ಶನಿವಾರ, ಡಿಸೆಂಬರ್ 7, 2019
16 °C

ಅಮೆರಿಕದ ಐಟಿ ಮುಖ್ಯಸ್ಥ ಪದತ್ಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕದ ಐಟಿ ಮುಖ್ಯಸ್ಥ ಪದತ್ಯಾಗ

ವಾಷಿಂಗ್ಟನ್ (ಐಎಎನ್‌ಎಎಸ್):  ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಡಳಿತದ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ, ಭಾರತೀಯ ಮೂಲದ ಅನೀಶ್ ಚೋಪ್ರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಒಬಾಮ ಆಡಳಿತದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದ ಭಾರತೀಯ ಮೂಲದ ಅಮೆರಿಕ ಪ್ರಜೆಯಾಗಿರುವ ಚೋಪ್ರಾ ಅವರು ರಾಜಕೀಯಕ್ಕೆ ಸೇರುವ ಉದ್ದೇಶದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.ಅಮೆರಿಕ ಅಧ್ಯಕ್ಷರ ಮತ್ತು ಸಂಯುಕ್ತ ಸರ್ಕಾರದ ಮೊದಲ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ (ಸಿಟಿಒ) ಅನೀಶ್ ಕಾರ್ಯನಿರ್ವಹಿಸುತ್ತಿದ್ದರು.ಅನೀಶ್ ಅವರ ರಾಜೀನಾಮೆಯನ್ನು ದೃಢಪಡಿಸಿರುವ ರಾಷ್ಟ್ರಾಧ್ಯಕ್ಷ ಒಬಾಮ, ತಂತ್ರಜ್ಞಾನ ಅಧಿಕಾರಿಯಾಗಿ ಚೋಪ್ರಾ ಸರ್ಕಾರಕ್ಕೆ ನೀಡಿರುವ ಸೇವೆಯನ್ನು  ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.`ಅವರಲ್ಲಿರುವ ನಾಯಕತ್ವ ಮತ್ತು ಹೊಸತನಗಳನ್ನು ಸೃಷ್ಟಿಸುವ ಗುಣಗಳು ಭವಿಷ್ಯದಲ್ಲೂ ಅಮೆರಿಕದ ಪ್ರಜೆಗಳಿಗೆ ನೆರವು ನೀಡಲಿವೆ. ಅವರು ಸಲ್ಲಿಸಿರುವ ಸೇವೆಗೆ ಕೃತಜ್ಞನಾಗಿದ್ದೇನೆ~ ಎಂದು ಒಬಾಮ ಶ್ಲಾಘಿಸಿದ್ದಾರೆ. ಚೋಪ್ರಾ ರಾಜೀನಾಮೆಗೆ ಅಧಿಕೃತ ಕಾರಣ ಏನು ಎಂಬುದನ್ನು ಶ್ವೇತಭವನ ಹೇಳಿಲ್ಲ. ಆದರೆ ಅವರು ವರ್ಜೀನಿಯಾದ ಗವರ್ನರ್ ಹುದ್ದೆಗೆ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆ ಎಂದು ಪ್ರಮುಖ ದೈನಿಕವೊಂದು ವರದಿ ಮಾಡಿದೆ.ತಾವು ವರ್ಜೀನಿಯಾದ ಗವರ್ನರ್ ಹುದ್ದೆಗೆ ಸ್ಪರ್ಧಿಸುವುದಾಗಿ ಈ ಹಿಂದೆ ಅನೀಶ್ ಚೋಪ್ರಾ ಸಾಕಷ್ಟು ಬಾರಿ ಹೇಳಿಕೊಂಡಿದ್ದರು ಎಂದು ವರದಿಯಲ್ಲಿ ಪತ್ರಿಕೆ ಹೇಳಿದೆ.

ಪ್ರತಿಕ್ರಿಯಿಸಿ (+)