ಅಮೀರ್ ಖಾನ್ ಅಂಕಣ : ನಾಳೆಗೆ ನಾವೂ ವೃದ್ಧರಾಗುತ್ತೇವೆ...

ಬುಧವಾರ, ಜೂಲೈ 17, 2019
30 °C

ಅಮೀರ್ ಖಾನ್ ಅಂಕಣ : ನಾಳೆಗೆ ನಾವೂ ವೃದ್ಧರಾಗುತ್ತೇವೆ...

Published:
Updated:

ಸಾಂಸ್ಕೃತಿಕವಾಗಿ, ಪರಂಪರಾಗತವಾಗಿ ಹಿರಿಯರಿಗೆ ಗೌರವ ಸೂಚಿಸುವ ಕೆಲವೇ ಕೆಲವು ದೇಶ ಹಾಗೂ ಸಮುದಾಯಗಳಲ್ಲಿ ಭಾರತವೂ ಒಂದಾಗಿದೆ. ಹಿರಿಯರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಅವರ ಕಾಲಿಗೆ ತಲೆಬಾಗುವುದು ಬಹುಶಃ ಭಾರತದಲ್ಲಿ ಮಾತ್ರ ರೂಢಿಯಲ್ಲಿರುವ ಸಂಪ್ರದಾಯವಾಗಿದೆ.ಇದು ಕೇವಲ ಗೌರವ ಸೂಚಿಸುವುದಲ್ಲ, ಅವರ ಬಗೆಗಿನ ಆದರಣೀಯ ಭಾವವನ್ನು ಹೇಳುವ ಕ್ರಿಯೆಯೂ ಆಗಿದೆ. ವಿಪರ್ಯಾಸವೆಂದರೆ ನಮ್ಮ ದೇಶದಲ್ಲಿ ಹಿರಿಯರನ್ನು `ನೋಡಿಕೊಳ್ಳುವ~ ಅಥವಾ ಅವರಿಗೆ ಅನುಕೂಲ ಒದಗಿಸಿ ಕೊಡುವಲ್ಲಿ ಹಿಂದುಳಿದ ದೇಶವೂ ಭಾರತವೇ ಆಗಿದೆ.ಭಾರತೀಯ ಸಮಾಜದ ಸ್ವರೂಪ ಬದಲಾಗುತ್ತಿದೆ. ಕೂಡು ಕುಟುಂಬಗಳಿಂದ ಬಿಡಿ ಕುಟುಂಬಗಳ ರಚನೆ ಇದೀಗ ಸಾಮಾನ್ಯವಾಗಿದೆ. ನಮ್ಮ ಕುಟುಂಬದಲ್ಲಿರುವ ಹಿರಿಯರೊಂದಿಗೆ ಇರಬೇಕಾದ ಬಾಂಧವ್ಯದ ಸ್ವರೂಪವೂ ಬದಲಾಗುತ್ತಿದೆ.ಇಂದು ದೊಡ್ಡ ನಗರಗಳಲ್ಲಿ ಕೆಲಸ ಮಾಡುವ, ಅಲ್ಲಿಯೇ ವಾಸಿಸುವ ವ್ಯಕ್ತಿಯ ಬೇಡಿಕೆಗಳೂ ಬದಲಾಗುತ್ತಿವೆ. ಆದ್ಯತೆಗಳೂ ಬದಲಾಗುತ್ತಿವೆ. ಅವನು ಅಥವಾ ಅವಳಿಗೆ ತನ್ನದೇ ಕುಟುಂಬದ ಚಿಕ್ಕ ಕುಟುಂಬದ ಉಳಿದ ಕೊಂಡಿಗಳೊಂದಿಗೆ ಬೆಸೆಯುವುದೂ ಕಷ್ಟವಾಗುತ್ತಿದೆ. (ಮಕ್ಕಳಾಗಿರಬಹುದು ಅಥವಾ ಸಂಗಾತಿಯಾಗಿರಬಹುದು) ಅವರೊಂದಿಗೆ ಸಮಯ ಕಳೆಯುವುದೇ ಕಷ್ಟವಾಗಿದೆ.ಇಂಥ ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ನಮ್ಮ ಹಿರಿಯರ ಗತಿಯೇನಾಗುತ್ತಿದೆ?