ ಜಾರಿ ಮಾಡಿದರು. ಮಾರ್ಚ್‌ 26ರಂದು ಪ್ರಕರಣ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಅವರು ಹೇಳಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಲ್ಲಿಯವರೆಗೆ ಸಲ್ಲಿಸಿರುವ ಎರಡು ಆರೋಪಪಟ್ಟಿಯಲ್ಲಿ ಅಮಿತ್‌ ಷಾ ಹಾಗೂ ಕೌಶಿಕ್‌ ಹೆಸರಿಸಿಲ್ಲ.  2004, ಜೂನ್ 15ರಂದು ಮುಂಬೈ ಮೂಲದ ಇಶ್ರತ್ ಜಹಾನ್‌, ಆಕೆಯ ಗೆಳೆಯ ಪ್ರಾಣೇಶ್‌ ಪಿಳ್ಳೈ ಅಲಿಯಾಸ್‌ ಜಾವೇದ್‌ ಶೇಖ್ ಹಾಗೂ  ಇನ್ನಿತರ ಇಬ್ಬರನ್ನು ಗುಜರಾತ್ ಪೊಲೀಸರು ಅಹಮದಾಬಾದ್‌ ಹೊರವಲಯದಲ್ಲಿ ನಡೆಸಿದ ನಕಲಿ ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದರು.ಪ್ರಕರಣದ ಸಂಬಂಧ ಸಿಬಿಐ ಸಂಗ್ರಹಿಸಿದ ದಾಖಲೆಗಳ ಪ್ರಕಾರ   ಷಾ ವಿರುದ್ಧ ಸಾಕಷ್ಟು ಸ್ಪಷ್ಟ ಸಾಂದರ್ಭಿಕ ಸಾಕ್ಷ್ಯಗಳಿವೆ ಎಂದು ಪಿಳ್ಳೈ ಅರ್ಜಿಯಲ್ಲಿ ವಾದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.