ಅಮೆರಿಕ ಅಸಮಾಧಾನ

ಸಿರಿಯಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ರಷ್ಯಾದ ಪಾಲ್ಗೊಳ್ಳುವಿಕೆ ಬಗ್ಗೆ ಅಮೆರಿಕದ ಅಸಹನೆ ದಿನೇ ದಿನೇ ಹೆಚ್ಚುತ್ತಿದೆ. ಅಶಾಂತಿ ಪೀಡಿತ ಸಿರಿಯಾದಲ್ಲಿ ಹಿಂಸಾಚಾರ ಹೆಚ್ಚುತ್ತಿರುವುದಕ್ಕೆ ರಷ್ಯಾವೇ ಕಾರಣ ಎಂದು ಒಬಾಮ ಆಡಳಿತ ಹೇಳುತ್ತಲೇ ಇದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಕೂಡ ಈಗ ಇದೇ ಅರ್ಥದ ಹೇಳಿಕೆ ನೀಡಿದ್ದಾರೆ.
ಸಿರಿಯಾ ಅಧ್ಯಕ್ಷ ಅಲ್–ಬಷರ್–ಅಸಾದ್ಗೆ ರಾಜಕೀಯ ಬೆಂಬಲ ನೀಡುವ ಮತ್ತು ಹೆಚ್ಚು ಹೆಚ್ಚು ಶಸ್ತ್ರಾಸ್ತ್ರಗಳನ್ನು ರವಾನಿಸುವ ಮೂಲಕ ರಷ್ಯಾ ಸರ್ಕಾರವು ಮಾತುಕತೆ ಮೂಲಕ ಹಿಂಸಾಚಾರಕ್ಕೆ ಕೊನೆ ಹಾಡುವ ಯತ್ನವನ್ನು ಹಾಳು ಮಾಡುತ್ತಿದೆ ಎಂದು ಕೆರಿ ಇಂಡೊನೇಷ್ಯಾದ ಜಕಾರ್ತದಲ್ಲಿ ತೀಕ್ಷ್ಣ ಹೇಳಿಕೆ ನೀಡಿದ್ದಾರೆ.
‘ರಷ್ಯಾ ನೀಡುತ್ತಿರುವ ನೆರವು ಅಸಾದ್ ಅವರ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಇದು ಅಪಾರ ಸಮಸ್ಯೆಗಳನ್ನು ಸೃಷ್ಟಿಸಿದೆ’ ಎಂದು ಸಿರಿಯಾದ ವಿರೋಧಿಗಳ ಪ್ರಬಲ ಬೆಂಬಲಿಗ ರಾಷ್ಟ್ರವಾದ ಯುಎಇಗೆ ಭೇಟಿ ನೀಡುವುದಕ್ಕೂ ಮುನ್ನ ಜಾನ್ ಕೆರಿ ಹೇಳಿದ್ದಾರೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಅವರ ತೀಕ್ಷ್ಣ ಹೇಳಿಕೆಯು, ಗಲಭೆಗ್ರಸ್ತ ಸಿರಿಯಾದಲ್ಲಿ ಅಮೆರಿಕ–ರಷ್ಯಾ ನಡುವಣ ಪಾಲುದಾರಿಕೆಯಲ್ಲಿ ಬಿರುಕು ಉಂಟಾಗಿರುವುದನ್ನು ಎತ್ತಿ ತೋರಿಸಿದೆ. ಮಾತ್ರವಲ್ಲ, ತೀವ್ರಗೊಳ್ಳುತ್ತಿರುವ ಸಿರಿಯಾ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕ ಕೈಗೊಂಡಿರುವ ರಾಜತಾಂತ್ರಿಕ ಯತ್ನಗಳ ಕಾರ್ಯ-ಸಾಧ್ಯತೆ ಬಗ್ಗೆ ಸಂದೇಹಗಳನ್ನೂ ಹುಟ್ಟು ಹಾಕಿದೆ.
ಅಮೆರಿಕದ ಮುಂದೆ ಹಲವು ಆಯ್ಕೆಗಳು...
ಸಿರಿಯಾದಲ್ಲಿ ನಡೆಯುತ್ತಿರುವ ಸರ್ಕಾರದ ವಿರುದ್ಧದ ಸಂಘರ್ಷದಲ್ಲಿ ನೇರವಾಗಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮೂರು ವರ್ಷಗಳಿಂದ ಹಿಂದೇಟು ಹಾಕುತ್ತಾ ಬಂದಿದ್ದರು. ಜತೆಗೆ, ರಾಸಾಯನಿಕ ಅಸ್ತ್ರಗಳನ್ನು ನಾಶ ಮಾಡದೇ ಇದ್ದಲ್ಲಿ ಕ್ಷಿಪಣಿ ದಾಳಿ ನಡೆಸುವುದಾಗಿ ಒಡ್ಡಿದ್ದ ಬೆದರಿಕೆಯನ್ನು ಅಸಾದ್ ನೀಡಿದ್ದ ಭರವಸೆ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ವಾಪಸ್ ಪಡೆದಿದ್ದರು.
ಆದರೆ, ರಾಸಾಯನಿಕ ಅಸ್ತ್ರಗಳನ್ನು ನಿರ್ಮೂಲನೆ ಮಾಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರ ನಡುವೆಯೇ ಅಸಾದ್ ಆಡಳಿತ ನಾಗರಿಕರ ಮೇಲೆ ನಡೆಸುತ್ತಿರುವ ದಾಳಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚುತ್ತಿದೆ.
ಸಿರಿಯಾ ಬಿಕ್ಕಟ್ಟನ್ನು ಶಾಶ್ವತವಾಗಿ ಇತ್ಯರ್ಥಗೊಳಿಸಲು ಅಮೆರಿಕವು ಹಲವು ರಾಜತಾಂತ್ರಿಕ ಆಯ್ಕೆಗಳ ಬಗ್ಗೆ ಯೋಚಿಸುತ್ತಿದೆ.
ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯ ಸೀಮಿತ ಕಾರ್ಯಕ್ರಮದ ಅಡಿಯಲ್ಲಿ ಸಿರಿಯಾ ಬಂಡುಕೋರರಿಗೆ ಒಬಾಮ ಆಡಳಿತ ಈಗಾಗಲೇ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಮತ್ತು ತರಬೇತಿಯನ್ನೂ ನೀಡುತ್ತಿದೆ. ಆದರೆ, ಅಸಾದ್ ವಿರುದ್ಧದ ಹೋರಾಟದಲ್ಲಿ ತೊಡಗಿರುವವರಿಗೆ ಇನ್ನೂ ಹೆಚ್ಚಿನ ಅತ್ಯಾಧುನಿಕ ಅಸ್ತ್ರಗಳನ್ನು ನೇರವಾಗಿ ಪೂರೈಸಲು ಮತ್ತು ವೈಮಾನಿಕ ದಾಳಿಗೆ ಅವಕಾಶ ನೀಡಲು ಅಮೆರಿಕ ಇಚ್ಛಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದು ವೇಳೆ ಹೆಚ್ಚು ಅಸ್ತ್ರಗಳನ್ನು ಪೂರೈಸಿದರೆ, ಸಿರಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರ ಇನ್ನಷ್ಟು ದೀರ್ಘ ಅವಧಿಗೆ ಮುಂದುವರಿಯಬಹುದು ಎಂಬ ಆತಂಕ ಒಬಾಮ ಅವರನ್ನು ಕಾಡುತ್ತಿದೆ. ಅದರ ಬದಲಿಗೆ, ಕೆಲವು ಬಂಡುಕೋರ ಪಡೆಗಳಿಗೆ ವೇತನ ನೀಡುವುದು ಮತ್ತು ಸಾರಿಗೆ ಸೌಲಭ್ಯ ಒದಗಿಸುವುದು ಹಾಗೂ ಗುಪ್ತಚರ ಮಾಹಿತಿಗಳನ್ನು ನೀಡುವ ಬಗ್ಗೆ ಒಬಾಮ ಆಡಳಿತ ಚಿಂತಿಸುತ್ತಿದೆ ಎಂದು ಅಮೆರಿಕ ಮತ್ತು ಯೂರೋಪಿನ ಅಧಿಕಾರಿಗಳು ಹೇಳಿದ್ದಾರೆ.
ರಾಜಕೀಯ ಪರಿಹಾರ ಸಾಧ್ಯವೇ?
ಅಮೆರಿಕದ ಗುಪ್ತಚರ ಸಂಸ್ಥೆಗಳ ಪ್ರಕಾರ, ಸಿರಿಯಾ ಆಡಳಿತದಲ್ಲಿ ಅಸಾದ್ ಅವರ ನಿಯಂತ್ರಣ ಒಂದು ವರ್ಷದಿಂದ ಹೆಚ್ಚುತ್ತಿದೆ.
ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ, ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗಲಿದೆ ಎಂಬುದನ್ನು ಒಬಾಮ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳ ಮುಖಂಡರು ಮನಗಂಡಿದ್ದಾರೆ.
ಹಾಗಾಗಿಯೇ ಸಿರಿಯಾ ಬಂಡುಕೋರರ ಪಡೆಗಳಿಗೆ ವೈಮಾನಿಕ ದಾಳಿ ನಿಗ್ರಹ ಅಸ್ತ್ರಗಳು ಸೇರಿದಂತೆ ಅತ್ಯಾಧುನಿಕ ಅಸ್ತ್ರಗಳನ್ನು ಪೂರೈಸುವ ಸಂಬಂಧ ಸೌದಿ ಅರೇಬಿಯಾ ಹಾಗೂ ಇತರ ರಾಷ್ಟ್ರಗಳು ಮುಂದಿಟ್ಟಿರುವ ಪ್ರಸ್ತಾವಕ್ಕೆ ಈ ಮೊದಲು ಆಕ್ಷೇಪಣೆ ಎತ್ತಿದ್ದ ಮುಖಂಡರು ಈಗ ಪ್ರಸ್ತಾವವನ್ನು ವಿರೋಧಿಸುತ್ತಿಲ್ಲ.
ಇದಕ್ಕೆ ಪೂರಕವಾಗಿ, ಅಸಾದ್ ಸರ್ಕಾರವನ್ನು ಕಿತ್ತೊಗೆಯಲು ಯತ್ನಿಸುತ್ತಿರುವ ಎಲ್ಲಾ ರಾಷ್ಟ್ರಗಳ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥರು ಕಳೆದ ವಾರ ವಾಷಿಂಗ್ಟನ್ನಲ್ಲಿ ರಹಸ್ಯ ಸಭೆ ಸೇರಿದ್ದರು. ಬಂಡುಕೋರರಿಗೆ ಘಾತುಕ ಅಸ್ತ್ರಗಳನ್ನು ಯಾವ ರೀತಿ ಪೂರೈಸಬಹುದು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುರಿದ್ದು ಬಿದ್ದ ಹೊಂದಾಣಿಕೆ
ಅಸಾದ್ ಆಡಳಿತವು ಅಪಾಯಕಾರಿ ರಾಸಾಯನಿಕ ಅಸ್ತ್ರಗಳನ್ನು ನಾಶಪಡಿಸಬೇಕು ಎಂದು ಕಳೆದ ಆಗಸ್ಟ್– ಸೆಪ್ಟೆಂಬರ್ನಲ್ಲಿ ರಷ್ಯಾದ ಮುಂದಿಟ್ಟಿದ್ದ ಪ್ರಸ್ತಾವವನ್ನು ಅಮೆರಿಕ ಬಲವಾಗಿ ಬೆಂಬಲಿಸಿತ್ತು. ನಾಗರಿಕ ಯುದ್ಧದ ವಿಚಾರದಲ್ಲಿ ಭಿನ್ನ ಪಕ್ಷಗಳಿಗೆ ಬೆಂಬಲ ನೀಡುತ್ತಿದ್ದರೂ ಎರಡೂ ರಾಷ್ಟ್ರಗಳು ಹೇಗೆ ಒಟ್ಟಾಗಿ ಕಾರ್ಯನಿರ್ವಹಿಸಬಹುದು ಎಂಬುದಕ್ಕೆ ಇದು ನಿದರ್ಶನವಾಗಿತ್ತು.
ಆದರೆ, ಆ ಸೌಹಾರ್ದ ಸಂಬಂಧ ಅಥವಾ ಹಿತಾಸಕ್ತಿಗಳ ತಾತ್ಕಾಲಿಕ ಹೊಂದಾಣಿಕೆ ಈಗ ಸಂಪೂರ್ಣವಾಗಿ ಮುರಿದು ಬಿದ್ದಿದೆ. ಸಿರಿಯಾ ವಿಚಾರದಲ್ಲಿ ರಷ್ಯಾದ ವರ್ತನೆಯನ್ನು ಒಬಾಮ ಅವರು ಕಳೆದವಾರ ನಡೆದ ಎರಡು ಸುದ್ದಿಗೋಷ್ಠಿಗಳಲ್ಲಿ ಸಾರ್ವಜನಿಕವಾಗಿಯೇ ಟೀಕಿಸಿದ್ದಾರೆ. ಈ ವಿಷಯದಲ್ಲಿ ಒಬಾಮ ತೀವ್ರ ಹತಾಶೆಗೆ ಒಳಗಾಗಿದ್ದಾರೆ ಎಂದು ಅವರ ಆಪ್ತ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ರಷ್ಯಾದ ವರ್ತನೆಯಿಂದ ಮಾತ್ರವಲ್ಲ, ಬಿಕ್ಕಟ್ಟು ಪರಿಹರಿಸಲು ತಮ್ಮ ಆಡಳಿತ ಇದುವರೆಗೆ ನಡೆಸಿರುವ ಯತ್ನ ವಿಫಲವಾಗಿರುವುದರಿಂದ ಒಬಾಮ ಎಷ್ಟು ನಿರಾಶರಾಗಿದ್ದಾರೆ ಎಂದರೆ, ಅವರು ಈ ರೀತಿ ಇರುವುದನ್ನು ನಾನು ನೋಡಿಯೇ ಇಲ್ಲ’ ಎಂದು ಆ ಅಧಿಕಾರಿ ತಿಳಿಸಿದ್ದಾರೆ.
‘ಸಿರಿಯಾದಲ್ಲಿ ಅಸಾದ್ ಗೆಲ್ಲುತ್ತಿ-ದ್ದಾರೆ ಎಂಬುದು ರಷ್ಯಾದ ಅಭಿಪ್ರಾಯ. ಅದು ನಿಜವೂ ಆಗಿರಬಹುದು’ ಎಂದು ಅಮೆರಿಕದೊಂದಿಗೆ ಮಾತುಕತೆಯಲ್ಲಿ ತೊಡಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಇಂತಹ ಪರಿಸ್ಥಿತಿಯಲ್ಲಿ ವರ್ಷದ ಹಿಂದೆ ಎದುರಾದ ಪ್ರಶ್ನೆಯೇ ಮತ್ತೆ ನಮ್ಮ ಮುಂದೆ ಬರುತ್ತದೆ: ಸಿರಿಯಾದಲ್ಲಿ ಪರಿಸ್ಥಿತಿಯನ್ನು ಸುಧಾರಿಸುವುದು ಹೇಗೆ? ಅಲ್ಲಿನ ಜನರನ್ನು ಮಾತುಕತೆಗೆ ಒಪ್ಪಿಸುವುದು ಹೇಗೆ?’ ಎಂದು ಅವರು ನುಡಿದಿದ್ದಾರೆ.
ಸಿರಿಯಾ ಬಿಕ್ಕಟ್ಟನ್ನು ಯಾವ ರೀತಿ ಎದುರಿಸಬಹುದು ಎಂಬ ಬಗ್ಗೆ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ಹಲವು ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಳ್ಳಲಿವೆ ಎಂದು ಕಳೆದ ಸೋಮವಾರ ಜಾನ್ ಕೆರಿ ಹೇಳಿದ್ದಾರೆ. 1.4 ಲಕ್ಷಕ್ಕೂ ಹೆಚ್ಚು ಮುಗ್ಧ ನಾಗರಿಕರನ್ನು ಬಲಿ ತೆಗೆದುಕೊಂಡಿರುವ, ಸಾವಿರಾರು ಜನರನ್ನು ನಿರ್ವಸತಿಗರನ್ನಾಗಿ ಮಾಡಿದ ಸಿರಿಯಾ ಹಿಂಸಾಚಾರವನ್ನು ಶಾಂತಿ ಮಾರ್ಗದಲ್ಲಿ ಬಗೆಹರಿಸಲು ಅಮೆರಿಕ ಬದ್ಧವಾಗಿದೆ ಎಂದೂ ಕೆರಿ ಪುನರುಚ್ಚರಿಸಿದ್ದಾರೆ.
ಆದರೆ, ಬಿಕ್ಕಟ್ಟು ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸುವಷ್ಟು ಪ್ರಭಾವವನ್ನು ಅಮೆರಿಕ ಹೊಂದಿದೆಯೇ ಅಥವಾ ಶ್ವೇತಭವನ ಕೈಗೊಳ್ಳಲಿರುವ ಕೆಲವು ಸೀಮಿತ ಕ್ರಮಗಳು ಸಿರಿಯಾದಲ್ಲಿ ಕಳೆದುಕೊಂಡಿರುವ ತನ್ನ ಹಿಡಿತವನ್ನು ಮರುಸ್ಥಾಪಿಸಲು ಅದಕ್ಕೆ ನೆರವು ನೀಡಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.