ನಮ್ಮ ಹಿರಿಯರ ಬದುಕಿಗಾಗಿ ನಾವು ಯೋಜನೆಯನ್ನು ಮಾಡಲೇಬೇಕಿದೆ. ಕೇವಲ ಅವರಿಗಾಗಿ ಮಾತ್ರವಲ್ಲ, ನಮಗಾಗಿಯೂ ಮಾಡಿಕೊಳ್ಳಬೇಕಿದೆ. ಈಗಲ್ಲದಿದ್ದರೂ ಆಮೇಲಾದರೂ ನಾವೂ (ವೃದ್ಧಾಪ್ಯ  ತಡೆಯುವ ಶಕ್ತಿ ನಮ್ಮಲ್ಲಿ ಇದೆ ಎಂಬುದು ಬೇರೆ ವಿಷಯ) ವೃದ್ಧಾಪ್ಯ ಸ್ಥಿತಿಯನ್ನು ತಲುಪಿಯೇ ತೀರುತ್ತೇವೆ.ಇದು ಜೀವನಚಕ್ರ!1947ರಲ್ಲಿ ಭಾರತೀಯರ ಜೀವಿತಾವಧಿಯ ದರ ಸರಾಸರಿ 31 ವರ್ಷವಾಗಿತ್ತು. ನಿವೃತ್ತಿ ಅವಧಿಯ ಮುನ್ನವೇ ಸಾವನ್ನಪ್ಪುವುದು ಸಹಜವಾಗಿತ್ತು. ಅಥವಾ ನಿವೃತ್ತಿಯ ವಯಸ್ಸು 60 ಆಗಿರುವುದರಿಂದ ಆ ನಂತರವೂ ಬಹಳ ದಿನ ಬದುಕುಳಿಯುವುದು ಕಷ್ಟವೇ ಆಗಿತ್ತು. ಹಾಗೂ ಆ ಸಮಯದಲ್ಲಿದ್ದ ಕೂಡು ಕುಟುಂಬದ ಬೆಂಬಲವೂ ಪ್ರಬಲವಾಗಿಯೇ ಇತ್ತು.ಈಗ ನಮ್ಮ ಸರಾಸರಿ ಜೀವಿತಾವಧಿಯ ವಯಸ್ಸು 65 ಆಗಿದೆ. 60 ವರ್ಷ ಮೀರಿದ ಹಿರಿಯರ ಸಂಖ್ಯೆಯಲ್ಲಿ ಸಹಜವಾಗಿಯೇ ಹೆಚ್ಚಳ ಕಂಡುಬಂದಿದೆ. ತೀವ್ರಗತಿಯ ಹೆಚ್ಚಳವೇ ಕಂಡುಬಂದಿದೆ ಎನ್ನಲೂಬಹುದು. ಇದೀಗ 75 ಅಥವಾ 80ರ ಅಂಚಿನವರೆಗೂ ಬದುಕಿರುವುದು ಸಾಮಾನ್ಯವಾಗಿದೆ. ಹಾಗಾದರೆ ನಿವೃತ್ತಿಯ ನಂತರ 20ರಿಂದ 25 ವರ್ಷಗಳ ಜೀವಿತಾವಧಿ ಹೆಚ್ಚಾಗಿದೆ. ಇದಕ್ಕೆ ಜೀವನಸಂಗಾತಿಯ ಉಳಿದ ಜೀವಿತಾವಧಿಯನ್ನೂ ಸೇರಿಸಿ.

 

40 ವರ್ಷಗಳಲ್ಲಿ ನಾವೇನು ಗಳಿಸಿದ್ದೇವೆ. ಉಳಿಸಿದ್ದೇವೆ. ಅದು, ನನಗೂ, ನನ್ನ ಸಂಗಾತಿಗೂ ಇನ್ನೂ 20 ವರ್ಷಗಳವರೆಗೆ ಸಾಕಾಗುವಷ್ಟಿರಬೇಕು. ಮತ್ತೊಂದು ಮಾತೂ ನೆನಪಿರಲಿ, ಕೊನೆಯ 20 ವರ್ಷಗಳಲ್ಲಿ ನಮ್ಮ ಆರೋಗ್ಯದ ವೆಚ್ಚವೇ ಅಧಿಕವಾಗಿರುತ್ತದೆ. ಇಲ್ಲಿ ದರ ಏರಿಕೆ, ದುಬಾರಿ ಜೀವನದ ಬಗ್ಗೆಯೂ ನಾನು ಮಾತನಾಡುತ್ತಿಲ್ಲ. ಆದರೆ, ನಾನು ಮತ್ತು ನನ್ನ ಸಂಗಾತಿ 20-25 ವರ್ಷಗಳವರೆಗೆ ಯಾವುದೇ ಗಳಿಕೆ ಇಲ್ಲದೇ ಆರಾಮದಾಯಕ ಜೀವನ ಸಾಗಿಸುವುದು ಸಾಧ್ಯವೇ.