ಬುಧವಾರ, ಏಪ್ರಿಲ್ 14, 2021
31 °C

ಅಮೃತ್ ಮಹಲ್ ರಾಸಿಗೆ ಮೇವು ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜ್ಜಂಪುರ: ಇಲ್ಲಿಗೆ ಸಮೀಪದ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿರುವ ರಾಸುಗಳಿಗೆ ಮೇವಿನ ಕೊರತೆ ಎದುರಾಗಿದೆ. ಮೇವು ಬೆಳೆಯಲು ಇರುವ ಜಮೀನನ್ನು ಉಳುಮೆ ಮಾಡಿ ಹಾಗೆ ಬಿಟ್ಟಿದ್ದು, ಬಿತ್ತನೆಯಾಗದೆ ರಾಸುಗಳಿಗೆ ಆಹಾರದ ಸಮಸ್ಯೆಯಾಗಲಿದೆ.ಸುಮಾರು 500 ವರ್ಷ ಇತಿಹಾಸ ಹೊಂದಿರುವ ಈ ತಳಿ ಸಂವರ್ಧನಾ ಕೇಂದ್ರದಲ್ಲಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಸುತ್ತಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಕೆಲ ತಿಂಗಳ ಹಿಂದೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಜಮೀನು ಪಾಳುಬಿಟ್ಟ ವರದಿ ನೋಡಿದ ಅಧಿಕಾರಿಗಳು ಜಮೀನು ಉಳುಮೆ ಮಾಡಿಸಿದ್ದರು. ಆದರೆ ಆನಂತರ ಯಾವುದೇ ಕೆಲಸ ನಡೆಸದೆ ಹಾಗೆ ಬಿಟ್ಟಿದ್ದಾರೆ.ಒಟ್ಟು ವಿಸ್ತೀರ್ಣ 651 ಎಕರೆ ವಿಸ್ತೀರ್ಣದ ಸಂವರ್ಧನಾ ಕೇಂದ್ರದಲ್ಲಿ ಸಾಕಷ್ಟು ರಾಸುಗಳಿವೆ. ಫಾರಂನಲ್ಲಿ ಸಾಕಷ್ಟು ಜಾಗಲಿಲ್ಲದೆ ಒತ್ತೊತ್ತಾಗಿ  ನಿಲ್ಲುವ ಜತೆಗೆ ಅವುಗಳು ಮೇವಿನ ತೊಂದರೆಯನ್ನೂ ಅನುಭವಿಸುವಂತಾಗಿದೆ. ಬೇಸಿಗೆ ಬರಲಾರಂಭಿಸಿದ್ದು ಇನ್ನಷ್ಟು ಮೇವಿನ ಕೊರತೆ ಕಾಡುವ ಭಯವಿದೆ.ಫಾರಂನ ರಾಸುಗಳಿಗೆ ಬೇಸಿಗೆ ಕಾಲದಲ್ಲಿ ಮೇವಿನ ಅಭಾವ ಇರಬಾದೆಂದು ಒಂದಷ್ಟು ಜಾಗವನ್ನು ಮೇವು ಬೆಳೆಯಲು ಬಳಸಲಾಗುತ್ತಿದೆ. ಅಲ್ಲಿ ಈ ಹಿಂದಿನ ವರ್ಷಗಳಲ್ಲಿ ಉಳುಮೆ ಮಾಡಿ ವಿವಿಧ ರೀತಿಯ ಹುಲ್ಲಿನ ತಳಿ ಹಾಗೂ ಮೆಕ್ಕೆಜೋಳ ಬೆಳೆಯಲಾಗುತ್ತಿತ್ತು.ಫಾರಂನಲ್ಲಿ ಕೆಲಸ ಮಾಡುವವರಿಗೆ ಯಾವ ಮೇವು ಬೆಳೆಯಬೇಕು, ಹೇಗೆ ಬೆಳೆಯಬೇಕು ಹಾಗೂ ಯಾವಾಗ ಬೆಳೆಯಬೇಕು ಎಂಬ ಪ್ರಾಥಮಿಕ ಜ್ಞಾನ ಸಹ ಇಲ್ಲ. ‘ಈ ಫಾರಂ ಅನ್ನು ರಾಮಚಂದ್ರಪುರ ಮಠಕ್ಕೆ ವಹಿಸಿಕೊಡುವಲ್ಲಿ ಸರ್ಕಾರ ಗಮನ ಹರಿಸಿತ್ತು. ಅದು ಬಿಟ್ಟರೆ ಇದುವರೆಗೂ ಸಹ ಯಾವ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ. ಸರ್ಕಾರ ಹಣ ಪೋಲು ಮಾಡುತ್ತಿದೆ’ ಎಂದು ರೈತರೊಬ್ಬರು ದೂರಿದರು.ಇನ್ನು ಶಾಸಕ ಡಿ.ಎಸ್.ಸುರೇಶ್ ಇದೇ ದಾರಿಯಲ್ಲಿ ಸಂಚರಿಸುತ್ತಿದ್ದರೂ ತಳಿ ಸಂವರ್ಧನಾ ಕೇಂದ್ರದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇತ್ತೀಚೆಗೆ ಅಜ್ಜಂಪುರ, ಕುಡ್ಲೂರು, ಶಿವನಿ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರಾದ ಕೃಷ್ಣಮೂರ್ತಿ, ಕೆ.ಆರ್.ಆನಂದಪ್ಪ, ಎಸ್.ಬಿ. ಆನಂದಪ್ಪ ಫಾರಂ ಬಗ್ಗೆ ಏನು ಕ್ರಮ ವಹಿಸುವರು ಎಂದು ಗ್ರಾಮಸ್ಥರು ಕಾಯುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.