ಸೋಮವಾರ, ನವೆಂಬರ್ 18, 2019
27 °C

ಅಮೃತ ಗಳಿಗೆ

Published:
Updated:

ಮಿನಿಕಥೆ

ಒಂದು ಎರಡೇ ಗಿರಾಕಿಗಳನ್ನು ತಣಿಸುವಷ್ಟರಲ್ಲಿ ಅವಳ ಮೈ ಭಾರ ಎನಿಸತೊಡಗಿತ್ತು. ಮನಸ್ಸಿಗೇಕೋ ದಣಿವಾದಂತಾಗಿತ್ತು. ಮೈ, ಮನಸ್ಸುಗಳಲ್ಲಿ ಜಡತ್ವ ತುಂಬತೊಡಗಿತ್ತು. ಮೂರನೇ ಗಿರಾಕಿಯನ್ನು ಅಂಟಿಸಿಕೊಳ್ಳುವುದು ಬೇಡ, ಹಾಸಿಗೆಗೆ ಅಡರಿಕೊಂಡು ಮೈ ತುಂಬಾ ಚದ್ದರ್ ಹೊದ್ದುಕೊಂಡು ಮಲಗಿಬಿಟ್ಟರಾಯಿತು ಎಂದುಕೊಳ್ಳುತ್ತಾ ಎರಡನೆಯವನನ್ನು ಸಾಗಹಾಕುವಷ್ಟರಲ್ಲಿ, ಮೂರನೆಯವನು ವಕ್ಕರಿಸಬೇಕೇ? ಬಾಗಿಲಲ್ಲಿ ಸಣಕಲು ದೇಹದ ಪೋರನೊಬ್ಬ ನಿಂತಿದ್ದ.`ಏನೋ ಪೊಟ್ಯಾ, ನಿಂದೇನೋ ಇಲ್ಲಿ ಕೆಲಸ? ಇಲ್ಲಿಗೇಕೆ ಬಂದಿರುವಿ? ಹೋಗ್ಹೋಗು ನಿನ್ನ ಕೆಲಸ ನೋಡಿಕೋ' ಎನ್ನುತ್ತಾ ಬಾಗಿಲಿಕ್ಕಿಕೊಳ್ಳಲು ಮುಂದಾಗಿದ್ದಳು ಅವಳು.`ಈಗ ಇಲ್ಲಿಂದ ಹೋದ್ನಲ್ಲ ಅವನು, ಯಾತಕ್ಕಾಗಿ ನಿನ್ನ ಹತ್ರ ಬಂದಿದ್ನೋ, ನಾನೂ ಅದಕ್ಕೇ ಬಂದಿದ್ದೇನೆ' ಪೋರ ಅಂದ ಖಡಕ್ಕಾಗಿ.`ಅಲ್ಲೋ, ನೋಡಿದ್ರೆ ಸಣ್ಣ ಪೋರ ಇದ್ದಾಂಗ ಅದಿ. ನಿನ್ನಂತವರು ಇಲ್ಲಿಗೆ ಬರಬಾರ‌ದು, ಹೋಗು' ಎಂದಳಾಕೆ.

`ಯಾಕೆ ನಾನೂ ಸುಖ ಅನುಭವಿಸಬಾರ‌ದೇನು?' ಪೋರ ಪಟ್ಟು ಬಿಡಲಿಲ್ಲ.`ತುಟಿ ಮ್ಯೋಲೆ ಇನ್ನೂ ಮೀಸಿ ಸಹ ಕಪ್ಪಾಗಿಲ್ಲ. ಆಗಲೇ ಹೆಣ್ಣು ಬೇಕೇನೋ ನಿಂಗೆ?'

`ತುಟಿ ಮ್ಯೋಲೆ ಮೀಸಿ ಢಾಳಾಗಿ ಕಪ್ಪಾಗದಿದ್ರೂ ಚಿಗುರೊಡೆದಿದೆಯಲ್ಲಾ, ಅಷ್ಟು ಸಾಕಲ್ಲವೇ? ನನಗೇನು ವಯಸ್ಸು ಕಡಿಮೆ ಅಂತ ತಿಳಕೊಂಡಿಯೇನು? ಈಗ ಮೊನ್ನೆ ಉಗಾದಿಗೆ ಇಪ್ಪತ್ತು ತುಂಬಿ ಇಪ್ಪತ್ತೊಂದು ನಡೀಲಕ್ಕೆ ಹತ್ಯಾವ. ಯಾಕ ನನ್ನ ಪೌರುಷದ ಮ್ಯೋಲ ಅನುಮಾನವೇನು ನಿನಗೆ?'

