ಶುಕ್ರವಾರ, ಮೇ 7, 2021
20 °C

ಅಮೆರಿಕದಲ್ಲಿ ವೈದ್ಯಕೀಯ ವ್ಯಾಸಂಗ:ಸರ್ಕಾರದ ಜತೆ ಒಪ್ಪಂದ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಉನ್ನತ ವೈದ್ಯಕೀಯ ವ್ಯಾಸಂಗಕ್ಕೆ ಅಮೆರಿಕಕ್ಕೆ ಹೋಗಬಯಸುವ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಇನ್ನು ಮುಂದೆ ಸರ್ಕಾರದ ಜತೆ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.ಅಮೆರಿಕದಲ್ಲಿ ವ್ಯಾಸಂಗ ಮುಗಿಸಿದ ಕೂಡಲೇ ದೇಶಕ್ಕೆ ವಾಪಸಾಗಬೇಕು ಎಂಬ ಷರತ್ತನ್ನು ಒಪ್ಪಂದದಲ್ಲಿ ವಿಧಿಸಲಾಗುತ್ತದೆ. ವಾಪಸ್ ಆಗದಿದ್ದಲ್ಲಿ ಅಮೆರಿಕದಲ್ಲಿ ವೈದ್ಯಕೀಯ ವೃತ್ತಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.ಈ ವರ್ಷದಿಂದ ಅಮೆರಿಕದ ಶೈಕ್ಷಣಿಕ ಸಂಸ್ಥೆಗಳು ಭಾರತೀಯ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಂದ ನಿರಪೇಕ್ಷಣಾ ಪತ್ರವನ್ನು ಪಡೆಯಲಿವೆ. ಈ ಪತ್ರವನ್ನು ಭಾರತ ಸರ್ಕಾರ ನೀಡುತ್ತದೆ. ವ್ಯಾಸಂಗ ಮುಗಿಸಿದ ನಂತರ ವಾಪಸಾಗದ ವೈದ್ಯರಿಗೆ ಅಮೆರಿಕದಲ್ಲಿ ವೃತ್ತಿ ನಡೆಸಲು ಅವಕಾಶ ನೀಡಬಾರದು ಎಂದು ಸೂಚಿಸಲಾಗುತ್ತದೆ ಎಂದು ಆಜಾದ್ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಅಮೆರಿಕಕ್ಕೆ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದ್ದ ಮೂರು ಸಾವಿರ ವೈದ್ಯರು  ದೇಶಕ್ಕೆ ವಾಪಸ್ ಬಂದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.ಗ್ರಾಮೀಣ ಆರೋಗ್ಯ ಕಾಳಜಿಯ ಮೂರು ವರ್ಷಗಳ ಸ್ನಾತಕ ಪದವಿ ಕೋರ್ಸ್‌ಗೆ ಭಾರತೀಯ ವೈದ್ಯಕೀಯ ಮಂಡಲಿಯು ಅನುಮೋದನೆ ನೀಡಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.ಸಾರ್ವಜನಿಕ ಆರೋಗ್ಯ ಕಾಳಜಿಗಾಗಿ ಪ್ರತ್ಯೇಕ ವೃತ್ತಿಪರರನ್ನು ರೂಪಿಸುವುದು ಹೊಸ ಕೋರ್ಸ್‌ನ ಉದ್ದೇಶ. ಆದರೆ ವೈದ್ಯರ ಸಂಘಟನೆಗಳು ತಮ್ಮ ವೃತ್ತಿಗೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆಜಾದ್ ಹೇಳಿದ್ದಾರೆ.ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ಕೆಲಸ ಮಾಡಲು ಇಷ್ಟಪಡದೆ ಇರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಾಗಿಯೇ ಗ್ರಾಮೀಣ ಆರೋಗ್ಯ ಕಾಳಜಿಯ ಮೂರು ವರ್ಷಗಳ ಸ್ನಾತಕ ಪದವಿ ಕೋರ್ಸ್ ಆರಂಭಿಸಿ ಹಳ್ಳಿಗಳ ಆರೋಗ್ಯ ಸೇವೆ ಸುಧಾರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.