ಅಮೆರಿಕ ಓಪನ್ ಟೆನಿಸ್ ಟೂರ್ನಿ: ಸೋಮದೇವ್‌ಗೆ ಪ್ರಬಲ ಸವಾಲು

7

ಅಮೆರಿಕ ಓಪನ್ ಟೆನಿಸ್ ಟೂರ್ನಿ: ಸೋಮದೇವ್‌ಗೆ ಪ್ರಬಲ ಸವಾಲು

Published:
Updated:
ಅಮೆರಿಕ ಓಪನ್ ಟೆನಿಸ್ ಟೂರ್ನಿ: ಸೋಮದೇವ್‌ಗೆ ಪ್ರಬಲ ಸವಾಲು

ನ್ಯೂಯಾರ್ಕ್ (ಪಿಟಿಐ/ ಐಎಎನ್‌ಎಸ್): ಭಾರತದ ಆಗ್ರ ಶ್ರೇಯಾಂಕದ ಆಟಗಾರ ಸೋಮದೇವ್ ದೇವವರ್ಮನ್ ಹಾಗೂ ಸಾನಿಯಾ ಮಿರ್ಜಾ ಸೋಮವಾರ ಇಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.ಆದರೆ, ಭಾರತದ ಸ್ಪರ್ಧಿಗಳಿಗೆ ಆರಂಭದಲ್ಲಿಯೇ ಕಠಿಣ ಸವಾಲು ಎದುರಾಗಿದೆ. ಮೊದಲ ಪಂದ್ಯದಲ್ಲಿ ಸೋಮದೇವ್ ವಿಶ್ವದ ನಾಲ್ಕನೇ ಶ್ರೇಯಾಂಕದ ಆಟಗಾರ ಆ್ಯಂಡಿ ಮರ‌್ರೆ ಸವಾಲನ್ನು ಎದುರಿಸಲಿದ್ದಾರೆ.`ಮೊದಲ ಸುತ್ತಿನಲ್ಲಿ ಪ್ರಬಲ ಎದು ರಾಳಿಯಿದ್ದರೂ, ಉತ್ತಮ ಪ್ರದರ್ಶನ ನೀಡುತ್ತೇನೆ. ಇದೊಂದು ಸ್ಪರ್ಧಾತ್ಮಕ ಪಂದ್ಯ. ಇದಕ್ಕಾಗಿ ಸಾಕಷ್ಟು ಅಭ್ಯಾಸ ನಡೆಸಿದ್ದೇನೆ~ ಎಂದು ಭಾರತದ ಆಟಗಾರ ಹೇಳಿದ್ದಾರೆ.ಆದರೆ, ಸೋಮದೇವ್ ಇತ್ತೀಚಿಗೆ ಗಮನಾರ್ಹ ಪ್ರದರ್ಶನವನ್ನೇನೂ ನೀಡಿಲ್ಲ. ಕಳೆದ 10 ಟೂರ್ನಿಗಳಲ್ಲಿ ಮೂರು ಸಲ ಎರಡನೇ ಸುತ್ತಿಗೆ ಹಾಗೂ ಒಂದು ಸಲ ಮಾತ್ರ ಕ್ವಾರ್ಟರ್   ಫೈನಲ್ ಪ್ರವೇಶಿಸಲು ಮಾತ್ರ ಅವರಿಗೆ ಸಾಧ್ಯವಾಗಿದೆ.ಇನ್ನು ಡಬಲ್ಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಭಾರತದ ಪರ ಹೋರಾಟ ನಡೆಸಲಿದ್ದಾರೆ. ಈ ಜೋಡಿ ಹೆಚ್ಚು ಆತ್ಮ ವಿಶ್ವಾಸದಿಂದ ಬೀಗುತ್ತಿದೆ. ಏಕೆಂದರೆ ಇತ್ತೀಚಿಗೆ ಸಿನ್ಸಿನಾಟಿಯಲ್ಲಿ ನಡೆದ ಸದರ್ನ್ ಹಾಗೂ ವೆಸ್ಟರ್ನ್ ಟೆನಿಸ್ ಟೂರ್ನಿಯಲ್ಲಿ  ಚಾಂಪಿಯನ್ ಆಗಿತ್ತು. ಈ ಜೋಡಿ 2001ರಲ್ಲಿ ಸಿನ್ಸಿನಾಟಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತ್ತು. 10 ವರ್ಷದ ನಂತರ ಮತ್ತೆ ಈ ವರ್ಷ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.ಇನ್ನೊಂದು ಅಚ್ಚರಿಯಂದರೆ ಪೇಸ್ ಹಾಗೂ ಭೂಪತಿ ಅವರು ಸಿನ್ಸಿನಾಟಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಅಮೆರಿಕದ ಮೈಕ್ ಹಾಗೂ ಬಾಬ್ ಬ್ರಯನ್ ಜೋಡಿಯನ್ನು ಮಣಿಸಿದ್ದರು.ಈ ವರ್ಷದಲ್ಲಿ ಸೋನಿ ಎರಿಕ್ಸನ್ ಹಾಗೂ ಚೆನ್ನೈ ಓಪನ್ ಟೂರ್ನಿ ಯಲ್ಲಿಯೂ ಈ ಜೋಡಿ ಚಾಂಪಿಯನ್ ಆಗಿತ್ತು. ಆದ್ದರಿಂದ ಅಮೆರಿಕ ಓಪನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಇವರು ಮೂಡಿಸಿದ್ದಾರೆ.`ಇಲ್ಲಿ ಚಾಂಪಿಯನ್ ಆಗಿದ್ದು ಅಮೆರಿಕ ಟೂರ್ನಿಗೆ ಹೆಚ್ಚಿನ ಬಲ ನೀಡಿದೆ~ ಎಂದು ಸಿನ್ಸಿನಾಟಿನಲ್ಲಿ ಪ್ರಶಸ್ತಿ ಜಯಿಸಿದಾಗ ಪೇಸ್ ಹಾಗೂ ಭೂಪತಿ ಹೇಳಿದ್ದರು. ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್-ಹಕ್-ಖುರೇಷಿ ಜೋಡಿ ಸ್ಪರ್ಧಿಸುತ್ತಿದೆ.ಸಾನಿಯಾಗೆ ಪ್ರಬಲ ಸವಾಲು: ಭಾರತದ ಸಾನಿಯಾ ಮಿರ್ಜಾ ಈ ಟೂರ್ನಿಯ ಆರಂಭಿಕ ಸುತ್ತಿನಲ್ಲಿಯೇ ಇಸ್ರೇಲ್‌ನ ಸಹಾರ್ ಪೀರ್ ಅವರ ಪ್ರಬಲ ಸವಾಲನ್ನು ಎದುರಿಸಬೇಕಿದೆ.ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಭಾರತದ ಆಟಗಾರ್ತಿ, ಈ ವರ್ಷದಲ್ಲಿ ಆಡಿರುವ ಒಟ್ಟು 20 ಟೂರ್ನಿಗಳಲ್ಲಿ ಕೇವಲ 9 ಪಂದ್ಯಗಳಲ್ಲಿ ಮಾತ್ರ ಗೆಲುವು ಪಡೆದಿದ್ದಾರೆ. 2009ರಲ್ಲಿ ಪೀರ್ ವಿರುದ್ಧವೇ ಆಡಿದ್ದ ಸಾನಿಯಾ ಆ ಪಂದ್ಯದಲ್ಲಿ ಗೆಲುವು ಪಡೆದಿದ್ದರು.ಡಬಲ್ಸ್ ವಿಭಾಗದಲ್ಲಿ ಸಾನಿಯಾ ರಷ್ಯಾದ ಎಲೆನಾ ವೆಸ್ನಿನಾ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ. ಈ ಜೋಡಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು.ಸಿಂಗಲ್ಸ್‌ನಲ್ಲಿ ಪ್ರಬಲ ಪೈಪೋಟಿ: ಪುರುಷರ ವಿಭಾಗದಲ್ಲಿ ಕಳೆದ ಬಾರಿಯ ಚಾಂಪಿಯನ್ ರಫೆಲ್ ನಡಾಲ್, ನೊವಾಕ್ ಜೊಕೊವಿಚ್ ಹಾಗೂ ರೋಜರ್ ಫೆಡರರ್ ನಡುವೆ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry