ಗುರುವಾರ , ಜೂಲೈ 2, 2020
28 °C

ಅಮೆರಿಕದಿಂದ ಸ್ಲಮ್‌ಗೆ `ಮಾಹಿ' ನೃತ್ಯ ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕದಿಂದ ಸ್ಲಮ್‌ಗೆ `ಮಾಹಿ' ನೃತ್ಯ ಸೇತುವೆ

ಈ ಯುವಕನಿಗೆ ಟೆಕ್ಕಿಯಾಗಿ ದುಡಿಯುವುದಕ್ಕಿಂತ ನೃತ್ಯವನ್ನೇ ಉಸಿರಾಡುವಾಸೆ. ಭಾರತದ ಶ್ರೀಮಂತ ನೃತ್ಯ ಪರಂಪರೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮನೆಮಾತಾಗಿಸಬೇಕು, ಅದಕ್ಕೆ ಮೊದಲು ತಾನು ಮಾಸ್ಟರ್ ಆಫ್ ಆಲ್ ಡಾನ್ಸಸ್ ಎಂಬಷ್ಟು ಪಳಗಬೇಕು ಎಂಬ ಮಹತ್ವಾಕಾಂಕ್ಷೆ.

ನಾಲ್ಕರ ಹರೆಯದಲ್ಲೇ ನೃತ್ಯದ ಹುಚ್ಚು ಹತ್ತಿತ್ತು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಮುಗಿಯುತ್ತಿದ್ದಂತೆ ನೌಕರಿ ಹುಡುಕುವ ಬದಲು ಹತ್ತಾರು ನೃತ್ಯ ಪ್ರಕಾರಗಳನ್ನು ಆಯಾ ಕ್ಷೇತ್ರಗಳ ದಿಗ್ಗಜರ ಕೈಯಲ್ಲೇ ಕಲಿತ ಹಟವಾದಿ. ನಂತರ ಸಿನಿಮಾಟೊಗ್ರಫಿ ಡಿಪ್ಲೊಮಾಗಾಗಿ ಅಮೆರಿಕಕ್ಕೆ ಹಾರಿದ ಹುಡುಗ ಅಲ್ಲಿ ತನ್ನ ಅಮೋಘ ನೃತ್ಯ ಪ್ರತಿಭೆಯ ಮೂಲಕವೇ ಮನೆ ಮಾತಾದರು. ಮಹೇಶ್ ಕುಮಾರ್ ಹಿರೇಮಠ ಎಂಬ ಈ ಯುವಕ ಅಲ್ಲಿ ಹೆಸರಾಗಿರುವುದು `ಮಾಹಿ' ಎಂದು. ಮುಂದಿನ ಜುಲೈನಲ್ಲಿ ಅಮೆರಿಕದಲ್ಲಿ ನಡೆಯಲಿರುವ `ವರ್ಲ್ಡ್ ಕಪ್ ಡಾನ್ಸ್'ಗೆ ಪೂರ್ವಭಾವಿಯಾಗಿ ಕಳೆದ ವಾರ ನಗರದಲ್ಲಿ ನಡೆದ ಇಂಡಿಯನ್ ಇಂಟರ್‌ನ್ಯಾಷನಲ್ ಡಾನ್ಸ್ ಕಾಂಗ್ರೆಸ್‌ನಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಾಹಿ `ಮೆಟ್ರೊ' ಜೊತೆ ಮಾತಾಡಿದರು.

ನೃತ್ಯ ಈ ಪರಿಯಾಗಿ ಆಕರ್ಷಿಸಿದ್ದು ಹೇಗೆ?

ನನ್ನ ಹುಟ್ಟೂರು ಧಾರವಾಡ. ಅಪ್ಪ ಅಮ್ಮ ಇಬ್ಬರೂ ನೌಕರಿಯಲ್ಲಿದ್ದು ವರ್ಗಾವಣೆಯಾಗುತ್ತಾ ಇದ್ದುದರಿಂದ ನಾನು ಬೈಲಹೊಂಗಲದ ಅಜ್ಜ ಅಜ್ಜಿ ಜತೆಯೇ ಇದ್ದೆ. ನಾಲ್ಕು ವರ್ಷದವನಿದ್ದಾಗಲೇ ಕಾಲು ಕುಣಿಸಿ ಸೊಂಟ ತಿರುಗಿಸುತ್ತಿದ್ದೆನಂತೆ. ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದುವ ಹೊತ್ತಿಗೆ ಬಾಲಿವುಡ್ ಡಾನ್ಸ್ ಅತ್ಯುತ್ತಮ ರೀತಿಯಲ್ಲಿ ಮಾಡುತ್ತಿದ್ದೆ. ಚಿರಂಜೀವಿ ಮತ್ತು ಪ್ರಭುದೇವ ಸ್ಟೈಲ್‌ನಲ್ಲಿ ಡಾನ್ಸ್ ಮಾಡುತ್ತಿದ್ದೆ. ಇದೇ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ನಿರ್ಧಾರಕ್ಕೆ ಬಂದದ್ದು ಆಗಲೇ. ಪ್ರಭುದೇವ ಅವರು ತೀರ್ಪುಗಾರರಾಗಿದ್ದ ರಿಯಾಲಿಟಿ ಶೋಗಾಗಿ ಬೆಂಗಳೂರಿಗೆ ಬಂದೆ. ಅದು ನೃತ್ಯದೆಡೆಗಿನ ನನ್ನ ತುಡಿತ, ಮಹತ್ವಾಕಾಂಕ್ಷೆಗೆ ನಿಜವಾದ ಅಡಿಪಾಯ.ನಿಮ್ಮ ನೃತ್ಯದ ವೈಶಿಷ್ಟ್ಯವೇನು?

ಸಾಂಪ್ರದಾಯಿಕವಾಗಿ ಅಥವಾ ಬಾಲಿವುಡ್ ಶೈಲಿಯಲ್ಲಿ ಪಳಗಿದ್ದ ನನಗೆ ಅದರಲ್ಲಿ ಹೊಸದೇನೂ ಕಾಣಲಿಲ್ಲ. ಪಕ್ಕಾ ಭಾರತೀಯ ಶೈಲಿಗಳನ್ನು ಅರಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅಭಿಲಾಷ್ ನಿಂಗಪ್ಪ ಅವರ ಬಳಿ ಕೇರಳದ ಸಮರಕಲೆ ಕಲರಿಪಯಟ್ಟು ಮತ್ತು ಭರತನಾಟ್ಯದ ನವರಸಗಳನ್ನು ಕಲಿತೆ. ಕಥಕ್, ಒಡಿಸ್ಸಿ, ಕೂಚಿಪುಡಿ, ಲ್ಯಾಟಿನ್, ಹಿಪ್ ಹಾಪ್, ಜಾಸ್ ಹೀಗೆ ಹತ್ತಾರು ಪ್ರಕಾರಗಳನ್ನು ಕಲಿತೆ. ಭಾರತೀಯ ಜನಪದ ಶೈಲಿಗಳನ್ನೂ ಬಿಡಬಾರದು ಎಂಬ ಉದ್ದೇಶದಿಂದ ಕರ್ನಾಟಕದ ಬೇರೆ ಬೇರೆ ಕಡೆ ಹೋಗಿ ನಮ್ಮ ಸಾಂಪ್ರದಾಯಿಕ ಗೆಜ್ಜೆಕುಣಿತ, ನಂದಿಕೋಲು ಕೂಡ ಕಲಿತೆ. ಇವೆಲ್ಲವೂ ನನ್ನ `ಮಾಹೀಸ್ ಫ್ಯೂಷನ್'ನಲ್ಲಿವೆ.ನಿಮ್ಮ ಗುರುಗಳು?

ಬೆಂಗಳೂರಿನ ಲೂರ್ದ್ ವಿಜಯ್, ಮುಂಬೈನ ಶ್ಯಾಮಕ್ ಡಾವರ್ ಮತ್ತು ಸ್ನೇಹಾ ಕಪೂರ್, ವರ್ಲ್ಡ್ ಸಾಲ್ಸಾ ಚಾಂಪಿಯನ್ ರಿಚರ್ಡ್ ಹಾಗೂ `ಮದರ್ ಆಫ್ ಸಾಲ್ಸಾ' ಎಂದೇ ಗುರುತಿಸಲಾಗುವ ಎಡ್ಡಿ ನನ್ನ ಗುರುಗಳಲ್ಲಿ ಪ್ರಮುಖರು.ಅಮೆರಿಕಕ್ಕೆ ಹೋಗಲು ಕಾರಣ?

