ಭಾನುವಾರ, ಆಗಸ್ಟ್ 18, 2019
22 °C

ಅಮೆರಿಕಕ್ಕೆ ಆಗಲೂ ಕಾಡಿತ್ತು ಬೇಹುಗಾರಿಕೆ

Published:
Updated:
ಅಮೆರಿಕಕ್ಕೆ ಆಗಲೂ ಕಾಡಿತ್ತು ಬೇಹುಗಾರಿಕೆ

ಬೇಹುಗಾರಿಕೆಯ ಉದ್ದೇಶದಿಂದ ದೂರವಾಣಿ ಕರೆ ಕದ್ದಾಲಿಸುವುದು; ಗಣ್ಯವ್ಯಕ್ತಿಯ ಚಲನವಲನಗಳ ಮಾಹಿತಿ ಕಲೆ ಹಾಕಲು ಆತನ ಹಿಂದೆ ಬೇಹುಗಾರರನ್ನು ಅಟ್ಟುವುದು; ಪತ್ರಗಳನ್ನು ಬರೆದ ವ್ಯಕ್ತಿಗೆ ಅರಿವಿಲ್ಲದಂತೆ ಕದ್ದು ಓದುವುದು -ಇವೆಲ್ಲ ಹಿಂದೆ ನಮ್ಮ ದೇಶವೂ ಸೇರಿದಂತೆ ಒಂದಲ್ಲ ಒಂದು ದೇಶದಲ್ಲಿ ಸುದ್ದಿಯಾದದ್ದು ಇದೆ. ಆಗೊಮ್ಮೆ ಈಗೊಮ್ಮೆ ಈ ದೇಶಗಳಲ್ಲಿ ರಾಜಕೀಯ ಸುಂಟರಗಾಳಿ ಎಬ್ಬಿಸಿದ್ದು ಇದೆ.ಈಗ ಎಡ್ವರ್ಡ್ ಸ್ನೊಡೆನ್ ಬಹಿರಂಗಗೊಳಿಸಿದ ವಿಷಯ ಅಮೆರಿಕವನ್ನು ಪೇಚಿಗೆ ಸಿಲುಕಿಸಿದೆ. ಗೂಗಲ್, ಯಾಹೂ, ಫೆಸ್‌ಬುಕ್ ಬಳಸುವವರ ಖಾಸಗಿ ಮಾಹಿತಿ ಸಂಗ್ರಹ ಮತ್ತು ದೂರವಾಣಿ ಕದ್ದಾಲಿಕೆಯಲ್ಲಿ ಅಮೆರಿಕ ತೊಡಗಿದೆ ಎನ್ನುವ ಗಂಭೀರ ವಿಷಯ ಹಲವು ರಾಷ್ಟ್ರಗಳನ್ನು ಸಿಟ್ಟಿಗೆ ಎಬ್ಬಿಸಿದೆ. ಇದಕ್ಕೆ ಮುನ್ನ ವಿಕಿಲೀಕ್ಸ್‌ನ ಮುಖ್ಯಸ್ಥ ಜೂಲಿಯನ್ ಅಸ್ಸಾಂಜ್ ಅಮೆರಿಕ ಹಾಗೂ ಇತರ ರಾಷ್ಟ್ರಗಳ ಗುಪ್ತ ಮಾಹಿತಿಯನ್ನೆಲ್ಲ ಓತಪ್ರೋತವಾಗಿ ಬಹಿರಂಗ ಪಡಿಸಿದ ಬಳಿಕ ಅಮೆರಿಕ ಹಾಗೂ ಇತರ ರಾಷ್ಟ್ರಗಳು ಸಿಟ್ಟಿಗೆದ್ದಿವೆ.ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ ಬೇಹುಗಾರಿಕೆಗೆ ಸಂಬಂಧಪಟ್ಟ ಹತ್ತುಹಲವು ಸ್ವಾರಸ್ಯಪೂರ್ಣ ಮಾಹಿತಿಗಳು ಸಿಗುತ್ತವೆ.