`ನಿನಗೆ ನನ್ನ ಜೊತಿ ಏಗಲಿಕ್ಕಾಗತೈತೇನೋ ಪೋರಾ?'

`ಯಾಕಾಗದು?'

`ನಿನ್ನಲ್ಲಿ ಅಂಥ ತಾಕತ್ತಿಲ್ಲ ಅಂತ ನನಗನಿಸಕತ್ತೈತೆ'.`ಹೆಣ್ಣು ಹುಡುಗೀರು ಹನ್ನೊಂದು-ಹನ್ನೆರಡಕ್ಕೇ ಚಿಗುರಲು ಮುಂದಾದ್ರೆ, ಗಂಡು ಹುಡುಗ್ರು ಹದಿನಾರಕ್ಕೇ ಬೆದೆಗೆ ಬರ‌ತಾರೆ ಅನ್ನೋದು ನಂಗೇನೂ ತಿಳೀದ  ಸಂಗ್ತಿಯಲ್ಲ. ಹಿರೇರೇ ಈ ಮಾತು ಹೇಳಿರ‌ವಾಗ ಇನ್ನೇನು ಬಿಡು'.`ನೀನೇನೋ ನಿಂಗೆ 21 ನಡೀತೈತೆ ಅಂತ ಹೇಳ್ಲಿಕ್ಕತ್ತಿದೀ. ಆದ್ರ ನಿನ್ನ ನೋಡಿದ್ರ ಹದಿನೈದೋ, ಹದಿನಾರೋ ತುಂಬಿರಬೇಕು ಅಂತ ನನಗನಿಸತೈತೆ. ಸುಮ್ಮನೇ ಹೋಗಿಬಿಡು. ಮೇಲಾಗಿ ನಂಗ್ಯಾಕೋ ಇಂದು ಮನಸ್ಸಿಲ್ಲ'.`ಹಂಗಂದ್ರೆ ಹೆಂಗ? ನಾನೇನು ದುಡ್ಡು ಕೊಡಲಿಕ್ಕಿಲ್ಲ ಅಂತ ನಿಂಗೆ ಅನುಮಾನ ಏನು? ಹಾಗೇನಿಲ್ಲ. ನೀ ಕೇಳಿದಷ್ಟು ದುಡ್ಡು ಕೊಡುವೆ' ಎನ್ನುತ್ತಾ ಪೋರ ತನ್ನ ಮಾಸಿದ ಪ್ಯಾಂಟಿನ ಜೇಬಿನಿಂದ ಸಾವಿರ, ಐದು ನೂರರ ನೋಟುಗಳನ್ನು ಅವಳ ಮುಂದೆ ಹಿಡಿದ.`ಹೌದು, ನಿಂಗೆ ಇದು ಮೊದಲ ಅನುಭವನಾ ಅಥವಾ ಈಗಾಗ್ಲೇ ಹೆಣ್ಣಿನ ಸುಖ ಉಂಡಿದೆಯಾ ಈ ನಿನ್ನ ಸಣಕಲು ದೇಹ?' ಅವಳು ಕಿಚಾಯಿಸಿದಳು.`ನಿನಗದೆಲ್ಲಾ ಯಾಕೆ? ನೀ ಹಣಕ್ಕಾಗಿ ಮೈ ಮಾರಿಕೊಳ್ಳುವಾಕಿ ಅಲ್ಲವಾ? ನೀ ಕೊಡುವ ಸುಖಕ್ಕೆ ನೀ ಕೇಳಿದಷ್ಟು ಹಣ ಕೊಟ್ಟುಬಿಟ್ಟರಾಯಿತು ತಾನೇ?'`ಸುಮ್ಮನೇ ಕೇಳಿದೆ ಅಷ್ಟೆ. ಎಷ್ಟೋ ಪೋರರು ತಮಗೇನೂ ಗೊತ್ತಿರದಿದ್ರೂ ಎಲ್ಲಾ ಗೊತ್ತಿರುವವರ ಹಾಗೆ ನಾಟಕ ಮಾಡಿ ನನ್ನ ಜೊತೆಗೆ ಆಟಕ್ಕೆ ಇಳಿದಾಗ ಸೋತೋಗ್ತಾರೆ. ಅದಕ್ಕೇ ಕೇಳಿದೆ. ಮೊದಲ ಸಲ ಅಂದ್ರೆ ನಾನು ಅಂಥಹವರಿಗೆ ಅ ಆ ದಿಂದ ಪಾಠ ಶುರುಮಾಡಿ ಕ್ಷ, ಜ್ಞ ವರೆಗೆ ಕಲಿಸಿ ತೃಪ್ತಿಪಡಿಸುವೆ. ನಿನಗೆ ಅಷ್ಟು ಅವಸರವಿದೆಯೇ ಹೆಂಗೆ?'`ಹಾಗೇನೂ ಅವಸರದ ಪ್ರಕೃತಿಯವನಲ್ಲ ನಾನು. ಆದರೆ ನೀನು ಎಷ್ಟು ಅವಸರದಾಕಿ ಅಂತ ನಂಗೆ ಚೆನ್ನಾಗಿ ಗೊತ್ತೈತೆ ಬಿಡು. ಅದಕ್ಕೇ ನೀನು ನಿನ್ನ 13ನೇ ವಯಸ್ಸಿನಿಂದ್ಲೇ ಈ ದಂಧೆಗೆ ಇಳಿದಿರುವಿ ಅಲ್ವಾ'.`ಇದೇನಪ್ಪಾ ಈ ಪೋರ ನನ್ನ ಪೂರ್ವಾಪರ ಎಲ್ಲವನ್ನೂ ತಿಳ್ಕೊಂಡೇ ಬಂದಿರೋ ಹಂಗಿದೆ' ಎಂದಾಕೆ ತನ್ನಲ್ಲೇ ಗೊಣಗಿಕೊಂಡಳು.`ಒಂದು ಚೂರು ತಡಿ. ಮೊದಲು ನಾನು ತಂದಿರೋ ಈ ಮಿರ್ಚಿ, ಬಜಿ, ಖಾರದ ಮಂಡಕ್ಕಿ ತಿಂದು ಆಮೇಲೆ ಮುಂದಿನ ಕೆಲಸಕ್ಕೆ ಅಣಿಯಾಗೋಣ' ಎಂದು ಹೇಳುತ್ತಾ ಪೋರ ತನ್ನ ಕೈಯಲ್ಲಿದ್ದ ಪ್ಯಾಕೆಟ್‌ಅವಳ ಕೈಗಿಟ್ಟ. ಮಿರ್ಚಿ-ಬಜಿಯ ವಾಸನೆ ಘಮಘಮ ಎಂದು ಮೂಗಿಗೆ ಬಡಿಯಿತು. ಅವಳಿಗೆ ಇಂತಹ ಅನುಭವ ಹಿಂದೆ ಎಂದೂ ಆಗಿರಲಿಲ್ಲ. ಬರುವ ಗಿರಾಕಿಗಳೆಲ್ಲಾ ಸುಖ ಪಡೆಯುವ ಆತುರಲ್ಲಿ ಇರುತ್ತಿದ್ದರೇ ವಿನಾ ಅವಳ ಕಷ್ಟ-ಸುಖವನ್ನೆಂದೂ ಕೇಳಿದವರಲ್ಲ.`ನಿನ್ನಂಥವಳ ಹತ್ತಿರ ಬಂದ ಮೇಲೆ ಆ ಸುಖ ಸಿಕ್ಕೇ ಸಿಗ್ತದೆ. ಸಿಗ್ದೇ ಅದೆಲ್ಲಿಗೆ ಹೋಗ್ತದೆ? ಆ ಸುಖ ಕೊಡಲು ನೀನು ತಯಾರಾಗೇ ಇರುತ್ತೀ ಅಲ್ಲವೇ? ಆದರೆ ಆ ಸುಖದಾಚೆಗೂ ಇಂಥಾ ಮರೆಯಲಾರದ ಕ್ಷಣಗಳು ಇರುತ್ತವೆ' ಎಂದು ಹೇಳುತ್ತಾ ಪೋರ ಪ್ಯಾಕೆಟ್‌ನ್ನು ಬಿಚ್ಚಿ ಅವಳ ಬಾಯಿಯಲ್ಲಿ ಮಿರ್ಚಿ-ಬಜಿ ಇಡುತ್ತಾ ಸಂಭ್ರಮಿಸತೊಡಗಿದ. ಮಗುವೊಂದು ತಾಯಿಗೆ ಆತ್ಮೀಯತೆಯಿಂದ ಉಪಚಾರ ಮಾಡುತ್ತಿರುವ ಅನುಭವ ಜೀವನದಲ್ಲೇ ಮೊದಲ ಬಾರಿಗೆ  ಅವಳಿಗಾಯಿತು. ಅಷ್ಟಕ್ಕೇ ಅವಳ ಕಣ್ಣಾಲಿಗಳು ತುಂಬತೊಡಗಿದ್ದವು.ಅವಳಿಗೆ ಏನನ್ನಿಸಿತೋ ಏನೋ? ಮಿರ್ಚಿ-ಬಜಿ ತಿನ್ನುತ್ತಲೇ, ಪೋರನನ್ನು ತನ್ನೆದೆಗೆ ಒತ್ತಿ ಹಿಡಿದುಕೊಳ್ಳುತ್ತಾ ಅವನ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ಲೊಚಲೊಚನೆ ಮುದ್ದಿಸತೊಡಗಿದಳು. ಬಳಿಕ `ಯಾಕೋ, ನೀನು ನನಗೆ ಮುದ್ದಿಸುತ್ತಲೇ ಇಲ್ಲವಲ್ಲ?' ಎಂದು ಪೋರನನ್ನು ಕೇಳಿಯೇ ಬಿಟ್ಟಳು.`ಈಗ ನೀನು ನನ್ನನ್ನು ಮುದ್ದಿಸಿದ್ದೇನೋ ಸರಿ. ಆದರೆ ಆ ಕಾವಿನಲ್ಲಿ ಕಾಮದ ವಾಸನೆ ಕಾಣಲಿಲ್ಲ, ಮಾತೆಯ ಮಮತೆ ಇದ್ದಂಗಿತ್ತಲ್ಲ?'`ಹೌದು. ನಿನಗೇಗೆ ಗೊತ್ತಾತು?'

`ಮಗನಿಗೆ ತಾಯಿಯ ಮಮತೆ ಗೊತ್ತಾಗಂಗಿಲ್ಲೇನು?'

`ಅಂದ್ರೆ?'`ಅಂದ್ರೆ ನಾನು ನಿನ್ನ ರಕ್ತ ಮಾಂಸ ಹಂಚಿಕೊಂಡು ಹುಟ್ಟಿದ ಮಗ. ಇಪ್ಪತ್ತು ವರ್ಷಗಳ ಹಿಂದೆ ನೀನು ಪ್ರೀತಿಸಿದವನೊಟ್ಟಿಗೆ ದೇಹ ಹಂಚಿಕೊಂಡು, ನಂತರ ನಿನ್ನ ಮಡಿಲು ತುಂಬತೊಡಗಿದಾಗ ಆ ಹಸುವಿನ ವೇಷದ ಹೆಬ್ಬುಲಿ ನಿನ್ನನ್ನು ನಡು ನೀರಿನಲ್ಲಿ ಬಿಟ್ಟು ಹೋದದ್ದು ನಿಂಗೆ ಗೊತ್ತೇ ಐತೆ. ಕ್ಷಣಿಕ ಸುಖದ ಆಸೆಗಾಗಿ ಕಳ್ಳ ಬಸಿರಾಗಿ, ಹೊತ್ತು ಹೆತ್ತು ನಂತ್ರ ತಿಪ್ಪೇಲಿ ಬಿಸಾಕಿ ಹೋಗಿದ್ದೆಯಲ್ಲಾ, ಅದೇ ಅನಾಮಿಕ, ನಿರ್ಗತಿಕ ಕೂಸು ನಾನು'.`ಹೌದೇ ಕಂದಾ?'

`ಹೌದಮ್ಮೋ, ನಾನು ನಿನ್ನ ಕಂದನೇ. ಇಷ್ಟೊತ್ತಿನವರೆಗಿನ ನನ್ನ ಮಾತಿನಿಂದ ನಿಂಗೆ ಹಿಂಸೆ, ಬೇಸರವಾಗಿರಬೇಕು. ಈವರೆಗೆ ನಾನಾಡಿದ್ದು ಬರೀ ನಾಟಕ ಅಷ್ಟೇ. ನಿನ್ನ ಮನಸ್ಸಿಗೆ ನೋವಾಗಿದ್ದರೆ ನನ್ನನ್ನ ಕ್ಷಮಿಸಿಬಿಡು'.

`ಅಯ್ಯೋ ನನ್ನಪ್ಪಾ, ನನಗ್ಯಾಕೆ ನೋವಾಗುತ್ತೆ? ನನಗೆ ಎಳ್ಳಷ್ಟೂ ನೋವಿಲ್ಲ. ನನ್ನ ವರ್ತನೆಯಿಂದ ನಿನಗೇ ನೋವಾಗಿರಬೇಕು. ನನ್ನನ್ನು ಕ್ಷಮಿಸಿಬಿಡು' ಎಂದು ಅವಳು ಹೇಳುತ್ತಿದ್ದಂತೆ ಪೋರ, `ಅಮ್ಮೋ, ನಾನೀಗ ನಿನ್ನನ್ನ ಮನಸಾರೆ ಮುದ್ದಿಸುವೆ' ಎಂದು ಮುದ್ದಿಸುತ್ತಾ ಅವಳನ್ನು ಸಂತೈಸಿದ. ತಾಯಿ, ಮಗನ ಸಂಭ್ರಮಕ್ಕೆ ಕೊನೆ ಇರಲಿಲ್ಲ.`ಅಮ್ಮೋ, ಈಗಲೇ ನೀನು ಗಂಟು ಮೂಟೆ ಕಟ್ಟು. ಬೇರೆ ಊರಿಗೆ ಹೋಗೋಣ. ದುಡಿದು ನಿನ್ನನ್ನು ಸಾಕುವ ತಾಕತ್ತು ನನ್ನಲ್ಲಿದೆ. ನೀನು ಇಂಥವಳೆಂದು ನನಗೇನೂ ಬೇಸರವಿಲ್ಲ. ನೀನೆಷ್ಟಾದರೂ ನನಗೆ ಜನ್ಮ ಕೊಟ್ಟ ತಾಯಿ. ನನ್ನ ತಂದೆ ಯಾರೆಂದು ನಿನಗಷ್ಟೇ ಗೊತ್ತಿರಬೇಕು. ಅವನ್ಯಾರೇ ಇದ್ದರೂ ನನಗೆ ಚಿಂತೆ ಇಲ್ಲ. ಈಗಿನಿಂದ ನೀನು ಹೊಸ ಮನುಷ್ಯಳು' ಎನ್ನುತ್ತಾ ಪೋರ ತಾಯಿಯ ಮಮತೆಯ ಅಪ್ಪುಗೆಯಿಂದ ಹೊರಬರುತ್ತ ಅವಳ ಸಾಮಾನು ಸರಂಜಾಮುಗಳನ್ನು ಗಂಟು ಕಟ್ಟತೊಡಗಿದ.ಪ್ರಾತಃಕಾಲದ ಶುಭ ಸಮಯದಲ್ಲಿ, ಆಕಾಶ ಕೆಂಪೊಡೆಯುವ ಅಮೃತ ಗಳಿಗೆಯ ಆ ಹೊತ್ತಿನಲ್ಲಿ ತಾಯಿ, ಮಗ ಇಬ್ಬರೂ ತಮ್ಮ ಬಾಳಿನಲ್ಲಿ ಹೊಸ ಲೋಕವೊಂದನ್ನು ಕಂಡುಕೊಳ್ಳಲು ಆ ಕತ್ತಲ ಕೂಪದಿಂದ ನಿಧಾನವಾಗಿ ಹೆಜ್ಜೆ ಹೊರ ಹಾಕತೊಡಗಿದರು.

 

ಪ್ರತಿಕ್ರಿಯಿಸಿ (+)