ಬೆಂಗಳೂರಿನಲ್ಲಿ ರಿಯಾಲಿಟಿ ಶೋ, ಧಾರಾವಾಹಿಗಳಲ್ಲಿ ಕಾಣಿಸಿಕೊಂಡಾಗ ನಮ್ಮದೇ ನೃತ್ಯ ಪ್ರದರ್ಶನಗಳ ಚಿತ್ರೀಕರಣವನ್ನೂ ಮಾಡಿಕೊಳ್ಳುತ್ತಿದ್ದೆ. ಆಗ ನನಗೆ ಇನ್ನಷ್ಟು ತಾಂತ್ರಿಕ ತರಬೇತಿ ಬೇಕು ಅನಿಸಿತು. ಅಮೆರಿಕದ `ಸ್ಯಾನ್‌ಫ್ರಾನ್ಸಿಸ್ಕೊ ಸ್ಕೂಲ್ ಆಫ್ ಡಿಜಿಟಲ್ ಫಿಲ್ಮ್ ಮೇಕಿಂಗ್'ನಲ್ಲಿ ಡಿಪ್ಲೊಮಾ ಪಡೆಯಲು ತೀರ್ಮಾನಿಸಿ ಅಲ್ಲಿಗೆ ತೆರಳಿದೆ. ನಾಲ್ಕು ವರ್ಷಗಳಿಂದ ಕ್ಯಾಲಿಫೋರ್ನಿಯಾದಲ್ಲಿದ್ದೇನೆ.ನೃತ್ಯಪಟುವಾಗಿ ಅಲ್ಲಿ ನೆಲೆ ಕಂಡುಕೊಂಡ ಬಗೆ ಹೇಗೆ?

ಡಿಪ್ಲೊಮಾ ಪಡೆಯಲು ಹೋಗಿದ್ದರೂ ನನ್ನ ನೃತ್ಯಪ್ರೀತಿಯನ್ನು ಮರೆಯಲಿಲ್ಲ. ಮನೆ ಮತ್ತು ಶಾಲೆಯ ಆಸುಪಾಸಿನಲ್ಲೇ ಉಚಿತವಾಗಿ ನೃತ್ಯ ತರಬೇತಿ ನೀಡಲಾರಂಭಿಸಿದೆ. ನನ್ನದೇ ಫ್ಯೂಷನ್ ಶೈಲಿ ಕಂಡು ಇದ್ಯಾವ ಶೈಲಿ ಎಂದು ಕೇಳಲಾರಂಭಿಸಿದರು. ನಾನು ಕಲಿತ ಅಷ್ಟೂ ಪ್ರಕಾರಗಳನ್ನು ಒಳಗೊಂಡ ಫ್ಯೂಷನ್ ಅದು. ಈ ತರಗತಿಗಳಿಂದ ಬೇರೆ ಪ್ರದೇಶಗಳಿಗೂ ನನ್ನ ಬಗ್ಗೆ ಮಾಹಿತಿ ಹಬ್ಬಿತು. ಜತೆಗೆ ಅಲ್ಲಿನ ಆರ್ಟ್ ಆಫ್ ಲಿವಿಂಗ್‌ನ ಧ್ಯಾನ ತರಗತಿಯ ಸದಸ್ಯರಿಗಾಗಿ ಉಚಿತವಾಗಿ ನೃತ್ಯ ತರಬೇತಿ ನೀಡಿದೆ. ಅಲ್ಲಿನವರು ಉಚಿತವಾಗಿ ತರಬೇತಿ ಮುಂದುವರಿಸಲು ಒಪ್ಪದ ಕಾರಣ ಅಲ್ಪಪ್ರಮಾಣದ ಶುಲ್ಕ ಪಡೆದೆ. ಫೇಸ್‌ಬುಕ್, ಲಿಂಕ್ಡ್‌ಇನ್, ಸ್ಯಾನ್‌ಫ್ರಾನ್ಸಿಸ್ಕೋದ ಬಾಸ್ಕೆಟ್‌ಬಾಲ್ ಟೀಮ್ ಜೈಂಟ್ಸ್ ಜೊತೆಗಿನ ಪ್ರದರ್ಶನ ಹಾಗೂ ಸ್ಟಾರ್ ಪ್ಲಸ್‌ನ `ಉತ್ಸವ್'ನಲ್ಲಿಯೂ ಪಾಲ್ಗೊಳ್ಳುವ ಅವಕಾಶವೂ ಸಿಕ್ಕಿತು.ಅವಿಸ್ಮರಣೀಯವೆನಿಸಿದ ಶೋ?

ಇದೇ ವರ್ಷ ಏಪ್ರಿಲ್ 20ರಂದು ಕ್ಯಾಲಿಫೋರ್ನಿಯಾದ ಪಾಲೋ ಆಲ್ಟೋದಲ್ಲಿರುವ ಜ್ಯೂವಿಷ್ ಕಮರ್ಷಿಯಲ್ ಸೆಂಟರ್‌ನಲ್ಲಿ ಒಂದು ಶೋ ಇತ್ತು. 120ಕ್ಕೂ ಅಧಿಕ ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರು ನೃತ್ಯ ಪ್ರದರ್ಶನ ನೀಡಿದ್ದರು. ನಾನು ಮತ್ತು ನನ್ನ ತಂಡ `ಕೂ ಬಾಲಿವುಡ್ ಫ್ಯೂಷನ್' ಪ್ರದರ್ಶನ ನೀಡಿದೆ. ಬಾಲಿವುಡ್ ನೃತ್ಯದ ಜೊತೆಗೆ ಭರತನಾಟ್ಯ, ಕಲರಿ ಮತ್ತು ಸಮಕಾಲೀನ ಭಾರತೀಯ ನೃತ್ಯಗಳಾದ ಸಾಲ್ಸಾ, ಹಿಪ್-ಹಾಪ್ ಮತ್ತು ಪಾಶ್ಚಾತ್ಯ ನೃತ್ಯವನ್ನೊಳಗೊಂಡ ಪ್ಯಾಕೇಜ್ ಅದು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಆಡಳಿತದಲ್ಲಿ ವಾಣಿಜ್ಯ ಸಲಹೆಗಾರರಲ್ಲೊಬ್ಬರಾಗಿದ್ದ ತೆರೆಸಾ ಕಾಕ್ಸ್ ವೇದಿಕೆಯೇರಿ ಬಂದು ನನ್ನ ಡಾನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನು ಎಂದಿಗೂ ಮರೆಯಲಾರೆ.

 

ಕೊಳೆಗೇರಿ ಮಕ್ಕಳಿಗೆ ಉಚಿತ ತರಬೇತಿ

ಸಣ್ಣ ವಯಸ್ಸಿನಲ್ಲಿ ನೃತ್ಯ ಕಲಿಯಲು ತಾನು ಹಪಹಪಿಸುತ್ತಿದ್ದಾಗ ಅವಕಾಶ ಸಿಗಲಿಲ್ಲ. ಬಾಲ್ಯದ ಕನಸನ್ನು ಅದುಮಿಟ್ಟುಕೊಂಡ ಮಕ್ಕಳಿಗೆ ಉಚಿತವಾಗಿ ನೃತ್ಯಾಭ್ಯಾಸ ಸಿಗುವಂತಾಗಬೇಕು ಎಂಬುದು ಮಾಹಿಯ ಬಹುದಿನಗಳ ಆಸೆಯಂತೆ. ಬೆಂಗಳೂರಿನ ಸ್ಲಮ್ ಮಕ್ಕಳು ಅವರ ಆಯ್ಕೆ.ನೃತ್ಯ ತರಬೇತಿಯನ್ನು ಆಯೋಜಿಸಿ ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಯಾವುದಾದರೂ ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ವಹಿಸಿಕೊಂಡರೆ ಅದಕ್ಕೆ ಬೇಕಾದ ಹಣಕಾಸಿನ ನೆರವನ್ನು ತಾವು ಒದಗಿಸುವುದಾಗಿ ಮಾಹಿ ಹೇಳುತ್ತಾರೆ. `ಸಹಾಯತಾ' ಎಂಬ ಎನ್‌ಜಿಒ ಮಾಹಿಯ ಈ ಯೋಜನೆಗೆ ಈಗಾಗಲೇ ಕೈಜೋಡಿಸಿದೆ. ಆಸಕ್ತರು ಸಂಪರ್ಕಿಸಿ:

https://www.facebook.com/MahisDance

mahisdance@gmail.com

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.