ನಮ್ಮಲ್ಲಿ ಬಹುತೇಕ ಜನರು ಇದಕ್ಕೆ ಯೋಜನೆಯನ್ನೇ ಹಾಕಿಕೊಂಡಿರುವುದಿಲ್ಲ. ಹಾಗಾದರೆ ನಮ್ಮನ್ನು ಈ ಅವಧಿಯಲ್ಲಿ ನೋಡಿಕೊಳ್ಳುವವರು ಯಾರು? ... ನಮ್ಮ ಮಕ್ಕಳು.. ಆದರೆ, ಅವರಿಗೂ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ಹೀಗಾಗಿ ಸದ್ಯದ ತುರ್ತು ಅಗತ್ಯ ಏನೆಂದರೆ ನಾವು ನಮ್ಮ ನಿವೃತ್ತಿಯ ನಂತರವೂ, ನಮಗೆ ಸಾಧ್ಯವಿದ್ದಷ್ಟೂ ಗಳಿಕೆಯತ್ತ ಗಮನಹರಿಸಬೇಕು. ಅದು ಸರ್ಕಾರಿ ಕೆಲಸವಾಗಿರಲಿ ಅಥವಾ ಕಾರ್ಪೊರೇಟ್ ಕೆಲಸವಾಗಲಿ, ನಿವೃತ್ತಿಯ ನಂತರವೂ ನಿಮ್ಮ ಸಾಮರ್ಥ್ಯಕ್ಕೆ ಜೀವನಕ್ಕೆ ನೀವೇ ಆಧಾರವಾಗುವಂತೆ ಯೋಜಿಸಬೇಕಿದೆ. ಅಂಥ ಯೋಜನೆಯ ಅಗತ್ಯವಿದೆ.ಒಂದು ಸಮಾಜವಾಗಿ ನಾವು ನಮ್ಮ ಮಕ್ಕಳನ್ನು ನೋಡಿಕೊಳ್ಳಲು ಅನೇಕ ವ್ಯವಸ್ಥೆಗಳನ್ನು ರೂಪಿಸಿದ್ದೇವೆ. ನಮ್ಮ ಮಕ್ಕಳಿಗಾಗಿ 10 ವರ್ಷಗಳ ಶಾಲಾ ವ್ಯವಸ್ಥೆ ಇದೆ. 6 ವರ್ಷಗಳಿಂದ 16 ವರ್ಷಗಳವರೆಗೆ ಅವರ  ಬಹುತೇಕ ಕಾಲ ಶಾಲೆಯಲ್ಲಿಯೇ ಕಳೆಯುತ್ತದೆ. ಅದಕ್ಕೂ ಮುನ್ನ ನೋಡಿಕೊಳ್ಳಲು ಬಾಲವಾಡಿ ಅಥವಾ ಕಿಂಡರ್‌ಗಾರ್ಟನ್‌ಗಳಿವೆ. ನರ್ಸರಿ ಇವೆ. ಪ್ಲೇ ಹೋಮ್, ಪ್ಲೇ ಸ್ಕೂಲ್ ಮತ್ತು ಕ್ರೀಚ್ ಮುಂತಾದ ವ್ಯವಸ್ಥೆಗಳನ್ನು ಮಕ್ಕಳ ಅನುಕೂಲಕ್ಕಾಗಿ ನಿರ್ಮಿಸಿಕೊಂಡಿದ್ದೇವೆ. ಹಿರಿಯರಿಗಾಗಿ ಇಂಥ ಯಾವುದೇ ವ್ಯವಸ್ಥೆಗಳೂ ಇಲ್ಲ.ಹಿರಿಯರು ತಮ್ಮ ಕೌಶಲವನ್ನು ತಮ್ಮ ನಿವೃತ್ತಿಯ ನಂತರವೂ ಸಮರ್ಥವಾಗಿ ಬಳಸುವ ಬಗೆ ಹೇಗೆ. ಅದರಲ್ಲಿಯೇ ಅವರ ಸಮಯದ ಸದುಪಯೋಗ ಹೇಗಾಗಬಹುದು. ಅವರ ಏಕಾಂಗಿತನ ಹೋಗಲಾಡಿಸುವ ಯಾವುದಾದರೂ ಕೇಂದ್ರಗಳಿವೆಯೇ. ಅವರಿಗೂ ನೆಮ್ಮದಿ, ಆತ್ಮವಿಶ್ವಾಸ, ಆತ್ಮಸ್ಥೈರ್ಯ ಹಾಗೂ ಆತ್ಮಾಭಿಮಾನ ನೀಡುವಂಥ ಹೆಚ್ಚು ಹೆಚ್ಚು ಸಂಘ ಸಂಸ್ಥೆಗಳ ನಿರ್ಮಾಣವಾಗಬೇಕಿದೆ.ಇಲ್ಲಿ ಅವರ ಸಕಲ ಕೌಶಲಗಳ ಸದುಪಯೋಗವಾಗಬೇಕಿದೆ. ಈ ಮೂಲಕ ಅವರೂ ಸಂತಸದಿಂದಿರಬೇಕು. ಉದಾಹರಣೆಗೆ `ದಾದಾ-ದಾದಿ~ `ನಾನಾ-ನಾನಿ~ (ಅಜ್ಜಿ-ಅಜ್ಜ, ಅಜ್ಜಿ-ತಾತ) ಪಾರ್ಕ್‌ಗಳು ದೇಶದ ವಿವಿಧೆಡೆ ಇಂಥ ಕಾರ್ಯವನ್ನು ನಿರ್ವಹಿಸುತ್ತಿವೆ.ಇವು ಹಿರಿಯ ನಾಗರಿಕರಿಗೆ ಮನರಂಜನೆಯೊಂದಿಗೆ ಮಾಹಿತಿಯನ್ನೂ ನೀಡುತ್ತವೆ. ಈ ಪಾರ್ಕುಗಳನ್ನು ಸ್ಥಳೀಯ ಸಂಸ್ಥೆಗಳು, ಎನ್‌ಜಿಒಗಳು, ಹಿರಿಯ ನಾಗರಿಕರ ಸಮಾನ ಮನಸ್ಕರ ಸಮೂಹಗಳು ತಾವೇ ನಿರ್ಮಿಸಿಕೊಂಡಿವೆ. ಈ ಪಾರ್ಕುಗಳಿಗೆ ಸರ್ಕಾರದಿಂದ ಸ್ವಲ್ಪಮಟ್ಟದ ಸಹಾಯಧನವೂ ದೊರೆಯುತ್ತದೆ. ನಗರ ಪಾಲಿಕೆ ಅಥವಾ ಕೆಲವು ಸಂದರ್ಭದಲ್ಲಿ ದಾನಿಗಳು ದೇಣಿಗೆ ನೀಡುತ್ತಾರೆ.ಪ್ರಾಯೋಜಕತ್ವವೂ ದೊರೆಯುತ್ತದೆ. ನವದೆಹಲಿಯು ಈ ನಿಟ್ಟಿನಲ್ಲಿ ಅತಿ ಚಟುವಟಿಕೆಯಿಂದ ಕೂಡಿರುವ ಪ್ರದೇಶವಾಗಿದೆ.ನವದೆಹಲಿಯೊಂದರಲ್ಲಿಯೇ 75ಕ್ಕೂ ಹೆಚ್ಚಿನ ಅಂಥ ಸಂಸ್ಥೆಗಳಿವೆ. ದೆಹಲಿ ಸರ್ಕಾರವು ಈ ಸಂಸ್ಥೆಗಳಿಗೆ ಅಲ್ಪ ಪ್ರಮಾಣದ ಹಣಕಾಸಿನ ನೆರವನ್ನೂ ನೀಡುತ್ತದೆ. ಇಂಥ ಸಂಸ್ಥೆಗಳನ್ನು ಆರಂಭಿಸಲು ಸಾಕಷ್ಟು ಪ್ರೋತ್ಸಾಹ ಹಾಗೂ ಮಾರ್ಗದರ್ಶನವನ್ನೂ ನೀಡುತ್ತದೆ.ನಮ್ಮ ಶೋನಲ್ಲಿ ಹಿಮಾಂಶು ರಾಥ್ ಹೇಳಿದಂತೆ ಮತದಾರರ ಸಂಖ್ಯೆಯಲ್ಲಿ 60 ವರ್ಷ ಮೀರಿದ ಹಿರಿಯ ಮತದಾರರೇ ಹೆಚ್ಚಿನವರಾಗಿದ್ದಾರೆ.  ಈ ವಯೋಮಾನದ ಮತದಾರರ ಸಂಖ್ಯೆಯೂ ಹೆಚ್ಚುತ್ತಿದೆ. ನಮ್ಮ ಬಹುತೇಕ ರಾಜಕಾರಣಿಗಳ ವಯೋಮಿತಿಯೂ 60 ಮೀರಿದವರೇ ಆಗಿದ್ದಾರೆ. ನಮ್ಮಲ್ಲಿ ಈ ವ್ಯವಸ್ಥೆ ಇದ್ದರೂ ಕೇಂದ್ರ ಸರ್ಕಾರದಿಂದ ಅಥವಾ ರಾಜ್ಯ ಸರ್ಕಾರಗಳಿಂದಾಗಲಿ ಈ ಬಹುಸಂಖ್ಯಾತ ಸಮುದಾಯದ ಅನುಕೂಲಕ್ಕೆ ಯಾವುದೇ ಯೋಜನೆಗಳಿಲ್ಲ.ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯನ್ನು ಗ್ರಾಮೀಣ ಅಭಿವೃದ್ಧಿ ಸಚಿವಾಲಯವು ಜಾರಿಗೆ ತಂದಿದೆ. ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಬದುಕುತ್ತಿರುವ 65 ವರ್ಷದ ಅಥವಾ 65 ವರ್ಷ ಮೀರಿದ ವೃದ್ಧರು ಈ ಯೋಜನೆಯ ಫಲಾನುಭವಿಯಾಗಲು ಅರ್ಹರಾಗಿದ್ದಾರೆ. ಪ್ರತಿ ತಿಂಗಳೂ ವೃದ್ಧರಿಗೆ  ರೂ 200ಗಳ ಮಾಸಾಶನವನ್ನು ನಿಗದಿಪಡಿಸಲಾಗಿದೆ.ಬಹುತೇಕ ರಾಜ್ಯಗಳು ರೂ 200-500  ಗಳ ನಡುವೆ ಮಾಸಾಶನ ನೀಡುತ್ತವೆ. ಇದು ಕೇವಲ ಬಡತನದ ರೇಖೆಗಿಂತ ಕೆಳಗಿರುವ ವೃದ್ಧರಿಗೆ ಮಾತ್ರ ಅನ್ವಯವಾಗುತ್ತದೆ. ಕೆಲವು ರಾಜ್ಯಗಳು ತಮ್ಮ ಔದಾರ್ಯ ತೋರುತ್ತಿವೆ. ತಮಿಳುನಾಡಿನಲ್ಲಿ ರೂ 1000 ಮಾಸಾಶನ, ಜೊತೆಗೆ 20 ಕೆ.ಜಿ ಉಚಿತ ಅಕ್ಕಿಯನ್ನು ನೀಡುತ್ತದೆ. ಬಿಪಿಎಲ್ ಕಾರ್ಡುದಾರರಿಗೆ 35 ಕೆ.ಜಿ ಅಕ್ಕಿ ನೀಡುತ್ತದೆ. ಗೋವಾ ಸರ್ಕಾರವು `ಬಿಪಿಎಲ್~ ಅರ್ಹತೆಯನ್ನು ಬದಿಗೊತ್ತಿ ಎಲ್ಲ ಹಿರಿಯ ನಾಗರಿಕರಿಗೂ ರೂ 2000 ಮಾಸಾಶನ ನೀಡುತ್ತದೆ.ನಾವು ಕೇವಲ ನಮ್ಮ ಹಿರಿಯರ ಕಾಲು ಮುಟ್ಟುವದರಿಂದ ಮಾತ್ರ ಏನೂ ಆಗುವುದಿಲ್ಲ. ಅದು ಕೇವಲ ಸಂಪ್ರದಾಯ ಅಥವಾ ಪರಂಪರೆಯ ಹೆಸರಿನಲ್ಲಿ ತಲೆಬಾಗಿಸುವ, ಹಣೆಮುಟ್ಟಿಸುವ ಒಂದು ಅರ್ಥಹೀನ ಕ್ರಿಯೆ ಮಾತ್ರ ಆಗಬಾರದು. ಅದರ ಬದಲು, ನಮಗಾಗಿ ನಮ್ಮ ಹಿರಿಯರು ಮಾಡಿರುವ ತ್ಯಾಗ, ತೋರಿರುವ ಪ್ರೀತಿಗೆ ನಮ್ಮಳಗಿನಿಂದ ತೋರುವ ಗೌರವ ಆದರ ಹಾಗೂ ಪ್ರೀತಿ ವಾತ್ಸಲ್ಯವೂ ಕೂಡಿರಬೇಕು.

ಇಂದು ನಮ್ಮ ಹಿರಿಯರು ಇರುವ ಸ್ಥಾನದಲ್ಲಿಯೇ ನಾವೆಲ್ಲರೂ ನಾಳೆ ಇರಬೇಕಿದೆ ಎಂಬುದನ್ನು ನಾವ್ಯಾರೂ ಮರೆಯಬಾರದು.

 ಜಯ್ ಹಿಂದ್. ಸತ್ಯಮೇವ ಜಯತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry