ಅಮೆರಿಕದಲ್ಲಿ ‘ಡ್ರೋನ್’ ದಶಾವತಾರ!

7

ಅಮೆರಿಕದಲ್ಲಿ ‘ಡ್ರೋನ್’ ದಶಾವತಾರ!

Published:
Updated:

ಹೊಲ, ಗದ್ದೆಗಳಲ್ಲಿ ಬೆಳೆದು ನಿಂತ ಪೈರನ್ನು ಮನೆಯಲ್ಲಿಯೇ ಕುಳಿತು ಕಾವಲು ಕಾಯುವ ರೈತ, ನೂರಾರು ಮೈಲಿ ದೂರದಲ್ಲಿ ಕಟ್ಟಡ ನಿರ್ಮಾಣ ಕೆಲಸಗಳನ್ನು ಕಚೇರಿಯಿಂದಲೇ ನೇರವಾಗಿ ವೀಕ್ಷಿಸುವ ಎಂಜಿನಿಯರ್‌ಗಳು, ತನ್ನ ಎದುರು ಕುಳಿತ ಗ್ರಾಹಕನಿಗೆ ಏಕಕಾಲಕ್ಕೆ ಹಲವು ಅಪಾರ್ಟ್‌ಮೆಂಟ್, ಫಾರ್ಮ್‌ಹೌಸ್, ನಿವೇಶನಗಳ ಮೂಲೆ, ಮೂಲೆಗಳ ದರ್ಶನ ಮಾಡಿಸುವ ರಿಯಲ್ ಎಸ್ಟೇಟ್ ಏಜೆಂಟ್‌ರು, ಸಾವಿರಾರು ಕಿ.ಮೀ. ಉದ್ದದ ತೈಲ ಕೊಳವೆ ಮಾರ್ಗಗಳನ್ನು ಕಚೇರಿಯಲ್ಲಿ ಕುಳಿತು ಪರಿಶೀಲಿಸುವ ಕಾರ್ಖಾನೆಯ ಸಿಬ್ಬಂದಿ ...ಇನ್ನೆರಡು ವರ್ಷಗಳಲ್ಲಿ ಅಮೆರಿಕದಲ್ಲಿ ಕಂಡು ಬರಲಿರುವ ಸಾಮಾನ್ಯ ದೃಶ್ಯಗಳಿವು. ‘ಡ್ರೋನ್’ ಎಂಬ ಚಾಲಕರಹಿತ ಪುಟ್ಟ ಸ್ವಯಂಚಾಲಿತ ವಿಮಾನ ಈ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯಲಿದೆ. ಇದುವರೆಗೂ ಅಮೆರಿಕ ಸೇನೆಯ ದಾಳಿಯ ಸಂದರ್ಭಗಳಲ್ಲಿ ಮಾತ್ರ ಕೇಳಿ ಬರುತ್ತಿದ್ದ ವೈಮಾನಿಕ ದಾಳಿ ಮತ್ತು ಬೇಹುಗಾರಿಕೆಗೆ ಮಾತ್ರ ಸೀಮಿತವಾಗಿದ್ದ ಈ ಯುದ್ಧ ವಿಮಾನ ‘ಜನಸ್ನೇಹಿ’ ರಚನಾತ್ಮಕ ಕೆಲಸಗಳಿಗೂ ಬಳಕೆಯಾಗುವ ದಿನಗಳು ದೂರವಿಲ್ಲ.

ಸದ್ದಿಲ್ಲದೆ ಶತ್ರು ರಾಷ್ಟ್ರದ ಗಡಿಯೊಳಗೆ ನುಗ್ಗಿ ದಾಳಿ ನಡೆಸಿ ಹಿಂದಿರುಗುತ್ತಿದ್ದ ವಿಮಾನಗಳು, ಇನ್ನು ಮುಂದೆ ತಮಗೆ ಒಪ್ಪಿಸಿದ ಕಾರ್ಯಗಳನ್ನು ಅಷ್ಟೇ ನಿಯತ್ತಿನಿಂದ ಮಾಡಿ ಮುಗಿಸುವ ನಮ್ರ ಸೇವಕನಂತೆ ಜನಜೀವನದ ಒಂದು ಅವಿಭಾಜ್ಯ ಅಂಗವಾಗಲಿವೆ. ಅದಕ್ಕಾಗಿ ಇನ್ನೂ ಎರಡು ವರ್ಷ ಕಾಯಬೇಕಷ್ಟೇ!ವಾಣಿಜ್ಯ ಮತ್ತು ಖಾಸಗಿ ಬಳಕೆಯ ಪರವಾನಗಿಗಾಗಿ ಎದುರು ನೋಡುತ್ತಿರುವ ಡ್ರೋನ್ ವಿಮಾನಗಳು ಎಲ್ಲವೂ ಅಂದುಕೊಂಡಂತೆ ನಡೆದರೆ 2015ರ ನಂತರ ಅಮೆರಿಕದ ಆಗಸದಲ್ಲಿ ರೆಕ್ಕೆ ಬಿಚ್ಚಿದ ಹಕ್ಕಿಗಳ ಹಿಂಡಿನಂತೆ ಹಾರಾಡಲಿವೆ. ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ, ವಿಭಿನ್ನ ಮತ್ತು ಆಕರ್ಷಕ ವಿನ್ಯಾಸದ ರಿಮೋಟ್  ನಿಯಂ­­­­ತ್ರಿತ ಲಘು ವಿಮಾನವನ್ನು ಬಳಸಿಕೊಳ್ಳಲು ಹಲವಾರು ಖಾಸಗಿ ವಾಣಿಜ್ಯ ಸಂಸ್ಥೆಗಳು, ಕಾರ್ಪೊರೇಟ್ ಕಂಪೆನಿಗಳು ಮತ್ತು ಸರ್ಕಾರಿ ಇಲಾಖೆಗಳು ತುದಿಗಾಲ ಮೇಲೆ ನಿಂತಿವೆ. ಆದರೆ, ಸದ್ಯಕ್ಕೆ ಈ ಆಸೆಗೆ ಅಮೆರಿಕದ ಫೆಡರಲ್ ವಿಮಾನಯಾನ ನಿಯಂತ್ರಣ ಸಂಸ್ಥೆ (ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್-ಎಫ್‌ಎಎ) ತಣ್ಣೀರು ಎರೆಚಿದೆ.ವಾಯು ಪ್ರದೇಶದ ಬಳಕೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವ ಎಫ್‌ಎಎ ಸದ್ಯಕ್ಕೆ ಪೊಲೀಸ್ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಡ್ರೋನ್ ಸೀಮಿತ ಬಳಕೆಗೆ ಮಾತ್ರ ಷರತ್ತುಬದ್ಧ ಅವಕಾಶ ನೀಡಿದೆ. ರಾಷ್ಟ್ರೀಯ ಭದ್ರತೆ ಮತ್ತು ಖಾಸಗಿತಕ್ಕೆ ಧಕ್ಕೆ ತರುತ್ತದೆ ಎಂಬ ಕಾರಣ ನೀಡಿ ಡ್ರೋನ್ ವಾಣಿಜ್ಯ ಬಳಕೆಯನ್ನು ನಿಷೇಧಿಸಿದೆ.

ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿ­ರುವ ಮಾಲೀಕರ ಒತ್ತಾಯದ ಮೇರೆಗೆ ಅಲ್ಲಿನ ಸರ್ಕಾರ ‘ಡ್ರೋನ್‌ಗಳಿಗೆ ಷರತ್ತುಬದ್ಧ ಅವಕಾಶ ನೀಡಲು ಹೊಸ ಮಸೂದೆಯೊಂದನ್ನು ಸಿದ್ಧಗೊಳಿಸುತ್ತಿದೆ. ಡ್ರೋನ್ ಹಾರಾಟ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ರಚಿಸುವಂತೆ ಅಮೆರಿಕ ಕಾಂಗ್ರೆಸ್ (ಸಂಸತ್) ಫೆಡರಲ್ ವಿಮಾನಯಾನ ನಿಯಂತ್ರಣ ಸಂಸ್ಥೆಗೆ ಸೂಚಿಸಿದೆ. ರೆಕ್ಕೆ ಬಿಚ್ಚಲು ದೂರವಾಗಿಲ್ಲ ಆತಂಕ

ಡ್ರೋನ್ ರೆಕ್ಕೆ ಬಿಚ್ಚಲು ಇರುವ ಅಡ್ಡಿ, ಆತಂಕಗಳು ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಒಂದು ವೇಳೆ ಇವುಗಳ ಹಾರಾಟಕ್ಕೆ ಅನುಮತಿ ನೀಡಿದಲ್ಲಿ ಖಾಸಗಿತನದ ಹರಣವಾಗುತ್ತದೆ ಎಂದು ಕೆಲವು  ಸಂಘ, ಸಂಸ್ಥೆಗಳು ಮತ್ತು ಸಂಸದರಿಂದ ವಿರೋಧದ ಕೂಗು ಕೇಳಿ ಬಂದಿದೆ. ಹಲವಾರು ಪ್ರತಿನಿಧಿಗಳು ಡ್ರೋನ್ ವಾಣಿಜ್ಯ ಬಳಕೆಯನ್ನು ನಿಯಂತ್ರಿಸಲು ಮತ್ತು ನಿಷೇಧಿ­ಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ಡ್ರೋನ್‌ಗಳ ಕಾರ್ಯವ್ಯಾಪ್ತಿಯ ಬಗ್ಗೆ ಹಲವು ವಿವಾದ ಸೃಷ್ಟಿಸಿವೆ. ಇವು ಎಷ್ಟರ ಮಟ್ಟಿಗೆ, ಯಾವ- ಯಾವ ದೃಶ್ಯಗಳ ಚಿತ್ರಣ ಮಾಡಿಕೊಳ್ಳಬಹುದು? ಎಂಬುದು ಒಂದು ಪ್ರಶ್ನೆಯಾದರೆ; ಆಗಸದಲ್ಲಿ ಗಿರಕಿ ಹೊಡೆಯುತ್ತಿರುವ ಹಲವು ಡ್ರೋನ್‌ಗಳು ಸಾರ್ವಜನಿಕರಿಗೆ ಅಪಾಯದ ಸ್ಥಿತಿ ತಂದೊಡ್ಡುತ್ತವೆ ಎಂಬ ಆತಂಕವೂ ಸೃಷ್ಟಿಯಾಗಿದೆ. ಖಾಸಗಿ ಪ್ರದೇಶದ ಮೇಲೆ ನಿಗಾ ವಹಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ವೈಯಕ್ತಿಕ ಕಾನೂನು ಪ್ರತಿಪಾದಕರು ಮುಂದಿಟ್ಟಿದ್ದಾರೆ. ಉಷ್ಣಸಂವೇದಿ ಉಪಕರಣ ಅಳವಡಿಸಿಕೊಂಡ ಡ್ರೋನ್ ವ್ಯಕ್ತಿಯ ಖಾಸಗಿತನದ ದೃಶ್ಯಗಳನ್ನು ಸೆರೆಹಿಡಿಯುವುದು ನೈತಿಕವಾಗಿ ಎಷ್ಟರ ಮಟ್ಟಿಗೆ ಸರಿ ಎಂಬುವ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.ಸರ್ಕಾರಿ ಸಂಸ್ಥೆಗಳಿಗೆ ಡ್ರೋನ್ ಬಳಕೆಗೆ ಅವಕಾಶ ನೀಡಿರುವ ನಿರ್ಧಾರಕ್ಕೂ ನಾಗರಿಕ ಹಕ್ಕುಗಳ ಸಂರಕ್ಷಣಾ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಡ್ರೋನ್ ಖಾಸಗಿ ಮತ್ತು ವಾಣಿಜ್ಯ ಬಳಕೆಗೆ ಅವಕಾಶ ನೀಡಿದರೆ ಆಗುವ ಅನಾಹುತ, ಸರ್ಕಾರಿ ಸಂಸ್ಥೆಗಳಿಂದಲೂ ಆಗುತ್ತದೆ. ಮೇಲಾಗಿ ಇದರಿಂದ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಸಿದೆ. ಡ್ರೋನ್ ಬಳಕೆಯ ಪ್ರತಿಪಾದಕರು ಇಂಥ ಪ್ರಶ್ನೆಗಳನ್ನೆಲ್ಲ ‘ಉತ್ಪ್ರೇಕ್ಷೆ’ ಎಂದು ತಳ್ಳಿ ಹಾಕಿದ್ದಾರೆ.ಲಾಭ-ನಷ್ಟಗಳ ದೊಡ್ಡ ಪಟ್ಟಿ

ಈ ಹಿಂದೆ ವೈಮಾನಿಕ ಸಮೀಕ್ಷೆಗಳಿಗೆ ಬಳಸಲಾಗುತ್ತಿದ್ದ ಸಾಂಪ್ರದಾಯಿಕ ವಿಮಾನಗಳು ಹವಾಮಾನ ವೈಪರಿತ್ಯವನ್ನು ಮೆಟ್ಟಿ ನಿಂತು ಕಾರ್ಯನಿರ್ವಹಿಸುವ ಶಕ್ತಿ ಹೊಂದಿರಲಿಲ್ಲ. ಅದಕ್ಕೂ ಹೆಚ್ಚಾಗಿ ಅದು ದುಬಾರಿ ವ್ಯವಹಾರವಾಗಿತ್ತು. ಅವುಗಳಿಗೆ ಹೋಲಿಸಿದಲ್ಲಿ ಡ್ರೋನ್ ಸಾವಿರಪಟ್ಟು ಮೇಲು. ಎಲ್ಲ ನೈಸರ್ಗಿಕ ಅಡಚಣೆ ಮೆಟ್ಟಿ ನಿಲ್ಲುವ ಕಾರ್ಯಕ್ಷಮತೆ, ಹೆಚ್ಚು ಇಂಧನ ಸಾಮರ್ಥ್ಯ, ವೆಚ್ಚ ಕಡಿತ, ಕಿರಿದಾದ ಗಾತ್ರ, ಕಡಿಮೆ ಶಬ್ದ ಮತ್ತು ಮಾಲಿನ್ಯ ರಹಿತ ಕಾರ್ಯಕ್ಷಮತೆ... ಕಣ್ಗಾವಲು ವ್ಯವಸ್ಥೆಗೆ ಹೇಳಿ ಮಾಡಿಸಿದಂತಿರುವ ಡ್ರೋನ್ ಒಮ್ಮೆ ಆಗಸದಲ್ಲಿ ಹಾರಿದರೆ ಜನ ಜೀವನ ಬದಲಾಗುತ್ತದೆ ಎನ್ನುವುದು ಅದರ ಪ್ರತಿಪಾದಕರ ವಾದ.ಪ್ರಸ್ತುತ ಅವುಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಸಂಚಾರ ವ್ಯವಸ್ಥೆ ಮೇಲೆ ಕಣ್ಗಾವಲು, ಅಣೆಕಟ್ಟುಗಳ ನೀರಿನ ಮಟ್ಟ ಪರಿಶೀಲನೆ, ತೈಲ ಸರಬರಾಜು ಕೊಳವೆಮಾರ್ಗಗಳ ಪರಿವೀಕ್ಷಣೆ, ಎತ್ತರದ ಪ್ರದೇಶದಿಂದ ಚಿತ್ರಣ; ತೋಟಗಳ ಮೇಲೆ ನಿಗಾ ಇಡುವುದು... ಹೀಗೆ ಇದರಿಂದಾಗುವ ಲಾಭಗಳ ಬಗ್ಗೆ ದೊಡ್ಡ ಪಟ್ಟಿಯನ್ನು ಅದರ ಪ್ರತಿಪಾದಕರು ಹಿಡಿದು ಕುಳಿತಿದ್ದಾರೆ. ಪೊಲೀಸ್ ಇಲಾಖೆಯೂ ಹಲವು ಡ್ರೋನ್‌ಗಳನ್ನು ಹೊಂದಿದ್ದು, ತುರ್ತು ಪರಿಸ್ಥಿತಿಯಲ್ಲಿ ಬಳಸುತ್ತಿದೆ.ಬೆರಳ ತುದಿಯಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಚಿತ್ರ ಸಮೇತ ಒದಗಿಸುವ ಈ ಪುಟ ಹಕ್ಕಿ  ಭವಿಷ್ಯದ ಆಶಾಕಿರಣ ಎಂದು ಅನೇಕ ಕಾರ್ಪೊರೇಟ್ ಕಂಪೆನಿಗಳು ಬಣ್ಣಿಸಿವೆ. ಕ್ಯಾಮೆರಾ ಅಂಟಿಸಿಕೊಂಡು, ವಿವಿಧ ಕೋನಗಳಲ್ಲಿ ಚಿತ್ರೀಕರಣ ನಡೆಸಿ, ಆಕರ್ಷಕ ಮೂರು ಆಯಾಮಗಳ ದಶ್ಯ ಕಟ್ಟಿ ಕೊಡಲು ಡ್ರೋನ್‌ಗಿಂತ ಬೇರೆ ಉಪಕರಣ ಯಾವುದು ಇದ್ದೀತು?! ಎನ್ನುತ್ತಾರೆ ಜಾಹೀರಾತು ಮತ್ತು ಸಮೀಕ್ಷಾ ಸಂಸ್ಥೆಯ ಮುಖ್ಯಸ್ಥರು.ಸ್ಥಳೀಯರ ಪ್ರಬಲ ವಿರೋಧದಿಂದ ವರ್ಜಿನಿಯಾ ಆಡಳಿತ ಡ್ರೋನ್ ಹಾರಾಟದ ಮೇಲೆ ಎರಡು ವರ್ಷಗಳ ತಾತ್ಕಾಲಿಕ ನಿಷೇಧ ಹೇರಿದೆ. ಅಗತ್ಯ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಇವುಗಳ ಹಾರಾಟಕ್ಕೆ ಒಪ್ಪಿಗೆ ನೀಡಿದೆ. ಸರ್ಕಾರಿ ಸಂಸ್ಥೆಗಳ ಬಳಕೆಗೆ ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿರುವಾಗ ಖಾಸಗಿ ಸಂಸ್ಥೆಗಳು ಈ ಕಾರ್ಯಕ್ಕೆ ಮುಂದಾದರೆ ಭಾರಿ ಪ್ರತಿಭಟನೆ ನಡೆಯುತ್ತವೆ ಎನ್ನುವ ಆತಂಕ ಸ್ಥಳೀಯ ಆಡಳಿತಕ್ಕೆ ಆರಂಭವಾಗಿದೆ.

 

ಕೆನಡಾ ಸರ್ಕಾರ ಈಗಾಗಲೇ ವಾಣಿಜ್ಯ ಬಳಕೆಯ ಡ್ರೋನ್‌ಗಳಿಗೆ ಪರವಾನಗಿಯನ್ನೂ ನೀಡಿದೆ. ಹಲವು ಪ್ರಮುಖ ನಗರಗಳ ವೈಮಾನಿಕ ಸಮೀಕ್ಷೆ ಮತ್ತು ಚಿತ್ರಗಳನ್ನು ಸೆರೆ ಹಿಡಿಯುವ ಕಾರ್ಯವೂ ಭರದಿಂದ ನಡೆದಿದೆ. ಕಡಿಮೆ ಎತ್ತರದಿಂದ ಚಿತ್ರಗಳನ್ನು ಸೆರೆ ಹಿಡಿಯಲು ಅವಕಾಶ ನೀಡುವಂತೆ ಖಾಸಗಿ ಕಂಪೆನಿಗಳು ಕೆನಡಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ. ಒಟ್ಟಾರೆ ಡ್ರೋನ್ ಬಳಕೆ ಅಪರಿಮಿತ ಎಂಬುದೂ ನಿಜ! ಈಗ ಮತ್ತೆ ವೈಯಕ್ತಿಕ ಉದ್ದೇಶಕ್ಕೆ ಇವುಗಳ ಬಳಕೆ ಹೆಚ್ಚಾದರೆ ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ ಎಂದು ನಿರೀಕ್ಷಿಸಲಾಗಿದೆ. 

ಪುಟ್ಟ ವಿಮಾನದ ದೊಡ್ಡ ವಹಿವಾಟು

ವಾರ್ಷಿಕ ಸಾವಿರಾರು ಶತಕೋಟಿ ಡಾಲರ್‌ಗಳಷ್ಟು ಮೊತ್ತದ ಡ್ರೋನ್ ವಹಿವಾಟು ಅಮೆರಿಕದಲ್ಲಿ ನಡೆಯುತ್ತಿದೆ. ಒಂದು ವೇಳೆ ಇವುಗಳ ಖಾಸಗಿ ಮತ್ತು ವಾಣಿಜ್ಯ ಬಳಕೆಗೆ ಒಪ್ಪಿಗೆ ದೊರೆತರೆ ಮುಂದಿನ ದಿನಗಳಲ್ಲಿ ಇದು ದುಪ್ಪಟ್ಟಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಡ್ರೋನ್ ಉತ್ಪಾದಕ ಕಂಪೆನಿಯ ಮುಖ್ಯಸ್ಥ ಜೆಫ್ ಲೋವಿನ್.ಕೆಲವೇ ಡಾಲರ್ ಮೌಲ್ಯದಿಂದ ಹಿಡಿದು ಸಾವಿರಾರು ಡಾಲರ್ ಮೌಲ್ಯದವರೆಗಿನ ಡ್ರೋನ್‌ಗಳ ಉತ್ಪಾದನೆ ಈಗ ನಡೆಯುತ್ತಿದೆ. ಮಕ್ಕಳ ಆಟಿಕೆಯಂತೆ ಕೈಯಲ್ಲಿ ಹಿಡಿದುಕೊಂಡು ಹೋಗಬಹುದಾದ ಗಾತ್ರದಿಂದ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಗಾತ್ರ, ಮಾದರಿ ಮತ್ತು ಆಕರ್ಷಕ ವಿನ್ಯಾಸಗಳನ್ನು ಹೊಂದಿವೆ. ಮನೆಯ ಮಾಳಿಗೆ, ಪುಟ್ಟ ಮೈದಾನದಲ್ಲಿ ಗಾಳಿ ಪಟವನ್ನು ಗಗನಕ್ಕೆ ಹಾರಿಸುವಂತೆ ಈ ವಿಮಾನಗಳನ್ನು ಕೈಯಿಂದಲೇ ಆಗಸಕ್ಕೆ ಚಿಮ್ಮಿಸಬಹುದು. ನಂತರ ರಿಮೋಟ್ ಕಂಟ್ರೋಲ್‌ನಿಂದ ನಮಗೆ ಬೇಕಾದಂತೆ ವೇಗ, ಚಲಿಸುವ ದಿಕ್ಕುಗಳನ್ನು ನಿಯಂತ್ರಿಸಬಹುದು.ನಿಯಂತ್ರಣ ಕೇಂದ್ರ ಮತ್ತು ಸಾಫ್ಟ್‌ವೇರ್ ಒಳಗೊಂಡ ಡ್ರೋನ್ ಒಂದರ ಬೆಲೆ ಒಂದು ಲಕ್ಷ ಡಾಲರ್. 15 ಸಾವಿರ ಡಾಲರ್‌ನಿಂದ 50 ಸಾವಿರ ಡಾಲರ್‌ವರೆಗಿನ ಡ್ರೋನ್ ಕೂಡ ಇದೆ!  ಅತ್ಯಾಧುನಿಕ ಕಣ್ಗಾವಲು ಮತ್ತು ಜಿಪಿಆರ್‌ಎಸ್ ವ್ಯವಸ್ಥೆ ಹೊಂದಿರುವ ಡ್ರೋನ್ ಲಘು ವಿಮಾನದಲ್ಲಿ ಅಳವಡಿಸಿದ ಹೈಡೆಫಿನೇಶನ್ ಸಾಮರ್ಥ್ಯದ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ಕರಾರುವಾಕ್ಕಾದ ಫೋಟೊ, ವಿಡಿಯೊ ಹಿಡಿಯಬಲ್ಲವು. ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸಬಹುದಾದ ಈ ಪುಟ್ಟ ಹಾಗೂ ಲಘು ವಿಮಾನಗಳ ವಾಣಿಜ್ಯ ಮತ್ತು ಖಾಸಗಿ ಬಳಕೆಗೆ ಅನುಮತಿ ದೊರೆತಲ್ಲಿ ದೇಶದ ಕಣ್ಗಾವಲು ವ್ಯವಸ್ಥೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಲಿದೆ ಎನ್ನುತ್ತಾರೆ ಅಮೆರಿಕ ನಾಗರಿಕ ಸ್ವತಂತ್ರ ಸಂಸ್ಥೆಯ ಹಿರಿಯ ನೀತಿ ವಿಶ್ಲೇಷಕ ಜೆ. ಸ್ಟ್ಯಾನ್ಲಿ. -‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry