ಶುಕ್ರವಾರ, ಜೂನ್ 18, 2021
24 °C

ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿ ಮಿಟ್ ರಾಮ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಯ್ಕೆಗೆ ನಡೆದಿರುವ ಪೂರ್ವಭಾವಿ ಸುತ್ತಿನ ಚುನಾವಣೆಯಲ್ಲಿ ಮಹತ್ವದ ಓಹಿಯೊ ಪ್ರಾಂತ್ಯದಲ್ಲಿ ಮಿಟ್ ರಾಮ್ನಿ ಅತ್ಯಂತ ಕಡಿಮೆ ಅಂತರದಲ್ಲಿ ಜಯಶಾಲಿಯಾಗಿದ್ದಾರೆ.ಇದಲ್ಲದೇ `ಸೂಪರ್ ಮಂಗಳವಾರ~ ಇತರ ನಾಲ್ಕು ರಾಜ್ಯಗಳಲ್ಲಿ ನಡೆದ ಪೂರ್ವಭಾವಿ ಚುನಾವಣೆಗಳಲ್ಲೂ ಜಯಶಾಲಿಯಾಗಿರುವ ಮಾಜಿ ಮಸಾಚುಸೆಟ್ಸ್ ಗವರ್ನರ್ ರಾಮ್ನಿ, ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಮುಂಚೂಣಿ ಅಭ್ಯರ್ಥಿಯಾಗಿ ಕಣದಲ್ಲಿ ಮುಂದುವರಿದಿದ್ದಾರೆ.ತಮ್ಮ ಸ್ವಂತ ರಾಜ್ಯವಾದ ಮಸಾಚುಸೆಟ್ಸ್ ಜತೆಗೆ ವೆರ್ಮಾಂಟ್, ವರ್ಜೀನಿಯಾ ಮತ್ತು ಇಡಾಹೊಗಳಲ್ಲಿ ರಾಮ್ನಿ ಗೆಲುವು ಸಾಧಿಸಿದ್ದಾರೆ. ಅವರ ಸಮೀಪ ಪ್ರತಿಸ್ಪರ್ಧಿಯಾದ ಪೆನ್ಸಿಲ್ವೇನಿಯಾದ ಮಾಜಿ ಸೆನೆಟರ್ ರಿಕ್ ಸ್ಯಾಂಟೊರಮ್, ನಾರ್ಥ್ ಡಕೋಟ, ಓಕ್ಲೊಹಾಮ ಮತ್ತು ಟೆನಿಸ್ಸೀಗಳಲ್ಲಿ ವಿಜಯಿಯಾಗಿದ್ದಾರೆ.ಅಮೆರಿಕದ ಜನಪ್ರತಿನಿಧಿಸಭೆಯ ಮಾಜಿ ಸ್ಪೀಕರ್ ನ್ಯೂಟ್ ಜಿಂಗ್‌ರಿಚ್ ತಮ್ಮ ಸ್ವಂತ ರಾಜ್ಯವಾದ ಜಾರ್ಜಿಯಾದಲ್ಲಿ ಮಾತ್ರ ಗೆಲುವು ಕಂಡಿದ್ದಾರೆ. ಮತ್ತೊಬ್ಬ ಸ್ಪರ್ಧಿ ಟೆಕ್ಸಾಸ್ ಸಂಸದ ರಾನ್ ಪೌಲ್ ಇನ್ನೂ ಖಾತೆ ತೆರೆಯಬೇಕಾಗಿದೆ. ಆದರೆ ವರ್ಜೀನಿಯಾದಲ್ಲಿ ಶೇ 40ರಷ್ಟು ಮತಗಳನ್ನು ಪಡೆದಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.`ಓಹಿಯೊದಲ್ಲಿ ರಾಮ್ನಿಗೆ ಸಿಕ್ಕಿರುವ ಗೆಲುವಿನಿಂದಾಗಿ  ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಅನಿವಾರ್ಯ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು~ ಎಂದು ಇಲ್ಲಿನ ಪ್ರಮುಖ ದೈನಿಕವೊಂದು ವರದಿ ಮಾಡಿದೆ.64 ವರ್ಷದ ರಾಮ್ನಿ ಶೇ 38ರಷ್ಟು ಮತಗಳೊಂದಿಗೆ ಸ್ಪರ್ಧೆಯಲ್ಲಿ ಮುಂದಿದ್ದರೆ, ಸ್ಯಾಂಟೊರಮ್ ಶೇ 37ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಟ್ ಜಿಂಗ್‌ರಿಚ್ ಶೇ 15ರಷ್ಟು ಮತಗಳನ್ನು ಪಡೆದಿದ್ದರೆ, ನಿಕಟ ಪೈಪೋಟಿ ಕಂಡ ಓಹಿಯೊ ಪ್ರಾಂತ್ಯದಲ್ಲಿ ರಾನ್ ಪೌಲ್ ಶೇ 9ರಷ್ಟು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಫೆಬ್ರುವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಅಮೆರಿಕದ ಹೆಚ್ಚಿನ ರಾಜ್ಯಗಳಲ್ಲಿ ಪೂರ್ವಭಾವಿ ಸುತ್ತಿನ ಚುನಾವಣೆ ನಡೆಯುವ ದಿನವನ್ನು `ಸೂಪರ್ ಮಂಗಳವಾರ~ ಎಂದು ಕರೆಯಲಾಗುತ್ತದೆ.ಬೋಸ್ಟನ್‌ನಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ರಾಮ್ನಿ ಒಬಾಮ ಆಡಳಿತ ನೀತಿ ವಿರುದ್ಧ ಪ್ರಹಾರ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.