ಅಮೆರಿಕದ ಆತಂಕ ನಿವಾರಣೆಗೆ ಯತ್ನ

7

ಅಮೆರಿಕದ ಆತಂಕ ನಿವಾರಣೆಗೆ ಯತ್ನ

Published:
Updated:
ಅಮೆರಿಕದ ಆತಂಕ ನಿವಾರಣೆಗೆ ಯತ್ನ

ಬಾಲಿ (ಇಂಡೊನೇಷ್ಯಾ) (ಪಿಟಿಐ): ದ್ವಿಪಕ್ಷೀಯ ಮತ್ತು ಜಾಗತಿಕ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ- ಅಮೆರಿಕದ ಬಾಂಧವ್ಯದಲ್ಲಿ ಯಾವುದೇ ಕಿರಿಕಿರಿ ಇಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.`ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕದ ಕಂಪೆನಿಗಳ ಯಾವುದೇ ಕುಂದುಕೊರತೆಗೆ ಸೂಕ್ತ ವಿವರ ನೀಡಲು ಅಗತ್ಯವಾದ ನಿಯಮಾವಳಿಗಳನ್ನು ಸಿದ್ಧಪಡಿಸಲಾಗಿದೆ. ನಾಗರಿಕ ಬಳಕೆಯ ಪರಮಾಣು ಹೊಣೆಗಾರಿಕೆ ಕಾನೂನು ಸಿದ್ಧವಾಗಿದ್ದು, ಅದಕ್ಕೆ ಸಂಬಂಧಿಸಿದ ನಿಯಮಾವಳಿಗಳು ಸಂಸತ್ತಿನ ಮುಂದೆ ಇವೆ.ಪರಮಾಣು ದುರಂತಕ್ಕೆ ಸಂಬಂಧಿಸಿದಂತೆ ನೆಲದ ಕಾನೂನಿಗೆ ಪೂರಕವಾಗಿ ಹೆಚ್ಚುವರಿ ಪರಿಹಾರ ನಿಯಮಗಳನ್ನು ಒಪ್ಪಿಕೊಳ್ಳಲು ಭಾರತ ಬದ್ಧವಾಗಿದೆ~ ಎಂದು ಹೇಳುವ ಮೂಲಕ, ಕಂಪೆನಿಗಳ ಆತಂಕ ನಿವಾರಿಸುವ ಪ್ರಯತ್ನವನ್ನೂ ಅವರು ಈ ಸಂದರ್ಭದಲ್ಲಿ ಮಾಡಿದ್ದಾರೆ.ಭಾರತದ ಪರಮಾಣು ಬಾಧ್ಯತಾ ಕಾನೂನು `ಸರಬರಾಜು ಸ್ನೇಹಿ~ ಆಗಿಲ್ಲ ಎಂದು ಅವೆುರಿಕದ ಕಂಪೆನಿಗಳು ಆತಂಕಗೊಂಡಿರುವ ಸಂದರ್ಭದಲ್ಲಿ ಪ್ರಧಾನಿ ಈ ಅಭಯ ನೀಡಿದ್ದಾರೆ.ಪರಮಾಣು ನಿರ್ವಾಹಕ ಕಂಪೆನಿಗಳು ನೀಡಬೇಕಾದ ಪರಿಹಾರ ಅಪರಿಮಿತವಾಗಿರುತ್ತದೆ ಎಂದು ಭಾವಿಸಬೇಕಾದ ಅಗತ್ಯವಿಲ್ಲ ಎಂಬುದನ್ನು ಹೊಸ ನಿಯಮ ಈಗಾಗಲೇ ಸ್ಪಷ್ಟಪಡಿಸಿದೆ.ಒಪ್ಪಂದದ ಚರ್ಚೆ: ಕಳೆದ ನವೆಂಬರ್‌ನಲ್ಲಿ ಒಬಾಮ ಅವರು ಭಾರತಕ್ಕೆ ಭೇಟಿ ನೀಡಿ ಹೋದ ನಂತರ ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದ ಸಿಂಗ್, ನಾಗರಿಕ ಬಳಕೆಯ ಪರಮಾಣು ಒಪ್ಪಂದ ಜಾರಿಯ ಬಗ್ಗೆ ಚರ್ಚಿಸಿದರು.ಅಸಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಈ ಧುರೀಣರು, ಸುಮಾರು ಒಂದು ಗಂಟೆ ಕಾಲ ಪ್ರತ್ಯೇಕವಾಗಿ ಸಭೆ ನಡೆಸಿದರು.ಕಳೆದ ವರ್ಷ ಒಬಾಮ ಅವರು ಭಾರತಕ್ಕೆ ಭೇಟಿ ನೀಡಿ ಹೋದ ನಂತರ ಎರಡೂ ರಾಷ್ಟ್ರಗಳು ಹೂಡಿಕೆ, ವ್ಯಾಪಾರ, ಉನ್ನತ ಶಿಕ್ಷಣ, ಶುದ್ಧ ಇಂಧನ ಮತ್ತು ರಕ್ಷಣಾ ಸಂಬಂಧಿ ವಿಚಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಬಗ್ಗೆ ಸಿಂಗ್ ವಿವರ ನೀಡಿದರು.ಕಳೆದ ವರ್ಷ ತಾವು ಭಾರತಕ್ಕೆ ಭೇಟಿ ನೀಡಿದ ನೆನಪುಗಳನ್ನು ಒಬಾಮ ಈ ಸಂದರ್ಭದಲ್ಲಿ ಮೆಲುಕು ಹಾಕಿದರು.

 

ಬಾಂಧವ್ಯ ವೃದ್ಧಿ: ಚೀನಾ ಜತೆ ಮಾತುಕತೆ

ಬಾಲಿ (ಇಂಡೊನೇಷ್ಯಾ) (ಪಿಟಿಐ): ದಕ್ಷಿಣ ಚೀನಾ ಸಮುದ್ರದ ವಿವಾದಿತ ಪ್ರದೇಶದಲ್ಲಿ ತೈಲ ನಿಕ್ಷೇಪ ಶೋಧನೆಯ ವಾಣಿಜ್ಯ ಚಟುವಟಿಕೆಗಳನ್ನು  ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್, ಚೀನಾದ ಪ್ರಧಾನಿ ವೆನ್ ಜಿಯಾಬೊ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.ತೈಲ ನಿಕ್ಷೇಪ ಶೋಧನೆಯ ಬಗ್ಗೆ ಚೀನಾ ಕಿರಿಕಿರಿ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಜಿಯಾಬೊ ಅವರ ಬಳಿ ಈ ವಿಷಯ ಪ್ರಸ್ತಾಪಿಸಿ ಸ್ಪಷ್ಟನೆ ನೀಡಿದರು.ಉಭಯ ಧುರೀಣರು ಸುಮಾರು 55 ನಿಮಿಷಗಳ ಕಾಲ ಮಾತುಕತೆ ನಡೆಸಿ, ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿನ ಪರಿಸ್ಥಿತಿ, ವ್ಯಾಪಾರ ಸೇರಿದಂತೆ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ವಿಚಾರವನ್ನು ಚರ್ಚಿಸಿದರು.ಚೀನಾದ ಜತೆ ಉತ್ತಮ ಬಾಂಧವ್ಯ ಹೊಂದುವುದು ಭಾರತದ ಆಶಯವಾಗಿದೆ ಎಂದು ಸಿಂಗ್ ಹೇಳಿದರೆ, 21ನೇ ಶತಮಾನವು ಏಷ್ಯಾಗೆ ಸೇರಿದ್ದು ಎಂಬುದನ್ನು ಜಗತ್ತಿಗೆ ತೋರಿಸಲು ಒಟ್ಟಾಗಿ ಕೆಲಸ ಮಾಡೋಣ ಎಂದು ಜಿಯಾಬೊ ತಿಳಿಸಿದರು. ಶನಿವಾರ ಆರಂಭವಾಗಲಿರುವ ಪೂರ್ವ ಏಷ್ಯಾ ಶೃಂಗಸಭೆಯ ಹಿನ್ನೆಲೆಯಲ್ಲಿ ಈ ಮುಖಂಡರು ಪೂರ್ವಭಾವಿಯಾಗಿ ಚರ್ಚಿಸಿದರು ಎಂದು ವಿದೇಶಾಂಗ ಇಲಾಖೆಯ ಪೂರ್ವ ವಿಭಾಗದ ಕಾರ್ಯದರ್ಶಿ ಸಂಜಯ್ ಸಿಂಗ್ ತಿಳಿಸಿದ್ದಾರೆ.ವಿಯೆಟ್ನಾಂನ ಕೋರಿಕೆಯಂತೆ ಭಾರತವು ದಕ್ಷಿಣ ಚೀನಾ ಸಮುದ್ರದಲ್ಲಿ ತೈಲ ನಿಕ್ಷೇಪ ಶೋಧ ಕಾರ್ಯ ಆರಂಭಿಸಿದಾಗ ಚೀನಾ ಆಕ್ಷೇಪ ವ್ಯಕ್ತಪಡಿಸಿ ದಾಳಿ ನಡೆಸಿತ್ತು. ಇದಕ್ಕೆ ಭಾರತ ಪ್ರತಿಭಟನೆ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಸಿಂಗ್ ಅವರು ಚೀನಾ ಪ್ರಧಾನಿಗೆ ವಸ್ತುಸ್ಥಿತಿಯ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಸಂಜಯ್ ವಿವರಿಸಿದರು.

 

ಅನೇಕ ರಂಗಗಳಲ್ಲಿ ಭಾರತ ಮತ್ತು ಚೀನಾ ಸಹಕಾರ ಸಾಧಿಸಲು ಅವಕಾಶವಿದ್ದು, ಎರಡೂ ರಾಷ್ಟ್ರಗಳು ಈ ಬಗ್ಗೆ ಗಂಭೀರ ಪ್ರಯತ್ನ ಮಾಡಲು ಒಪ್ಪಿಕೊಂಡಿವೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry