ಅಮೃತ ಭೂಮಿ : ಬೆಳೆಗಳಿಗೆ ನೈಸರ್ಗಿಕ ಔಷಧ

7
ರಾಸಾಯನಿಕ ನಿಷೇಧ!

ಅಮೃತ ಭೂಮಿ : ಬೆಳೆಗಳಿಗೆ ನೈಸರ್ಗಿಕ ಔಷಧ

Published:
Updated:

ನೈಸರ್ಗಿಕ ಕೃಷಿ ಕೇವಲ ಬೇಸಾಯ ವಿಧಾನವಲ್ಲ. ಅದು ಸುಸ್ಥಿರ ಸ್ವಾವಲಂಬಿ ಜೀವನದ ದಾರಿ. ನೈಸರ್ಗಿಕ ಸಂಪನ್ಮೂಲ ಬಳಸಿ ಅನುಸರಿಸುವ ಕೃಷಿ. ಭೂಮಿಯನ್ನು ಸದಾ ಫಲವತ್ತಾಗಿಡುವ ಜೊತೆಗೆ ಪರಿಸರವನ್ನೂ ಸ್ವಚ್ಛವಾಗಿಡುವುದು ನೈಸರ್ಗಿಕ ಕೃಷಿಯ ಹೆಗ್ಗಳಿಕೆ.

ಆರಂಭದ ದಿನಗಳಲ್ಲಿ ತುಸು ಶ್ರಮ ಎನಿಸುವ ಇದು, ನಾಲ್ಕಾರು ವರ್ಷದಲ್ಲಿಯೇ ರೈತರ ಶ್ರಮ ಕಡಿಮೆಗೊಳಿಸುತ್ತದೆ. ನಿಗದಿತ ಆದಾಯ, ಉತ್ತಮ ಆರೋಗ್ಯ- ಇವು ನೈಸರ್ಗಿಕ ಕೃಷಿ ಪದ್ಧತಿಯಿಂದ ಲಭ್ಯ. ಈ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ರೈತರ ಯಶೋಗಾಥೆಯ ಸರಣಿಯ ಐದನೆಯ ಅಂಕಣ ಇದು.ಇವರ ಹೊಲದಲ್ಲಿ ಹುಲುಸಾಗಿ ನಿಂತಿರುವ ಫಸಲುಗಳಿಗೆ ನಿಸರ್ಗದಲ್ಲಿ ದೊರಕುವ ಪದಾರ್ಥಗಳೇ ಔಷಧ. ರಾಸಾಯನಿಕ ನಿಷೇಧ. ಗೋಮೂತ್ರ, ಬೆಲ್ಲ, ಗಿಡದ ಎಲೆಗಳೇ ಇವರ ಬೆಳೆಗಳಿಗೆ ಸಂಪತ್ತು. ಇದರ ಫಲವಾಗಿಯೇ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ. ಉಳಿದ ರೈತರಿಗಿಂತ ಇವರು ಭಿನ್ನ!ಇದು  ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕುಂದರಗಿಯ ಮಹೇಶ ಮೋಹನದಾಸ ದೇಶಪಾಂಡೆ ಅವರ ಸಾಧನೆ. ಕುಂದರನಾಡಿನ ಕೃಷಿಕ ಎಂದರೆ ಮಹೇಶ ಎಂದು ತೋರಿಸುವಷ್ಟರ ಮಟ್ಟಿಗೆ ಇವರ ಸಾಧನೆ.ಚಿಕ್ಕ ವಯಸ್ಸಿನಿಂದಲೇ ಇವರ ಬಲಗೈ ಭಾಗಶಃ ವೈಕಲ್ಯದಿಂದ ಕೂಡಿದ್ದರೂ ಇವರ ನೈಸರ್ಗಿಕ ಕೃಷಿಯ ಜ್ಞಾನ ಮಾತ್ರ ಎಲ್ಲರನ್ನೂ ಬೆರಗುಗೊಳಿಸಿದೆ. ತಮ್ಮ ಅಂಗವೈಕಲ್ಯತೆಯ ಬಗ್ಗೆ ಕಿಂಚಿತ್ ತಲೆಕೆಡಿಸಿಕೊಳ್ಳದೇ ಜೀವಾಮೃತ ಬಳಸುವ ಮೂಲಕ `ಖುದ್ರತ್-7' ತಳಿಯ ಗೋಧಿಯನ್ನು ಬೆಳೆದು 40 ಕ್ವಿಂಟಲ್‌ಗೂ ಅಧಿಕ ಇಳುವರಿ ಪಡೆದು ಸಾಧನೆಗೈದಿದ್ದಾರೆ.ಸ್ನಾತಕೋತ್ತರ ಪದವೀಧರರಾದ ಮಹೇಶ ದೇಶಪಾಂಡೆ ಅವರು ಈ ಮೊದಲು ಎರಡು ಕಾಲೇಜ್‌ಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಇದರ ಜೊತೆಗೆ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದ ಅವರು, ಇತರ ರೈತರಂತೆ ಹೊಲಕ್ಕೆ ರಾಸಾಯನಿಕಗಳ ಬಳಕೆ ಮಾಡುತ್ತಿದ್ದರು.

