ಶನಿವಾರ, ಮೇ 15, 2021
24 °C

ಅಮೆರಿಕದ ದಿಗ್ಬಂಧನ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್, (ಪಿಟಿಐ): ಬಹುಕೋಟಿ ಡಾಲರ್ ಅನಿಲ ಕೊಳವೆ ಯೋಜನೆಯ ಬಗ್ಗೆ ಇರಾನ್ ಜತೆ ಒಪ್ಪಂದ ಮಾಡಿಕೊಳ್ಳಲು ಮುಂದಾದರೆ ದಿಗ್ಬಂಧನ ಹೇರಬೇಕಾಗುತ್ತದೆ ಎಂದು ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದೆ.ಇಂಧನ ಸರಬರಾಜಿಗೆ ಸಂಬಂಧಿಸಿದಂತೆ ಇಸ್ಲಾಮಾಬಾದ್‌ನಲ್ಲಿ ನಡೆದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಈ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.ಇಂಧನ ಸರಬರಾಜು ಕುರಿತ ನಾಲ್ಕನೇ ಸುತ್ತಿನ ಮಾತುಕತೆಯೂ ಯಾವುದೇ ಫಲಿತಾಂಶ ನೀಡಿಲ್ಲ ಎಂದು ಖಚಿತ ಮೂಲಗಳನ್ನು ಆಧರಿಸಿ `ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ವರದಿ ಮಾಡಿದೆ. ಇರಾನ್‌ನಿಂದ ಅನಿಲಕೊಳವೆ ಮೂಲಕ ಅನಿಲ ಆಮದು ಮಾಡಿಕೊಳ್ಳುವ ಯೋಜನೆಯನ್ನು ಕೈಬಿಡಬೇಕು ಎಂದು ಅಮೆರಿಕದ ಅಂತರರಾಷ್ಟ್ರೀಯ ಇಂಧನ ವ್ಯವಹಾರಗಳ ವಿಶೇಷ ರಾಜತಾಂತ್ರಿಕ ಅಧಿಕಾರಿ ಕಾರ್ಲಸ್ ಪಾಸ್ಕಲ್ ಅವರು ಪಾಕಿಸ್ತಾನ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.ಇರಾನ್‌ನಿಂದ ಅನಿಲ ಆಮದು ಮಾಡಿಕೊಳ್ಳುವ ಬದಲು ಆಫ್ಘಾನಿಸ್ತಾನ, ಭಾರತದ ಮೂಲಕ ತುರ್ಕಮೆನಿಸ್ತಾನದಿಂದ ಕೊಳವೆ ಮಾರ್ಗದಲ್ಲಿ ಅನಿಲ ಆಮದು ಮಾಡಿಕೊಳ್ಳುವಂತೆ ಅಮೆರಿಕ ಸಲಹೆ ಮಾಡಿದೆ.ಇರಾನ್ ಮೇಲೆ ಈಗಾಗಲೇ ದಿಗ್ಬಂಧನ ಹೇರಲಾಗಿರುವುದರಿಂದ ಪಾಕಿಸ್ತಾನ ಆ ದೇಶದಿಂದ ಅನಿಲ ಆಮದು ಮಾಡಿಕೊಳ್ಳುವುದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಒಪ್ಪಂದ ಮಾಡಿಕೊಳ್ಳದಂತೆ ಒತ್ತಡ ಹೇರುತ್ತಿದ್ದು, ಆರ್ಥಿಕ ಮತ್ತು ಇನ್ನಿತರ ದಿಗ್ಬಂಧನದ ಬೆದರಿಕೆಯನ್ನೂ ಹಾಕಿದೆ.ವಾರದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿರುವ ವಿದೇಶಾಂಗ ಖಾತೆಯ ವಕ್ತಾರ ತೆಹಮಿನಾ ಜಂಜುವಾ , `ಪಾಕಿಸ್ತಾನವು ಇಂಧನ ಕೊರತೆ ಎದುರಿಸುತ್ತಿರುವುದರಿಂದ ಇರಾನ್‌ನಿಂದ ಅನಿಲ ಆಮದು ಮಾಡಿಕೊಳ್ಳಲು ಮುಂದಾಗಿದೆ, ದೇಶದ ಹಿತದೃಷ್ಟಿಯಿಂದ ಇದು ಅಗತ್ಯವಾಗಿದೆ~ ಎಂದು ತಿಳಿಸಿದ್ದಾರೆ.ಈ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪಾಕಿಸ್ತಾನದ ಜನತೆಯ ಹಿತ ಕಾಪಾಡಲು ಇರಾನ್ ಜತೆ ಒಪ್ಪಂದ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.