ಅಮೃತಭೂಮಿ: ರೈತೋತ್ಸವಕ್ಕೆ ಇಂದು ಚಾಲನೆ

7
ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಜಯಂತಿ

ಅಮೃತಭೂಮಿ: ರೈತೋತ್ಸವಕ್ಕೆ ಇಂದು ಚಾಲನೆ

Published:
Updated:
ಅಮೃತಭೂಮಿ: ರೈತೋತ್ಸವಕ್ಕೆ ಇಂದು ಚಾಲನೆ

ಚಾಮರಾಜನಗರ: ತಾಲ್ಲೂಕಿನ ಹೊಂಡರಬಾಳು ಗ್ರಾಮದ ಸಮೀಪದಲ್ಲಿರುವ ಅಮೃತಭೂಮಿಯಲ್ಲಿ ಬುಧವಾರ (ಫೆ. 13) ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 77ನೇ ಜಯಂತಿ ಹಾಗೂ ಗ್ರಾಮ ಸ್ವರಾಜ್ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದೆ.`ರೈತೋತ್ಸವ' ಹೆಸರಿನಡಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕ, ಅಖಿಲ ಭಾರತ ರೈತ ಸಂಘಟನೆಗಳ ಒಕ್ಕೂಟದಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ದೇಸಿ ಬೀಜದ ವೈವಿಧ್ಯತೆಯ ಪ್ರದರ್ಶನವಿದೆ.

ರೈತಚೇತನ ನಂಜುಂಡಸ್ವಾಮಿ ಅವರ ಕನಸಿನಂತೆ ಅಮೃತಭೂಮಿಯನ್ನು ಅಂತರರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರವಾಗಿ ರೂಪಿಸುವ ಆಶಯ ಹೊಂದಲಾಗಿದೆ.ನಂಜುಂಡಸ್ವಾಮಿ ಅವರ ಕನಸಿನ ಕೂಸಾದ ಅಮೃತಭೂಮಿಯಲ್ಲಿ ಈಗಾಗಲೇ ಅವರ ಹೆಸರಿನಡಿ ಜೀವನ ಶಾಲಾ ಸಭಾಂಗಣ ನಿರ್ಮಿಸಲಾಗಿದೆ. ರೈತ ಹೋರಾಟಗಾರ `ಮಹೇಂದ್ರಸಿಂಗ್ ಟಿಕಾಯತ್ ಹೋರಾಟದ ನೆಲೆ' ಹೆಸರಿನ ಸಭಾಂಗಣ ಪೂರ್ಣಗೊಳ್ಳುವ ಹಂತದಲ್ಲಿದೆ. ಅಮೃತಭೂಮಿಯನ್ನು ರೈತ ಚಳವಳಿಯ ನೆಲೆಯಾಗಿಸುವ ಗುರಿ ಹೊಂದಲಾಗಿದೆ.ಫೆ. 13ರಂದು ಬೆಳಿಗ್ಗೆ 11 ಗಂಟೆಗೆ ರೈತೋತ್ಸವಕ್ಕೆ ಸಾಹಿತಿ ದೇವನೂರ ಮಹಾದೇವ ಚಾಲನೆ ನೀಡಲಿದ್ದಾರೆ. ಕೇರಳದ ಆದಿವಾಸಿ ಚಳವಳಿಯ ರೂವಾರಿ ಸಿ.ಕೆ. ಜಾನು, ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ, ನೈಸರ್ಗಿಕ ಕೃಷಿತಜ್ಞ ಸುಭಾಷ್ ಪಾಳೇಕರ್, ಲೋಹಿಯಾವಾದಿ ಪ್ರೊ.ಯೋಗೇಂದ್ರ ಯಾದವ್, ಕಾನೂನು ತಜ್ಞ ಪ್ರೊ.ರವಿವರ್ಮ ಕುಮಾರ್, ವಿಶ್ವ ರೈತ ಒಕ್ಕೂಟದ ಮುಖ್ಯಸ್ಥರಾದ ಹೆನ್ರಿ ಸಾರಾಗಿ ಭಾಗವಹಿಸಲಿದ್ದಾರೆ.ವಿಚಾರ ಸಂಕಿರಣ: ರೈತೋತ್ಸವದ ಭಾಗವಾಗಿ ಫೆ. 13 ರಿಂದ 16 ರವರೆಗೆ ಪ್ರಸ್ತುತ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆ ಕುರಿತು ಚರ್ಚಿಸಲು ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ನರ್ಮದಾ ಬಚಾವೋ ಆಂದೋಲನದ ರೂವಾರಿ ಮೇಧಾ ಪಾಟ್ಕರ್, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ್ ಹಂದೆ ಸೇರಿದಂತೆ ಕೃಷಿ, ರಾಜಕೀಯ ತಜ್ಞರು  ಭಾಗವಹಿಸಲಿದ್ದಾರೆ. ಕುಲಾಂತರಿ ತಳಿ ಬೀಜದ ಹಾವಳಿ, ದೇಸಿ ಬೀಜ ಸಂರಕ್ಷಣೆ, ಪರ್ಯಾಯ ರಾಜಕಾರಣ ಕುರಿತು ವಿಚಾರ ಮಂಥನ ನಡೆಯಲಿದೆ.

ನಂಜುಂಡಸ್ವಾಮಿ ಪ್ರಶಸ್ತಿ

ಚಾಮರಾಜನಗರ: ದೇಸಿ ಬೀಜ ಸಂರಕ್ಷಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ರೈತ ಸಂಘದ ಕಾರ್ಯಕರ್ತರಾದ ಕೊಳ್ಳೇಗಾಲ ತಾಲ್ಲೂಕಿನ ಹೊಸಮಾಲಂಗಿ ಗ್ರಾಮದ ರೇಚಣ್ಣ ಹಾಗೂ ಹಾವೇರಿ ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ನಾಗಪ್ಪ ಚನ್ನಬಸಪ್ಪ ನಿಂಬೆಗೊಂದಿ ಅವರಿಗೆ ಈ ಬಾರಿಯ ಪ್ರೊ.ಎಂ.ಡಿ.ಎನ್. ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.`ರೇಚಣ್ಣ 14 ವಿಧದ ದೇಸಿ ಬತ್ತದ ತಳಿ ಸಂರಕ್ಷಣೆ ಮಾಡಿದ್ದಾರೆ. ನಾಗಪ್ಪ ಚನ್ನಬಸಪ್ಪ ನಿಂಬೆಗೊಂದಿ ಅವರು 108 ವಿಧದ ದೇಸಿ ತಳಿ ಸಂರಕ್ಷಿಸಿದ್ದಾರೆ. ಇದರಲ್ಲಿ 42 ಹತ್ತಿ ತಳಿಗಳಿವೆ. ರೈತೋತ್ಸವದಲ್ಲಿಯೇ ಈ ಇಬ್ಬರ ಹೆಸರು ಘೋಷಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು' ಎಂದು ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry