ಅಮೆರಿಕದ ಬಿಕ್ಕಟ್ಟು: ತೀವ್ರ ಚರ್ಚೆ

7

ಅಮೆರಿಕದ ಬಿಕ್ಕಟ್ಟು: ತೀವ್ರ ಚರ್ಚೆ

Published:
Updated:
ಅಮೆರಿಕದ ಬಿಕ್ಕಟ್ಟು: ತೀವ್ರ ಚರ್ಚೆ

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಸಾಲ ಮರು ಪಾವತಿ ಸಾಮರ್ಥ್ಯ ಕುಸಿದಿರುವುದು ಮತ್ತು ಐರೋಪ್ಯ ಒಕ್ಕೂಟದಲ್ಲಿನ ಸಾಲದ ಬಿಕ್ಕಟ್ಟಿನಿಂದ ಉದ್ಭವಿಸಲಿರುವ ಸಂಕಷ್ಟದ ಪರಿಸ್ಥಿತಿ ಬಗ್ಗೆ ವಿಶ್ವದ ಪ್ರಮುಖ ದೇಶಗಳ ಪ್ರಮುಖರು ಭಾನುವಾರ ತುರ್ತು ಸಮಾಲೋಚನೆ ನಡೆಸಿದರು.20 ಪ್ರಮುಖ ಆರ್ಥಿಕತೆಯ ಸಂಘಟನೆಯಾದ `ಜಿ-20~ ದೇಶಗಳ ಹಣಕಾಸು ಮುಖ್ಯಸ್ಥರು ವಿಡಿಯೊ ಸಂವಾದ ಮೂಲಕ, ದಿಡೀರನೆ ಉದ್ಭವಿಸಿರುವ ಬಿಕ್ಕಟ್ಟನ್ನು ಚರ್ಚಿಸಿದರು. `ಜಿ-7~ ದೇಶಗಳೂ ಇದೇ ಬಗೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಯೂರೋಪ್ ಕೇಂದ್ರೀಯ ಬ್ಯಾಂಕ್ ಕೂಡ ತುರ್ತು ಸಭೆ ಕರೆದಿದೆ.ಇಂತಹ ಪರಿಸ್ಥಿತಿ ಮತ್ತೆ ಉದ್ಭವಿಸದಂತೆ ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಬಗ್ಗೆ ಜಾಗತಿಕ ಮುಖಂಡರು ವಿಸ್ತೃತವಾಗಿ ಚರ್ಚಿಸಿದರು. ಈ ಎರಡೂ ವಿದ್ಯಮಾನಗಳು ಜಾಗತಿಕ ಷೇರು ಮಾರುಕಟ್ಟೆಗಳ ಕುಸಿತಕ್ಕೆ ಕಾರಣವಾಗಿದ್ದು, ಹೂಡಿಕೆದಾರರ ಸಂಪತ್ತು 2.5 ಲಕ್ಷ ಕೋಟಿ ಡಾಲರ್‌ಗಳಷ್ಟು  ಕರಗಿ ಹೋಗಿದೆ.ತಪ್ಪು ನಿರ್ಧಾರ?: ಜಾಗತಿಕ ಮೌಲ್ಯಮಾಪನಾ ಸಂಸ್ಥೆ ಸ್ಟ್ಯಾಂಡರ್ಡ್ ಆಂಡ್ ಪೂರ್ಸ್‌, ಅಮೆರಿಕದ ಋಣಭಾರ ಸಾಮರ್ಥ್ಯದ ಬಗ್ಗೆ ದುಡುಕಿನ ಮತ್ತು ತಪ್ಪು ನಿರ್ಧಾರಕ್ಕೆ ಬಂದಿದೆ ಎಂದು ಅಮೆರಿಕದ ಹಿರಿಯ ಖಜಾನೆ ಅಧಿಕಾರಿಗಳು ಟೀಕಿಸಿದ್ದಾರೆ.ಈಗಲೂ ಅಮೆರಿಕದ ಸರ್ಕಾರಿ ಸಾಲ (ಟ್ರೆಸರಿ) ಪತ್ರಗಳು ಜಾಗತಿಕ ಹೂಡಿಕೆದಾರರ ಪಾಲಿಗೆ ಸುರಕ್ಷಿತ ತಾಣಗಳಾಗಿವೆ. ಇದಕ್ಕೆ ಅಮೆರಿಕವು ಸಾಲ ಮರುಪಾವತಿಯ ಅಗಾಧ ಸಾಮರ್ಥ್ಯ ಹೊಂದಿರುವುದೇ ಕಾರಣ ಎಂದು ಅವರು ದೇಶದ ಅರ್ಥ ವ್ಯವಸ್ಥೆ ಸಮರ್ಥಿಸಿಕೊಂಡಿದ್ದಾರೆ. ಅಮೆರಿಕದ ಆರ್ಥಿಕತೆಯು ಮತ್ತೆ ಹಿಂಜರಿಕೆಗೆ ಒಳಗಾಗಲಿದೆ ಎನ್ನುವ ಆತಂಕವನ್ನೂ ಅವರು ತಳ್ಳಿ ಹಾಕಿದ್ದಾರೆ.ಚೀನದ ಟೀಕೆ: ಅಮೆರಿಕದ ಸರ್ಕಾರಿ ಸಾಲಪತ್ರಗಳಲ್ಲಿ ಅತ್ಯಧಿಕ ಪ್ರಮಾಣದ ಬಂಡವಾಳ ಹೂಡಿರುವ ಚೀನಾ, ಅಮೆರಿಕದ `ಸಾಲದ ವ್ಯಸನ~ ಪ್ರವೃತ್ತಿಯನ್ನು ಕಟುವಾಗಿ ಟೀಕಿಸಿದೆ.ಅಮೆರಿಕದ ಒಟ್ಟಾರೆ ರಾಷ್ಟ್ರೀಯ ಸಾಲವು 15 ಲಕ್ಷ ಕೋಟಿ ಡಾಲರ್‌ಗಳಷ್ಟಾಗಿದ್ದು, ಅದರಲ್ಲಿ 4.5 ಲಕ್ಷ ಕೋಟಿ ಡಾಲರ್‌ಗಳಷ್ಟು ಸಾಲವು, ಸರ್ಕಾರದ ಸಾಲ ಪತ್ರಗಳನ್ನು ಖರೀದಿಸಿರುವ ವಿದೇಶಗಳಿಗೆ ಸೇರಿದೆ. ಇದರಲ್ಲಿ ಚೀನಾ ಗರಿಷ್ಠ ಪ್ರಮಾಣದ 1.15 ಲಕ್ಷ ಕೋಟಿ ಡಾಲರ್‌ಗಳನ್ನು ಹೊಂದಿದ್ದರೆ, 14ನೇ ಸ್ಥಾನದಲ್ಲಿ ಇರುವ ಭಾರತ 1.83 ಲಕ್ಷ ಕೋಟಿಗಳಷ್ಟು (ರೂ.41 ಶತಕೋಟಿ ಡಾಲರ್) ಪಾಲು ಹೊಂದಿದೆ.ಭಾರತೀಯ ರಿಸರ್ವ್ ಬ್ಯಾಂಕ್‌ನ ಹೂಡಿಕೆಯೇ ಗಮನಾರ್ಹವಾಗಿದ್ದರೂ, ದೇಶದ ಇತರ ಕೆಲ ಬ್ಯಾಂಕ್‌ಗಳೂ ಇಲ್ಲಿ ಹೂಡಿಕೆ ಮಾಡಿವೆ. ತನ್ನ ವಿದೇಶಿ ವಿನಿಮಯ ಮೀಸಲು ನೀತಿ ಅಂಗವಾಗಿ `ಆರ್‌ಬಿಐ~ ಅಮೆರಿಕದ ಸರ್ಕಾರಿ ಸಾಲಪತ್ರಗಳನ್ನು ಖರೀದಿಸಿದೆ. ಕಳೆದ ಒಂದು ವರ್ಷದಲ್ಲಿ ಈ ಹೂಡಿಕೆ 10 ಶತಕೋಟಿ ಡಾಲರ್‌ಗಳಷ್ಟು (ರೂ.45,000 ಕೋಟಿ) ಹೆಚ್ಚಾಗಿದೆ.ಸ್ಟ್ಯಾಂಡರ್ಡ್ ಆಂಡ್ ಪೂರ್ಸ್‌ನ ನಿರ್ಧಾರವು `ವಿವಾದದ ಜೇನುಗೂಡಿ~ಗೆ ಕಲ್ಲು ತೂರಿದಂತಾಗಿದ್ದು, ಮೌಲ್ಯಮಾಪನಾ ಸಂಸ್ಥೆಗಳ ವಿಶ್ವಾಸಾರ್ಹತೆ ಮತ್ತು ಸಮಗ್ರತೆಯನ್ನೇ ಪ್ರಶ್ನಿಸುವಂತೆ ಮಾಡಿವೆ.ಬಂಡವಾಳ ಹೂಡಿಕೆದಾರ ವಾರನ್ ಬಫೆಟ್ ಅವರು, ಸಾಲ ಸಾಮರ್ಥ್ಯ ಕುಗ್ಗಿಸಿರುವುದಕ್ಕೆ ಯಾವುದೇ ಅರ್ಥ ಇಲ್ಲ ಎಂದು ಕಟಕಿಯಾಡಿದ್ದಾರೆ.ಅಮೆರಿಕದ ಸಿಟ್ಟಿನ ಟೀಕೆ ನಿರೀಕ್ಷಿತವಾಗಿದೆ ಎಂದು ಮೌಲ್ಯಮಾಪನಾ ಸಂಸ್ಥೆ ತನ್ನ ನಿಲುವನ್ನು  ಸಮರ್ಥಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry