ಗುರುವಾರ , ಏಪ್ರಿಲ್ 22, 2021
30 °C

ಅಮೆರಿಕದಿಂದ ಕಲಿಯಬೇಕಾಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಲಿವಿಂಗ್ ಟುಗೇದರ್ ಹೆಸರಿನಲ್ಲಿ ಗಂಡು- ಹೆಣ್ಣು ತಾವು ಇಷ್ಟಪಟ್ಟವರೊಂದಿಗೆ ಬದುಕಿ ಕೌಟುಂಬಿಕ ಸಂಬಂಧಗಳನ್ನು ಛಿದ್ರ ಮಾಡಿಕೊಂಡಿರುವ ಅಮೆರಿಕನ್ನರಿಂದ ನಾವು ಏನನ್ನೂ ಕಲಿಯಬೇಕಾಗಿಲ್ಲ ಎಂದು ಬೀದರ ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಸ್ಪಷ್ಟವಾಗಿ ಹೇಳಿದರು.

ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡ ಮಾಸಿಕ ಶರಣ ಸಂಗಮ ಕಾರ್ಯಕ್ರಮ ಮತ್ತು ಅಮೆರಿಕದಲ್ಲಿ ಬಸವಧರ್ಮ ಪ್ರಚಾರ ಮಾಡಿ ಬಂದಿದಕ್ಕಾಗಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇವರು ಮೊದಲನೇ ಹೆಂಡತಿ ಮಕ್ಕಳು, ಅವರು ಎರಡನೇ ಗಂಡನ ಮಕ್ಕಳು ಎಂದು ಪರಿಚಯ ಮಾಡಿಕೊಡುವ ಅಮೆರಿಕದವರು ಸಂಪೂರ್ಣವಾಗಿ ಕೌಟುಂಬಿಕ ಸೌಖ್ಯ ಕಳೆದುಕೊಂಡಿದ್ದಾರೆ. ತಂದೆ-ತಾಯಿ, ಮಕ್ಕಳ ಮಧ್ಯದಲ್ಲಿ ಗಟ್ಟಿ ಸಂಬಂಧಗಳಿಲ್ಲ. ಅಲ್ಲಿನ ಪರಿಸರ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಸಿರಿವಂತಿಕೆ ಇದೆ ಆದರೆ ಜೀವನ ವ್ಯವಹಾರಿಕ ಆಗಿದೆ ಎಂದರು.

ಅನ್ಯ ಧರ್ಮದ ಗ್ರಂಥಗಳು ಹೇಳುವಂತೆ ಬಸವಣ್ಣನವರು ಸಹ ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ದಾನ ಮಾಡಬೇಕು ಎಂದಿದ್ದಾರೆ. ಕುರುಡ, ಕುಂಟರಿಗೆ, ಜಂಗಮರು, ನಿರ್ಗತಿಕರಿಗೆ ದಾನ ಮಾಡುವುದು ಪುಣ್ಯದ ಕೆಲಸ ಎಂದು ಪ್ರತಿಪಾದಿಸಿದ್ದಾರೆ. ನಾವೆಲ್ಲ ಮೂಢನಂಬಿಕೆ ಬಿಟ್ಟು ಏಕದೇವೋಪಾಸಕರಾಗಿ ಹೊರಗೂ, ಒಳಗೂ ಕಲ್ಯಾಣ ಎನ್ನುವಂತೆ ಜೀವನ ಸಾಗಿಸಿದರೆ ಮಾತ್ರ ಬಸವಣ್ಣನ ನಿಜ ಅನುಯಾಯಿ ಆಗುತ್ತೇವೆ ಎಂದರು.

ಬೆಳಗಾವಿ ಜಿಲ್ಲೆ ನಾಗನೂರು ಮಠದ ಬಸವಗೀತಾ ಮಾತಾಜಿ ಪ್ರವಚನ ಹೇಳಿದರು. ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕಾಶಪ್ಪ ಬಾಲಕಿಲೆ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಉಪಾಧ್ಯಕ್ಷ ಗದಗೆಪ್ಪ ಹಲಶೆಟ್ಟಿ, ನಿರ್ದೇಶಕರಾದ ಕಾಶಪ್ಪ ಸಕ್ಕರಬಾವಿ, ಬಸವರಾಜ ಬಾಲಕಿಲೆ, ಮಲ್ಲಿಕಾರ್ಜುನ ಕುರಕೋಟೆ, ಅಶೋಕ ನಾಗರಾಳೆ, ಮಲ್ಲಿಕಾರ್ಜುನ ವಾಂಜರಖೇಡೆ, ಸುಭಾಷ ಹೊಳಕುಂದೆ, ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಅಧ್ಯಕ್ಷ ಶಶಿಕಾಂತ ದುರ್ಗೆ ಉಪಸ್ಥಿತರಿದ್ದರು.

ವಿಜಯಲಕ್ಷ್ಮಿ ಗಡ್ಡೆ ಸ್ವಾಗತಿಸಿದರು. ಡಾ.ಸಂಗೀತಾ ಮಂಠಾಳೆ ನಿರೂಪಿಸಿದರು. ನಿರ್ಮಲಾ ಶೆಟಗಾರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.