  ಕ್ರಿಸ್ಟಿನ್ ಕೀಲರ್ ಮತ್ತು ಜಾನ್ ಪ್ರೊಫುಮೊ ಅವರಿಗೆ ಸಂಬಂಧಿಸಿದ ಪ್ರಕರಣ 60ರ ದಶಕದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ಚೆಂದುಳ್ಳಿ ಚೆಲುವೆ ಕ್ರಿಸ್ಟಿನ್ ತನ್ನ ಚಾರಿತ್ರ್ಯವನ್ನು ಒತ್ತೆ ಇಟ್ಟು ಹಲವರ ಜತೆ ಸಂಬಂಧ ಬೆಳೆಸಿ ಕೊನೆಗೆ  ಬ್ರಿಟನಿನ ಪ್ರಧಾನಿಯಾಗಿದ್ದಾಗ ಹೆರಾಲ್ಡ್ ಮ್ಯಾಕ್‌ಮಿಲನ್ (ಕನ್ಸರ್ವೆಟಿವ್ ಪಕ್ಷ) ಅವರ ಯುದ್ಧದ ಕಾಲದ ಸಚಿವ ಜಾನ್ ಪ್ರೊಫುಮೊ ಅವರ ಗೆಳೆತನ ಬೆಳೆಸಿದಳು.

ಈ ಗೆಳೆತನ ಪ್ರೊಫುಮೊ ಅವರಿಗೆ ದುಬಾರಿಯಾಯಿತು. ಕೊನೆಗೆ ಆಕೆಯ ಬೇಹುಗಾರಿಕೆ ಬಹಿರಂಗವಾಗಿ ಆಕೆಯ ಗೆಳೆತನ ಹೊಂದಿದ ಅಪರಾಧಕ್ಕೆ ಅವರು ರಾಜೀನಾಮೆ ನೀಡಬೇಕಾಯಿತು.ಮಾತಾ ಹರಿಯ ಕಥನ ಕೂಡ ಸಾಕಷ್ಟು ಕುತೂಹಲ ಕೆರಳಿಸಿದ ಪ್ರಕರಣ. ಆಕೆ ಚೆಲುವೆ. ಮೂಲತಃ ನೆದರ್‌ಲೆಂಡ್ಸ್‌ನವಳು.

ಹಲವು ದೇಶಗಳ ಸೇನಾಧಿಕಾರಿ, ರಾಜಕಾರಣಿ ಮತ್ತು ಪ್ರಭಾವಿ ರಾಜಕಾರಣಿಗಳ ಗೆಳೆತನ ಗಳಿಸುವುದರಲ್ಲಿ ಯಶಸ್ವಿಯಾದವಳು. ಆದರೆ ಬೇಹುಗಾರಿಕೆಯ ಆರೋಪದ ಮೇಲೆ ಬಂಧಿತಳಾಗಿ ಗುಂಡೇಟು ತಿಂದು ಬದುಕಿನಲ್ಲಿ ಅಂತ್ಯ ಕಂಡಳು. ಆಕೆ ಜರ್ಮನಿಯ ಪರವಾಗಿ ಬೇಹುಗಾರಿಕೆ ನಡೆಸಿದ್ದಳು.

ವಾಟರ್‌ಗೇಟ್: 1972 ರಿಂದ 1974ರವರೆಗೆ ಅಮೆರಿಕದಲ್ಲಿ ಬೆಳಕಿಗೆ ಬಂದ ವಾಟರ್‌ಗೇಟ್ ಹಗರಣಕ್ಕೆ ಸಂಬಂಧಪಟ್ಟ ಮಾಹಿತಿಗಳು ಚುನಾವಣಾ ಅಕ್ರಮದಲ್ಲಿ ಮಾತ್ರವಲ್ಲ, ಬೇಹುಗಾರಿಕೆಯಲ್ಲಿಯೂ ಅಮೆರಿಕದ ರಾಜಕಾರಣಿಗಳೇನೂ ಹಿಂದುಳಿದಿಲ್ಲ ಎನ್ನುವುದನ್ನು ಸಾಬೀತುಗೊಳಿಸಿತು. ಗೆಲ್ಲಬೇಕು, ಹೇಗಾದರೂ ಗೆಲ್ಲಬೇಕು; ಎದುರಾಳಿ ಹಾಕುವ ಪಟ್ಟಿಗೆ ಪ್ರತಿಪಟ್ಟು ಹಾಕಲೇಬೇಕು ಎಂದು ಹೊರಡುವ ರಾಜಕಾರಣಿ ಎಷ್ಟೊಂದು ಕಳಂಕ ಹೊತ್ತು ನಿರ್ಗಮಿಸಬೇಕಾಗುತ್ತದೆ ಎನ್ನುವುದಕ್ಕೆ ಈ ಹಗರಣವೊಂದು ಉತ್ತಮ ಉದಾಹರಣೆ.

ಜತೆಗೆ ಕದ್ದಾಲಿಕೆ ಏನು ಎನ್ನುವುದನ್ನು ಅದು ಜಗತ್ತಿಗೆ ತಿಳಿಸಿತು.ಈ ಹಗರಣದ ಕೇಂದ್ರ ಬಿಂದು ಅಧ್ಯಕ್ಷ ರಿಚರ್ಡ್ ನಿಕ್ಸನ್. ಹಗರಣದಿಂದ ತಪ್ಪಿಸಿಕೊಳ್ಳಲು ಅಸಾಧ್ಯ ಎನ್ನುವಷ್ಟು ಬಿಗುವಾದ ತನಿಖೆ ಮತ್ತು ತನಿಖಾ ಪತ್ರಿಕೋದ್ಯಮ ಅವರ ರಾಜಕೀಯ ಬದುಕಿಗೆ ನೇಣು ಬಿಗಿಯುವಂತೆ ಮಾಡಿತು. ಕದ್ದಾಲಿಕೆಯ ಕಳಂಕ ಹೊತ್ತು ರಾಜೀನಾಮೆ ನೀಡಿದ ಮೊದಲನೆಯ ಅಧ್ಯಕ್ಷ ಎಂಬ ಅಪಖ್ಯಾತಿ ಅವರಿಗೆ ಅಂಟಿಕೊಂಡಿತು.`ವಾಟರ್‌ಗೇಟ್' ವಾಷಿಂಗ್ಟನ್‌ನಲ್ಲಿರುವ ಹೋಟೆಲ್ ಒಳಗೊಂಡ ಸಮುಚ್ಚಯದ ಹೆಸರು. 1972ರಲ್ಲಿ ಅಮೆರಿಕ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯ ಕೇಂದ್ರ ಕಚೇರಿ ಅಲ್ಲಿ ಇತ್ತು. ರಿಪಬ್ಲಿಕನ್ ಪಕ್ಷದಿಂದ ರಿಚರ್ಡ್ ನಿಕ್ಸನ್ ಆಗ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. (ಎರಡು ಬಾರಿ ಅಮೆರಿಕದ ಉಪಾಧ್ಯಕ್ಷರಾಗಿದ್ದ ಅವರು ಒಮ್ಮೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜಾನ್ ಎಫ್ ಕೆನಡಿ ಅವರಿಂದ ಸೋಲುಂಡಿದ್ದರು). ನಿಕ್ಸನ್ ಅವರಿಗೆ ಡೆಮಾಕ್ರಟಿಕ್ ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ಕದ್ದು ತಿಳಿದುಕೊಳ್ಳುವ ಕೆಟ್ಟ ಕುತೂಹಲ ವಿನಾಶಕಾರಿ ಗಳಿಗೆಯೊಂದರಲ್ಲಿ ಮೂಡಿತು. ಇದು ಯಾರೂ ಊಹಿಸದೇ ಇದ್ದ ದೊಡ್ಡ ಹಗರಣಕ್ಕೆ ಕಾರಣವಾಯಿತು.ರಿಪಬ್ಲಿಕನ್ ಪಕ್ಷದಿಂದ ನೇಮಕಗೊಂಡ ಐವರು ವ್ಯಕ್ತಿಗಳು 1972 ಜೂನ್ 17ರಂದು ಬೇಹುಗಾರಿಕೆಯ ಉದ್ದೇಶದಿಂದ ಎಲೆಕ್ಟ್ರಾನಿಕ್ಸ್ ಸಾಧನಗಳೊಂದಿಗೆ ವಾಟರ್‌ಗೇಟ್ ಕಟ್ಟಡದಲ್ಲಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯ ಕೇಂದ್ರ ಕಚೇರಿ ಪ್ರವೇಶಿಸಿದಾಗ ಫ್ರಾಂಕ್‌ವಿಲ್ಸ್ ಎಂಬ ಭದ್ರತಾ ಸಿಬ್ಬಂದಿ ಅವರನ್ನು ಸೆರೆಹಿಡಿದ. ಅನಂತರ ವಿಚಾರಣೆ ನಡೆಸಿದಾಗ ಇನ್ನೂ ಇಬ್ಬರ ಪಾತ್ರ ಕೂಡ ಬೆಳಕಿಗೆ ಬಂತು. ಅವರ ಬಳಿ ನೂರಾರು ಡಾಲರ್ ನಗದು ಹಣ ಇದ್ದುದು ಪತ್ತೆಯಾಯಿತು. ಬಂಧಿತರ ಮೇಲೆ ಕಳವು ಯತ್ನದ ಪ್ರಕರಣ ದಾಖಲಾದರೂ ಅವರ ಉದ್ದೇಶ ಬೇರೆಯೇ ಆಗಿತ್ತು.

ರಾಜಕೀಯ ಪಿತೂರಿಯ ಭಾಗವಾಗಿ ಅವರು ಪ್ರವೇಶಿಸಿದ್ದರು ಎನ್ನುವುದು ಅನಂತರ ಬೆಳಕಿಗೆ ಬಂತು. ಬ್ಯಾಂಕು ಖಾತೆಗಳನ್ನು ಪರಿಶೀಲಿಸಿದಾಗ ಅವರ ಆದಾಯಕ್ಕೂ, ಖಾತೆಯಲ್ಲಿ ಇ್ದ್ದದ ಹಣಕ್ಕೂ ತಾಳೆಯಾಗದೆ ಅವರು ಪ್ರಚಂಡರು ಎನ್ನುವುದು ಗೊತ್ತಾಯಿತು. ಒಟ್ಟು ಏಳು ಜನರು ಬಲೆಗೆ ಬಿದ್ದ ಬಳಿಕ ಅವರೆಲ್ಲರೂ ನೇರವಾಗಿ ಅಥವಾ ಪರೋಕ್ಷವಾಗಿ ನಿಕ್ಸನ್ ಪುನರಾಯ್ಕೆ ಸಮಿತಿಗೆ ಸಂಬಂಧಪಟ್ಟವರು ಎನ್ನುವುದು ಗೊತ್ತಾಯಿತು.ಆದರೆ ಇದಕ್ಕೂ ಮುನ್ನ ವಾಟರ್‌ಗೇಟ್ ಕಟ್ಟಡವನ್ನು ಅಕ್ರಮವಾಗಿ ಪ್ರವೇಶಿಸುವ ಪ್ರಯತ್ನಗಳು ನಡೆದು ಒಮ್ಮೆ ಒಬ್ಬಾತ ಸಿಕ್ಕಿ ಬಿದ್ದಿದ್ದ. ಅವನಿಗೆ ಭದ್ರತಾ ಸಿಬ್ಬಂದಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಉಳಿದ ಮೂವರು ಒಳಗೆ ಪ್ರವೇಶಿಸಿ ಕದ್ದಾಲಿಕೆ ಉಪಕರಣ ಜೋಡಿಸುವುದರಲ್ಲಿ ಯಶಸ್ವಿಯಾಗಿದ್ದರು.ಮಾಧ್ಯಮಗಳ ಪಾತ್ರ: ವಾಟರ್‌ಗೇಟ್ ಹಗರಣ ಅಧಿಕಾರದಲ್ಲಿದ್ದವರ ಪ್ರಭಾವದಿಂದ ಮುಚ್ಚಿ ಹೋಗದಂತೆ ನೋಡಿಕೊಂಡವರು ಪತ್ರಕರ್ತರು. ವಾಟರ್‌ಗೇಟ್‌ನ ವಿಚಾರಣೆಯ ಮೇಲೆ ಭಾರಿ ಪರಿಣಾಮ ಬೀರಿದ್ದು ಮಾಧ್ಯಮಗಳ ವಿಶೇಷ ವರದಿಗಳು. `ಟೈಮ್', `ನ್ಯೂಯಾರ್ಕ್ ಟೈಮ್ಸ' ಮತ್ತು ಮುಖ್ಯವಾಗಿ `ವಾಷಿಂಗ್ಟನ್ ಪೋಸ್ಟ್ ಪತ್ರಿಕೆ'- ತನಿಖಾ ವರದಿಗಳಿಂದ ಜನರ ಗಮನ ಸೆಳೆದವು. `ವಾಷ್ಟಿಂಗ್ಟನ್ ಪೋಸ್ಟ್' ಪತ್ರಿಕೆಯ ಇಬ್ಬರು ವರದಿಗಾರರಾದ ಬಾಬ್ ವುಡ್‌ವರ್ಡ್ ಮತ್ತು ಕಾರ್ಲ್ ಬರ್ನ್‌ಸ್ಟೈನ್ ಅವರ ಶೋಧನಾತ್ಮಕ ವರದಿಗಳನ್ನು ಜನರು ಕುತೂಹಲದಿಂದ ಎದುರು ನೋಡುವಂತೆ ಮಾಡಿತು.ಅವರಿಗೆ ಮಾಹಿತಿ ನೀಡಿದ್ದು `ಡೀಪ್‌ಥ್ರೋಟ್' ಎಂಬ ನಿಗೂಢ ಮಾಹಿತಿದಾರ. ಈ ಮಾಹಿತಿದಾರ ಯಾರು ಎನ್ನುವುದನ್ನು 2005ರಲ್ಲಿ ಬಾಬ್ ವುಡ್‌ವರ್ಡ್ `ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯ ಜೂನ್ 2ರ ಸಂಚಿಕೆಯಲ್ಲಿ ಬಹಿರಂಗಪಡಿಸಿದರು. `ಡೀಪ್ ಥ್ರೋಟ್ ' ಎಂದರೆ ಎಫ್‌ಬಿಐಯಲ್ಲಿ (ಫೆಡರಲ್ ತನಿಖಾ ಸಂಸ್ಥೆ) ಪ್ರಮುಖ ಮೂರನೆಯ ಸ್ಥಾನದಲ್ಲಿದ್ದ ಮಾರ್ಕ್‌ಫೆಲ್ಟ್ ಎಂದು ಅವರು ತಿಳಿಸಿದಾಗ ಬೆರಗಾಗುವ ಸರದಿ ಜನರದ್ದು.ಹಿಂದೊಮ್ಮೆ ನೌಕಾ ಪಡೆಯಲ್ಲಿದ್ದ ಲೆಫ್ಟಿನೆಂಟ್ ವುಡ್‌ವರ್ಡ್ ಮೊತ್ತ ಮೊದಲ ಬಾರಿಗೆ ಮಾರ್ಕ್‌ಫೆಲ್ಟ್ ಅವರನ್ನು ಭೇಟಿಯಾದುದು ಶ್ವೇತ ಭವನದಲ್ಲಿ. ವುಡ್‌ವರ್ಡ್ ಅಂದಿನ ಪರಿಚಯದ ಲಾಭ ಪಡೆದದ್ದು `ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯನ್ನು ವರದಿಗಾರರಾಗಿ ಸೇರಿದಾಗ. ಮೊದಲ ಬಾರಿ ಭೇಟಿಯಾದಾಗ ಅವರ ಖಾಸಗಿ ದೂರವಾಣಿಯ ಸಂಖ್ಯೆ ಪಡೆದ ಕಾರಣ ಅನಂತರದ ದಿನಗಳಲ್ಲಿ ನೇರ ಸಂಪರ್ಕ ಸಾಧ್ಯವಾಯಿತು.ಫೆಲ್ಟ್ ಅವರಿಗೆ ಬಡ್ತಿಯ ಸಂದರ್ಭದಲ್ಲಿ ಅನ್ಯಾಯವಾದುದರ ನೋವು ಮತ್ತು ಅಧ್ಯಕ್ಷ ನಿಕ್ಸನ್ ಎಫ್‌ಬಿಐಯನ್ನು ರಾಜಕೀಯ ಕಾರಣಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಸಿಟ್ಟು ವುಡ್‌ವರ್ಡ್‌ಗೆ ರಹಸ್ಯ ಮಾಹಿತಿ ನೀಡುವಂತೆ ಪ್ರೇರೇಪಿಸಿತು.ಹಗರಣದ ಮಾಹಿತಿಗಾಗಿ ಒಮ್ಮೆ ರಾತ್ರಿ ಫೆಲ್ಟ್ ಅವರ ಮನೆಗೆ ವುಡ್‌ವರ್ಡ್ ಬಂದಾಗ  `ಇನ್ನು ಮುಂದೆ ಮನೆಗೆ ಬರಬೇಡಿ, ಫೋನೂ ಮಾಡಬೇಡಿ. ಬಹಿರಂಗವಾಗಿ ಏನೂ ಬೇಡ' ಎಂದರು. ಆದರೆ ಪರಸ್ಪರ ಭೇಟಿಯಾಗುವುದನ್ನು ತಪ್ಪಿಸದೆ ಮಾಹಿತಿ ಹಸ್ತಾಂತರಕ್ಕೆ ತಮ್ಮದೇ ಆದ ವಿಧಾನ ಕಂಡುಕೊಂಡರು. ಇದರಂತೆ ವುಡ್‌ವರ್ಡ್ ಅವರು ಫೆಲ್ಟ್ ಅವರನ್ನು ಭೇಟಿಯಾಗಬಯಸಿದಾಗಲೆಲ್ಲ ಅವರ ಮನೆಯ ಖಾಲಿ ಹೂಕುಂಡದಲ್ಲಿ ಕೆಂಪು ಬಾವುಟವೊಂದನ್ನು ಇರಿಸಿ ಬರುತ್ತಿದ್ದರು. ಫೆಲ್ಟ್ ತಮ್ಮನ್ನು ವುಡ್‌ವರ್ಡ್ ಅವರು ಭೇಟಿಯಾಗಲು ಸೂಚಿಸುತ್ತಿದ್ದ ವಿಧಾನ ಇನ್ನೂ ಸ್ವಾರಸ್ಯಕರ.`ನ್ಯೂಯಾರ್ಕ್ ಟೈಮ್ಸ' ಪತ್ರಿಕೆಯ ಪುಟ 20ರಲ್ಲಿ ಪುಟ ಸಂಖ್ಯೆ 20 ಎಂದು ಬರೆದಲ್ಲಿ ಸುತ್ತ ವೃತ್ತ ಎಳೆದು ಪುಟದ ಕೊನೆಯಲ್ಲಿ ಗಡಿಯಾರದ ಚಿತ್ರ ಬರೆದು ಗಡಿಯಾರದ ಮುಳ್ಳು ಭೇಟಿಯಾಗಬೇಕಾದ ಸಮಯ ಸೂಚಿಸುತ್ತಿರುವಂತೆ ಚಿತ್ರಿಸಿ ಆ ಪತ್ರಿಕೆಯನ್ನು ಅವರ ಮನೆ ಮುಂದೆ ಇರಿಸಿ ಬರುತ್ತಿದ್ದರು. ಈ ರೀತಿ ಪರಸ್ಪರ ಭೇಟಿ ಗುಪ್ತವಾಗಿ ನಡೆದು ಸ್ಫೋಟಕ ಮಾಹಿತಿ ಪತ್ರಿಕೆಗಳಲ್ಲಿ ಪ್ರಕಟವಾಗಿ ಹಗರಣ ಬಯಲಾಯಿತು. ಸ್ವಾರಸ್ಯಕರ ವಿಷಯ ಎಂದರೆ ಹಗರಣ ಬಯಲಿಗೆ ಬರುವ ಮುನ್ನ ಶ್ವೇತಭವನ ಮತ್ತು ರಕ್ಷಣಾ ಇಲಾಖೆಗೆ ಸೇರಿದ 13 ಅಧಿಕಾರಿಗಳ ದೂರವಾಣಿ ಕರೆಗಳ ಕದ್ದಾಲಿಕೆ ನಡೆದಿತ್ತು. ಅಲ್ಲದೆ ಒಬ್ಬ ವಿದೇಶಿ ಮತ್ತು ಅಮೆರಿಕದ ಮೂವರು ಪತ್ರಕರ್ತರ ದೂರವಾಣಿ ಕದ್ದಾಲಿಕೆ ಕೂಡ ನಡೆದಿತ್ತು.ತನಿಖೆಗೆ ಸಮಿತಿ: ಸೆನೆಟ್, ವಾಟರ್‌ಗೇಟ್ ಹಗರಣದ ತನಿಖೆಗೆ ಸಮಿತಿಯೊಂದನ್ನು ರಚಿಸಿತು. ನಿಗೂಢವಾಗಿ ಧ್ವನಿ ಮುದ್ರಿಸಿದ ಟೇಪ್‌ಗಳನ್ನು ಈ ಸಮಿತಿ ಬೆಳಕಿಗೆ ತಂದಾಗ ಕಾಂಗ್ರೆಸ್ ಮತ್ತು ನಿಕ್ಸನ್ ಮಧ್ಯೆ ಕದನ ತೀವ್ರಗೊಂಡಿತು. 1973ರ ಏಪ್ರಿಲ್ 30ರಂದು ತಮ್ಮ ಹಿರಿಯ ಸಹಾಯಕರಾದ ಎಚ್.ಆರ್. ಹಾಲ್ಡೆಮನ್ ಮತ್ತು ಜಾನ್ ಎಲ್ರಿಚ್‌ಮನ್ ರಾಜೀನಾಮೆ ನೀಡಲು ಒತ್ತಡ ಹೆಚ್ಚಿದ ಕಾರಣ ನಿಕ್ಸನ್ ರಾಜೀನಾಮೆ ಕೇಳಬೇಕಾಯಿತು. ಕೊನೆಗೆ ಇವರಿಬ್ಬರು ಅಪರಾಧ ಸಾಬೀತಾದ ಕಾರಣ ಸೆರೆಮನೆ ಸೇರಬೇಕಾಯಿತು. ಶ್ವೇತಭವನದ ವಕೀಲ ಜಾನ್‌ಡೀನ್ ಹುದ್ದೆಯಿಂದ ಹೊರಹಾಕಲ್ಪಟ್ಟರು. ಆದರೆ ಅವರು ನಿಕ್ಸನ್‌ರಿಗೆ ಪ್ರತಿಕೂಲ ಸಾಕ್ಷಿಯಾಗಿ ಸಮಸ್ಯೆ ತಂದಿಟ್ಟರು.1974ರಲ್ಲಿ ನಿಕ್ಸನ್ ವಿರುದ್ಧ ವಾಗ್ದಂಡನೆಗೆ ಕಾಂಗ್ರೆಸ್ ಸಮ್ಮತಿ ನೀಡಿತು. ಆಗ ಡೆಮಾಕ್ರಟಿಕ್ ಪಕ್ಷದ ಜತೆ ರಿಪಬ್ಲಿಕನ್ ಪಕ್ಷದ ಸದಸ್ಯರೂ ಮತ ನೀಡಿದರು. ಶ್ವೇತಭವನ ಗುಪ್ತವಾಗಿ ದಾಖಲಿಸಿದ್ದ 64 ಟೇಪ್‌ಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು ನಿಕ್ಸನ್ ಅವರನ್ನು ಇನ್ನಷ್ಟು ಪೇಚಿಗೆ ಸಿಲುಕಿಸಿತು. ಈ ಟೇಪ್, ವಾಟರ್‌ಗೇಟ್ ಹಗರಣದಲ್ಲಿ ನಿಕ್ಸನ್ ಅವರ ನೇರ ಪಾತ್ರ ಇತ್ತು ಎನ್ನುವುದನ್ನು ಸಾಬೀತುಗೊಳಿಸಿತು.ಪ್ರಾರಂಭದಲ್ಲಿ ಟೇಪ್ ಬಿಡುಗಡೆಗೆ ನಿಕ್ಸನ್ ಮೀನ ಮೇಷ ಎಣಿಸಿದರು. ಅದರ ಸಾರಾಂಶ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿದರು. ಅದರ ಕೆಲವು ಅಂಶಗಳು ಆಕಸ್ಮಿಕವಾಗಿ ಅಳಿಸಲ್ಪಟ್ಟಿವೆ ಎಂದು ಶ್ವೇತಭವನ ಹೇಳಿತು.ಡೆಮಾಕ್ರಟಿಕ್ ಪಕ್ಷದ ಕಚೇರಿ ಪ್ರವೇಶಿಸಿದವರ ಬಳಿ ಇದ್ದ ಹಣದ ಮೂಲದ ಬಗ್ಗೆ ಎಫ್‌ಬಿಐ ತನಿಖೆಗೆ ಕೈಗೆತ್ತಿಕೊಂಡಿದ್ದು ಅದಕ್ಕೆ ಸಿಐಎಯಿಂದ (ಅಮೆರಿಕದ ಕೇಂದ್ರೀಯ ಬೇಹುಗಾರಿಕೆ ದಳ) ಅಡ್ಡಗಾಲು ಹಾಕಿಸುವಂತೆ ಹಾಲ್ಡೆಮನ್‌ಗೆ ಸೂಚಿಸಿರುವುದರ ಬಗ್ಗೆ ಪ್ರಸ್ತಾಪ ಇರುವ ಟೇಪ್ ಬಿಡುಗಡೆ ಮಾಡುವಂತೆ ಕೋರ್ಟ್ ನಿಕ್ಸನ್‌ಗೆ ಕಟುವಾಗಿ ಆದೇಶಿಸಿತು. ನಂತರ ತೀವ್ರ ಗತಿಯ ಬೆಳವಣಿಗೆಗಳು ಆಗಿ ಆಗಸ್ಟ್ 8ರಂದು ನಿಕ್ಸನ್ ಟಿ.ವಿ ಭಾಷಣದಲ್ಲಿ ತಾವು ರಾಜೀನಾಮೆ ನೀಡುವುದಾಗಿ ಪ್ರಕಟಿಸಿ ಮರುದಿನ ರಾಜೀನಾಮೆ ನೀಡಿದರು. ಅನಂತರ ಅಧ್ಯಕ್ಷರಾದ ಗೆರಾಲ್ಡ್ ಫೋರ್ಡ್ ಅವರು ನಿಕ್ಸನ್‌ಗೆ ಕ್ಷಮಾದಾನ ನೀಡಿದರು. ನಿಕ್ಸನ್ 1994 ರಲ್ಲಿ ನಿಧನರಾದರು. ಅವರು ತಮ್ಮ ಕೊನೆಯ ಕ್ಷಣದವರೆಗೆ ತಾವು ಅಮಾಯಕ ಎಂದೇ ಹೇಳಿಕೊಂಡರು.

-ಪಿ.ಶ್ರೀಧರ್ ನಾಯಕ್ .

Post Comments (+)