ಅದೊಂದು ದಿನ ನೈಸರ್ಗಿಕ ಕೃಷಿ ಕುರಿತು ರಾಷ್ಟ್ರದ ಗಮನ ಸೆಳೆದ ಕೃಷಿಕ ಸುಭಾಷ ಪಾಳೇಕರ ಅವರ ಉಪನ್ಯಾಸವನ್ನು ಆಲಿಸಿದರು. ಇದು ಇವರ ಕೃಷಿ ಕ್ಷೇತ್ರದ ದಿಕ್ಕನ್ನು ಬದಲಿಸಿತು. ಅಂದಿನಿಂದ ರಾಸಾಯನಿಕ ಗೊಬ್ಬರ ಬಳಕೆಯನ್ನು ನಿಲ್ಲಿಸಿ ಜೀವನಾಮೃತ (ನೈಸರ್ಗಿಕ ಕೃಷಿ)ಯನ್ನು ಅಳವಡಿಸಿಕೊಂಡರು.ಜೀವನಾಮೃತ ರಸ ಋಷಿ

`2003ರಿಂದ ರಾಸಾಯನಿಕ ಗೊಬ್ಬರ ಬಳಕೆಯನ್ನು ನಿಷೇಧಿಸಿ `ಜೀವನಾಮೃತ' ತಯಾರಿಕೆಯಲ್ಲಿ ತೊಡಗಿದ್ದೇನೆ. `ಜೀವನಾಮೃತ ರಸ ಋಷಿ' ಎಂದು ಕರೆಯುವ ಜೀವನಾಮೃತವನ್ನು ತಯಾರಿಸುತ್ತೇನೆ. ಇದಕ್ಕೆ ಬೇಕಾಗಿರುವುದು ಗೊಬ್ಬರ ಕಷಾಯ.

ಪ್ರತಿ ಎಕರೆ ಜಮೀನಿಗೆ ತಗಲುವ ಗೋಮೂತ್ರ 10 ಲೀಟರ್, ಅರ್ಧ ಕೆ.ಜಿ. ಬೆಲ್ಲ, ಗ್ಲರಿಸಿಡಿಯಾ (ಗೊಬ್ಬರ) ಗಿಡದ ಎಲೆಗಳು ಅರ್ಧ ಕೆ.ಜಿ., ಇವೆಲ್ಲವುಗಳ ಮಿಶ್ರಣವನ್ನು 10 ದಿನ ಪ್ಲಾಸ್ಟಿಕ್ ಬ್ಯಾರೆಲ್‌ನಲ್ಲಿ ಹಾಕಿಟ್ಟು, ಆನಂತರ ಅದರ ಮಿಶ್ರಣ ತಯಾರಿಸಿ, ಬೆಳೆಗಳ ಮೇಲೆ ಸಿಂಪಡನೆ ಮಾಡಿದರೆ ಅಂಥ ಬೆಳೆಗೆ ಯಾವುದೇ ಕೀಟ ಬಾಧೆ ತಗುಲುವುದಿಲ್ಲ' ಎಂಬ ಹೆಮ್ಮೆಯ ಮಾತು ಮಹೇಶ ಅವರದ್ದು.ಇವರ ಹೊಲದಲ್ಲಿ ಹುಲುಸಾಗಿ ಬೆಳೆದಿರುವ ಬೆಳೆ ಗಮನಿಸಿದರೆ ಗೊಬ್ಬರ ತಯಾರಿಕೆಗೆ ಇವರ ಬಳಿ ಹಲವಾರು ದನಕರುಗಳು ಇರಬಹುದು ಎಂಬ ಊಹೆ ಮಾಡಿದರೆ ಅದು ತಪ್ಪು. ಏಕೆಂದರೆ ಇವರ ಬಳಿ ಇರುವುದು ಕೇವಲ 5 ಹಸುಗಳು ಹಾಗೂ 2 ಎಮ್ಮೆ.  ಇದರಲ್ಲಿಯೇ ಸಾಗಿದೆ ಇವರ ಸಂಸಾರ. ಸುಮಾರು 15 ಎಕರೆ ಕೃಷಿ ಭೂಮಿ ಹೊಂದಿರುವ ಇವರ ಕುಟುಂಬ ಪ್ರತಿ ಎರಡು ಬಾರಿ ಕಬ್ಬಿನ ಫಸಲನ್ನು ಪಡೆಯುತ್ತದೆ.

ಸೋಯಾ ಅವರೆ ಹಾಗೂ ಗೋಧಿ ಬೆಳೆ ಬೆಳೆದು ಅಕ್ಕಪಕ್ಕದ ಕೃಷಿಕರಿಗಿಂತ ಸರಾಸರಿ 3 ಪಟ್ಟು ಅಧಿಕ ಇಳುವರಿ ಪಡೆಯುತ್ತಿದ್ದಾರೆ.ಸ್ವಾತಂತ್ರ್ಯ ಹೋರಾಟಗಾರ ಅಣ್ಣೂ ಗುರೂಜಿ ಅವರ ಕುಂಟುಬಕ್ಕೆ ಸೇರಿದ ಮಹೇಶ ಅವರು, `ಯಶಸ್ವಿ ಕೃಷಿಕನಾಗಲು ಕೇವಲ ಛಲವೊಂದಿದ್ದರೆ ಸಾಕು' ಎನ್ನುತ್ತಾರೆ.

ಅತ್ಯಂತ ಸರಳ ಮತ್ತು ಸಾದಾ ಜೀವನ ಸಾಗಿಸಿ ಇತರ ಕೃಷಿಕರೊಂದಿಗೆ ಬೆರೆತು ಗೋಕಾಕ ತಾಲ್ಲೂಕಿನ ಕಲ್ಲೋಳಿಯಲ್ಲಿರುವ ವೀರಾಂಜನೇಯ ಸಾವಯವ ರಾಷ್ಟ್ರೀಯ ಕೃಷಿ ಪರಿವಾರ ಸಂಸ್ಥೆ ಸ್ಥಾಪಿಸಿರುವ `ಆದಿತಿ' ಕೃಷಿಕರ ಪಟ್ಟಿಯಲ್ಲಿ ಒಂಬತ್ತನೇ ಯಶಸ್ವಿ ಕೃಷಿಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಸಂಪರ್ಕ ಸಂಖ್ಯೆ 99003 13971

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry