ಅಮೆರಿಕದಿಂದ ಬಂದ ಅಣ್ಣಾ ಅಭಿಮಾನಿ!

7

ಅಮೆರಿಕದಿಂದ ಬಂದ ಅಣ್ಣಾ ಅಭಿಮಾನಿ!

Published:
Updated:
ಅಮೆರಿಕದಿಂದ ಬಂದ ಅಣ್ಣಾ ಅಭಿಮಾನಿ!

ಮೈಸೂರು: ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ಆರಂಭಿಸಿರುವ ಹೋರಾಟದಿಂದ ಪ್ರೇರೇಪಿತರಾದ ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವ ಯುವಕರೊಬ್ಬರು ತನ್ನ ವೃತ್ತಿಗೆ ತಾತ್ಕಾಲಿಕ ರಜೆ ಹಾಕಿ ರಾಜ್ಯದ ಹಳ್ಳಿಯಲ್ಲಿ ಎತ್ತಿನ ಗಾಡಿಯಲ್ಲಿ ಸುತ್ತುತ್ತಾ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ.ಜುಲೈ 31ರಿಂದ ತಮ್ಮ ಅಭಿಯಾನವನ್ನು ಆರಂಭಿಸಿರುವ ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿಯ ಮಾವಿನಹಳ್ಳಿ ಗ್ರಾಮದ ಎಂ.ಎನ್. ರಘು ಅವರು  ಬಹುತೇಕ ಹಳ್ಳಿಗಳಲ್ಲಿ ಸುತ್ತಾಡಿ ಅಣ್ಣಾ ಹಜಾರೆ ಅವರ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡುವುದಲ್ಲದೆ ಅಣ್ಣಾ ಹಜಾರೆ ಅವರ ತತ್ವಗಳನ್ನು ಸಾರುತ್ತಿದ್ದಾರೆ.ರಘು ಅವರು ಮೂಲತಃ ಮಾವಿನಹಳ್ಳಿಯವರೇ ಆದರೂ ಹೊಸಕೋಟೆ, ಮೈಸೂರು, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದ್ದಾರೆ. ಹುಲಕೋಟಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ 1996ರಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಬಿಇ ಪದವಿ ಪಡೆದ ಅವರು ಬೆಂಗಳೂರು, ಕೋಲ್ಕತ್ತ, ಚೆನ್ನೈ, ಇಂಗ್ಲೆಂಡ್‌ಗಳಲ್ಲಿ ವೃತ್ತಿ ನಡೆಸಿ ಕಳೆದ 8 ವರ್ಷಗಳಿಂದ ಅಮೆರಿಕದ ಬೋಸ್ಟನ್ ನಗರದಲ್ಲಿ ವಾಸವಾಗಿದ್ದಾರೆ.ಶಿಕಾಗೋ ಮೂಲದ ಪ್ರೊಡಕ್ಟ್ ಸ್ಪೇಸ್ ಸೊಲ್ಯೂಷನ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ರಘು ಕಳೆದ ಏಪ್ರಿಲ್ 5ರಂದು ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಹೋರಾಟದ ಮಾಹಿತಿಯನ್ನು ಅಂತರ್ಜಾಲದಲ್ಲಿ ನೋಡಿದರು. ಅದರಿಂದ ಪ್ರಭಾವಿತರಾಗಿ ಅಣ್ಣಾ ಹಜಾರೆ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆದುಕೊಂಡರು. ಜೊತೆಗೆ ಬೋಸ್ಟನ್‌ನಲ್ಲಿಯೇ ಜಾಗೋ ವರ್ಲ್ಡ್ ಎಂಬ ಒಕ್ಕೂಟವನ್ನು ಸ್ಥಾಪಿಸಿಕೊಂಡು ಅಣ್ಣಾ ಅವರ ಪರ ಪ್ರಚಾರವನ್ನೂ ನಡೆಸಿದರು.ಬಾಲ್ಯದಿಂದಲೂ ಸ್ವಾಮಿ ವಿವೇಕಾನಂದರ ಆದರ್ಶಗಳಿಂದ ಪ್ರಭಾವಿತರಾಗಿದ್ದ ರಘು ವಿದೇಶಿ ನೆಲದಲ್ಲಿ ಅಣ್ಣಾ ಹಜಾರೆಗೆ ಬೆಂಬಲ ಸೂಚಿಸುವುದರ ಬದಲು ತನ್ನ ಹಳ್ಳಿಗೇ ಹೋಗಿ ಅಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎಂದು ಮಾವಿನಹಳ್ಳಿಗೆ ವಾಪಸಾಗಿದ್ದಾರೆ.ಜೂನ್ 30ಕ್ಕೆ ಅಮೆರಿಕದಿಂದ ವಾಪಸು ಬಂದ ಅವರು ಸುಮಾರು ಒಂದು ತಿಂಗಳ ಕಾಲ ತಯಾರಿ ನಡೆಸಿ ಮಾವಿನಹಳ್ಳಿ ಭ್ರಷ್ಟಾಚಾರ ವಿರೋಧಿ ಸಮಿತಿಯನ್ನು ರಚಿಸಿಕೊಂಡು ಜುಲೈ 31ರಿಂದ ಹಳ್ಳಿಗಳ ಸಂಚಾರ ಆರಂಭಿಸಿದರು.ಬೆಳಿಗ್ಗೆಯಿಂದ ಸಂಜೆಯವರೆಗೆ ಎತ್ತಿನಗಾಡಿಯಲ್ಲಿಯೇ ಒಂದು ಊರಿಂದ ಇನ್ನೊಂದು ಊರಿಗೆ ಹೋಗುವುದು, ಅಣ್ಣಾ ಸಾಕ್ಷ್ಯಚಿತ್ರ ಪ್ರದರ್ಶನ ಮಾಡುವುದು, ಹಳ್ಳಿಗಳ ಉತ್ಸಾಹಿ ಯುವಕರನ್ನು ಸೇರಿಸಿಕೊಂಡು ಮೆರವಣಿಗೆ ಮಾಡುವುದು ಹಾಗೂ ಅಣ್ಣಾ ಅವರು ನಡೆಸುತ್ತಿರುವ ಹೋರಾಟ, ಗ್ರಾಮೀಣಾಭಿವೃದ್ಧಿಯ ಬಗ್ಗೆ ಭಾಷಣ ಮಾಡುತ್ತಿದ್ದಾರೆ.ಈಗಾಗಲೇ ಅವರು ಮಾವಿನಹಳ್ಳಿ, ಶಂಭುದೇವನಪುರ, ಟಿ.ದೊಡ್ಡಪುರ, ದೊಡ್ಡನಹುಂಡಿ, ಮಾದಾಪುರ, ಸಿ.ವಿ.ಹುಂಡಿ, ಚಂದಳ್ಳಿ, ಮರಡಿಪುರ, ಹೆಮ್ಮಿಗೆ, ತಲಕಾಡು, ಮೇದಿನಿ, ಹೊಳೆಸಾಲು, ಕಾವೇರಿಪುರ, ಕುಕ್ಕೂರು ಮುಂತಾದ ಹಳ್ಳಿಗಳ ಪಯಣವನ್ನು ಮುಗಿಸಿ ಮುಂದಿನ ಊರಿನತ್ತ ಸಾಗಿದ್ದಾರೆ.ಆ.15ರಂದು ರಾತ್ರಿ 8ಗಂಟೆಯಿಂದ 9 ಗಂಟೆಯವರೆಗೆ ದೇಶದ ಎಲ್ಲ ಜನರು ತಮ್ಮ ಮನೆಯಲ್ಲಿ ಒಂದು ಗಂಟೆಗಳ ಕಾಲ ವಿದ್ಯುತ್ ದೀಪಗಳನ್ನು ಆರಿಸಿ ಜ್ಯೋತಿ ಬೆಳಗಿಸುವಂತೆ ಅಣ್ಣಾ ಹಜಾರೆ ಅವರು ಕರೆ ನೀಡಿದ್ದು ಇದನ್ನು ಎಲ್ಲರೂ ಪಾಲಿಸಬೇಕು ಎಂದು ಅವರು ಮನವಿ ಮಾಡುತ್ತಾರೆ. ಯಾಕೆಂದರೆ ಭ್ರಷ್ಟಾಚಾರದಿಂದ ನಾವೆಲ್ಲಾ ಕತ್ತಲೆಯಲ್ಲಿದ್ದೇವೆ ಎನ್ನುವುದು ಅವರ ನಂಬಿಕೆ.ರಘು ಅವರನ್ನು 95910 78304 ಮೂಲಕ ಅಥವಾ rmavinahalli@gmail.com

 ಮೂಲಕ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry