ಮಂಗಳವಾರ, ಏಪ್ರಿಲ್ 20, 2021
23 °C

ಅಮೆರಿಕ ಅಧ್ಯಕ್ಷೀಯ ಚುನಾವಣೆ : ಈ ಬಾರಿಯೂ ಬದಲಾವಣೆ ಮಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕ ಅಧ್ಯಕ್ಷೀಯ ಚುನಾವಣೆ : ಈ ಬಾರಿಯೂ ಬದಲಾವಣೆ ಮಂತ್ರ

ವಾಷಿಂಗ್ಟನ್ (ಪಿಟಿಐ): ಮಂಗಳವಾರ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ನಾಲ್ಕು ವರ್ಷಗಳ ಹಿಂದಿನಂತೆ ಈ ಬಾರಿಯೂ `ಬದಲಾವಣೆ~ ಚುನಾವಣೆಯ ವಿಷಯವಾಗಿದೆ.

ಹಾಲಿ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಅವರ ಪ್ರತಿಸ್ಪರ್ಧಿ ಮಿಟ್ ರೋಮ್ನಿ ಅವರುಗಳು ಮತದಾರರ ಬಳಿ ತೆರಳಿ ಮನವಿ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ `ಬದಲಾವಣೆ~ ವಿಷಯ ಅವರಲ್ಲಿ ಪಿಸುಮಾತಿನ ವಸ್ತು ಎನಿಸಿದೆ.ನಾಲ್ಕು ವರ್ಷಗಳ  ಬರಾಕ್ ಒಬಾಮ ಆಡಳಿತ ಅಮೆರಿಕನ್ನರ ಸಾಮಾಜಿಕ, ಆರ್ಥಿಕ ಜೀವನದಲ್ಲಿ ಏನಾದರೂ ಬದಲಾವಣೆ ತಂದಿದೆಯೇ ಎಂಬ ಗೊಂದಲ ಈ ಬಾರಿಯೂ `ಅನಿಶ್ಚಿತ ಮತದಾರರ~ ಮನದಲ್ಲಿ ಕೊರೆಯುತ್ತಿದೆ.

ಜನಜೀವನ ತಲ್ಲಣಗೊಳಿಸಿದ ಸ್ಯಾಂಡಿ ಚಂಡಮಾರುತದ ಬಳಿಕ ಇದೀಗ ಈ ಇಬ್ಬರೂ ಅಭ್ಯರ್ಥಿಗಳು ಬಿಡುವಿಲ್ಲದ ಪ್ರಚಾರ ಕಾರ‌್ಯದಲ್ಲಿ ತೊಡಗಿದ್ದು `ಬದಲಾವಣೆ~ ತಂದಿರುವುದಾಗಿ ಒಬಾಮ ಹೇಳಿಕೊಳ್ಳುತ್ತಿದ್ದರೆ `ಬದಲಾವಣೆ~ಗಾಗಿ ಬೆಂಬಲಿಸಿ ಎಂದು ರೊಮ್ನಿ ಮನವಿ ಮಾಡಿಕೊಳ್ಳುತ್ತಿದ್ದಾರೆ. 2008ರ ಚುನಾವಣೆಯಲ್ಲೂ ಬದಲಾವಣೆಯೇ ಎರಡೂ ಪಕ್ಷಗಳ ಚುನಾವಣಾ ಮಂತ್ರವಾಗಿತ್ತು. ರಂಗೇರಿದ ಪ್ರಚಾರ ಕಾರ‌್ಯದಲ್ಲಿ ತೊಡಗಿರುವ ರೋಮ್ನಿ ತಮ್ಮನ್ನು `ಬದಲಾವಣೆ ತರುವ ಅಭ್ಯರ್ಥಿ~ ಎಂದು ಬಿಂಬಿಸಿಕೊಂಡಿದ್ದಾರೆ. ಬದಲಾವಣೆ ತರುವ ಒಬಾಮರ ಭರವಸೆ ಬರೀ ಭರವಸೆಯಾಗಿಯೇ ಉಳಿಯಿತು ಎಂದು ದೂರುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಇದಕ್ಕೆಲ್ಲ ಒಬಾಮ ನೀತಿಯೇ ಕಾರಣ ಎಂಬ ಆರೋಪ ಅವರದ್ದು.ಆದರೆ ಒಬಾಮ ಇದನ್ನು ಒಪ್ಪುತ್ತಿಲ್ಲ ಬದಲಿಗೆ ರೋಮ್ನಿ ವಾದ  ಹಾಸ್ಯಾಸ್ಪದ ಎನ್ನುತ್ತಿದ್ದಾರೆ. ಅಮೆರಿಕದಲ್ಲಿ ನಿಜವಾದ ಬದಲಾವಣೆ ತಂದವರು ನಾವೇ ಎನ್ನುವ ಒಬಾಮ, ಓಹಿಯೊ, ವಿಸ್ಕಾನ್ಸಿನ್, ಲೊವಾ, ವರ್ಜಿನಿಯಾ, ನ್ಯೂ ಹ್ಯಾಂಪ್‌ಷೈರ್, ಕೊಲೊರ‌್ಯಾಡೊ ಹಾಗೂ ಫ್ಲೋರಿಡಾದಲ್ಲಿ ಬಿಡುವಿಲ್ಲದ ಪ್ರಚಾರ ಕಾರ‌್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರೋಮ್ನಿ ಪ್ರಚಾರವನ್ನು ಟೀಕಿಸಿರುವ ಒಬಾಮ ಅವರೊಬ್ಬ `ಮಾರಾಟ ಪ್ರತಿನಿಧಿ~ ಎಂದು ಟೀಕಿಸಿದ್ದು, ಹಳೆಯ ವಿಚಾರಗಳನ್ನೇ ಮುಂದಿಟ್ಟುಕೊಂಡು ಅವರು ಚುನಾವಣೆ ಎದುರಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

 

ಸಮಬಲ ಫಲಿತಾಂಶ: ಸಮೀಕ್ಷೆ

ಈ ನಡುವೆ ಒಬಾಮ ಹಾಗೂ ರೋಮ್ನಿ ಜನಪ್ರಿಯತೆ ಹೆಚ್ಚುಕಡಿಮೆ ಸಮಬಲದಲ್ಲಿದ್ದು ಯಾರೇ ಗೆದ್ದರೂ ಅಂತರ ಹೆಚ್ಚು ಇರುವುದಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ.ಶನಿವಾರದ ದೇಶವ್ಯಾಪಿ ಸಮೀಕ್ಷೆಯಂತೆ ಒಬಾಮ ಅವರು ರೋಮ್ನಿ ಅವರಿಗಿಂತ ಕೇವಲ ಶೇ 0.1 ರಷ್ಟು ಮುನ್ನಡೆ ಸಾಧಿಸಿದ್ದರೆ ಎಬಿಸಿ ನ್ಯೂಸ್ ಸಮೀಕ್ಷೆ ಪ್ರಕಾರ ರೋಮ್ನಿ ಅವರು ಒಬಾಮ ಅವರಿಗಿಂತ ಕೇವಲ ಒಂದು ಅಂಕ ಮುನ್ನಡೆ ಸಾಧಿಸಿದ್ದಾರೆ. ರ‌್ಯಾಸ್‌ಮಸ್ಸೇನ್ ಅವರ ಲೆಕ್ಕಾಚಾರದ ಪ್ರಕಾರ ಎರಡೂ ಅಭ್ಯರ್ಥಿಗಳು ಸಮಬಲದ ಅಂಕ ಪಡೆದರೂ ಅಚ್ಚರಿ ಇಲ್ಲ.ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಒಹಿಯೊ ಪ್ರಾಂತ್ಯದತ್ತ ಇಬ್ಬರೂ ಅಭ್ಯರ್ಥಿಗಳು ಇದೀಗ ತಮ್ಮ ಗಮನ ಕೇಂದ್ರಿಕರಿಸಿದ್ದು, ಇಲ್ಲಿಯೂ ಎರಡೂ ಗುಂಪುಗಳಿಗೆ ಸಿಕ್ಕುವ ಬೆಂಬಲ ಸಮಬಲ ಎಂದು ಅಂದಾಜಿಸಲಾಗಿದೆ. ವರ್ಜಿನಿಯಾ, ಲೊವಾ, ಕೊಲರೆಡೊ ಹಾಗೂ ನ್ಯೂ ಹ್ಯಾಂಪ್‌ಷೈರ್ ರಾಜ್ಯಗಳಲ್ಲಿ ನಡೆಸಲಾದ ಸಮೀಕ್ಷೆಗಳ ಪ್ರಕಾರ ಒಬಾಮ ಹಾಗೂ ರೋಮ್ನಿ ಗಳಿಸುವ ಮತಗಳು ಸಮಪ್ರಮಾಣದಲ್ಲೇ ಇರುತ್ತವೆ.   

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.